ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಗ್ಲೆಂಡ್‌ ಟು ಬೆಂಗಳೂರು’ ರೈಡ್‌!

ಅನಿವಾಸಿ ಭಾರತೀಯನಿಂದ ಸಾಹಸಮಯ ಬೈಕ್‌ ಸವಾರಿ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಥೇಮ್ಸ್‌ ನದಿ ದಂಡೆಯಿಂದ (ಲಂಡನ್‌) ಉದ್ಯಾನ ನಗರಿಗೆ (ಬೆಂಗ­ಳೂರು) ಬೈಕ್‌ನಲ್ಲಿ ಜಾಲಿ ರೈಡ್‌!
ಹನ್ನೆರಡು ದೇಶ, ಏಳು ಕಾಲವಲಯ (ಟೈಮ್‌ ಝೋನ್‌) ದಾಟಿ ಅಂದಾಜು 12 ಸಾವಿರ ಕಿಲೋಮೀಟರ್‌ ಕ್ರಮಿಸುವ ಸಾಹಸ­ಮಯ ಸವಾರಿ!

ಈ ಕನಸು ನನಸು ಮಾಡಲು ಬೆಂಗ­ಳೂರು ಮೂಲದ ಅನಿವಾಸಿ ಭಾರತೀಯ ಸುಶಾಂತ್‌ ಶೆಟ್ಟಿ. ವಿಶೇಷವಾಗಿ ವಿನ್ಯಾಸ­ಗೊ­ಳಿ­ಸಿದ ಸುಜುಕಿ ಬೈಕ್‌– ‘ಪ್ಯಾಟ್ರಿಕ್ ಸ್ಟಾರ್‌­’­ನಲ್ಲಿ ಶನಿವಾರ ಬೆಳಿಗ್ಗೆ 7 ಗಂಟೆಗೆ (ಭಾರ­ತೀಯ ಸಮಯ ಬೆಳಿಗ್ಗೆ 11.30ಕ್ಕೆ) ಲಂಡನ್‌­ನಿಂದ ಹೊರಟಿದ್ದಾರೆ.

ಅವರು ಫ್ರಾನ್ಸ್‌, ಬೆಲ್ಜಿಯಂ, ಜರ್ಮನಿ, ಆಸ್ಟ್ರೀಯಾ, ಸ್ಲೊವೇನಿಯಾ, ಹಂಗೇರಿ, ಸರ್ಬಿಯಾ, ಬಲ್ಗೇರಿಯಾ, ಟರ್ಕಿ ಮತ್ತು ಇರಾನ್‌ ಮೂಲಕ ಬೆಂಗಳೂರಿಗೆ ಬರಲಿ­ದ್ದಾರೆ. ಇರಾನ್‌­ನಿಂದ ಮುಂದೆ ವಿಸಾ ಸಿಕ್ಕರೆ ಪಾಕಿ­ಸ್ತಾನ ಮೂಲಕ, ಸಿಗದೇ ಇದ್ದರೆ ಹಡಗಿ­ನಲ್ಲಿ ದುಬೈಗೆ ಬಂದು ಅಲ್ಲಿಂದ ಸಮುದ್ರ ಮಾರ್ಗವಾಗಿ ಮುಂಬೈಗೆ ಬಂದು, ಪುನಃ ರಸ್ತೆ ಮಾರ್ಗದಿಂದ ಬೆಂಗಳೂರು ತಲುಪುವ ಗುರಿ ಅವರದು.

ಬೆಂಗಳೂರಿನ ಎಂ.ಎಸ್‌.ರಾಮಯ್ಯ ಎಂಜಿ­ನಿ­­ಯ­ರಿಂಗ್‌ ಕಾಲೇಜಿನಲ್ಲಿ ಮೆಕ್ಯಾ­ನಿ­­ಕಲ್‌ ಎಂಜಿ­ನಿಯರಿಂಗ್‌ ಮುಗಿಸಿ­ರ­ುವ ಸುಶಾಂತ್‌, ಇಂಗ್ಲೆಂಡ್‌ನಲ್ಲಿ ಮೋಟಾ­ರ್‌­­ಸ್ಪೋರ್ಟ್‌ ಎಂಜಿನಿ­ಯ-­ರಿಂಗ್‌­ನಲ್ಲಿ ಸ್ನಾತಕೋತ್ತರ ಮುಗಿಸಿದ್ದಾರೆ. ಯುರೋಪ್‌ನ ಫೋರ್ಡ್‌ ಕಂಪೆನಿಗೆ ಎಂಜಿನ್‌ಗಳನ್ನು ವಿನ್ಯಾಸಗೊಳಿಸುವ ಪವರ್‌ ಟ್ರೇನ್‌ ಕನ್ಸಲ್ಟನ್ಸಿ ಎಂಬ ಆಸ್ಟ್ರೀಯನ್‌ ಕಂಪೆನಿ­ಯಲ್ಲಿ ಸದ್ಯ ಕೆಲಸ ಮಾಡುತ್ತಿದ್ದು, ಅಲ್ಲೇ ನೆಲೆಸಿದ್ದಾರೆ.

‘ಭಾರತದಲ್ಲಿದ್ದಾಗ ಕೆಲವು ವರ್ಷ ಬೈಕ್‌, ಕಾರ್‌ ರೇಸಿಂಗ್‌ನಲ್ಲಿ ಭಾಗವಹಿ­ಸಿದ್ದೆ. 2006­­ರಲ್ಲಿ ಹಿಮಾಲಯದಲ್ಲಿ ರೇಸಿಂಗ್‌­ನಲ್ಲಿ ಭಾಗವಹಿಸಿದ್ದ ಸಂದರ್ಭ­ದಲ್ಲಿ ಇಂಗ್ಲೆಂಡ್‌­­ನಿಂದ ಬೆಂಗಳೂರಿಗೆ ರೈಡ್‌ ಮಾಡಿದ್ದ ಕೆಲವರ ಪರಿಚಯವಾಗಿತ್ತು. ಸಾಹ­ಸದ ಮೋಟರ್‌ ಸೈಕಲ್‌ ಸವಾರಿ ಬಗ್ಗೆ ಕೇಳಿದ್ದು ಆಗಲೇ. ಅಂದಿನಿಂದ ಇಂಗ್ಲೆಂಡ್‌ ಟು ಬೆಂಗಳೂರು ಜಾಲಿ ರೈಡ್‌ ಬಗ್ಗೆ ಮನಸ್ಸು ಕೊರೆಯುತ್ತಿತ್ತು. ಅದೀಗ ನನಸಾ­ಗು­ತ್ತಿದೆ’ ಎಂದು ಲಂಡನ್‌­ನಿಂದ ಸುಶಾಂತ್‌ ತಮ್ಮ ಸಾಹಸ ಯಾ ನದ ಸಂಭ್ರಮವನ್ನು ‘ಪ್ರಜಾವಾಣಿ’ ಜತೆ ದೂರವಾಣಿ ಮೂಲಕ ಹಂಚಿಕೊಂಡರು.

‘ಬೈಕ್‌ನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬೆಂಗಳೂರು ತಲುಪು­ವುದು ನನ್ನ ಗುರಿ. ಪಾಕಿ­ಸ್ತಾನ ಪ್ರವೇಶಕ್ಕೆ ವಿಸಾ ಸಿಕ್ಕಿದರೆ 15 ದಿನಗಳ ಒಳಗೆ ಭಾರತ ಗಡಿ ಪ್ರವೇಶಿಸುತ್ತೇನೆ’ ಎನ್ನು­ತ್ತಾರೆ 28ರ ಹರೆಯದ ಸುಶಾಂತ್‌.

‘ಟ್ರಕ್‌ ಡೈವರ್‌ ಆಗಬೇಕೆನ್ನುವುದು ಬಾಲ್ಯದ ಕನಸು. ಆರರ ಹರೆಯದಲ್ಲಿ ಕುಟುಂ­ಬದ ಆಪ್ತರೊಬ್ಬರ ‘ಟಿವಿಎಸ್‌ 50’ ದ್ವಿಚಕ್ರವನ್ನು ಮೊದಲ ಬಾರಿ ಓಡಿಸಿದ್ದೆ. ಹೀಗೆ ಆರಂಭಗೊಂಡ ಕ್ರೇಜ್‌ ಈಗ ಬೈಕ್‌ ಸಾಹಸದ ಆಸಕ್ತಿಗೆ ಕಾರಣವಾಗಿದೆ’ ಎಂದರು. 

‘ನನ್ನ ಈ ಯಾನದ ಪ್ರಾಯೋಜಕತ್ವ ವಹಿ­­ಸಿದ ಸುಜುಕಿ ಗ್ರೇಟ್‌ ಬ್ರಿಟನ್‌ (ಎಸ್‌­ಜಿಬಿ) ಸಂಸ್ಥೆ, ಸುಜುಕಿ ಬೈಕ್‌ನ್ನು ನನಗೆ ಬೇಕಾದ ರೀತಿ­ಯಲ್ಲಿ ಮರುವಿನ್ಯಾಸ­ಗೊಳಿ­ಸಲು ನೆರವು ನೀಡಿದೆ. ಇಂಧನ ಮತ್ತು ಸರಕು ಸಾಗಿಸಲು ವಿಶೇಷ ಬಾಕ್ಸ್‌, ಲೈಟ್‌, ಮಾರ್ಗ ತೋರಿ­ಸುವ ‘ಟ್ರ್ಯಾಕರ್‌’ ಮತ್ತಿತರ ಕೆಲವು ವಿಶೇಷ ವ್ಯವಸ್ಥೆಗಳನ್ನು ನಾನೇ ಮಾಡಿಕೊಂಡಿ­ದ್ದೇನೆ. ಬೈಕ್‌ಗೆ ‘ಪ್ಯಾಟ್ರಿಕ್‌ ಸ್ಟಾರ್‌’ ಎಂದು ಹೆಸ­ರನ್ನೂ ಇಟ್ಟಿದ್ದೇನೆ’ ಎಂದು ಹೇಳಿದರು.   

‘ದೈಹಿಕ ಮತ್ತು ಮಾನಸಿಕವಾಗಿ ಇದೊಂದು ಸವಾಲು. ಆದರೆ ನನ್ನ ‘ಪ್ಯಾಟ್ರಿಕ್‌’ ಈ ಸವಾಲು ಸ್ವೀಕರಿಸುವ ವಿಶ್ವಾಸ­ವಿದೆ. ದೇಶಗಳ ಗಡಿ ದಾಟಿ ಬರು­ವುದು ಸಾಹಸದ ಕೆಲಸ. ಅದ­ರಲ್ಲೂ ಟರ್ಕಿ­­ಯಿಂದ ಇರಾನ್‌ ದಾಟು­ವುದು ದೊಡ್ಡ ಸವಾಲು. ಅಲ್ಲಿಂದ ಎಲ್ಲವೂ ಬದ­ಲಾಗು­ತ್ತದೆ. ಪಾಕಿಸ್ತಾನ ಪ್ರವೇಶಕ್ಕೆ ವಿಸಾ ಸಿಕ್ಕಿದರೆ ಬಲೂ­ಚಿಸ್ತಾನದ ಮೂಲಕ ಸಾವಿರ ಕಿ.ಮೀ. ನಷ್ಟು ಪೊಲೀಸ್‌ ಭದ್ರತೆಯಲ್ಲಿ ಸಂಚರಿಸ­ಬೇಕಾ­ಗುತ್ತದೆ’ ಎಂದರು.

‘ಇಂತಹ ದೊಡ್ಡ ಸಾಹಸಕ್ಕೆ ಮೊದಲ ಬಾರಿ ಕೈ ಹಾಕಿದ್ದೇನೆ. ಎರಡು ವರ್ಷಗಳ ಹಿಂದೆ ಬೈಕ್‌ನಲ್ಲಿ ಪಶ್ಚಿಮ ಯುರೋಪ್‌ ಸುತ್ತಾ­ಡಿದ್ದೇನೆ. ಕಳೆದ ವರ್ಷ ಟ್ರಾನ್ಸ್‌– ಸೈಬೀರಿಯನ್‌ ರೈಲು ಮಾರ್ಗದಲ್ಲಿ ರಷ್ಯಾ, ಮಂಗೋಲಿಯಾ, ಚೀನಾ ಸುತ್ತಾಡಿದ್ದೇನೆ. ಆ ಯಾನದ ಯಶಸ್ಸು ನನ್ನ ಈ ಬೈಕ್‌ ಸಾಹಸಕ್ಕೆ ಕಾರಣ’ ಎನ್ನುತ್ತಾರೆ ಸುಶಾಂತ್ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT