ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಗಾಲದ ಬಳಕೆ ನಮ್ಮ ಹಕ್ಕು

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಪ್ಯಾರಿಸ್‌ (ಪಿಟಿಐ): ಹವಾಮಾನ ವೈಪರೀತ್ಯಕ್ಕೆ ಅಭಿವೃದ್ಧಿ ಹೊಂದಿದ ದೇಶಗಳೇ ಕಾರಣ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಅಭಿವೃದ್ಧಿಗೆ ಅಗತ್ಯವಾದ ಇಂಗಾಲದ ಬಳಕೆ ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.

ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಸಮ್ಮೇಳನದಲ್ಲಿ ಹಸಿರುಮನೆ ಅನಿಲವನ್ನು ನಿಯಂತ್ರಿಸಲು ದೇಶದ ಬದ್ಧತೆಯನ್ನು ತೋರಿಸುವ ಭಾರತ ಪೆವಿಲಿಯನ್‌ (ಭಾರತದ ಪ್ರದರ್ಶನ ಮಳಿಗೆಗಳ ಸ್ಥಳ) ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಹವಾಮಾನ ವೈಪರೀತ್ಯವು ಕಚ್ಚಾ ತೈಲಗಳನ್ನು ಬಳಸಿಕೊಂಡು ಬೆಳವಣಿಗೆ ಸಾಧಿಸಿದ ಕೈಗಾರಿಕಾ ಯುಗದ ಪ್ರಗತಿಯ ಫಲ’ ಎಂದು ವ್ಯಾಖ್ಯಾನಿಸಿದರು.

ಅಭಿವೃದ್ಧಿ ಹೊಂದಿದ ದೇಶಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಮೇಲೆ ಮಾಲಿನ್ಯವನ್ನು ನಿಯಂತ್ರಿಸುವ ಹೊಣೆಯನ್ನು ವರ್ಗಾಯಿಸಿದರೆ ಅದು ‘ನೈತಿಕವಾಗಿ ತಪ್ಪು’ ಎಂದು ಹೇಳಿದ ಅವರು, ಬಡ ದೇಶಗಳು ತಮ್ಮ ಆರ್ಥಿಕತೆಯ ಬೆಳವಣಿಗೆಗಾಗಿ ಇಂಗಾಲವನ್ನು ಉರಿಸುವ ಹಕ್ಕು ಹೊಂದಿವೆ ಎಂದರು.

‘ಹವಾಮಾನ ವೈಪರೀತ್ಯ ಜಾಗತಿಕ ಸವಾಲು. ಆದರೆ ಅದಕ್ಕೆ ನಾವು (ಭಾರತ) ಕಾರಣವಲ್ಲ. ಆದರೂ ವಾತಾವರಣದ ಅನಿಶ್ಚಿತ ಬದಲಾವಣೆ ಮತ್ತು ನೈಸರ್ಗಿಕ ವಿಪತ್ತಿನ ತೀವ್ರತೆಯಿಂದ ದೇಶದಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದರು.

‘ಭಾರತದ ಪ್ರಗತಿಯು ನಮ್ಮ ಗುರಿ ಮತ್ತು ನಮ್ಮ ಜನರ ಹಕ್ಕು. ಆದರೆ ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟದಲ್ಲಿಯೂ ನಾವು ಮುಂಚೂಣಿಯಲ್ಲಿ ಇರಬೇಕಾಗುತ್ತದೆ’ ಎಂದರು.

ಅಭಿವೃದ್ಧಿ ಹೊಂದಿದ ದೇಶಗಳ ತಾಪಮಾನ ನಿಯಂತ್ರಣದ ಬದ್ಧತೆ ಮತ್ತು ಅವುಗಳ ಇಂಗಾಲ ಹೊರಸೂಸುವಿಕೆ ಪ್ರಮಾಣ ಸ್ಥಿರವಾಗಿರಬೇಕು ಮತ್ತು ಈ ದೇಶಗಳು ಅಭಿವೃದ್ಧಿಶೀಲ ದೇಶಗಳ ಬೆಳವಣಿಗೆಗೆ ಅಗತ್ಯಕ್ಕೆ ತಕ್ಕಂತೆ ಇಂಗಾಲ ಉರಿಸುವಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. 

ಜೀವನಶೈಲಿಯ ಬದಲಾವಣೆಗೆ ಸಲಹೆ: ‘ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಗೆ ನಾನು ಕರೆ ನೀಡುತ್ತೇನೆ. ಆ ಮೂಲಕ ನಾವು ಭೂಗ್ರಹದ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ನಮ್ಮ ಪ್ರಯತ್ನದ ಫಲಿತಾಂಶವು ನಾವು ಬದುಕುವ ಮತ್ತು ಚಿಂತಿಸುವ ಶೈಲಿಯ ಮೇಲೆ ಅವಲಂಬಿತ. ಅಭಿವೃದ್ಧಿ ಹೊಂದಿದ ಕೆಲವು ದೇಶಗಳ ಜೀವನಶೈಲಿಯು ಅಭಿವೃದ್ಧಿಶೀಲ ದೇಶಗಳ ಅವಕಾಶಗಳನ್ನು ಕಿತ್ತುಕೊಳ್ಳಬಾರದು’ ಎಂದು ಹೇಳಿದರು.

‘ಅಭಿವೃದ್ಧಿ ಹೊಂದಿದ ದೇಶಗಳು ತಮ್ಮಲ್ಲಿನ ಸಂಪನ್ಮೂಲ ಮತ್ತು ತಂತ್ರಜ್ಞಾನಗಳನ್ನು ಅವುಗಳು ಅಗತ್ಯವಿರುವ ದೇಶಗಳೊಂದಿಗೆ ಹಂಚಿಕೊಳ್ಳಬೇಕು. ಆಗಲೇ ನಾವು ಸ್ವಚ್ಛ ಇಂಧನದ ಜಾಗತಿಕ ಬಯಕೆಯನ್ನು ತಲುಪುವುದು ಸಾಧ್ಯ. ಇದು ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆಯ ಹಾದಿಯಲ್ಲಿನ ಇಂಗಾಲದ ಹೆಜ್ಜೆಗಳು ತೆಳುವಾಗಿರಲು ನೆರವು ನೀಡುತ್ತದೆ’ ಎಂದರು.

ಅಭಿವೃದ್ಧಿ ಹೊಂದಿದ ದೇಶಗಳು ತಮ್ಮಲ್ಲಿನ ಇಂಗಾಲದ ಉಗುಳುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸಲು ಈ ಹೊಂದಾಣಿಕೆ ಮಾಡಿಕೊಳ್ಳಬೇಕು ಅಂದು ಪ್ರಧಾನಿ ಸಲಹೆ ನೀಡಿದರು.

ಹವಾಮಾನ ವೈಪರೀತ್ಯವನ್ನು ಪ್ರಮುಖ ಜಾಗತಿಕ ಸವಾಲು ಎಂದು ಅವರು ವ್ಯಾಖ್ಯಾನಿಸಿದರು. ‘ಸಮ್ಮೇಳನದಿಂದ ಕೈಗೊಳ್ಳುವ ನಿರ್ಣಯ ಅತ್ಯಂತ ಮಹತ್ವದ್ದು. ಜಗತ್ತು ತುರ್ತಾಗಿ ಕಾರ್ಯೋನ್ಮುಖವಾಗುವುದನ್ನು ನಾವು ಬಯಸುತ್ತೇವೆ. ಪಾರಂಪರಿಕವಾಗಿ ಬಂದ ಮತ್ತು ನಾವು ಮರೆತು ಬಿಟ್ಟಿರುವ ಮಾನವ ಹಾಗೂ ನಿಸರ್ಗದ ನಡುವೆ ಸಮತೋಲನವನ್ನು ಮರಳಿ ಸ್ಥಾಪಿಸುವ ನಿಟ್ಟಿನಲ್ಲಿ ಪರಿಣಾಮಾತ್ಮಕ, ನಿಷ್ಪಕ್ಷಪಾತ ಮತ್ತು ಬಹುಕಾಲ ಉಳಿಯಬಲ್ಲ ಒಪ್ಪಂದಕ್ಕೆ ಬರಬೇಕಿದೆ’ ಎಂದರು.

‘ನಮ್ಮ ಜಾಗತಿಕ ಪಾಪಪ್ರಜ್ಞೆಯು ನಾವು ಯಶಸ್ಸು ಸಾಧಿಸುವಂತಹ ಬದ್ಧತೆಗಳನ್ನು ರಚಿಸುವ ಪ್ರಯತ್ನಗಳಿಗೆ ಪ್ರೇರಕ
ವಾಗಬೇಕು. ಏಕೆಂದರೆ ನಮ್ಮೆದುರು ಬೃಹತ್‌ ಸವಾಲು ಇದೆ. ಅದನ್ನು ಎದುರಿಸುವ ಪ್ರಯತ್ನಗಳು ತ್ವರಿತವಾಗಿ ನಡೆಯಬೇಕಿದೆ’ ಎಂದರು. ಸಮ್ಮೇಳನವನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು. ಇದು ಭಾರತದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು ಎಂದರು.

ಮೋದಿ ಅವರು ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರೊಂದಿಗೆ ಭಾರತದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ಪರಿಸರ ರಕ್ಷಣೆ ಕುರಿತ ಪುಸ್ತಕವನ್ನು ಅವರು ಬಿಡುಗಡೆ ಮಾಡಿದರು.

ಶ್ರೀಮಂತ ರಾಷ್ಟ್ರಗಳ ಹೊಣೆಗಾರಿಕೆ ಹೆಚ್ಚು
ವಾತಾವರಣವನ್ನು ಮಲಿನಗೊಳಿಸುವ ಕಲ್ಲಿದ್ದಲು ಆಧಾರಿತ ಇಂಧನ ಬಳಸಿ ಶ್ರೀಮಂತವಾಗಿರುವ ರಾಷ್ಟ್ರಗಳೇ ಜಾಗತಿಕ ಹವಾಮಾನ ವೈಪರೀತ್ಯ ತಡೆಗೆ ಹೆಚ್ಚಿನ ಹಣ ವ್ಯಯ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಶೀಘ್ರ ಅಭಿವೃದ್ಧಿ ಸಾಧಿಸಲು ವಾತಾವರಣ  ಮಾಲಿನ್ಯ ಮಾಡುವಂತಹ ಇಂಧನಗಳನ್ನು ಬಳಿಸಿರುವ ಎಲ್ಲಾ ರಾಷ್ಟ್ರಗಳೂ ಸಮಾನ ಜವಾಬ್ದಾರಿ ಹೊರಬೇಕು ಎಂದು ಹೇಳುತ್ತಿರುವುದು ‘ಅನೈತಿಕ’ವಾಗುತ್ತದೆ ಎಂದು ಮೋದಿ ಅವರು ಲಂಡನ್‌ನ ‘ಫೈನಾನ್ಷಿಯಲ್ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

ಹವಾಮಾನ ವೈಪರೀತ್ಯ ತಡೆ ಎಲ್ಲರ ಹೊಣೆಗಾರಿಕೆ ನಿಜ. ಆದರೆ ಅಭಿವೃದ್ಧಿ ಶೀಲ ರಾಷ್ಟ್ರಗಳಿಗಿಂತ ಶ್ರೀಮಂತ ರಾಷ್ಟ್ರಗಳ ಹೊಣೆಗಾರಿಕೆ  ಹೆಚ್ಚಿರುವುದರಿಂದ ಈ ರಾಷ್ಟ್ರಗಳು ಹೆಚ್ಚಿನ ಮೊತ್ತವನ್ನು ಭರಿಸಬೇಕು ಎಂದು ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.

ವಿಜ್ಞಾನ ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಬದಲಿ ಇಂಧನ ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿಶೀಲ ರಾಷ್ಟ್ರಗಳು ಇತ್ತೀಚಿನ ವರ್ಷಗಳಲ್ಲಿ ಪ್ರಗತಿ ಸಾಧಿಸುತ್ತಿರುವುದರಿಂದ ಹವಾಮಾನ ವೈಪರೀತ್ಯ ತಡೆಯಲ್ಲಿ ಸಮಾನ ಹೊಣೆಹೊರಬೇಕು ಎಂಬುದು ಸರಿಯಾದ ವಾದವಲ್ಲ ಎಂದು ಮೋದಿ ಲೇಖನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT