ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಬರ್‌’ನ ಭಾರತದ ಮೊದಲ ಚಾಲಕಿ ಸಾವು

Last Updated 28 ಜೂನ್ 2016, 7:36 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪ್ ಆಧಾರಿತ ಟಾಕ್ಸಿ ಸೇವಾ ಕಂಪೆನಿ ‘ಉಬರ್‌’ನ ಭಾರತದ ಮೊದಲ ಚಾಲಕಿ ವೀರತ್‌ ಭಾರತಿ (39) ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಭಾರತಿ ಅವರ ಶವ ಸೋಮವಾರ ಸಂಜೆ ಪತ್ತೆಯಾಗಿದೆ. ತೆಲಂಗಾಣದ ವಾರಂಗಲ್‌ ಮೂಲದ ಭಾರತಿ ಅವರು ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ವಿಷಯ ತಿಳಿದ ಅವರ ಪೋಷಕರು ವಾರಂಗಲ್‌ನಿಂದ ಬೆಂಗಳೂರಿಗೆ ಹೊರಟಿದ್ದಾರೆ.

‘ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮನೆಗೆ ಬಲವಂತದಿಂದ ಯಾರೂ ಪ್ರವೇಶಿಸಿದಂತೆ ಕಾಣುತ್ತಿಲ್ಲ. ಇದು ಆತ್ಮಹತ್ಯೆಯೇ, ಕೊಲೆಯೋ ಎಂಬ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುದು ತಿಳಿಯಲಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್‌.ಸುರೇಶ್‌ ತಿಳಿಸಿದ್ದಾರೆ.

2005ರಲ್ಲಿ ವಾರಂಗಲ್‌ನಿಂದ ಬೆಂಗಳೂರಿಗೆ ಬಂದಿದ್ದ ಭಾರತಿ ಅವರು ಆರಂಭದ ದಿನಗಳಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದರು. ಸ್ವಯಂಸೇವಾ ಸಂಸ್ಥೆಯೊಂದರ ನೆರವಿನಿಂದ 2007ರಲ್ಲಿ ಅವರು ಚಾಲನಾ ತರಬೇತಿ ಪಡೆದಿದ್ದರು. 2013ರಲ್ಲಿ ಉಬರ್‌ ಸೇರಿದ ಭಾರತಿ ಅವರು ಕಂಪೆನಿಯ ಭಾರತದ ಮೊದಲ ಚಾಲಕಿಯಾಗಿದ್ದರು.

ಭಾರತಿ ಅವರು ಮಧ್ಯರಾತ್ರಿಯಲ್ಲೂ ಟಾಕ್ಸಿ ಸೇವೆ ನೀಡಲು ಅಂಜುತ್ತಿರಲಿಲ್ಲ. ಇತರೆ ಚಾಲಕಿಯರಿಗೆ ಅವರು ಮಾದರಿಯಂತಿದ್ದರು. ತಮಗೆ ಈ ಕೆಲಸದಲ್ಲಿ ಯಾವ ಕೆಟ್ಟ ಅನುಭವವೂ ಆಗಿಲ್ಲ ಎನ್ನುತ್ತಿದ್ದ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT