ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವರು’ ಇಲ್ಲ ಏಕೆ ?

Last Updated 27 ಮೇ 2018, 8:48 IST
ಅಕ್ಷರ ಗಾತ್ರ

ಕೇವಲ 200 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಬಹುಸಂಖ್ಯಾತರಾಗಿದ್ದ ಮೂಲನಿವಾಸಿಗಳು ಈಗ ದಿಕ್ಕಾಪಾಲು. ಅವರಲ್ಲಿದ್ದ ಅದ್ಭುತ ಕ್ರಿಕೆಟಿಗರೆಲ್ಲರೂ ಮೂಲೆಗುಂಪಾಗಿ ಹೋದರು. ಕಪ್ಪು ಜನರ ಶ್ರೇಷ್ಠ ಕ್ರಿಕೆಟ್‌ ಪರಂಪರೆಯೊಂದು ಕಣ್ಮರೆಯಾಯಿತು. ಪಿ.ಜಿ.ವಿಜುಪೂಣಚ್ಚ

ಅಥ್ಲೆಟಿಕ್ಸ್‌ರಂಗದಲ್ಲಿ  ಕ್ಯಾಥಿ ಫ್ರೀಮನ್‌ ಹೆಸರು ಚಿರಪರಿಚಿತ. ಸಿಡ್ನಿ ಒಲಿಂಪಿಕ್ಸ್‌ನಲ್ಲಿ 400 ಮೀಟರ್ಸ್‌ ಓಟದಲ್ಲಿ ಚಿನ್ನ ಗೆದ್ದವರು. ಅಥೆನ್ಸ್‌ನಲ್ಲಿ 1997ರಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ನಲ್ಲೂ ಬಂಗಾರ ಗೆದ್ದ ಓಟಗಾರ್ತಿ ಇವರು. ಅಥೆನ್ಸ್‌ನಲ್ಲಿ ಚಿನ್ನ ಗೆದ್ದು ಸಂಭ್ರಮಿಸುವ ಸಂದರ್ಭದಲ್ಲಿ ಆಸ್ಟ್ರೇಲಿಯಾ ದೇಶದ ಧ್ವಜದ ಜತೆಗೇ ಇನ್ನೊಂದು ಧ್ವಜವನ್ನು ಎತ್ತಿ ಹಿಡಿದು ಅವರು ಟ್ರ್ಯಾಕ್‌ನಲ್ಲಿ ಒಂದು ಸುತ್ತು ಓಡಿದ್ದರು. ಕ್ಯಾಥಿ ಮಾತನಾಡಲಿಲ್ಲ, ಅಳಲಿಲ್ಲ, ಯಾರ ವಿರುದ್ಧವೂ ಘೋಷಣೆಗಳನ್ನು ಕೂಗಲಿಲ್ಲ. ಇಡೀ ಜಗತ್ತು ಆ ಧ್ವಜದ ಕಥೆಯ ಕುರಿತು ಕುತೂಹಲಗೊಂಡಿತು. ಮಾಹಿತಿಗಳನ್ನು ಕೆದಕುತ್ತಾ ಹೋಯಿತು. ಅದು ಆಸ್ಟ್ರೇಲಿಯಾದ ಮೂಲ ನಿವಾಸಿಗಳ ಸಂಘಟನೆಯ ಧ್ವಜ. ಆ ಸುಂದರ ದೇಶದ ‘ಕಪ್ಪು ಕಥೆ’ಯನ್ನು ಕ್ಯಾಥಿ ಅಂದು ಜಗತ್ತಿಗೆ ಮೊದಲ ಬಾರಿಗೆ ಪರಿಣಾಮಕಾರಿಯಾಗಿ ತೆರೆದಿಟ್ಟರು. ಆ ನಂತರ ಜಗತ್ತಿನಾದ್ಯಂತ ಸಾವಿರಾರು ಮಂದಿ ಆಸ್ಟ್ರೇಲಿಯಾದ ಮೂಲನಿವಾಸಿಗಳ ಕರಾಳ ಬದುಕಿನ ಬಗ್ಗೆ ಸಂಶೋಧನೆ ನಡೆಸಿದರು. ಸಹಸ್ರಾರು ಲೇಖನಗಳು ಪ್ರಕಟಗೊಂಡವು. ನೂರಾರು ಕೃತಿಗಳು ಮುದ್ರಣಗೊಂಡವು.

ಆ ಘಟನೆ ನಡೆದು ಮೂರು ವರ್ಷಗಳಲ್ಲಿ ಸಿಡ್ನಿಯಲ್ಲೇ ಒಲಿಂಪಿಕ್ಸ್‌ ನಡೆದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮೂಲನಿವಾಸಿಗಳ ಅದ್ಭುತ ಪರಂಪರೆಯನ್ನು ಅಲ್ಲಿನ ಸರ್ಕಾರ ಜಗತ್ತಿಗೆ ತೋರಿಸಿದ್ದನ್ನು ಮರೆಯುವಂತಿಲ್ಲ. ಅವೆಲ್ಲವೂ ಬಿಳಿಯರು ಆಸ್ಟ್ರೇಲಿಯಾಕ್ಕೆ ಕಾಲಿಕ್ಕುವ ಮುನ್ನ ಇದ್ದ ಸಾಂಸ್ಕೃತಿಕ ವೈಭವ. ಕೇವಲ ಎರಡು ಶತಮಾನಗಳ ಹಿಂದೆ ಬಿಳಿಯರು ಅಲ್ಲಿಗೆ ಕಾಲಿಕ್ಕುವ ಮೊದಲು ಆ ಭೂಖಂಡದ ತುಂಬಾ  ಕಪ್ಪು ಜನರೇ ಇದ್ದರು. ಹಾಗಿದ್ದರೆ ಈಗಿರುವ ಆಸ್ಟ್ರೇಲಿಯ ಕ್ರಿಕೆಟ್‌ ತಂಡದಲ್ಲಿ ಎಲ್ಲರೂ ಬಿಳಿಯರೇ ಇದ್ದಾರಲ್ಲಾ?

ಹೌದು, ಕೊಲಂಬಸ್‌ ಐದು ಶತಮಾನಗಳ ಹಿಂದೆ ಅಮೆರಿಕ ಭೂಖಂಡವನ್ನು ಕಂಡು ಹಿಡಿದ ನಂತರ ಯೂರೋಪ್‌ನ ಲಕ್ಷಾಂತರ ಮಂದಿ ಅಲ್ಲಿಗೆ ಹಡಗುಗಳಲ್ಲಿ ಹೋಗಿ ನೆಲೆಸಿದರು. ಉತ್ತರ ಮತ್ತು ದಕ್ಷಿಣ ಅಮೆರಿಕಾಗಳಲ್ಲಿದ್ದ ಮೂಲನಿವಾಸಿಗಳು ಮತ್ತು ಅವರ ಸಂಸ್ಕೃತಿ ನಿರ್ನಾಮಗೊಂಡಿತು. ಅದು ಬೇರೆಯೇ ಕಥೆ. ಆ ದಿನಗಳಲ್ಲಿ ಬ್ರಿಟಿಷರು ತಮ್ಮಲ್ಲಿದ್ದ ಅಪರಾಧಿಗಳನ್ನು ಜೈಲಿನಲ್ಲಿ ಬಂಧಿಸಿಡುವ ಬದಲು ಹಡಗುಗಳಲ್ಲಿ ತುಂಬಿ ಉತ್ತರ ಅಮೆರಿಕಾಕ್ಕೆ ಕೊಂಡೊಯ್ದು ಬಿಡುತ್ತಿದ್ದರು. ಆದರೆ 1776ರಲ್ಲಿ ಅಮೆರಿಕಾದಲ್ಲಿ ಬಿಳಿಯರೇ ಸ್ವತಂತ್ರವಾಗಿ ಸರ್ಕಾರ ರಚಿಸಿ ತಮ್ಮದು ಸಾರ್ವಭೌಮ ದೇಶ ಎಂದು ಘೋಷಿಸಿಕೊಂಡರು. ಆಗ ಅಪರಾಧಿಗಳನ್ನು ಎಲ್ಲಿ ಕೊಂಡೊಯ್ದು ಬಿಡುವುದೆಂಬ ಚಿಂತೆ ಬ್ರಿಟನ್‌ ಸರ್ಕಾರವನ್ನು ಕಾಡಿತ್ತು. 1786ರಲ್ಲಿ ಲಾರ್ಡ್‌ ಸಿಡ್ನಿ ‘ಇನ್ನು ಮುಂದೆ ಅಪರಾಧಿಗಳನ್ನು ಆಸ್ಟ್ರೇಲಿಯ ಎಂಬ ಭೂಖಂಡಕ್ಕೆ ಕರೆದೊಯ್ದು ಬಿಡಲಾಗುವುದು’ ಎಂದು ಬ್ರಿಟನ್‌ನ ಪಾರ್ಲಿಮೆಂಟ್‌ನಲ್ಲಿ ಪ್ರಕಟಿಸಿದರು. ಅದಕ್ಕಿಂತ ಕೆಲವು ವರ್ಷಗಳ ಹಿಂದಷ್ಟೆ ಅಂತಹದ್ದೊಂದು ಭೂಖಂಡ ಇರುವುದನ್ನು ಯೂರೋಪ್‌ನ ನಾವಿಕರು ಪತ್ತೆ ಹಚ್ಚಿದ್ದರು. ಸಿಡ್ನಿ ಪ್ರಕಟಣೆ ನೀಡಿದ ವರ್ಷವೇ ದೊಡ್ಡ ಪ್ರಮಾಣದ ಶಿಕ್ಷೆಗೆ ಗುರಿಯಾಗಿದ್ದ 717 ಅಪರಾಧಿಗಳನ್ನು ಹೇರಿಕೊಂಡಿದ್ದ 11 ಹಡಗುಗಳು 19ಸಾವಿರ ಕಿ.ಮೀ. ದೂರವನ್ನು ಎಂಟು ತಿಂಗಳಲ್ಲಿ ಕ್ರಮಿಸಿ ಆಸ್ಟ್ರೇಲಿಯದ ದಡ ಸೇರಿದವು. ನಂತರ ಶತಮಾನದ ಕಾಲ ನಿರಂತರವಾಗಿ ಇಂಗ್ಲೆಂಡ್‌ನಿಂದ ನೂರಾರು ಹಡಗುಗಳು ಕಳ್ಳರು, ಕೊಲೆಗಡುಕರನ್ನು ತಂದು ಆ ನೆಲದಲ್ಲಿ ಇಳಿಸಿ ವಾಪಸಾದವು. ಅಲ್ಲಿಗೆ ಬಂದಿಳಿದವರು, ಅವರ ಮಕ್ಕಳು, ಮೊಮ್ಮಕ್ಕಳು ಈಗಿನ ಆಸ್ಟ್ರೇಲಿಯಾವನ್ನು ಕಟ್ಟಿದರು. ಆದರೆ ಅವರೆಲ್ಲರೂ ಸೇರಿ ಶತಮಾನದ ಕಾಲ ಮೂಲನಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ಎಸಗಿದರು. ನರಮೇಧ ನಡೆಸಿದರು. ಅಲ್ಲಿನ ಕಪ್ಪು ಜನರು ವಲಸೆ ಬಂದ ಬಿಳಿಯರ ತೋಟಗಳಲ್ಲಿ ಎರೆಹುಳುಗಳಂತೆ ದುಡಿದು ಮಣ್ಣಾಗಿ ಹೋದರು. ಮೂಲ ನಿವಾಸಿಗಳ ವರ್ಣರಂಜಿತ ಸಂಸ್ಕೃತಿಯೂ ನಾಶವಾಯಿತು. ಈ ದಾರುಣ ಕಥೆಯನ್ನು ಅಥೆನ್ಸ್‌ನಲ್ಲಿ ಅಂದು ಕ್ಯಾಥಿ ಫ್ರೀಮನ್‌ ಎತ್ತಿ ಹಿಡಿದಿದ್ದ ಧ್ವಜ ಜಗತ್ತಿಗೆ ಸಾರಿ ಹೇಳಿತ್ತು.

ಮಿಷನರಿಗಳಿಂದ ಕ್ರಿಕೆಟ್‌ ದೀಕ್ಷೆ
ಸುಮಾರು 170 ವರ್ಷಗಳ ಹಿಂದೆ ಕ್ರೈಸ್ತ ಮಿಷನರಿಗಳು ಆಸ್ಟ್ರೇಲಿಯಾದ ಮೂಲನಿವಾಸಿಗಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸತೊಡಗಿದವು. ಮೂಲನಿವಾಸಿಗಳನ್ನು ಸುಸಂಸ್ಕೃತರನ್ನಾಗಿಸುವ ನಿಟ್ಟಿನಲ್ಲಿ ಅವರಿಗೆ ಕ್ರಿಕೆಟ್‌ ಆಟವನ್ನೂ ಕಲಿಸಲಾಯಿತು. ಹೀಗಾಗಿ ಮೂಲನಿವಾಸಿಗಳಲ್ಲಿ ಹಲವರು ಕ್ರಿಕೆಟ್‌ನಲ್ಲಿ ನಿಪುಣರಾದರು. ಆದರೆ ನಂತರದ ದಿನಗಳಲ್ಲಿ ಬಿಳಿಯರು ಈ ಕಪ್ಪು ಆಟಗಾರರನ್ನು ನಮ್ಮಲ್ಲಿ ಕಂಬಳಕ್ಕೆ ಕೋಣವನ್ನು ಬಳಸುವಂತೆ ಕ್ರಿಕೆಟ್‌ನಲ್ಲಿ ಆಡಿಸುತ್ತಾ ಮನರಂಜನೆ ಪಡೆಯುತ್ತಿದ್ದರು. ಕೆಲವು ಬಿಳಿಯ ವ್ಯವಹಾರಸ್ತರು ಕಪ್ಪು ಆಟಗಾರರ ಕ್ರಿಕೆಟ್‌ ತಂಡವನ್ನು ಕಟ್ಟಿಕೊಂಡು ಊರೂರಿಗೆ ಹೋಗಿ ಆಡಿಸಿ ಹಣ ಮಾಡುತ್ತಿದ್ದರು. ಆ ಕಾಲಘಟ್ಟದಲ್ಲಿ ನೂರಾರು ಮಂದಿ ಮೂಲನಿವಾಸಿ ಆಟಗಾರರು ಕ್ರಿಕೆಟ್‌ನಲ್ಲಿ ಅದ್ಭುತ ಸಾಮರ್ಥ್ಯ ತೋರಿದ್ದ ಸಂಗತಿ ಇವತ್ತು ಜನಪದ ಕಥೆಗಳ ಸ್ವರೂಪದಲ್ಲಿ  ಜೀವಂತವಿದೆ.

1868ರಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿತು. ಆ ದೇಶದ ಕ್ರಿಕೆಟ್‌ ಆಟಗಾರರು ವಿದೇಶಕ್ಕೆ ಅದೇ ಮೊದಲ ಬಾರಿಗೆ ಹೋಗಿದ್ದರಿಂದ ಕ್ರಿಕೆಟ್‌ ಚರಿತ್ರೆಯಲ್ಲಿ ಅದೊಂದು ಮಹತ್ವದ ಅಧ್ಯಾಯವೇ ಹೌದು. ವಿಶೇಷವೆಂದರೆ ಆ ತಂಡದಲ್ಲಿದ್ದ ಆಟಗಾರರೆಲ್ಲರೂ ಮೂಲನಿವಾಸಿಗಳು !, ಕಪ್ಪು ಜನರು !!

ಆ ತಂಡ ಇಂಗ್ಲೆಂಡ್‌ನಲ್ಲಿ ಒಟ್ಟು 47 ಪಂದ್ಯಗಳಲ್ಲಿ ಆಡಿ 14ರಲ್ಲಿ ಗೆದ್ದರೆ, 14 ಪಂದ್ಯಗಳಲ್ಲಿ ಸೋತಿತು. 19 ಪಂದ್ಯಗಳು ಡ್ರಾಗೊಂಡಿದ್ದವು. ಬ್ರಿಟನ್‌ನ ಪ್ರಮುಖ ಕ್ರೀಡಾಂಗಣಗಳಲ್ಲಿ, ಅಲ್ಲಿನ ಪ್ರಮುಖ ಕ್ಲಬ್‌ ತಂಡಗಳ ವಿರುದ್ಧ ಈ ತಂಡ ಆಡಿತ್ತು. ಅದು ಬಿಡುವಿಲ್ಲದ ಕಾರ್ಯಕ್ರಮ. ವಾರಕ್ಕೆ ಸತತ ಮೂರು ಪಂದ್ಯಗಳು ನಡೆದಿದ್ದವು. ಆಸ್ಟ್ರೇಲಿಯಾದ ಪ್ರತಿಯೊಬ್ಬ ಆಟಗಾರನೂ ಅಂದು ಅದ್ಭುತ ಸಾಮರ್ಥ್ಯ ತೋರಿದ್ದ. ಸರ್ರೆ ಕ್ರೀಡಾಂಗಣದಲ್ಲಿ ಜಾನ್‌ ಮುಲಗ್‌ 80 ನಿಮಿಷಗಳಲ್ಲಿ 73ರನ್‌ ಗಳಿಸಿದ್ದುದೇ ಇದಕ್ಕೆ ಸ್ಪಷ್ಟ ನಿದರ್ಶನ. ಅಲ್ಲಿ ಎರಡು ದಿನ ಪಂದ್ಯ ನಡೆದರೆ, ಇನ್ನೊಂದು ದಿನ ಈ ಆಟಗಾರರು ಈಟಿ ಎಸೆಯುವುದು, ಹಗ್ಗದ ಮೇಲೆ ನಡೆಯುವುದು ಇತ್ಯಾದಿ ಹಲವು ಸಾಹಸಮಯ ‘ದೊಂಬರಾಟ’ಗಳನ್ನು ಮಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡಬೇಕಾಗಿತ್ತು. ಈ ಎಲ್ಲದರ ಬಗ್ಗೆಯೂ ಬ್ರಿಟನ್‌ನ ಆಗಿನ ಪತ್ರಿಕೆಗಳು ವಿವರವಾಗಿ ಬರೆದಿವೆ.

ಬಳಲಿ ಸತ್ತವರೇ ಹೆಚ್ಚು
ಹೀಗೆ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಆಟಗಾರರೆಲ್ಲರೂ ಇನ್ನಿಲ್ಲದಂತೆ ಬಳಲಿದರು. ಅಸ್ವಸ್ಥರಾದರು. ಕಿಂಗ್‌ಕೋಲ್‌ ಎಂಬಾತ ಆಸ್ಟ್ರೇಲಿಯಾಕ್ಕೆ ವಾಪಸಾಗುವ ಹಾದಿಯಲ್ಲಿ ಹಡಗಿನಲ್ಲೇ ಸತ್ತು ಹೋದ. ಆಸ್ಟ್ರೇಲಿಯಾಕ್ಕೆ ಬಂದಿಳಿದ ಈ ತಂಡದ ಹಲವರು ನಂತರದ ಕೆಲವೇ ತಿಂಗಳುಗಳಲ್ಲಿ ಅನಾರೋಗ್ಯದಿಂದ ಸತ್ತು ಹೋದರು. ಈ ಪ್ರವಾಸದಿಂದ ಮೂಲನಿವಾಸಿಗಳಿಗೆ ಅದೆಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ಆ ಪ್ರವಾಸ ಸಂಘಟಿಸಿದ್ದ ಬಿಳಿಯರೆಲ್ಲರೂ ಕೈತುಂಬಾ ಹಣ ಮಾಡಿಕೊಂಡಿದ್ದರು. ಈ ಪ್ರವಾಸದ ಶತಮಾನೋತ್ಸವದ ನೆಪದಲ್ಲಿ 1988ರಲ್ಲಿ ಆಸ್ಟ್ರೇಲಿಯಾದಲ್ಲಿ ಮೂಲನಿವಾಸಿಗಳ ಕ್ರಿಕೆಟ್‌ ಸಂಸ್ಥೆಯೊಂದು ಹುಟ್ಟಿಕೊಂಡಿತು. ಈ ಸಂಸ್ಥೆ ನೂರು ವರ್ಷಗಳ ಹಿಂದಿನ ದಿನಪತ್ರಿಕೆಗಳ ಕ್ರೀಡಾಸುದ್ದಿಗಳನ್ನೇ ಆಧಾರವಾಗಿಟ್ಟುಕೊಂಡು ಮೂಲನಿವಾಸಿ ಕ್ರಿಕೆಟಿಗರ ಶ್ರೇಷ್ಠ ಪರಂಪರೆಯ ಮಾಹಿತಿಗಳನ್ನು ಜಗತ್ತಿಗೆ ನೀಡಿದೆ.

*ಬ್ರಿಟನ್‌ಗೆ ತೆರಳಿದ್ದ ಆಸ್ಟ್ರೇಲಿಯಾ ತಂಡದಲ್ಲಿ ಅಂದು ಬಿಳಿಯರು ಇರಲೇ ಇಲ್ಲ.
*ಎರಡು ದಿನ ಕ್ರಿಕೆಟ್‌ ಆಡಿದ ನಂತರ ಒಂದು ದಿನ ದೊಂಬರಾಟ ಮಾಡಬೇಕಿತ್ತು
*ಬಿರುಗಾಳಿಯಂತಹ ಬೌಲರ್‌ಗಳು ಎರೆಹುಳುಗಳಂತಾಗಿ ಸತ್ತೇ ಹೋದರು.

ಬ್ರಿಟನ್‌ ಪ್ರವಾಸ ಮಾಡಿದ್ದ ತಂಡದಲ್ಲಿದ್ದ ಮುಲಗ್‌ ಮತ್ತು ಕಜನ್‌ ಮಾತ್ರ ವಾಪಸು ಬಂದ ಮೇಲೆಯೂ ದೈಹಿಕ ಸಾಮರ್ಥ್ಯ ಉಳಿಸಿಕೊಂಡು ನಂತರವೂ ಹಲವು ಟೂರ್ನಿಗಳಲ್ಲಿ ಆಡಿದ್ದರು. ಮುಲಗ್‌ ಆ ದಿನಗಳಲ್ಲಿ ಒಟ್ಟು 43 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ 1679 ರನ್‌ ಗಳಿಸಿದ್ದರಲ್ಲದೆ, 237 ವಿಕೆಟ್‌ ಉರುಳಿಸಿದ್ದರು. ಕಜನ್‌ 46 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ 1364 ರನ್‌ ಗಳಿಸಿದ್ದರಲ್ಲದೆ, 113 ವಿಕೆಟ್‌ ಪಡೆದಿದ್ದರು.

ಅಷ್ಟೊಂದು ಪ್ರಮುಖ ಆಟಗಾರನಾದರೂ ಮುಲಗ್‌ ಅವರನ್ನು ತಂಡದಲ್ಲಿ ಸಮಾನವಾಗಿ ನೋಡಿಕೊಳ್ಳುತ್ತಿರಲಿಲ್ಲ. ತಂಡ ಪ್ರವಾಸದಲ್ಲಿದ್ದಾಗ ಎಲ್ಲರೂ ಕೊಠಡಿಗಳಲ್ಲಿ ಬೆಚ್ಚಗೆ ಮಲಗಿರುತ್ತಿದ್ದರೆ, ಮುಲಗ್‌ ಮಾತ್ರ ಕುದುರೆಲಾಯದ ಒಂದು ಮೂಲೆಯಲ್ಲಿ ಮುದುರಿ ಮಲಗಿರಬೇಕಿತ್ತು. ಎಲ್ಲರ ಜತೆಗೆ ಕುಳಿತು ಅವರು ಊಟ ಮಾಡುವಂತಿರಲಿಲ್ಲ. ಇವರಿಗಾಗಿಯೇ ಪ್ರತ್ಯೇಕವಾದ ಶೀಷೆಯಲ್ಲಿ ನೀರು ತುಂಬಿಟ್ಟುಕೊಳ್ಳಬೇಕಿತ್ತು. ಆಟದ ಮೇಲಿನ ಪ್ರೀತಿಯಿಂದಾಗಿ ಇಂತಹ ಎಲ್ಲಾ ತೆರನಾದ ತಾರತಮ್ಯ, ಅಪಮಾನಗಳನ್ನು ಸಹಿಸಿಕೊಂಡಿದ್ದ ಮುಲಗ್‌ 1891ರಲ್ಲಿ ಸತ್ತು ಹೋದರು.

ಶತಮಾನದ ಹಿಂದೆ ಮೂಲನಿವಾಸಿಗಳಾದ ಜಾಕ್‌ ಮಾರ್ಷ್‌, ಆಲ್ಬರ್ಟ್‌ ಹೆನ್ರಿ, ಎಡ್ಡಿ ಗಿಲ್ಬರ್ಟ್‌ ಮುಂತಾದವರು ತಮ್ಮ ವೇಗದ ಬೌಲಿಂಗ್‌ನಿಂದ ಕ್ರಿಕೆಟ್‌ಪ್ರಿಯರನ್ನು ಬೆರಗುಗೊಳಿಸಿದ್ದರು. ಆಲ್ಬರ್ಟ್‌ ಹೆನ್ರಿ 1902ರಿಂದ 1905ರವರೆಗೆ 7 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದ್ದು, 26 ವಿಕೆಟ್‌ಗಳನ್ನು ಉರುಳಿಸಿದ್ದರು. 1872ರಲ್ಲಿ ಬಿಲ್ಲಿ ಎಂಬಾತ 140 ಯಾರ್ಡ್‌ಗಳಷ್ಟು ದೂರ ಚೆಂಡನ್ನು ಎಸೆದಿದ್ದನಂತೆ. ಈ ಬಗ್ಗೆ ‘ವಿಸ್ಡನ್‌’ ಕೃತಿಯಲ್ಲಿಯೇ ಮಾಹಿತಿ ಇದೆ. ಮೂಲನಿವಾಸಿಗಳ ತಂಡವೊಂದು ಆ ಕಾಲದಲ್ಲಿ ಭೂಸೇನೆ ಮತ್ತು ನೌಕಾಪಡೆಗಳಲ್ಲಿದ್ದ ನುರಿತ ಬಿಳಿಯ ಕ್ರಿಕೆಟಿಗರ ತಂಡವನ್ನು ಸೋಲಿಸಿತ್ತು. ಆ ಪಂದ್ಯವನ್ನು ಐದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರಂತೆ.ಕಜನ್‌್ಸ ಆಗಲೇ ಕೇವಲ 23 ರನ್‌ ನೀಡಿ 8 ವಿಕೆಟ್‌ಗಳನ್ನು ಉರುಳಿಸಿದ್ದರು. ಎಡ್ಡಿ ಗಿಲ್ಬರ್ಟ್‌ನ ಚೆಂಡಿಗಿಂತ ವೇಗವಾದುದು ಇನ್ನೇನಿರಬಹುದು ಎಂದು ಆ ದಿನಗಳಲ್ಲಿ ಸಾಮಾನ್ಯ ಜನರು ಮಾತನಾಡಿಕೊಳ್ಳುತ್ತಿದ್ದರಂತೆ.

‘ನೋಬಾಲ್‌’ ಸಂಚು
ಮೂಲನಿವಾಸಿಗಳ ಶಕ್ತಿಯನ್ನು ನೋಡಿ ಬಿಳಿಯ ಕ್ರಿಕೆಟಿಗರು ಅಸೂಯೆ ಪಡುತ್ತಿದ್ದರು. ಇವರನ್ನೆಲ್ಲಾ ‘ನೋಬಾಲ್‌’ ತಂತ್ರದ ಮೂಲಕ ಮೂಲೆಗುಂಪು ಮಾಡುವ ಮತ್ತು ಆತ್ಮವಿಶ್ವಾಸ ಕುಂದಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಿತು. ಆಗಿನ ಖ್ಯಾತ ಅಂಪೈರ್‌ ಕ್ರೊಸಾರ್ಟ್‌ ಎಂಬಾತ ಹೆನ್ರಿಯ ಎಸೆತಗಳಿಗೆಲ್ಲಾ ನೋಬಾಲ್‌ ತೀರ್ಪು ನೀಡುತ್ತಿದ್ದರು. ಅದೊಂದು ದಿನ ಸಿಟ್ಟಿಗೆದ್ದ ಹೆನ್ರಿ ಪಂದ್ಯ ಮುಗಿದ ಮೇಲೆ ಕ್ರೊಸಾರ್ಟ್‌ ಬಳಿ ಹೋಗಿ ‘ಏಯ್‌ ಲೋಫರ್‌, ನನ್ನ ಒಳ್ಳೆಯ ಎಸೆತಗಳಿಗೆಲ್ಲಾ ನೋಬಾಲ್‌ ಕೊಟ್ಟೆ. ಒಂದೆರಡು ಸಲ ನಾನು ಉದ್ದೇಶಪೂರ್ವಕವಾಗಿಯೇ ಕೆಟ್ಟದಾಗಿ ಚೆಂಡನ್ನು ಎಸೆದೆ. ಆಗ ನೀನು ಸುಮ್ಮನಿದ್ದೆ. ನಿನಗೆ ಕ್ರಿಕೆಟ್‌ ನಿಯಮವೇ ಗೊತ್ತಿಲ್ಲ’ ಎಂದು ಅಬ್ಬರಿಸಿದ್ದ. ಆಗ ನ್ಯಾಯಾಲಯ ‘ಮೇಲಿನವರ ವಿರುದ್ಧ ಮಾತನಾಡಿದ್ದು ಅಪರಾಧ’ ಎಂಬ ತೀರ್ಪು ನೀಡಿ ಹೆನ್ರಿಗೆ ಒಂದು ತಿಂಗಳ ಜೈಲು ಶಿಕ್ಷೆ ನೀಡಿತ್ತು. ಹೆನ್ರಿ 29 ವರ್ಷಕ್ಕೇ ಕ್ಷಯ ರೋಗದಿಂದ ತೀರಿಕೊಂಡ. ಜಾಕ್‌ ಮಾರ್ಷ್‌ ಅವರು ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾಕ್ಕೆ ಬಂದಾಗ ಬಾತುರ್ಶ್‌ ತಂಡದ ಪರ ಆಡಿ 55 ರನ್‌ ನೀಡಿ ಇಂಗ್ಲೆಂಡ್‌ನ 5 ವಿಕೆಟ್‌ ಉರುಳಿಸಿದ್ದರು. ಎಡ್ಡಿ ಗಿಲ್ಬರ್ಟ್‌ ಎಂಬುವವರು ಕ್ವೀನ್ಸ್‌ಲ್ಯಾಂಡ್‌ನಲ್ಲಿ ಆಗ ಬ್ರಾಡ್ಮನ್‌ ಅವರಿಗಿಂತ ಜನಪ್ರಿಯರಾಗಿದ್ದರು. ಎಡ್ಡಿ ಎಸೆತದಲ್ಲಿ ಬ್ರಾಡ್ಮನ್‌ ಒಂದೂ ರನ್‌ ಗಳಿಸಲಾಗದೆ ಪೆವಿಲಿಯನ್‌ಗೆ ತೆರಳಿದ್ದರು. ‘ನನ್ನ ಬದುಕಿನಲ್ಲಿ ಎಂದೆಂದೂ ಮರೆಯಲಾಗದ ವೇಗದ ಬೌಲರ್‌ ಎಡ್ಡಿ’ ಎಂದು ಬ್ರಾಡ್ಮನ್‌ ಒಂದು ಕಡೆ ಬರೆದಿದ್ದಾರೆ.

ಬಿಳಿಯ ಅಂಪೈರ್‌ಗಳು ಆ ಸಂದರ್ಭದಲ್ಲಿ ಅಂತಹ ಬೌಲರ್‌ಗಳನ್ನೆಲ್ಲಾ ‘ಸುಮ್ಮನೆ ಚೆಂಡನ್ನು ಎಸೆಯುತ್ತಾರೆ. ಅವರಿಗೆ ಬೌಲಿಂಗ್‌ ಬರುವುದಿಲ್ಲ’ ಎಂಬ ಹಣೆಪಟ್ಟಿ ಹಚ್ಚಿ ಮೂಲೆಗುಂಪು ಮಾಡಿ ಬಿಟ್ಟರು.

ಅಲ್ಲಿನ ಸರ್ಕಾರವೇ ‘ಮೂಲನಿವಾಸಿಗಳನ್ನು ಪ್ರತ್ಯೇಕವಾಗಿರಿಸುವ’ ಕಾನೂನು ತಂದು ಅವರನ್ನು ಇನ್ನಿಲ್ಲದಂತೆ ತುಳಿದು ಹಾಕಿತು. ಆಸ್ಟ್ರೇಲಿಯಾದಲ್ಲಿ 1850ರಿಂದ ಸುಮಾರು ಏಳು ಸಾವಿರಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟಿಗರ ಹೆಸರುಗಳು ದಾಖಲಾಗಿದ್ದರೆ, ಅದರಲ್ಲಿ ಮೂಲನಿವಾಸಿಗಳ ಸಂಖ್ಯೆ ಕೇವಲ ಆರು ಅಷ್ಟೇ !

ರಾಜಕಾರಣ, ಕಾನೂನು, ಆರ್ಥಿಕ ಬದುಕು, ಸಾಮಾಜಿಕ ಸ್ಥಿತಿಗತಿಗಳಲ್ಲಿ ಜನಾಂಗೀಯವಾದದ ಕರಿನೆರಳು ಇದೆ ಎನ್ನುವುದಾದರೆ, ಕ್ರಿಕೆಟ್‌ನಲ್ಲೂ ಇದೆ. ಇದಕ್ಕೆ ಆಸ್ಟ್ರೇಲಿಯವೇ ಸ್ಪಷ್ಟ ಉದಾಹರಣೆ. ಇದನ್ನೇ ಅಥೆನ್ಸ್‌ನಲ್ಲಿ ಕ್ಯಾಥಿ ಫ್ರೀಮನ್‌ ಎತ್ತಿ ಹಿಡಿದ ಧ್ವಜ ಜಗತ್ತಿಗೆ ಸಾರಿ ಹೇಳಿದ್ದು ತಾನೆ ?
ಹೌದು, ಇದೀಗ ವಿಶ್ವಕಪ್‌ನಲ್ಲಿ ಆಡುತ್ತಿರುವ ಆತಿಥೇಯ ಆಸ್ಟ್ರೇಲಿಯ ತಂಡದಲ್ಲಿ ಒಬ್ಬರೂ ಮೂಲನಿವಾಸಿಗಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT