ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ದೆಹಲಿ ಪ್ರಕರಣಕ್ಕಿಂತ ಘೋರ ಘಟನೆ’

Last Updated 31 ಮೇ 2014, 13:53 IST
ಅಕ್ಷರ ಗಾತ್ರ

ಬದಾಯೂಂ, ಉತ್ತರಪ್ರದೇಶ (ಪಿಟಿಐ): ಬದಾಯೂಂ ಜಿಲ್ಲೆಯಲ್ಲಿ ಇಬ್ಬರು ಸೋದರ ದಲಿತ ಸಹೋದರಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆಯೂ 2012 ಡಿಸೆಂಬರ್‌ 16ರಂದು ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕಿಂತಲೂ ಘೋರವಾದದ್ದು ಎಂದಿರುವ ಬಾಲಕಿಯರ ಕುಟುಂಬ ಸದಸ್ಯರು, ತಪ್ಪಿತಸ್ಥರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವಂತೆ ಶನಿವಾರ ಆಗ್ರಹಿಸಿದ್ದಾರೆ.

‘ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕಿಂತಲೂ ಈ ಘಟನೆ  ಹೆಚ್ಚು ಘೋರವಾದದ್ದು’ ಎಂದು ಮೇ 27ರ ರಾತ್ರಿ ಉಷಾಯಿತ್‌ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯೊಬ್ಬರ ತಂದೆ ನುಡಿದಿದ್ದಾರೆ.

ಅಲ್ಲದೇ, ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ಅವರು ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

‘ತಪ್ಪಿತಸ್ಥರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ನಮ್ಮ ಮುಗ್ಧ ಮಕ್ಕಳನ್ನು ನೇಣು ಹಾಕಿದ್ದನ್ನು ಹೇಗೆ ಇಡೀ ಜಗತ್ತು ನೋಡಿದೆಯೋ  ಹಾಗೆಯೇ ತಪ್ಪಿತಸ್ಥರನ್ನು ಗಲ್ಲಿಗೇರಿಸುವುದನ್ನು ಅವರು ನೋಡಬೇಕು’ ಎಂದು ಅವರು ತಿಳಿಸಿದ್ದಾರೆ.

ಐವರ ಬಂಧನ: ಪ್ರಕರಣ ಸಂಬಂಧ ಇಬ್ಬರು ಪೊಲೀಸ್‌ ಸಿಬ್ಬಂದಿ ಸೇರಿದಂತೆ ಎಲ್ಲಾ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಕಾನ್‌ಸ್ಟೆಬಲ್‌ ಛತ್ರಪಾಲ್‌ ಯಾದವ್‌ ಅವರನ್ನು ಶುಕ್ರವಾರ ರಾತ್ರಿಯೇ ಬಂಧಿಸಲಾಗಿತ್ತು. ಉರ್ವೇಶ್‌ ಯಾದವ್‌ ಅವರನ್ನು ಶನಿವಾರ ನಸುಕಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎ.ಕೆ.ಸಕ್ಸೆನಾ ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದ್ದ – ಸರ್ವೇಶ್‌ ಯಾದವ್‌, ಛತ್ರಪಾಲ್‌ ಯಾದವ್‌ ಹಾಗೂ ಮೂವರು ಸಹೋದರರಾದ ಪಪ್ಪು ಯಾದವ್, ಅವಧೇಶ್‌ ಯಾದವ್‌ ಮತ್ತು ಉರ್ವೇಶ್‌ ಯಾದವ್‌ – ಎಲ್ಲಾ ಐವರನ್ನು ಬಂಧಿಸಲಾಗಿದೆ.

ದುಷ್ಕೃತ್ಯದ ಬಳಿಕ ಇಬ್ಬರು ಅನಾಮಿಕರು ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ರಾಹುಲ್‌ ಭೇಟಿ: ಅತ್ಯಾಚಾರ ಹಾಗೂ ಕೊಲೆಯಾದ ದಲಿತ ಬಾಲಕಿಯರ ಗ್ರಾಮಗಳಿಗೆ ಶನಿವಾರ ತೆರಳಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಬಾಲಕಿಯರ ಕುಟುಂಬದವರನ್ನು ಭೇಟಿಯಾದರು.

ರಾಹುಲ್‌ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಉತ್ತರ ಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಮಧುಸೂದನ್‌ ಮಿಸ್ತ್ರಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನಿರ್ಮಲ್ ಖಾತ್ರಿ ಹಾಗೂ ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೆ ರಾಜು ಅವರು ಸಾತ್‌ ನೀಡಿದ್ದರು.

ಸಂತ್ರಸ್ತ ಕುಟುಂಬ ವರ್ಗದವರನ್ನು ಭೇಟಿ ಮಾಡಿದ ರಾಹುಲ್‌, ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಹೇಳಿದರು. ನೇಣು ಹಾಕಿದ ಸ್ಥಿತಿಯಲ್ಲಿ ಬಾಲಕಿಯರ ಶವಗಳು ಪತ್ತೆಯಾಗಿದ್ದ ಜಾಗವನ್ನೂ ಅವರು ವೀಕ್ಷಿಸಿದರು ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT