ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲ’ಗಳ ನಡುವೆ ರಾಜ್ಯೋತ್ಸವ

Last Updated 1 ನವೆಂಬರ್ 2014, 7:50 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಿಂದ ಸಚಿವರು ಇಲ್ಲ, ಉಸ್ತುವಾರಿ ಸಚಿವರು ಇಲ್ಲ, ರಾಜ್ಯೋತ್ಸವ ಪ್ರಶಸ್ತಿ ಇಲ್ಲ, ಡಿಸಿಸಿ ಬ್ಯಾಂಕ್‌ ಇಲ್ಲ,  ಪ್ರತ್ಯೇಕ ಹಾಲು ಒಕ್ಕೂಟ ಇಲ್ಲ, ಪೊಲೀಸ್‌ ಮಹಿಳಾ ಠಾಣೆ ಇಲ್ಲ, ನಗರಕ್ಕೆ ಸಂಚಾರ ಠಾಣೆ, ಕೇಂದ್ರೀಯ ಬಸ್‌ ನಿಲ್ದಾಣ ಪೂರ್ಣಗೊಂಡಿಲ್ಲ, ನಗರ ಸಾರಿಗೆ ಬಸ್‌ ಇಲ್ಲ... ಹೀಗೆ ಸಾಲು ಸಾಲು ‘ಇಲ್ಲ’ಗಳ ಪಟ್ಟಿಯೇ ಜಿಲ್ಲೆಯಲ್ಲಿದೆ. ‘ಇಲ್ಲ’ಗಳ ಮಧ್ಯೆ ಮತ್ತೊಮ್ಮೆ ರಾಜ್ಯೋತ್ಸವ ಆಚರಿಸುವ ‘ಸಡಗರ’ ಜಿಲ್ಲೆಗೆ ಬಂದಿದೆ.

ಜಿಲ್ಲೆಯಲ್ಲಿ ಆಡಳಿತ ಪಕ್ಷದ ನಾಲ್ಕು ಶಾಸಕರು ಇದ್ದರೂ, ಸಚಿವ ಸ್ಥಾನ ನೀಡಿಲ್ಲ. ಅಲ್ಲದೇ ಉಸ್ತುವಾರಿ ಸಚಿವರನ್ನೇ ನೇಮಿಸಿಲ್ಲ. ಪ್ರತಿ ಬಾರಿ ಧ್ವಜಾರೋಹಣಕ್ಕೆ ಸಚಿವರೊಬ್ಬರು ಬಂದು ಹೋಗುತ್ತಾರೆ. 5 ಫೆಬ್ರುವರಿ 2014ರಂದು ಕೊನೆ ಬಾರಿಗೆ ಪ್ರಕಾಶ್‌ ಹುಕ್ಕೇರಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದಿದೆ. ಸುಮಾರು 5 ತಿಂಗಳ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಪರಿಶೀಲಿಸಬೇಕಾದ ಹಲವು ‘ಯೋಜನೆ’ಗಳು ಸ್ಥಗಿತಗೊಂಡಿವೆ.

ಜಿಲ್ಲೆಗೆ ಪ್ರಾತಿನಿಧ್ಯ ಇಲ್ಲದ ಕಾರಣ ವೈದ್ಯಕೀಯ ಕಾಲೇಜು ಹಾಗೂ ಕೆಲವು ಯೋಜನೆಗಳಲ್ಲಿ ಗೊಂದಲ ಉಂಟಾಗಿತ್ತು. ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಕಡೆಗಣಿಸಲಾಯಿತು. ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನ ಆತಿಥ್ಯ ಬಂದರೂ ಒಮ್ಮತ ಮೂಡಿಸುವ ‘ಉಸ್ತುವಾರಿ’ಯೇ ಇಲ್ಲದೇ ವಾಪಾಸಾಗಿದೆ.  

ಇನ್ನೊಂದೆಡೆ ರಾಜ್ಯಾದ್ಯಂತ ಅತ್ಯಾಚಾರ ಪ್ರಕರಣಗಳು ಕೇಳಿಬರುತ್ತಿದ್ದರೂ ಜಿಲ್ಲೆಗೊಂದು ಮಹಿಳಾ ಠಾಣೆ ಇಲ್ಲ.   ಮಹಿಳಾ ಸಿಬ್ಬಂದಿ ಕೊರತೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಪೊಲೀಸರ ಮುತುವರ್ಜಿ ಕಾರಣ, ಬೆಂಗಳೂರಿ ನಂತೆ ಪ್ರತಿಭಟನೆ ಎದುರಿಸುವ ಅಪಾಯದಿಂದ ಜಿಲ್ಲೆ ಪಾರಾಗಿದೆ.

ಜಿಲ್ಲೆ ರಚನೆಯಾಗಿ 17 ವರ್ಷ ಕಳೆದರೂ ‘ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌’ ಹಾಗೂ ‘ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ’ ಇಲ್ಲ. ಒಂದೆಡೆ ಹಾವೇರಿಗೆ ಹೊರ ರಾಜ್ಯದ ಹಾಲು ಬಂದರೆ,  ಸ್ಥಳೀಯ ರೈತರ, ಹೈನುಗಾರರ ಅಭಿವೃದ್ಧಿ ಆಗುತ್ತಿಲ್ಲ.

ಸಾರಿಗೆ ವ್ಯವಸ್ಥೆಯೂ ಸುಗಮವಾಗಿಲ್ಲ. ಕೇಂದ್ರೀಯ ಬಸ್‌ ನಿಲ್ದಾಣ ಪೂರ್ಣಗೊಂಡಿಲ್ಲ. ರಾಜ್ಯದಲ್ಲೇ ಹಿಂದುಳಿದ ಹೈದರಾಬಾದ್‌
ಕರ್ನಾಟಕದಲ್ಲಿ ನಗರ ಸಾರಿಗೆ ಬಸ್‌ ಇದೆ. ಆದರೆ ಹಾವೇರಿಯಲ್ಲಿ ಇಲ್ಲ. ನಂಬರ್‌ ರಹಿತ ವಾಹನಗಳ ಹಾವಳಿಯೂ ಹೆಚ್ಚಿದೆ. ರಸ್ತೆ ಪಾಡು ಹೇಳುವಂತಿಲ್ಲ. ನಗರಸಭೆ, ಆರೋಗ್ಯ ಮತ್ತಿತರ ಇಲಾಖೆಗಳಲ್ಲೂ ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ. ಹತ್ತಿ ಬೆಳೆದು ವಂಚನೆಗೊಳಗಾದ, ಕಬ್ಬು ಬೆಳೆದು ಹಣ ದೊರಕದ ರೈತರ ಪಾಡೂ ಭಿನ್ನವಾಗಿಲ್ಲ. ಪರಿಹಾರಕ್ಕೆ ಸಾಕಷ್ಟು ಪ್ರತಿಭಟನೆಗಳೇ ನಡೆದಿವೆ. ಒಟ್ಟಾರೆ ‘ಇಲ್ಲ’ಗಳ ನಡುವೆ ನಾವೂ ‘ಇದ್ದೂ ಇಲ್ಲದಂತಾಗಿದೆ’ ಎನ್ನುತ್ತಾರೆ ಕೆಲವರು.

‘ಜಿಲ್ಲೆಯ ಪಾಲಿಗೆ ರಾಜ್ಯ ಸರ್ಕಾರ ಇಲ್ಲ‘

ಹಾವೇರಿ: ಜಿಲ್ಲೆಯ ಪಾಲಿಗೆ ರಾಜ್ಯ ಸರ್ಕಾರ ಇಲ್ಲದಾಗಿದೆ.  ವರ್ಷದಿಂದ ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ, ಗಣರಾಜ್ಯೋತ್ಸವದಂತ ಪ್ರಮುಖ ದಿನಾಚರಣೆಗಳು ಉಸ್ತುವಾರಿ ಸಚಿವರಿಲ್ಲದೆ ನಡೆದಿವೆ.

ಈ ಸರ್ಕಾರವು ಆಡಳಿತಾತ್ಮಕ, ರಾಜಕೀಯವಾಗಿ ಕಡೆಗಣಿಸಿದೆ. ಉತ್ತರ ಕರ್ನಾಟಕ ಹೆಬ್ಬಾಗಿಲು, ಪ್ರಮುಖ ಜಿಲ್ಲೆಯೇ ಹೀಗಿದ್ದರೆ, ಇನ್ನು ಉಳಿದ ಜಿಲ್ಲೆಗಳ ಪರಿಸ್ಥಿತಿ ಹೇಗಿರಬಹುದು?

ಸರ್ಕಾರ ಜಿಲ್ಲೆಗೆ ಏನೂ ಕೊಡುತ್ತಿಲ್ಲ. ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್‌ ಬಗ್ಗೆ ನಾವೇ ಬೇಡಿಕೆ ಇಟ್ಟರೂ ಸ್ಪಂದಿಸುತ್ತಿಲ್ಲ. ಕುಡಿವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ಆಸ್ಪತ್ರೆ, ವೈದ್ಯರು, ಔಷಧಿ ವ್ಯವಸ್ಥೆಯೇ ಅಧೋಗತಿಗೆ ತಲುಪಿದೆ.
–ಬಸವರಾಜ ಎಸ್‌. ಬೊಮ್ಮಾಯಿ, ಶಾಸಕ

‘ಹಾವೇರಿ ಅನಾಥ: ಪ್ರತ್ಯೇಕ ರಾಜ್ಯ ತಪ್ಪಲ್ಲ’

ಹಾವೇರಿ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಿಲ್ಲೆಯನ್ನು ನಿರ್ಲಕ್ಷಿಸಿವೆ. ಜಿಲ್ಲೆಗೆ ನೀರಾವರಿ, ಕೈಗಾರಿಕೆ, ಹೊಸ ಯೋಜನೆಗಳೇ ಬರುತ್ತಿಲ್ಲ. ಆಡಳಿತವು ಕೇವಲ ಮೈಸೂರು– ಬೆಂಗಳೂರಿಗೆ ಸೀಮಿತಗೊಂಡಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ರಾಜ್ಯ ಕೇಳುವುದು ತಪ್ಪಲ್ಲ. ಹಿಂದಿ ಭಾಷೆಯ ಹಲವು ರಾಜ್ಯಗಳಿವೆ. ಆಗ ಗಡಿ ವಿವಾದ ಬರುವುದಿಲ್ಲ. 60 ವರ್ಷದ ಹಿಂದೆ ಏಕೀಕರಣ ನಡೆದಿತ್ತು. ಆದರೆ ಈಗ ಬರೀ ಮೈಸೂರು– ಬೆಂಗಳೂರು ಕೇಂದ್ರೀಕರಣ ಆಗುತ್ತಿದೆ. 20 ವರ್ಷ ಕಳೆದರೂ ತುಂಗಾ ಮೇಲ್ದಂಡೆ ಯೋಜನೆ ಪೂರ್ಣಗೊಂಡಿಲ್ಲ. ರೈತರಿಗೆ ಆಗುವ ಅನ್ಯಾಯವನ್ನೂ ಯಾರೂ ಪ್ರಶ್ನಿಸುತ್ತಿಲ್ಲ. ಕನಿಷ್ಠ ಉಸ್ತುವಾರಿ ಸಚಿವರೂ ಇಲ್ಲ. ಹಾವೇರಿ ಅನಾಥವಾಗಿದೆ. 
ಶಿವಾನಂದ ಗುರುಮಠ, ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT