ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ತಮ ಸಂಗೀತ ಶಿಕ್ಷಣದ ಅವಶ್ಯಕತೆಯಿದೆ’

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಅಪ್ಪ ಹಾಕಿಕೊಟ್ಟ ದಾರಿಯಲ್ಲಿ ನಡೆದು ಪ್ರಪಂಚದಾದ್ಯಂತ ಸಿತಾರ್‌ ವಾದಕರಾಗಿ ಛಾಪು ಮೂಡಿಸಿದ ಕಲಾವಿದ ಪ್ರಬೀರ್‌.  ಸಂಗೀತವೇ ಜೀವನ, ಆನಂದ, ಕಲಿಕೆಯ ದಾರಿ ಎಂದು ನಂಬಿರುವ ಕಲಾವಿದ ಪ್ರಬೀರ್‌ ಮಾತಿಗೆ ಸಿಕ್ಕು ಕೆಲ ಅಭಿಪ್ರಾಯ ಹಂಚಿಕೊಂಡರು.

ತಂತಿ ಮೀಟುತ್ತಾ ಹೊರಹೊಮ್ಮುವ ನಾದದ ವೈಖರಿಯಿಂದಲೇ ಜನರ ಮನಸ್ಸಿನಾಳಕ್ಕೆ ಇಳಿಯುವ ವಾದ್ಯ ಸಿತಾರ್‌. ಯಾವುದೇ ವಾದ್ಯದೊಂದಿಗೂ ಮಿಳಿತಗೊಂಡು ಸುಂದರ ಸಂಗೀತ ವಾತಾವರಣ ಸೃಷ್ಟಿಸಬಲ್ಲ ಸಿತಾರ್‌ ನಾದಕ್ಕೆ ಮಾರುಹೋದ ಪ್ರಬೀರ್‌ ಭಟ್ಟಾಚಾರ್ಯ ಇತ್ತೀಚೆಗೆ ತಮ್ಮ ತಂಡದೊಂದಿಗೆ ನಗರದ ಫಿನಿಕ್ಸ್‌ ಮಾರ್ಕೆಟ್‌ಸಿಟಿಯಲ್ಲಿ ಸಂಗೀತ ಸುಧೆ ಹರಿಸಿದರು.

ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಮನೆತನದಲ್ಲೇ ಹುಟ್ಟಿ ಬೆಳೆದ ಪ್ರಬೀರ್‌ ತಂದೆ ಅಮಲ್‌ ಕುಮಾರ್‌ ಅವರಿಂದ ಸ್ಫೂರ್ತಿ ಪಡೆದವರು. 12ನೇ ವಯಸ್ಸಿಗೆ ಅಪ್ಪನೊಂದಿಗೆ ಕುಳಿತು ಸಿತಾರ್‌ ಮೀಟಲು ಪ್ರಾರಂಭಿಸಿದ ಅವರು ಅಂತರರಾಷ್ಟ್ರೀಯ ಖ್ಯಾತಿಯ ಸಿತಾರ್‌ ವಾದಕ. ಇನ್‌ಸ್ಟ್ರುಮೆಂಟಲ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕೂಡ ಪಡೆದಿದ್ದಾರೆ.

ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಪ್ರಬೀರ್‌, ತಮ್ಮ ಸಿತಾರ್‌ ಗುರುಗಳಾದ ದೀಪಕ್‌ ಚೌಧರಿ, ಬಿರ್ಜು ಮಹಾರಾಜ್‌, ಕಿಶನ್‌ ಮಹಾರಾಜ್‌, ರಾಜನ್‌–ಸಾಜನ್‌ ಮಿಶ್ರಾ, ಮ್ಯಾಂಡೊಲಿನ್‌ ಶ್ರೀನಿವಾಸ್‌, ರಾಯ್‌ ವೂತೆನ್‌, ಹನ್ನೊ ದೊ ರೋಸಾ ಸೇರಿದಂತೆ ಹಲವು ಸಂಗೀತ ವಿದ್ವಾಂಸರೊಂದಿಗೆ ಕಛೇರಿ ನೀಡಿದ ಅನುಭವವವನ್ನೂ ಹೊಂದಿದ್ದಾರೆ.

ಅವರು ಮಲ್ಹಾರ್‌ ಜಾಮ್‌ ಎನ್ನುವ ಸಂಗೀತ ತಂಡವನ್ನೂ ಕಟ್ಟಿಕೊಂಡಿದ್ದು, ಹಿಂದೂಸ್ತಾನಿ ಶಾಸ್ತ್ರೀಯ, ಜಾಜ್‌, ಫ್ಯೂಷನ್‌ ಹಾಗೂ ವರ್ಲ್ಡ್‌ ಮ್ಯೂಸಿಕ್‌ ಸಂಗೀತವನ್ನು ಪ್ರಸ್ತುತಪಡಿಸುತ್ತಾರೆ. ಅವರ ತಂಡದಲ್ಲಿ ಸಿತಾರ್‌ (ಪ್ರಬೀರ್‌), ಜಾಜ್‌ ಬಾಸ್‌ (ಪ್ರಕಾಶ್‌), ತಬಲಾ (ಆದರ್ಶ), ಕೀಬೋರ್ಡ್‌ (ಶರಣ್‌), ಡ್ರಮ್ಸ್‌ (ಗೋಪಿ ಶ್ರವಣ್‌) ವಾದ್ಯಗಳ ಮೆರುಗು ನೀಡುತ್ತಾರೆ.

ಕ್ಲಾಸ್‌ ಪ್ರೇಕ್ಷಕರಿಗಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣ, ಎಲ್ಲಾ ರೀತಿಯ ಪ್ರೇಕ್ಷಕರಿಗಾಗಿ ಫಿನಿಕ್ಸ್‌ ಮಾರ್ಕೆಟ್‌ಸಿಟಿ, ಗುಣಮಟ್ಟಕ್ಕೆ ಹೋಲಿಸಿದರೆ ಪುಣೆಯ ಸವಾಯಿ ಗಂಧರ್ವ ವೇದಿಕೆ, ವಿದೇಶದಲ್ಲಿ ಮಾಸ್ಕೊದ ಬಾಲ್ಶೋಯ್‌ ಥಿಯೇಟರ್‌ಗಳಲ್ಲಿ ಕಾರ್ಯಕ್ರಮ ನೀಡುವುದರಲ್ಲಿ ಪ್ರಬೀರ್‌ ಅವರಿಗೆ ಹೆಚ್ಚು ಖುಷಿ ಇದೆ.

ಸರೋದ್‌ ವಾದಕ ಗೆಳೆಯ ಶುಭವ್ರತ  ಅವರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಪ್ರಬೀರ್‌ಗೆ ಗೆಳೆಯನೊಂದಿಗಿನ ಕಛೇರಿ ಅನೇಕ ಕಾರಣಕ್ಕೆ ಇಷ್ಟ. ಹಾಗೆಯೇ ದೇಶ ವಿದೇಶದ ಅನೇಕ ಮೇರು ಕಲಾವಿದರೊಂದಿಗೂ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿರುವ ಪ್ರಬೀರ್‌ ಜ್ಞಾನ ಹೆಚ್ಚಿಸಿಕೊಳ್ಳಲು ಇದು ಉತ್ತಮ ದಾರಿ ಎಂದು ನಂಬಿದವರು. ಮಲ್ಹಾರ್‌ ಘರಾಣಾದಲ್ಲಿ ಖ್ಯಾತಿ ಪಡೆದಿರುವ ಅವರ ಪ್ರಕಾರ ‘ಸರಿಯಾದ ತಾಂತ್ರಿಕತೆ, ಅತ್ಯುತ್ತಮ ಸಂಯೋಜನೆ ಇದ್ದರೆ ಯಾವುದೇ ದೇಶದ ಜನಪ್ರಿಯ ಸಂಗೀತ ಪ್ರಕಾರದೊಂದಿಗೆ ಹೊಂದಿಕೊಳ್ಳುವ ಗುಣ ಸಿತಾರ್‌ಗಿದೆ’.

‘ಸಮರ್ಪಣಾ ಭಾವದಿಂದ ಕೆಲಸ ಮಾಡಿದರೆ ಯಾರು ಏನನ್ನು ಬೇಕಾದರೂ ಸಾಧಿಸಬಹುದು. ಹಾಗೆಯೇ  ಯಾವುದೇ ಪ್ರಕಾರದ ಸಂಗೀತವನ್ನು ಬೇಕಾದರೂ ಸಿತಾರ್‌ನಲ್ಲಿ ನುಡಿಸಬಹುದು. ಆದರೆ ಅದದೇ ಸಂಗೀತವನ್ನು ಅವಕ್ಕೆಂದೇ ರೂಪಿಸಲಾದ ವಾದ್ಯಗಳಲ್ಲಿ ನುಡಿಸುವ ಆನಂದ, ಇಂಪು ಖಂಡಿತ ಬೇರೆ ವಾದ್ಯಗಳಲ್ಲಿ ಸಿಗುವುದಿಲ್ಲ. ಹೀಗಾಗಿ ಆ ಪ್ರಯೋಗ ಅಷ್ಟೊಂದು ಉಚಿತ ಎಂದು ನನಗನಿಸದು’ ಎಂದು ಅವರು ಉತ್ತರಿಸುತ್ತಾರೆ.

ಅನೇಕ ಸಿನಿಮಾ ಸಂಗೀತ ಸಂಯೋಜಕರ ಜೊತೆ ಕೆಲಸ ಮಾಡಿದ ಅನುಭವವೂ ಅವರಿಗಿದೆ. ರಂಗಭೂಮಿ, ಸಿನಿಮಾ, ನೃತ್ಯ, ಕಿರುತೆರೆ ಧಾರಾವಾಹಿಗಳು, ದೆಹಲಿ ದೂರದರ್ಶನ ಕಾರ್ಯಕ್ರಮಕ್ಕೆ, ಬ್ಯಾಲೆಟ್‌, ಊಟಿಗೆ ಸಂಬಂಧಿಸಿದ ಸಂಗೀತ ಆಲ್ಬಂ, ಹಾಗೂ ಸಿತಾರ್‌ ಸರೋದ್‌ ಜುಗಲ್‌ಬಂದಿಯ ಎರಡು ಸೀಡಿಯನ್ನೂ ಅವರು ರೂಪಿಸಿದ್ದಾರೆ.

‘24X7 ಸಂತೋಷವನ್ನು ನೀಡುವ ಸಂಗೀತದ ಮುಖಾಂತರ ಪ್ರೇಕ್ಷಕರಿಗೆ ಸಂತೋಷ, ಶಾಂತಿ, ಪ್ರೀತಿಯನ್ನು ಹರಡಬೇಕು’ ಎಂಬುದು ಅವರ ತವಕ. ಅಲ್ಲದೆ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸತತ ಕಲಿಕೆ ಹಾಗೂ ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಬಯಕೆ ಅವರದ್ದು.

‘ಸಂಗೀತವನ್ನು ಕೇವಲ ಕಲಿಕೆ ಎಂದು ಆರಾಧಿಸುತ್ತಿದ್ದ ಕಲಾವಿದರಿದ್ದರು. ಆದರೆ ಇತ್ತೀಚೆಗೆ ಕಲೆ, ಸಂಗೀತ ಎನ್ನುವುದು ಹಣ ಸಂಪಾದನೆಯ ನೇರ ದಾರಿಯಾಗಿ ಹೋಗಿದೆ. ವಿದೇಶಗಳಿಗೆ ತೆರಳಿ ಅಲ್ಲಿ ಕಾರ್ಯಕ್ರಮಗಳನ್ನು ನೀಡಿದರೆ ಮಾತ್ರ ದೇಸಿ ನೆಲದಲ್ಲಿ ಗುರುತಿಸಿಕೊಳ್ಳಬಹುದು ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ವಿದೇಶೀಯರಿಗೆ ಭಾರತೀಯ ಸಂಗೀತವು ಒತ್ತಡದಿಂದ ಬಿಡುಗಡೆ ಹೊಂದುವ, ನೆಮ್ಮದಿ ಪಡೆಯುವ ದಾರಿಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅವರು ಅನೇಕ ಸಂಶೋಧನೆಗಳನ್ನು ಕೂಡ ಕೈಗೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಪ್ರಬೀರ್‌.

‘ಪಾಶ್ಚಾತ್ಯ ಸಂಗೀತದೆಡೆಗೆ ಹೆಚ್ಚು ಹೆಚ್ಚು ಮನಸ್ಸು ಮಾಡುತ್ತಿರುವ ಇಂದಿನವರಿಗೆ ಸಿತಾರ್‌ ಕಲಿಯುವ ಆಸಕ್ತಿ ಅಷ್ಟಾಗಿ ಇಲ್ಲ’ ಎಂಬುದು ಅವರ ಭಾವನೆ. ‘ಕಲೆಯನ್ನು ಅರಗಿಸಿಕೊಳ್ಳಬೇಕು ಎಂಬ ತವಕಕ್ಕಿಂತ ಕೆಲವೇ ದಿನಗಳಲ್ಲಿ ಕಲಾವಿದನಾಗಿಬಿಡಬೇಕು ಎಂಬ ಧಾವಂತ ಇಂದಿನವರಲ್ಲಿ ಹೆಚ್ಚು. ಕಲಿಕೆಗೆ ಹೋಲಿಸಿದರೆ ಪಾಶ್ಚಾತ್ಯ ಸಂಗೀತ ಜನರನ್ನು ಬೇಗ ತಲುಪುತ್ತದೆ. ಜನಪ್ರಿಯತೆಯೂ ಕಡಿಮೆ ಸಮಯದಲ್ಲಿ ಸಿಗುತ್ತದೆ. ಉತ್ತಮ ಶಿಕ್ಷಕರಿಲ್ಲದೆಯೂ ಆ ಸಂಗೀತವನ್ನು ಕಲಿಯಲು ಬೇಕಾದಷ್ಟು ಅವಕಾಶಗಳಿವೆ. ಅಂತರ್ಜಾಲದಲ್ಲಿ ಹೆಚ್ಚಿನ ಎಲ್ಲವೂ ಲಭ್ಯ. ಆದರೆ ಭಾರತೀಯ ಸಂಗೀತ ಕಲಿಕೆಗೆ ಒಳ್ಳೆಯ ಶಿಕ್ಷಕ ಹಾಗೂ ಉತ್ತಮ ಮಾರ್ಗದರ್ಶಿಯ ಅವಶ್ಯಕತೆಯಿದೆ’ ಎಂದು ಅವರು ಇಂದಿನ ಸನ್ನಿವೇಶವನ್ನು ವಿಶ್ಲೇಷಿಸುತ್ತಾರೆ.

‘ಅಂತೆಯೇ ಸಂಗೀತ ಆಸ್ವಾದನೆಯ ಟ್ರೆಂಡ್‌ ಕೂಡ ವಿರುದ್ಧ ದಿಕ್ಕಿನಲ್ಲಿ ಬದಲಾಗುತ್ತಿದೆ. ಪಾಶ್ಚಾತ್ಯರು ನಿಧಾನವಾದ, ಇಂಪಾದ ಸಂಗೀತ ಪ್ರಕಾರಗಳೆಡೆಗೆ ವಾಲುತ್ತಿದ್ದಾರೆ. ಆಲಾಪವನ್ನು ಅಥವಾ ನಿಧಾನಗತಿಯ ಸಂಗೀತ ನುಡಿಸುತ್ತಿರುವಾಗ ಅನೇಕ ಭಾರತೀಯರು ಸಭಾಂಗಣದಿಂದ ಹೊರಹೋಗಿ ನಿಲ್ಲುವುದನ್ನು ಅನೇಕ ಬಾರಿ ಗಮನಿಸಿದ್ದೇನೆ. ಹೀಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವಂಥ ಸಂಗೀತವನ್ನೇ ಕಲಾವಿದ ನೀಡಬೇಕಾಗುತ್ತದೆ. ಪ್ರೇಕ್ಷಕರ ಮನಸ್ಸನ್ನು ಓದಿ ಅವರಿಗೆ ಬೇಕಾದಂತಹ ಸಂಗೀತವನ್ನು ನೀಡುವ ಜಾಣ್ಮೆ ಅರಿತರೆ ಮಾತ್ರ ಯಶಸ್ಸು ಸಿಗುತ್ತದೆ. ಅದೇ ಸಂಗೀತ ದಾರಿಯ ಇಂದಿನ ಬದಲಾವಣೆ’ ಎನ್ನುವ ಪ್ರಬೀರ್‌ ಸಂಸ್ಕೃತಿ, ಮನೋಭಾವ, ಅಭಿರುಚಿಗಳಲ್ಲಿನ ವೈವಿಧ್ಯಗಳು ಬೆಂಗಳೂರು ನೆಲದ ಸೊಗಡು ಎನ್ನುತ್ತಾರೆ.                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT