ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಹಿಷ್ಣುತೆಗೆ ಶರಣರು ಉತ್ತರಿಸಿದ್ದರು’

ಕಂಬಾರರಿಗೆ ‘ಮಹಾಕವಿ ಕಾಳಿದಾಸ’ ಪ್ರಶಸ್ತಿ ಪ್ರದಾನ
Last Updated 26 ನವೆಂಬರ್ 2015, 16:40 IST
ಅಕ್ಷರ ಗಾತ್ರ

ರಾಯಚೂರು: ‘ಸಹಿಸುಷ್ಣತೆ ಮತ್ತು ಅಸಹಿಸುಷ್ಣತೆ ಬಗ್ಗೆ ಮಾತನಾಡುವುದು ಈಗ ಫ್ಯಾಷನ್‌್ ಆಗಿದೆ. ಆದರೆ, ಅಸಹಿಷ್ಣುತೆಗೆ 12ನೇ ಶತಮಾನದಲ್ಲೇ ಬಸವಾದಿ ಶರಣರು ಉತ್ತರ ನೀಡಿದ್ದಾರೆ’ ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಜಿಲ್ಲೆಯ ಗಬ್ಬೂರಿನಲ್ಲಿ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷ ಮುಕ್ಕಣ್ಣ ಕರಿಗಾರ ಅವರ 46ನೇ ಜನ್ಮದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಲೋಕ ಕಲ್ಯಾಣ ದಿನಾಚರಣೆಯಲ್ಲಿ ‘ಮಹಾಕವಿ ಕಾಳಿದಾಸ’ ರಾಷ್ಟ್ರೀಯ ಕಾವ್ಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

‘ಸಮಾನತೆಯ ಸಮಾಜ ಸ್ಥಾಪನೆಗೆ ಕ್ರಾಂತಿಕಾರಿ ಪ್ರಯೋಗ ನಡೆಸಿದ ಬಸವಣ್ಣನವರು ಸಹಿಷ್ಣುತೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದರು. 16ನೇ ಶತಮಾನದಲ್ಲಿ ಕಲಬುರ್ಗಿ ಜಿಲ್ಲೆಯ ಸಾವಳಗಿಯಲ್ಲಿ ನೆಲೆಸಿದ್ದ ಶಿವಲಿಂಗೇಶ್ವರ ಯೋಗಿಗಳು ಮತ್ತು ಅವರನ್ನು ಭೇಟಿ ಮಾಡಲು ದೆಹಲಿಯಿಂದ ಬಂದಿದ್ದ ಖಾಜಾ ಬಂದೇ ನವಾಜ್‌ ಅವರು ಸಹಿಷ್ಣುತೆಯನ್ನು ಸಾರಿದ್ದಾರೆ. ಇದು ನಮಗೆ ಆದರ್ಶವಾಗಬೇಕು’ ಎಂದು ಹೇಳಿದರು.

‘ಬಂದೇ ನವಾಜ್‌ ಮತ್ತು ಶಿವಲಿಂಗೇಶ್ವರ ಯೋಗಿಗಳ ನಡುವೆ ಧರ್ಮದ ವಿಚಾರವಾಗಿ 13 ದಿನ ವಾದ ನಡೆಯಿತು. ಕೊನೆಗೆ ಇಬ್ಬರ ವಾದ ಒಂದೇ ಆಗಿದ್ದು, ಅದೇ ಮಾನವೀಯತೆಯ ಧರ್ಮ ಎಂಬದನ್ನು ಅವರಿಬ್ಬರು ಒಪ್ಪಿಕೊಂಡರು. ಬಂದೇ ನವಾಜರ ಹಸಿರು ದಿರಿಸನ್ನು ಶಿವಲಿಂಗೇಶ್ವರ ಯೋಗಿಗಳು ಮತ್ತು ಯೋಗಿಗಳ ಖಾವಿವಸ್ತ್ರವನ್ನು ನವಾಜರು ಧರಿಸಿದರು’ ಎಂದರು.

‘ದೇಶದ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದವರು ರೈತರು. ಅವರ ಪರವಾದ ಆರ್ಥಿಕ ನೀತಿ ಇರಬೇಕಾದ ನಮ್ಮ ರಾಷ್ಟ್ರದಲ್ಲಿ  ಬ್ರಿಟಿಷ್‌ ಪರವಾದ ನೀತಿ ಇನ್ನೂ ಇದೆ’ ಎಂದು ವಿಷಾದಿಸಿದರು. ‘ರಾಜ್ಯದಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೂ ರೈತಾಪಿ ವರ್ಗದ ಕಣ್ಣೀರು ಸರ್ಕಾರಗಳಿಗೆ ಕಾಣುತ್ತಿಲ್ಲ’ ಎಂದರು. ಕಂಬಾರ ಅವರಿಗೆ ನೀಡಿದ ಪುರಸ್ಕಾರ ₹1 ಲಕ್ಷ ನಗದು, ಶಾಲು, ಸ್ಮರಣಿಕೆ ಒಳಗೊಂಡಿದೆ. ಮಹಾಶೈವ ಧರ್ಮಪೀಠದ ಅಧ್ಯಕ್ಷ ಮುಕ್ಕಣ್ಣ ಕರಿಗಾರ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT