ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಸಹ ಮುಗಿದುಹೋಗುತ್ತದೆ’

ಸ್ವಸ್ಥ ಬದುಕು
Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಇದು ಸಹ ಮುಗಿದುಹೋಗುತ್ತದೆ’ ಎಂಬ ವಾಕ್ಯ, ನಮಗೆ ಪ್ರತಿರೋಧವನ್ನು ತ್ಯಜಿಸುವ  ಹಾಗೂ ಯಾವುದೇ ಪರಿಸ್ಥಿತಿ, ಸನ್ನಿವೇಶಕ್ಕೆ ಭಾವನಾತ್ಮಕವಾಗಿ ಅಂಟಿಕೊಳ್ಳದೇ ಇರುವ ಗುಣವನ್ನು ಕಲಿಸುತ್ತದೆ.

ಕಾಲ ಕಳೆದಂತೆ ರಾಜನಿಗೆ ತನ್ನ ಮನಸ್ಥಿತಿ (ಮೂಡ್‌)  ಸಂತಸ ಹಾಗೂ ದುಗುಡದ ನಡುವೆ ಓಲಾಡುತ್ತಿರುವ ಅನುಭವವಾಯಿತು. ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ಅತ್ಯಂತ ಉದ್ವೇಗ, ಸಂಭ್ರಮದ ಕ್ಷಣದ ನಂತರ ನಮ್ಮ ಯಾಂತ್ರಿಕ ದಿನಚರಿಗೆ ಮರಳಿದಾಗ ಕ್ಷಣಗಳು ಮಂಕಾದಂತೆ ಅನಿಸುತ್ತವೆ.
ಪ್ರತಿ ವಿಜಯದ ನಂತರ ರಾಜನ ಮನಸ್ಸು ಹಕ್ಕಿಯಂತೆ ಹಾರಾಡುತ್ತಿತ್ತು. ದಿನಗಳೆದಂತೆ ಈ ಸಂಭ್ರಮ ಮಂಕಾಗುತ್ತಿತ್ತು. ಯುದ್ಧದಲ್ಲಿ ಸೋತಾಗಲೆಲ್ಲ ಆತ ಖಿನ್ನತೆಗೆ ಜಾರುತ್ತಿದ್ದ.

ಈ ಉತ್ತುಂಗ ಹಾಗೂ ಇಳಿಜಾರಿನಿಂದ ನಮ್ಮ ಶಕ್ತಿ ಸೋರಿಹೋದಂತೆ ರಾಜನಿಗೂ ಆಗುತ್ತಿತ್ತು. ಆಗ, ಆತ ತನ್ನ ಆಸ್ಥಾನಕ್ಕೆ ಕೆಲವು ಬುದ್ಧಿವಂತರನ್ನು ಕರೆಯಿಸಿದ. ಇಡೀ ರಾಜ್ಯದಲ್ಲೇ ಬುದ್ಧಿವಂತನಾದ ವ್ಯಕ್ತಿಯನ್ನು ರಾಜನ ಮುಂದೆ ನಿಲ್ಲಿಸಲಾಯಿತು.

ಎಲ್ಲ ಸಮಯದಲ್ಲೂ  ಸಮತೋಲನ ಕಾಪಾಡಿಕೊಂಡು, ಶಾಂತ ಮನಸ್ಥಿತಿ ಕಾಯ್ದುಕೊಂಡು, ಜಾಣತನದಿಂದ ವರ್ತಿಸುವುದು ಹೇಗೆ ಎಂದು ರಾಜ ಆ ಬುದ್ಧಿವಂತನನ್ನು ಕೇಳಿದ.
 
ಹತ್ತು ದಿನಗಳ ನಂತರ ವ್ಯಕ್ತಿಯು ಉಂಗುರವೊಂದನ್ನು ತಂದು ರಾಜನಿಗೆ ನೀಡಿದ. ಇದು ಸಹ ಮುಗಿದುಹೋಗುತ್ತದೆ  (This, too, will pass)  ಎಂಬ ವಾಕ್ಯವನ್ನು ಅದರ ಮೇಲೆ ಕೆತ್ತಲಾಗಿತ್ತು.

‘ಇದರ ಅರ್ಥವೇನು, ಇದರಿಂದ ನನಗೆ ಹೇಗೆ ಸಹಾಯವಾಗುತ್ತದೆ?’ ಎಂದು ರಾಜ ಪ್ರಶ್ನಿಸಿದ. ‘ಈ ಉಂಗುರವನ್ನು ಯಾವಾಗಲೂ ಧರಿಸಿರು. ಯಾವುದನ್ನೇ ಆಗಲಿ, ಕೆಟ್ಟದ್ದು, ಒಳ್ಳೆಯದ್ದು, ಸೋಲು ಅಥವಾ ಗೆಲುವು ಎಂದು ಕರೆಯುವ ಮೊದಲು  ಈ ವಾಕ್ಯವನ್ನು ಓದಿಕೊ’ ಎಂದು ಆ ಬುದ್ಧಿವಂತ ವ್ಯಕ್ತಿ ರಾಜನಿಗೆ ಹೇಳಿದ.

ಈ ಪದಗಳಲ್ಲಿರುವ ಅರ್ಥ ಮಹತ್ತರವಾದುದ್ದು. ಶಾಂತಿ ಹಾಗೂ ನೆಮ್ಮದಿ ತಂದುಕೊಡುವಂತಹದ್ದು. ಇದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಈ ಪದಗಳ  ಮಹತ್ವ ನಮಗೆ ಅರ್ಥವಾಗುತ್ತದೆ.

ಈಚೆಗೆ ನನ್ನ ಹತ್ತಿರದ ಸಂಬಂಧಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸ್ಥಿತಿ ತಾತ್ಕಾಲಿಕವಾದದ್ದು ಎಂಬ ಅರಿವಿನಿಂದಲೇ ನಾನು ನಿರಾಳವಾಗಿದ್ದೆ. ಮೇಲ್ನೋಟಕ್ಕೆ ನೋಡಿದಾಗ, ದುಃಖದ ಸನ್ನಿವೇಶಗಳಲ್ಲಿ  ಇದು ಸಮಾಧಾನ ನೀಡಬಹುದು. ಆದರೆ, ಸಂತಸದ ಗಳಿಗೆಯಲ್ಲಿ ಈ ಪದಗಳು ಆ ಸಂಭ್ರಮವನ್ನು ಕುಗ್ಗಿಸುವುದಿಲ್ಲವೇ ಎಂಬ ಪ್ರಶ್ನೆ ಏಳಬಹುದು.

ಅಷ್ಟೊಂದು ಖುಷಿಯಾಗಬೇಡ. ನಾಳೆ ದುಃಖದ ಗಳಿಗೆ ಬರಬಹುದು ಎಂದು ನಮ್ಮ  ಹಿರಿಯರು ಯಾವಾಗಲೂ ಕಿವಿಮಾತು ಹೇಳುತ್ತಿದ್ದರು. ಆದರೆ. ಹೀಗೆ ಯೋಚಿಸುವುದು ಸಹ ತಪ್ಪು. ಈ ಪದಗಳ ಅರ್ಥವನ್ನು ಸರಿಯಾಗಿ ಗ್ರಹಿಸಲು, ಕೆಟ್ಟ ಸನ್ನಿವೇಶಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ಗಮನಿಸಿ.
ಕಷ್ಟದ, ದುಃಖಕರವಾದ ಸನ್ನಿವೇಶ ಎದುರಾದಾಗ ನಾವು ಮೊದಲಿಗೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿರೋಧ ಒಡ್ಡುತ್ತೇವೆ.

ಈ ಸನ್ನಿವೇಶ ಸಹ ಮುಗಿದುಹೋಗುತ್ತದೆ (This ,too, will pass ), ಕಾಲ ಮುಂದಕ್ಕೆ ಹೋಗುತ್ತದೆ ಎಂಬುದನ್ನು ಅರಿತುಕೊಂಡಾಗ ನಾವು ತಣ್ಣಗಾಗುತ್ತೇವೆ. ಪ್ರತಿರೋಧ ಒಡ್ಡುವುದಿಲ್ಲ. ಹರಿಯುವ ನದಿಯಲ್ಲಿ ತೇಲುತ್ತ ಹೋದಂತೆ ಆ ಸನ್ನಿವೇಶದಲ್ಲಿ ಒಂದಾಗುತ್ತೇವೆ.
ಇದಲ್ಲದೇ, ‘ಇದೊಂದು ಭಯಾನಕ ಸನ್ನಿವೇಶ’, ‘ಅತ್ಯಂತ ಕಷ್ಟಕರವಾದದ್ದು ’ ಎಂದು ಅದಕ್ಕೆ ಹಣೆ ಪಟ್ಟಿ ಹಚ್ಚುತ್ತೇವೆ.

ಆಗಲೂ ಸಹ ಇದು ಮುಗಿದುಹೋಗುತ್ತದೆ ಎಂಬ ಪದಗಳು ನಮಗೆ ಸಮಾಧಾನ ನೀಡುತ್ತೇವೆ. ಆ ಸನ್ನಿವೇಶದ ಕುರಿತು ತೀರ್ಪು ನೀಡುವುದನ್ನು ನಾವು ನಿಲ್ಲಿಸುತ್ತೇವೆ.

ಈ ಸನ್ನಿವೇಶ ಬಹುಕಾಲ ಹೀಗೆಯೇ ಇರುವುದಿಲ್ಲ ಎಂದು ಮನದಟ್ಟಾದ ಕಾರಣ ಅದಕ್ಕೆ ನಾವು ಅಷ್ಟೊಂದು ಮಹತ್ವ ನೀಡುವುದಿಲ್ಲ. ಅದರೆಡೆ ಭಾವಾನಾತ್ಮಕ ಸಂಬಂಧ ಬೆಳೆಸಿಕೊಳ್ಳುವುದಿಲ್ಲ.

‘ಇದು ಸಹ ಮುಗಿದುಹೋಗುತ್ತದೆ’ ಎಂಬ ವಾಕ್ಯ, ನಮಗೆ ಪ್ರತಿರೋಧವನ್ನು ತ್ಯಜಿಸುವ, ಯಾವುದೇ ಸನ್ನಿವೇಶದ ಕುರಿತು ತೀರ್ಪು ನೀಡದೇ ಇರುವ  ಹಾಗೂ ಯಾವುದೇ ಪರಿಸ್ಥಿತಿ, ಸನ್ನಿವೇಶಕ್ಕೆ ಭಾವನಾತ್ಮಕವಾಗಿ ಅಂಟಿಕೊಳ್ಳದೇ ಇರುವ ಗುಣವನ್ನು ಕಲಿಸುತ್ತದೆ. ಇದು ಯೋಗಿಯ, ಜ್ಞಾನೋದಯವಾದ ಬುದ್ಧನ ಮನಸ್ಥಿತಿ.

ಸಂಭ್ರಮದ ಗಳಿಗೆಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಅವಲೋಕಿಸೋಣ. ಸಂಭ್ರಮ, ಸಂತಸದಲ್ಲಿ ಇದ್ದಾಗ ನಾವು ಹುಯ್ಯೆಂದು ಕುಣಿಯುತ್ತೇವೆ. ನಮ್ಮನ್ನು ಸಂತಸದಿಂದ ಇಡಲು ಈ ಸನ್ನಿವೇಶ ಹೀಗೆಯೇ ಶಾಶ್ವತವಾಗಿ ಇರುತ್ತದೆ ಎಂದುಕೊಳ್ಳುತ್ತೇವೆ. ಈ ಸನ್ನಿವೇಶದ ಮೇಲೆ ಅವಲಂಬಿತವಾಗುತ್ತೇವೆ. ಅದಕ್ಕೆ ಜೋತು ಬೀಳುತ್ತೇವೆ.

ಅದರ ಹಿಂದೆಯೇ ನಮ್ಮೊಳಗೆ ಒಂದು ಭಯ ಉದ್ಭವಿಸಿರುತ್ತದೆ. ಈ ಸನ್ನಿವೇಶ ಮುಂದುವರಿಯದೇ ಇದ್ದಲ್ಲಿ ನಾವು ಬದುಕುವುದು ಹೇಗೆ ಅಂದುಕೊಳ್ಳುತ್ತೇವೆ. ‘ಇದು ಸಹ ಮುಗಿದುಹೋಗುತ್ತದೆ ’ ಎಂಬ ವಾಕ್ಯ  ನಮಗೆ ಭ್ರಮೆಯಿಂದ ಕಳಚಿಕೊಂಡು ಸತ್ಯವನ್ನು ಅರಿಯಲು ನೆರವಾಗುತ್ತವೆ.

ಭೂಮಿಯ ಮೇಲಿನ ಯಾವುದೇ ವಸ್ತು, ಸನ್ನಿವೇಶ ಶಾಶ್ವತವಲ್ಲ ಎಂಬುದು ನಿಮಗೆ ಅರಿವಾದಾಗ, ಸೌಂದರ್ಯವನ್ನು ಸವಿಯುವ ಪ್ರವಾಸಿಯಂತೆ ನೀವು ಆಗುತ್ತೀರಿ. ಈ ಸಿನಿಮಾ ಕೆಲವೇ ಗಂಟೆಗಳಲ್ಲಿ ಮುಗಿದುಹೋಗುತ್ತದೆ ಎಂಬುದರ ಅರಿವಿದ್ದರೂ ಖುಷಿ, ಖುಷಿಯಾಗಿ ಸಿನಿಮಾ ನೋಡುವ ವೀಕ್ಷಕನಂತೆ ನೀವು ಆಗುತ್ತೀರಿ.

ಓ ಅಲ್ಲಿ ಕಾಮನಬಿಲ್ಲು..! ಎಂದಾಗ ಕಿಟಕಿಯ ಬಳಿ ಓಡುವ ಮಗುವಿನಂತೆ ನೀವು ಆಗುತ್ತೀರಿ. ಕಾಮನಬಿಲ್ಲು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ ಎಂಬ ಅರಿವಿದ್ದರೂ ಮಗುವಿನ ಸಂಭ್ರಮ ಕರಗುವುದಿಲ್ಲ.

ಸೋಲು– ಗೆಲುವು, ಕಷ್ಟ –ಸುಖ ಇತ್ಯಾದಿ ಲೌಕಿಕ ಸಂಗತಿಗಳ ಮೇಲೆ ನೀವು ಅವಲಂಬಿತರಾಗದೇ ಇದ್ದಾಗ ನಿಮ್ಮೊಳಗೆ ಭಾವನೆಗಳ ಹೊಯ್ದಾಟ, ಗೊಂದಲ ಕೊನೆಗೊಳ್ಳುತ್ತದೆ. ಆಗ, ನಿಮ್ಮೊಳಗೇ ವಿಸ್ತಾರವಾದ ಅವಕಾಶವೊಂದು ತೆರೆದುಕೊಳ್ಳುತ್ತದೆ. ಆಗ ದೊರಕುವ ಶಾಂತಿ, ನಿಮ್ಮ ಆತ್ಮದ ಶಾಂತಿಯಾಗಿರುತ್ತದೆ. ಸೋಲು ಅಥವಾ ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ನೀವು ಜಗತ್ತಿನ ಆಗು–ಹೋಗುಗಳಲ್ಲಿ ಪಾಲ್ಗೊಳ್ಳುತ್ತೀರಿ. ಲೌಕಿಕ ಸಂಗತಿಗಳು ಅವುಗಳ ಮಹತ್ವ ಕಳೆದುಕೊಂಡಾಗ ಅವು ನಿಮಗೆ ತೊಂದರೆ ಕೊಡುವುದಿಲ್ಲ.

ಯಾವುದೋ ಸನ್ನಿವೇಶ ಅಥವಾ ವ್ಯಕ್ತಿಯಿಂದ ನಿಮಗೆ ತೊಂದರೆಯಾಗುತ್ತಿದೆ ಅಂದರೆ ನಿಮ್ಮೊಳಗಿನ ಅವಕಾಶವನ್ನು, ವಾಸ್ತವವನ್ನು ನೀವು ಕಳೆದುಕೊಂಡಿದ್ದೀರಿ ಎಂದರ್ಥ.

ಲೌಕಿಕ ಪ್ರಜ್ಞೆಯೇ ಮುಖ್ಯವಾಗಿರುವ ಭೌತಿಕ ವಸ್ತು, ಸನ್ನಿವೇಶಗಳಿಗೆ ಮಹತ್ವ ನೀಡುವ ಜಗತ್ತಿನಲ್ಲಿ ನಾವು ಸಿಕ್ಕಿಹಾಕಿಕೊಂಡಿದ್ದೇವೆ. ‘ಇದು ಸಹ  ಮುಗಿದು ಹೋಗುತ್ತದೆ’ ಎಂಬ ವಾಕ್ಯ ನಮ್ಮನ್ನು ಲೌಕಿಕ ಪ್ರಜ್ಞೆಯಿಂದ ವಿಶಾಲವಾದ ಆತ್ಮಪ್ರಜ್ಞೆಗೆ ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ಲೌಕಿಕವಾದ ಸನ್ನಿವೇಶ, ಘಟನೆ, ವಸ್ತುಗಳೆಲ್ಲ ನಶ್ವರ ಎಂಬ ಅರಿವು ಮೂಡಿಸುತ್ತದೆ.

ಇದರೊಳಗೆ ಮತ್ತೊಂದು ಸತ್ಯವಿದೆ. ನಿಮ್ಮೊಳಗಿರುವ ಶಾಶ್ವತವಾದ ಆತ್ಮ ಮಾತ್ರ ನಶ್ವರವಾದದ್ದನ್ನು ಗುರುತಿಸ ಬಲ್ಲದು. ದೇಶಕಾಲಗಳನ್ನು ಮೀರಿದ ಈ ಸತ್ಯವನ್ನು ಅರಗಿಸಿಕೊಳ್ಳಿ. ನಿಮ್ಮೊಳಗಿನ ಆತ್ಮಪ್ರಜ್ಞೆ ಜಾಗೃತವಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT