ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲೋನ್’ ಮತ್ತು ಮೂರು ಮುಖಗಳು

Last Updated 27 ಆಗಸ್ಟ್ 2015, 19:52 IST
ಅಕ್ಷರ ಗಾತ್ರ

ಮೂರು ಭಾಷೆಗಳಲ್ಲಿ ನಿರ್ಮಾಣ; ಮೂರು ರಾಜ್ಯಗಳಲ್ಲಿ ಚಿತ್ರೀಕರಣ; ಮುಖ್ಯ ಪಾತ್ರ ಹೊರತುಪಡಿಸಿ ಆಯಾ ಚಿತ್ರರಂಗದ ಕಲಾವಿದರೇ ನಟಿಸಿರುವುದು– ಇವು ‘ಅಲೋನ್’ ಸಿನಿಮಾದ ವೈಶಿಷ್ಟ್ಯ ಎಂದು ನಿರ್ದೇಶಕ ಜೆಕೆಎಸ್ ಬಣ್ಣಿಸಿದರು. ಆದರೆ ಉಳಿದೆರಡು ಭಾಷೆಗಳ ಸಿನಿಮಾಕ್ಕೆ ಅಲ್ಲಿನ ಭಾಷೆ ಬಳಸಿ, ಕನ್ನಡಕ್ಕೆ ಮಾತ್ರ ಇಂಗ್ಲಿಷ್ ಶೀರ್ಷಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಕೊಡಲು ನಿರ್ದೇಶಕರು ತಡವರಿಸಿದರು!

ಪದೇ ಪದೇ ಕಾಡುವ ಒಂಟಿತನ ನೀಗಲು ಎಲ್ಲೋ ಹೋದಾಗ, ಅದು ಮತ್ತೆ ಮತ್ತೆ ಕಾಡಿದರೆ ಏನಾದೀತು? ಇದು ‘ಅಲೋನ್’ ಸಿನಿಮಾದ ಹೂರಣ. ತಮ್ಮ ಮೂರನೇ ಸಿನಿಮಾಕ್ಕೆ ಥ್ರಿಲ್ಲರ್ ವಿಷಯ ಆಯ್ದುಕೊಂಡಿರುವ ಬಗ್ಗೆ ಜಿಕೆಎಸ್‌ ಅವರಲ್ಲಿ ಸಾಕಷ್ಟು ವಿಶ್ವಾಸವಿದೆ. ‘ಥ್ರಿಲ್ಲರ್ ಅಂದ ಕೂಡಲೇ ಇದೇನೂ ದೆವ್ವ–ಭೂತದ ಸಿನಿಮಾ ಅಲ್ಲ. ಪ್ರೇಕ್ಷಕರಿಗೆ ಕ್ಷಣಕ್ಷಣವೂ ಕುತೂಹಲ ಮೂಡಿಸುವ ಚಿತ್ರ’ ಎನ್ನುತ್ತಾರೆ.

ಕನ್ನಡದ ಜತೆಗೆ ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅಲ್ಲಲ್ಲಿನ ಕಲಾವಿದರೇ ಬಣ್ಣ ಹಚ್ಚಿದ್ದಾರೆ. ಪ್ರಮುಖ ದೃಶ್ಯ ಹೊರತುಪಡಿಸಿದರೆ ಉಳಿದೆಲ್ಲವನ್ನು ಆಯಾ ರಾಜ್ಯದಲ್ಲೇ ಚಿತ್ರಿಸಲಾಗಿದೆ. ‘ಒಂದೇ ಸಲ ಚಿತ್ರೀಕರಿಸಿ, ಅದನ್ನೇ ಇತರ ಭಾಷೆಗೆ ಡಬ್ಬಿಂಗ್ ಮಾಡಬಹುದಿತ್ತು. ಆದರೆ ತುಟಿ ಚಲನೆ ಹೊಂದಾಣಿಕೆಯಾಗದೇ ಕೆಲವು ಸಲ ಆಭಾಸವಾಗುತ್ತದೆ. ಹೀಗಾಗಿ ನಾವು ಆಂಧ್ರ ಹಾಗೂ ತಮಿಳುನಾಡಿಗೆ ಹೋಗಿ, ಆಯಾ ಭಾಷೆಗಳಲ್ಲಿಯೇ ಚಿತ್ರಿಸಿದ್ದೇವೆ’ ಎಂದರು ಜೆಕೆಎಸ್.

ಇದರಲ್ಲಿ ನಾಯಕಿಯೇ ಪ್ರಮುಖ ಪಾತ್ರಧಾರಿ. ಅದನ್ನು ನಿಕಿಷಾ ಪಟೇಲ್ ನಿರ್ವಹಿಸಿದ್ದಾರೆ. ‘ಇದು ಒಂದರ್ಥದಲ್ಲಿ ಮಹಿಳಾ ಸಬಲೀಕರಣ ಸಂದೇಶದ ಸಿನಿಮಾ’ ಎಂದು ನಿಕಿಷಾ ಬಣ್ಣಿಸುತ್ತಾರೆ. ಈವರೆಗೆ ಪೋಷಕ ಅಥವಾ ಖಳನಟನಾಗಿ ಬಣ್ಣ ಹಚ್ಚಿದ್ದ ವಶಿಷ್ಟ, ‘ಅಲೋನ್‌’ನಿಂದ ನಾಯಕ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಮೂರು ಭಾಷೆಯಲ್ಲೂ ಅವರೇ ದನಿ ನೀಡಿದ್ದಾರೆ.

ಬಿಸಿಲಿನ ತಾಪ ಅನುಭವಿಸುತ್ತಲೇ ಚಿತ್ರೀಕರಣ ನಡೆಸಿದ ಅನುಭವವನ್ನು ನಿರ್ಮಾಪಕ ಎಲ್. ಅನಂತ್ ಹಂಚಿಕೊಂಡರು. ಎಷ್ಟೇ ಅಡ್ಡಿ ಆತಂಕ ಎದುರಾದರೂ ಚಿತ್ರತಂಡ ಒಂದಿಷ್ಟೂ ಗೊಣಗಾಡದೇ ಕೆಲಸ ಮಾಡಿದ ಪರಿಯನ್ನು ಹೊಗಳಿದರು. ‘ನಾನು ಸಿನಿಮಾ ಲೋಕಕ್ಕೆ ಹೊಸಬ. ಆದರೆ ಈ ಚಿತ್ರ ನನಗೆ ಸಾಕಷ್ಟು ಅನುಭವ ಕೊಟ್ಟಿದೆ’ ಎಂದು ಅನಂತ್ ಹೇಳಿದರೆ, ನಿಗದಿತ ಬಜೆಟ್ ಮೀರಿದರೂ ಲೆಕ್ಕಿಸದೇ ಮುಂದುವರಿದಿದ್ದನ್ನು ಇನ್ನೊಬ್ಬ ನಿರ್ಮಾಪಕ ರಾಮಲಿಂಗಯ್ಯ ಪಿ.ಕೆ. ನೆನಪಿಸಿಕೊಂಡರು.

50 ದಿನಗಳ ಕಾಲ ಶೂಟಿಂಗ್‌ ನಡೆಸಲಾಗಿದ್ದು, ಸೆಪ್ಟೆಂಬರ್‌ ಮೂರನೇ ವಾರದಲ್ಲಿ ಚಿತ್ರವನ್ನು ತೆರೆ ಕಾಣಿಸುವ ಉದ್ದೇಶ ನಿರ್ಮಾಪಕರಲ್ಲಿದೆ. ಕನ್ನಡದ ‘ಅಲೋನ್’ ತೆಲುಗಿನಲ್ಲಿ ‘ಲೀಲಾ’ ಹಾಗೂ ತಮಿಳಿನಲ್ಲಿ ‘ಕರೆಯೋರಂ’ ಆಗಿ ತೆರೆ ಕಾಣಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT