ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲಾಖೆಯವ್ರು ಹಳೇ ಲೆಕ್ಕ ಬರೀತಾರೆ’

ಕೃಷಿಮೇಳದಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಸಿ.ಎಂ
Last Updated 20 ನವೆಂಬರ್ 2014, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಇಲಾಖೆ ಅಧಿಕಾರಿ­ಗಳು ಬಿತ್ತನೆ ಪ್ರದೇಶದ ಕುರಿತು ಬರಿ ಹಳೇ ಲೆಕ್ಕ ಬರೀತಾರೆ. ಈ ಇಲಾಖೆಗೆ ಬೀಜ–ಗೊಬ್ಬರ ಮಾರಾಟ ಮಾಡಿಸೋ­ದೊಂದೇ ಕೆಲ್ಸ ಆಗಿಬಿಟ್ಟಿದೆ ಅಲ್ವೇನ್ರಪಾ?’ –ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿಮೇಳದಲ್ಲಿ ಗುರುವಾರ ನೆರೆದಿದ್ದ ರೈತ ಸಮೂಹಕ್ಕೆ ಪ್ರಶ್ನಿಸಿದರು. ಸಭಿಕರಿಂದ ‘ಹೌದು, ಸರ್‌ ಹೌದು’ ಎಂಬ ಉತ್ತರ ಬಂತು.

‘ನೋಡ್ರಿ ಕೃಷ್ಣ ಬೈರೇಗೌಡ, ಬೀಜ–ಗೊಬ್ಬರ ಮಾರಾಟ ಮಾಡೋದಷ್ಟೇ ನಿಮ್‌ ಇಲಾಖೆ ಕೆಲ್ಸ ಅಲ್ಲ. ವಿಸ್ತರಣಾ ಚಟುವಟಿಕೆ ಕೈಗೊಳ್ಳಬೇಕು. ಸಂಶೋ­ಧನೆ ಫಲಶ್ರುತಿಯನ್ನು ರೈತರಿಗೆ ತಲುಪಿಸ­ಬೇಕು, ತಿಳೀತಾ’ ಎಂದು ವೇದಿಕೆ ಮೇಲಿದ್ದ ಕೃಷಿ ಸಚಿವರಿಗೆ ಹೇಳಿದರು. ಸಚಿವರು ‘ಆಯಿತು’ ಎನ್ನುವಂತೆ ತಲೆ ಆಡಿಸಿದರು.

‘ನಿಮ್ ಅಧಿಕಾರಿಗಳು ಕೊಡುವ ಅಂಕಿ–ಸಂಖ್ಯೆ ನೈಜವೇ’ ಎಂದು ಪ್ರಶ್ನಿಸಿದ ಅವರು, ‘ವಾಸ್ತವಾಂಶ ತಿಳಿದುಕೊಳ್ಳಲು ಸಮಗ್ರವಾದ ಸಮೀಕ್ಷೆ ನಡೆಸಬೇಕು’ ಎಂದು ಸೂಚಿಸಿದರು. ‘ಒಣ ಬೇಸಾಯ­ದಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದ­ಲ್ಲಿದೆ’ ಎಂದು ಮುಖ್ಯಮಂತ್ರಿ ಹೇಳುತ್ತಿ­ದ್ದಂ­ತೆಯೇ ಸಭಿಕರಲ್ಲಿ ಒಬ್ಬರು ಬೆರಳೆತ್ತಿ ‘ಒಂದು’ ಎಂಬ ಸನ್ನೆ ತೋರಿದರು. ‘ಓಹೋ, ಒಂದನೇ ಸ್ಥಾನಕ್ಕೆ ಬಂದೈತಾ’ ಎಂದು ಸಿದ್ದರಾಮಯ್ಯ ಉದ್ಗಾರ ಎತ್ತಿದರು.

ವೇದಿಕೆ ಮೇಲಿದ್ದ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್‌ಲಾಲ್‌ ಮೀನಾ, ‘ಎರಡನೇ ಸ್ಥಾನದಲ್ಲಿಯೇ ಇದೆ ಸರ್‌’ ಎಂದು ಉತ್ತರಿಸಿದರು. ‘ಅವ್ರು ಒಂದನೇ ಸ್ಥಾನ ಅಂತಾರೆ ಮತ್ತೆ. ಒಂದೋ, ಎರಡೋ, ಒಣಬೇಸಾಯ­ದಲ್ಲಿ ಅಗ್ರಸ್ಥಾನಕ್ಕೆ ಹೋಗುವುದು ಒಳ್ಳೆಯ ಬೆಳವಣಿಗೆ ಏನೂ ಅಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ನಾವು ಚಿಕ್ಕವರಿದ್ದಾಗ ಕೃಷಿ ವಿಸ್ತರ­ಣಾಧಿಕಾರಿಗಳು ಹಳ್ಳಿಯಲ್ಲೇ ತಂಗುತ್ತಿ­ದ್ದರು. ಅವರಿಗಾಗಿ ವಸತಿಗೃಹ­ವನ್ನೂ ಕಟ್ಟಲಾಗಿತ್ತು. ಈಗ ಹಳ್ಳಿ–ಹಳ್ಳಿಗಳಲ್ಲಿ ವಿಸ್ತರಣಾಧಿಕಾರಿಗಳ ವಸತಿಗೃಹಗಳು ಪಾಳುಬಿದ್ದಿವೆ. ‘ಯಾಕೆ ಹೀಗೆ’ ಎಂದು ಕೇಳಿದರೆ ‘ಅಲ್ಲಿ ಯಾರೂ ಇರುವುದಿಲ್ಲ’ ಎಂಬ ಉತ್ತರ ಸಿಗುತ್ತದೆ. ಬೈರೇಗೌಡರೆ, ಈ ವಿಷಯದ ಕಡೆಗೂ ಗಮನಕೊಡಿ’ ಎಂದು ಸೂಚಿಸಿದರು.

‘ಡಾ.ಸಿ.ಎಸ್‌.ದ್ವಾರಕೀನಾಥ್‌ ರಾಜ್ಯ­ಮಟ್ಟದ ಪ್ರಶಸ್ತಿ’ ಪಡೆದ ಮಹದೇವ­ಪುರದ ಪುಟ್ಟಪ್ಪ ಅವರಿಗೆ ‘ನಿನಗೆ ಎಷ್ಟು ಜಮೀನಿದೆ ಪುಟ್ಟಪ್ಪ’ ಎಂದು ಕೇಳಿದರು. ‘30 ಎಕರೆ ಸರ್‌’ ಎಂದು ಅವರು ಉತ್ತ­ರಿ­ಸಿದರು. ‘ನಿಮ್ಮೂರಿನಲ್ಲಿ ಎಕರೆಗೆ ₨2 ಕೋಟಿ ಬೆಲೆ ಇದೆ. ಹೀಗಿದ್ದೂ ಜಮೀನು ಉಳಿಸಿಕೊಂಡಿರುವೆಯಲ್ಲ, ಭೇಷ್‌’ ಎಂದು ಮುಖ್ಯಮಂತ್ರಿ ಶಹಬ್ಬಾಸ್‌ಗಿರಿ ನೀಡಿದರು.

‘ಕೃಷಿ ವಿಶ್ವವಿದ್ಯಾಲಯಗಳು ರೈತರ ಸೇವೆಯನ್ನು ಮಾಡಬೇಕೇ ಹೊರತು ಕೇವಲ ಬೋಧನೆ ಮಾಡುತ್ತ ಕಾಲ ಕಳೆಯುವುದಲ್ಲ. ರೈತರಿಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಬೇಕಾದ ತಂತ್ರಜ್ಞಾನವನ್ನೂ ಹೇಳಿಕೊಡಬೇಕು’ ಎಂದು ಹೇಳಿದರು. ತಮ್ಮ ಸಹೋದರ ‘ಹಳ್ಳಿಕಾರು’ ತಳಿಯ ಎತ್ತುಗಳನ್ನು ಜಾತ್ರೆಯಲ್ಲಿ ಪ್ರದರ್ಶನಕ್ಕೆ ಒಯ್ಯುತ್ತಿದ್ದ ದಿನಗಳನ್ನು ಅವರು ಮೆಲುಕು ಹಾಕಿದರು.

ಯಾಂತ್ರೀಕರಣದ ಈ ಯುಗದಲ್ಲಿ ರೈತರಿಗೆ ಎತ್ತುಗಳನ್ನು ಸಾಕುವುದು ಒಂದು ಶೋಕಿ ಆಗಿದೆ ಎಂದು ಹೇಳಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಕೆ. ಪ್ರಭಾಕರ್‌ ಅವರಿಗೆ ಅತ್ಯುತ್ತಮ ವಿಸ್ತರಣಾಧಿಕಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವರಾದ ಟಿ.ಬಿ.ಜಯಚಂದ್ರ, ಕೃಷ್ಣ ಬೈರೇಗೌಡ ಹಾಗೂ ಕುಲಪತಿ ಡಾ.ಡಿ.ಪಿ. ಕುಮಾರ್‌ ಹಾಜರಿದ್ದರು.

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿಸಲು ಅನುಮತಿ ನೀಡಬೇಕು ಎಂಬ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಮಾಡಲಾಗಿದೆ. ಕೇಂದ್ರದಿಂದ ಒಪ್ಪಿಗೆ ಸಿಕ್ಕ ತಕ್ಷಣ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಮಾಹಿತಿ ಬೇಕಿತ್ತು
ದೇಶಿಯ ಕೃಷಿ, ಆಹಾರ ಮತ್ತು ಜಾನುವಾರು ತಳಿಗಳು ನಶಿಸುತ್ತ ಬರುತ್ತಿವೆ. ಆದರೆ, ನಾನು ಕಳೆದ ಆರೇಳು ವರ್ಷಗಳಿಂದ ಈ ಕೃಷಿಮೇಳ ಗಮನಿಸುತ್ತ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ದೇಶಿಯ ಪರಂಪರೆಯನ್ನು ಕಾಪಾಡುವ ವಿಚಾರಗಳಿಗಿಂತ ದೊಡ್ಡ ದೊಡ್ಡ ಕಂಪೆನಿಗಳ ಹಿತ ಕಾಪಾಡುವ ರೀತಿ ಮೇಳಗಳು ಆಯೋಜನೆ ಆಗುತ್ತಿವೆ. ಮುಂದಿನ ವರ್ಷ ವಾದರೂ ಈ ಮೇಳದಲ್ಲಿ ನಮ್ಮ ದೇಶಿಯತೆ ಒತ್ತು ನೀಡುವ ಕಾರ್ಯ ನಡೆಯಲಿ.
–ಖಂಡೆಂದೂಧರ್, ರೈತ

ತುಂಬ ಚೆನ್ನಾಗಿದೆ
ಪ್ರತಿ ಸಾರಿ ನಮ್ಮ ಹುಡುಗರು ಮೇಳಕ್ಕೆ ಹಸು ತೆಗೆದುಕೊಂಡು ಬರುತ್ತಿದ್ದರು. ನಾನು ಇದೇ ಮೊದಲ ಬಾರಿಗೆ ಬಂದಿರುವೆ. ಮೇಳ ತುಂಬ ಚೆನ್ನಾಗಿದೆ. ಕೃಷಿಗೆ ಸಂಬಂಧ ಪಟ್ಟಂತೆ ಎಲ್ಲ ವಿಚಾರಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ನಾಳೆ ನನ್ನ ಮೂವರು ಸೊಸೆಯರನ್ನು ಕರೆದು ಕೊಂಡು ಬರುತ್ತೇನೆ.
–ಆಂಜಿನಮ್ಮ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT