ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಊಟಿ’ಯಲ್ಲಿ ಪ್ರೀತಿಯ ಹುಡುಕಾಟ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಾವೇರಿ ಗಲಭೆಯಾಗಿ ಇಪ್ಪತ್ತೈದು ವರ್ಷಗಳು. ಅದನ್ನು ‘ಊಟಿ’ ಮೂಲಕ ಮತ್ತೆ ನೆನಪಿಗೆ ತರುವ ಯತ್ನ ನಡೆಸಿದ್ದಾರೆ ನಿರ್ದೇಶಕ ಮಹೇಶ ಕುಮಾರ್. ಕಾವೇರಿ ಗಲಭೆಯ ಮಧ್ಯೆ ಪಲ್ಲವಿಸಿದ ಪ್ರೇಮಕಥೆಯನ್ನು ಡಾ. ಕೃಷ್ಣಮೂರ್ತಿ ಚಮರಂ ‘ಪ್ರೀತಿ ಅರಸಿ’ ಕಾದಂಬರಿಯಲ್ಲಿ ಚಿತ್ರಿಸಿದ್ದರು. ಅದನ್ನೇ ಚಿತ್ರರೂಪಕ್ಕೆ ತಂದಿದ್ದಾರೆ ಮಹೇಶ ಕುಮಾರ್.

ಈಗ ಆಗ... ಎಂದು ಮುಂದೂಡುತ್ತ ಬಂದಿದ್ದ ‘ಊಟಿ’ ಬಿಡುಗಡೆ ಕೊನೆಗೂ ನಿಗದಿಯಾಗಿದೆ. ಇದೇ ಶುಕ್ರವಾರ (ಏ. 29) ತೆರೆ ಕಾಣಲಿರುವ ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಕರ್ತರನ್ನು ಆಹ್ವಾನಿಸಲಾಗಿತ್ತು.

ಇದೊಂದು ಪ್ರೇಮಕಥೆ. ಕನ್ನಡದ ಹುಡುಗ, ಮಲೆಯಾಳಿ ಹುಡುಗಿ. ಈ ಇಬ್ಬರ ಮಧ್ಯೆ ಪ್ರೀತಿ ಮೂಡುತ್ತದೆ. ಆ ಸಮಯದಲ್ಲೇ ಭುಗಿಲೇಳುವ ಕಾವೇರಿ ಗಲಭೆಯಿಂದಾಗಿ (1991) ಊಟಿಯಲ್ಲಿನ ಕುಟುಂಬಗಳು ಸಂಕಟಕ್ಕೆ ಸಿಲುಕುತ್ತವೆ. ಆಗ ಈ ಪ್ರೇಮಿಗಳು ಎದುರಿಸುವ ಸವಾಲು ಏನು ಎಂಬುದನ್ನು ‘ಊಟಿ’ಯಲ್ಲಿ ಚಿತ್ರಿಸಲಾಗಿದೆ ಎಂಬ ವಿವರ ನಿರ್ದೇಶಕರಿಂದ ಸಿಕ್ಕಿತು.

‘ಈ ಚಿತ್ರದಲ್ಲಿ ಸ್ಟಾರ್‌ಗಳೇ ಇಲ್ಲ. ಸಿನಿಮಾ ಬಿಡುಗಡೆ ಮಾಡಿ ಕಷ್ಟ ನಷ್ಟ ಅನುಭವಿಸಬೇಡಿ ಎಂದು ಹಲವಾರು ಸ್ನೇಹಿತರು ನಮಗೆ ಸಲಹೆ ಮಾಡಿದರು. ಇದರಿಂದ ನಿರ್ಮಾಪಕ ಮೋಹನಕುಮಾರ್ ಕೂಡ ಹಿಂಜರಿದಿದ್ದರು’ ಎಂದು ನೆನಪಿಸಿಕೊಂಡ ಮಹೇಶ ಕುಮಾರ್, ಚಿತ್ರವನ್ನು ಕೆಲವು ಗಣ್ಯರಿಗೆ ತೋರಿಸಿದ ಬಳಿಕ ಅವರು ಕೊಟ್ಟ ಪ್ರೋತ್ಸಾಹ ತಮಗೆ ಹೊಸ ಹುರುಪು ನೀಡಿತು ಎಂದು ಸ್ಮರಿಸಿದರು.

ಇನ್ನೊಂದು ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೂ ನಾಯಕ ನಟ ಅವಿನಾಶ್ ಬಿಡುವು ಮಾಡಿಕೊಂಡು ಬಂದಿದ್ದರು. ಸರಳ ಕಥೆಯನ್ನು ಉತ್ತಮವಾಗಿ ನಿರೂಪಿಸಿದ ಮಹೇಶ ಕುಮಾರ್ ಅವರ ಪ್ರತಿಭೆಯನ್ನು ಹೊಗಳಿದರು. ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವ ನಾಯಕಿ ನೈನಾ, ‘ಊಟಿ ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ’ ಎಂದರು.

ರಾಜಕುಮಾರ್ ಅವರ ಕುರಿತ ಗ್ರಂಥಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಪಡೆದಿರುವ ದೊಡ್ಡಹುಲ್ಲೂರು ರುಕ್ಕೋಜಿ ಅವರನ್ನು ಸನ್ಮಾನಿಸಲಾಯಿತು. ‘ಊಟಿ ಚಿತ್ರವನ್ನು ನಾನು ಎರಡು ಸಲ ನೋಡಿದ್ದೇನೆ. ಎಲ್ಲ ಕಲಾವಿದರ ಅಭಿನಯವೂ ಚೆನ್ನಾಗಿದೆ’ ಎಂದು ರುಕ್ಕೋಜಿ ಬಣ್ಣಿಸಿದರು.

ಕುಮಾರ್ ಬಂಗಾರಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಬಿ.ಎಂ.ಗಿರಿರಾಜ್, ನಿರ್ಮಾಪಕ ಎಸ್.ಎ.ಗೋವಿಂದರಾಜ್, ಲಕ್ಷ್ಮೀ ಗೋವಿಂದರಾಜ್, ಉದ್ಯಮ ವಿಜಯಕುಮಾರ್, ಆಶಾ ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT