ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಷ್ಣದ ನಡುಗಡ್ಡೆ’ಗಳಿಗೆ ಬೇಕಿದೆ ಹಸಿರಿನ ಹೊದಿಕೆ

ಹವಾಮಾನ ಶೃಂಗಸಭೆ

ಜಗತ್ತಿನಲ್ಲಿ ಕಲ್ಲಿದ್ದಲು, ತೈಲ ಹಾಗೂ ನೈಸರ್ಗಿಕ ಅನಿಲದ ಬಳಕೆ ಪ್ರಮಾಣವು ಸದ್ಯದ ವೇಗದಲ್ಲೇ ಹೆಚ್ಚುತ್ತಾ ಹೋದರೆ 2100ರ ವೇಳೆಗೆ ದೇಶದ ತಾಪಮಾನ ಕೂಡ 3ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಆಗಲಿದೆ. ಈ ಬದಲಾವಣೆಯಿಂದ ಉಷ್ಣದ ಒತ್ತಡ ಏರುಪೇರು ಆಗಲಿದ್ದು, ಮಳೆಚಕ್ರ ದಿಕ್ಕು ತಪ್ಪಲಿದೆ. ನೀರಿನ ಲಭ್ಯತೆ ಕಡಿಮೆ ಆಗಲಿದೆ. ಜಾಗತಿಕ ತಾಪಮಾನದ ನೆಗೆತದಿಂದ ಸಮುದ್ರ ಮಟ್ಟ ಸಹ ಏರುತ್ತಿದ್ದು ನಮ್ಮ ಕರಾವಳಿ ತೀರದ ನಗರಗಳಿಗೆ ಇದರಿಂದ ಗಂಡಾಂತರ ಕಾದಿದೆ.

ಯಾವುದೇ ನಿರ್ದಿಷ್ಟ ಪ್ರದೇಶದ ಹವಾಮಾನದಲ್ಲಿ ಉಂಟಾಗುವ ಬದಲಾವಣೆಗೆ ಸ್ಥಳೀಯ ಹಾಗೂ ಜಾಗತಿಕ ಎರಡೂ ಕಾರಣಗಳು ಉಂಟು. ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚಲು ಜಾಗತಿಕ ಬೆಳವಣಿಗೆಗಳೇ ನೇರ ಹೊಣೆ. ಭೂಮಿಯ ಮೇಲ್ಮೈನಿಂದ ಹೊರಸೂಸಿದ ವಿಕಿರಣವನ್ನು ವಾತಾವರಣದಲ್ಲಿ ಸಾಂದ್ರೀಕೃತಗೊಂಡ ಇಂಗಾಲದ ಡೈ ಆಕ್ಸೈಡ್‌ ತಡೆ ಹಿಡಿಯುತ್ತದೆ. ಇದರಿಂದ ತಾಪಮಾನ ಏರುತ್ತದೆ. ಯಾವುದೇ ನಿಶ್ಚಿತ ಭಾಗದಲ್ಲಷ್ಟೇ ಇಂಗಾಲದ ಡೈ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತಿದ್ದರೂ ಅದರ ಪರಿಣಾಮ ಮಾತ್ರ ಜಗತ್ತಿನ ಎಲ್ಲ ಕಡೆಗೂ ಆಗುತ್ತದೆ.

ವಾತಾವರಣದ ಪ್ರತಿ ಹತ್ತು ಲಕ್ಷ ಕಣಗಳಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ 400 ಕಣಗಳಿಗಿಂತ ಹೆಚ್ಚಾಗುತ್ತಿದೆ. ಅಂದಾಜು 30 ಲಕ್ಷ ವರ್ಷಗಳ ಹಿಂದೆಯೂ ಭೂಮಿಯ ಮೇಲೆ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಹೀಗೇ ಏರಿಕೆಯಾಗಿತ್ತು. ಆಗ ಸಮುದ್ರದ ಮಟ್ಟ ಈಗಿರುವುದಕ್ಕಿಂತ 40 ಮೀಟರ್‌ನಷ್ಟು ಎತ್ತರಕ್ಕೆ ಹೋಗಿತ್ತು. ಭವಿಷ್ಯದಲ್ಲಿ ಮತ್ತೆ ಸಮುದ್ರದ ಮಟ್ಟ ಆ ರೀತಿಯಲ್ಲಿ ಹೆಚ್ಚಾದರೆ ತೀರ ಪ್ರದೇಶದ ಬಹುತೇಕ ಮಹಾನಗರಗಳು ಮುಳುಗಿ ಹೋಗಲಿವೆ. ಇಂಗಾಲದ ಡೈ ಆಕ್ಸೈಡ್‌ ಮೂಲಕ ಏರುತ್ತಿರುವ ಜಾಗತಿಕ ತಾಪಮಾನ ಮನುಕುಲಕ್ಕೆ ದೊಡ್ಡ ಆಪತ್ತನ್ನೇ ತಂದೊಡ್ಡಿದೆ.

ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಭಾರತದ ನಾಗರಿಕತೆ ಕೂಡ ಒಂದಾಗಿದೆ. ಕಲ್ಲಿದ್ದಲು ಇಲ್ಲವೇ ತೈಲ (ಪೆಟ್ರೋಲಿಯಂ) ಬಳಕೆಯಿಲ್ಲದೆ ಇಲ್ಲಿನ ನಾಗರಿಕತೆ ಸಾವಿರಾರು ವರ್ಷಗಳನ್ನೇ ಕಳೆದಿದೆ. ಆದರೆ, ಕೈಗಾರಿಕಾ ಯುಗೋತ್ತರದಲ್ಲಿ ದೇಶವು ಅಂಕೆಯಿಲ್ಲದಂತೆ ಕಲ್ಲಿದ್ದಲು ಹಾಗೂ ತೈಲ ಬಳಕೆ ಮಾಡಿದ ಪ್ರಮಾಣವನ್ನು ಗಮನಿಸಿದರೆ ಮುಂದಿನ ಕೆಲವು ಶತಮಾನಗಳಲ್ಲಿ ಎಲ್ಲಿ ಈ ಇಂಧನಗಳ ಬಳಕೆ ಮೇಲೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗುವುದೋ ಏನೋ ಎಂಬ ಆತಂಕ ಕಾಡುತ್ತಿದೆ.

ಇಂಗಾಲದ ಡೈ ಆಕ್ಸೈಡ್‌ನಿಂದ ಹೆಚ್ಚಾಗಿರುವ ಜಾಗತಿಕ ತಾಪಮಾನವಷ್ಟೇ ಸ್ಥಳೀಯ ಹವಾಮಾನ ವೈಪರೀತ್ಯಕ್ಕೆ ಕಾರಣವಲ್ಲ. ನಗರ ಪ್ರದೇಶದ ಭೂಬಳಕೆ ವಿಧಾನದಲ್ಲಿ ಆಗಿರುವ ಬದಲಾವಣೆ ಪ್ರಭಾವವೂ ಅದರಲ್ಲಿ ದಟ್ಟವಾಗಿದೆ. ನಗರೀಕರಣದಿಂದ ಸ್ಥಳೀಯವಾಗಿ ಹೆಚ್ಚಿನ ತಾಪಮಾನ ಕಂಡಿರುವ ಪ್ರದೇಶಗಳನ್ನು ‘ಉಷ್ಣದ ನಡುಗಡ್ಡೆ’ ಎಂದು ಗುರ್ತಿಸಲಾಗುತ್ತದೆ.

ಉಷ್ಣದ ಪ್ರಭಾವ ತಗ್ಗಿಸುತ್ತಿದ್ದ ನಗರದ ಕೆರೆ ಹಾಗೂ ಹಸಿರು ವಲಯಗಳಲ್ಲಿ ಈಗ ಕಟ್ಟಡಗಳು ಎದ್ದಿವೆ. ರಸ್ತೆ ಮತ್ತು ಕಾಂಕ್ರೀಟ್‌ ಪ್ರದೇಶಗಳು ಶಾಖ ಸಂಗ್ರಹದ ತಾಣಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಮಾಸಿಕ ಕನಿಷ್ಠ ತಾಪಮಾನದ ಪ್ರಮಾಣವು ನಗರ ಪ್ರದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಲೇ ಇದೆ.
ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ಕಳೆದ ನೂರು ವರ್ಷಗಳಲ್ಲಿ ಮಾರ್ಚ್‌ ತಿಂಗಳ ಸರಾಸರಿ ಕನಿಷ್ಠ ತಾಪಮಾನದ ಪ್ರಮಾಣ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಇದೇ ವೇಳೆ ಜಗತ್ತಿನ ಸರಾಸರಿ ಕನಿಷ್ಠ ಉಷ್ಣಾಂಶ 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಬೆಂಗಳೂರಿನ ತಾಪಮಾನದ ಪ್ರಮಾಣ ಜಗತ್ತಿನ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಲು ವೇಗವಾದ ನಗರೀಕರಣವೇ ಕಾರಣವಾಗಿದೆ.

ನಗರದಲ್ಲಿ ಹಸಿರು ವಲಯ ಹೆಚ್ಚಿಸಿದರೆ ತಕ್ಕಮಟ್ಟಿಗೆ ತಾಪಮಾನ ಕುಗ್ಗುತ್ತದೆ. ಇದಕ್ಕೇನೂ ಜಾಗತಿಕ ಮಟ್ಟದ ಒಪ್ಪಂದಕ್ಕೆ ಕಾಯಬೇಕಿಲ್ಲ. ಪ್ರಪಂಚದ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಯಲ್ಲಿ ಭಾರತದ ಕೊಡುಗೆ ಶೇ 5ಕ್ಕಿಂತ ಕಡಿಮೆ ಇದೆ. ತಲಾ ಹೊರಸೂಸುವ ಪ್ರಮಾಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದು ಜಗತ್ತಿನಲ್ಲೇ ಅತ್ಯಂತ ಕಡಿಮೆ. ಹೀಗಾಗಿ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವುದನ್ನು ತಡೆಯಲು ನಮ್ಮ ಸರ್ಕಾರಗಳು ಏನೇ ಕ್ರಮ ಕೈಗೊಂಡರೂ ಜಾಗತಿಕ ತಾಪಮಾನ ಕುಗ್ಗಿಸುವಲ್ಲಿ ಮುಂದಿನ 50 ವರ್ಷಗಳವರೆಗೆ ಹೆಚ್ಚಿನ ಪರಿಣಾಮವೇನೂ ಬೀರುವುದಿಲ್ಲ.

ಕಲ್ಲಿದ್ದಲು ಹಾಗೂ ತೈಲದ ಬಳಕೆಯನ್ನು ಮಿತಗೊಳಿಸುವ ಆರ್ಥಿಕ ಅಭಿವೃದ್ಧಿ ನಮ್ಮ ಇಂದಿನ ತುರ್ತು ಅಗತ್ಯ. ದೇಶದಲ್ಲಿ ಸೌರ ಹಾಗೂ ಪವನ ಶಕ್ತಿ ಬಳಕೆಗೆ ಬೇಕಾದಷ್ಟು ಅವಕಾಶಗಳಿದ್ದು, ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಶೂನ್ಯ ಎಂದೇ ಹೇಳಬೇಕು. ನವೀಕರಿಸಬಹುದಾದ ಹಾಗೂ ಶುದ್ಧ ಇಂಧನದ ಬಳಕೆಯಿಂದ ಇಂಗಾಲ ಮುಕ್ತ ವಾತಾವರಣ ನಿರ್ಮಿಸಲು ಸಾಧ್ಯ. ಅಲ್ಲದೆ ತಾಪಮಾನ ಕುಗ್ಗಿಸಲು ಇರುವಂತಹ ದೀರ್ಘಕಾಲೀನ ಪರಿಹಾರ ಇದಾಗಿದೆ.
ಅಲ್ಪಕಾಲೀನ ಪರಿಹಾರವಾಗಿ ವಾಯು ಮಾಲಿನ್ಯವನ್ನು ತಡೆಗಟ್ಟುವುದು ಅಗತ್ಯವಾಗಿದೆ. ಜಾಗತಿಕ ತಾಪಮಾನ ಹೆಚ್ಚಳಕ್ಕಿಂತ ವಾಯು ಮಾಲಿನ್ಯವೇ ದೇಶಕ್ಕೆ ಹೆಚ್ಚು ಅಪಾಯಕಾರಿಯಾಗಿದೆ.

ಕಳೆದ 50 ವರ್ಷಗಳಲ್ಲಿ ದೇಶದ ಬಹುತೇಕ ನಗರಗಳ ವಾತಾವರಣದ ಗುಣಮಟ್ಟ ಸಂಪೂರ್ಣವಾಗಿ ಕುಸಿದಿದೆ. ಶುದ್ಧ ಗಾಳಿಯಿಲ್ಲದೆ ಜೀವಸಂಕುಲ ಪರಿತಪಿಸುತ್ತಿದೆ. ವಾಹನಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ, ಗ್ರಾಮೀಣ ಭಾಗದಲ್ಲಿ ಅಡುಗೆ ಮಾಡಲು ಕಟ್ಟಿಗೆ ಒಲೆಗಳ ಬಳಕೆ ಹಾಗೂ ಕೃಷಿ ತ್ಯಾಜ್ಯದ ದಹನದಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಭಾರತದಲ್ಲಿ ಇಲ್ಲಣ (ಕಪ್ಪುಮಸಿ)ದಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ.

ಉಪಗ್ರಹದಿಂದ ಪಡೆದ ದತ್ತಾಂಶ ಪರಿಶೀಲಿಸಿದಾಗ ಚಳಿಗಾಲದ ಸಮಯದಲ್ಲಿ ಈ ಇಲ್ಲಣ ಅಧಿಕ ಪ್ರಮಾಣದಲ್ಲಿ ಇರುತ್ತದೆ ಎಂಬುದು ಕಂಡುಬಂದಿದೆ. ಹೃದ್ರೋಗ ಹಾಗೂ ಕ್ಯಾನ್ಸರ್‌ಗೆ ಇಂತಹ ಮಾಲಿನ್ಯ ನೇರ ಕಾರಣವಾದರೂ ಅದರ ನಿಯಂತ್ರಣಕ್ಕೆ ಇದುವರೆಗೆ ಗಂಭೀರ ಪ್ರಯತ್ನಗಳು ಆಗಿಲ್ಲ. ಜಾಗತಿಕ ತಾಪಮಾನ ಹಾಗೂ ಮಾಲಿನ್ಯದ ದಾಳಿಯಿಂದ ದೇಶದ ಕೃಷಿ ಇಳುವರಿ ಪ್ರಮಾಣ ಸಹ ಕಡಿಮೆಯಾಗಿದೆ. ಆಹಾರ ಭದ್ರತೆ ಮೇಲೂ ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಭಾರತದಲ್ಲಿ ಸೌರಶಕ್ತಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸೌರ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಜಾಗ ಬೇಕು ಎನ್ನುವ ತಪ್ಪು ಕಲ್ಪನೆಯೇ ಇದಕ್ಕೆ ಕಾರಣ. ಜಲ ವಿದ್ಯುತ್‌ ಉತ್ಪಾದನೆಗಾಗಿ ಅಣೆಕಟ್ಟೆ ಕಟ್ಟಿದಾಗ ಆಗುವ ಭೂಮಿಯ ಮುಳುಗಡೆಗೆ ಹೋಲಿಸಿದರೆ ಸೌರ ವಿದ್ಯುತ್‌ ಉತ್ಪಾದನೆಗೆ ಬೇಕಾಗುವ ಪ್ರದೇಶ ತುಂಬಾ ಕಡಿಮೆ. ಇದನ್ನು ನೀತಿ ನಿರೂಪಕರು ಅರ್ಥಮಾಡಿಕೊಂಡಿಲ್ಲ.

ಡೀಸೆಲ್‌ ಇಂಜಿನ್‌ನಿಂದ ಉತ್ಪಾದನೆ ಮಾಡುವ ವಿದ್ಯುತ್‌ಗಿಂತ ಸೌರ ವಿದ್ಯುತ್‌ ಅಗ್ಗವಾಗಿದೆ. ದೇಶದ ಲಕ್ಷಾಂತರ ಹಳ್ಳಿಗಳಿಗೆ ಸೌರಶಕ್ತಿ ಮೂಲಕವೇ ವಿದ್ಯುತ್‌ ಪೂರೈಸಲು ಸಾಧ್ಯವಿದೆ. ಹವಾಮಾನ ಬದಲಾವಣೆಗೆ ಭಾರತದ ಪ್ರತಿಕ್ರಿಯೆ ಎರಡು ರೀತಿ ಇರಬೇಕು. ಕಲ್ಲಿದ್ದಲು ಮತ್ತು ತೈಲದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಅಲ್ಪಾವಧಿ ಕ್ರಮ. ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆಯನ್ನು ತಡೆಗಟ್ಟಲು ಜಗತ್ತಿನ ಉಳಿದ ದೇಶಗಳ ಜತೆ ಕೈಜೋಡಿಸುವುದು ದೀರ್ಘಾವಧಿ ಕ್ರಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT