ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏರಬೇಕಾದ ಎತ್ತರ ಇನ್ನೂ ಇದೆ’

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ತಂಡದಲ್ಲಿ ಏಕೈಕ ಕನ್ನಡಿಗ ಅರವಿಂದ್‌
Last Updated 4 ಜುಲೈ 2015, 20:25 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿರುವ ಭಾರತ ತಂಡದಲ್ಲಿರುವ ಏಕೈಕ ಕನ್ನಡಿಗ ಎ.ಅರವಿಂದ್‌ ತಮ್ಮ ಅತ್ಯುತ್ತಮ ಆಟದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

ಇವರು ಗುರುವಾರ ಭೂತಾನ್‌ ಎದುರು ನಡೆದ ಪಂದ್ಯದಲ್ಲಿ 19 ಪಾಯಿಂಟ್ಸ್‌ ಗಳಿಸಿದರು. ರೀಬೌಂಡ್‌ ಗಳಲ್ಲಿ ಇವರ ಚಮತ್ಕಾರ ಗಮನ ಸೆಳೆಯುತಿತ್ತು.  ಪಾಯಿಂಟ್ಸ್‌ ಗಳಿಸು ವವರಿಗೆ ಇವರು ನೀಡುತ್ತಿದ್ದ ನೆರವು, ಉತ್ಕೃಷ್ಟ ಮಟ್ಟದ ಪಾಸ್‌ ಯಾವುದೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವಂತಹದ್ದು.

ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಹುಟ್ಟಿ ಬೆಳೆದ ಅರವಿಂದ್‌, ಎಳವೆಯಲ್ಲಿಯೇ ಆ ನಗರದ ಬ್ಯಾಸ್ಕೆಟ್‌ಬಾಲ್‌ ಅಂಗಣಗಳಲ್ಲಿ ಈ ಕ್ರೀಡೆಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅಲ್ಲಿನ ಕಾರ್ಮೆಲ್‌ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಶಾಲಾ ತಂಡದಲ್ಲಿ ಇವರು ಗಮನ ಸೆಳೆದಿದ್ದರು. 2008ರಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದಾಗ, ಕೋಚ್‌ ರವಿ ಪ್ರಕಾಶ್‌ ಅವರ ಮಾರ್ಗದರ್ಶನ ಇವರ ಪ್ರತಿಭೆಗೆ ಹೊಸ ಆಯಾಮ ನೀಡಿತು. 

ಅಲ್ಲಿನ ವಿವೇಕಾನಂದ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಪರ ಆಡುತ್ತಾ ಹೆಚ್ಚು ಅನುಭವ ಗಳಿಸಿದರು.  6 ಅಡಿ 6 ಇಂಚು ಎತ್ತರ ಇರುವ ಇವರು ಕರ್ನಾಟಕ ರಾಜ್ಯದ ಜೂನಿಯರ್‌ ಮತ್ತು ಸೀನಿಯರ್‌ ತಂಡಗಳನ್ನು ರಾಷ್ಟ್ರೀಯ ಕೂಟಗಳಲ್ಲಿ ಪ್ರತಿನಿಧಿಸಿದ್ದಾರೆ. ವಿಜಯ ಬ್ಯಾಂಕ್‌ ಉದ್ಯೋಗಿಯಾಗಿರುವ ಇವರು  ಇದೀಗ ಮೊದಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಿ ಮಿಂಚಿನ ಸಾಮರ್ಥ್ಯ ತೋರಿ ದ್ದಾರೆ.  ಅರವಿಂದ್‌ ಜತೆಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

* ಈ ಕ್ರೀಡೆಯ ಯಾವ ವಿಭಾಗದಲ್ಲಿ ನೀವು  ವಿಶೇಷ ನೈಪುಣ್ಯತೆ ಹೊಂದಿದ್ದೀರಿ?
‘ಬುಟ್ಟಿ’ಯತ್ತ ಗುರಿ ಇಟ್ಟು ಮುನ್ನುಗ್ಗುವ ಜತೆ ಆಟಗಾರರಿಗೆ ಕರಾರು ವಾಕ್ಕಾಗಿ ಚೆಂಡನ್ನು ತಲುಪಿಸುವುದು, ರೀಬೌಂಡ್‌ ಚೆಂಡುಗಳ ಸದುಪಯೋಗ ಪಡಿಸುವುದು.

* ಉತ್ತಮ ತಂತ್ರಗಳಲ್ಲಿ ಸುಧಾರಣೆಗೆ ಏನೇನು ಮಾಡ್ತಿದ್ದೀರಿ ?
ನಮ್ಮ ರಾಷ್ಟ್ರೀಯ ತಂಡದಲ್ಲಿ ಇದಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ತರಬೇತಿಯ ವ್ಯವಸ್ಥೆ ಇದೆ.

* ಸದ್ಯಕ್ಕೆ ನಿಮ್ಮ ಹೆಗ್ಗುರಿ?
ರಾಷ್ಟ್ರೀಯ ತಂಡದಲ್ಲಿ ಇದೀಗ ಸಿಕ್ಕಿರುವ ಸ್ಥಾನವನ್ನು ಉಳಿಸಿಕೊಳ್ಳು ವುದು. ಇದಕ್ಕಾಗಿ ನಿರಂತರ ಅಭ್ಯಾಸ ನಡೆಸುವುದು. ಈಗಿನ್ನೂ ನಾನು ಅಂಬೆಗಾಲಿಟ್ಟಿದ್ದೇನೆ. ಸಾಗಬೇಕಾದ ದಾರಿ ಬಲು ದೂರ ಇದೆ. ವಯೋಮಿತಿ ವಿಭಾಗದಲ್ಲಿ ಆಡುತ್ತಿದ್ದಾಗಿನಿಂದಲೂ ನನ್ನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ ಬಂದಿರುವ ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜ್‌ ಸರ್‌ ಮಾರ್ಗದರ್ಶನದಲ್ಲಿ ಏರಬೇಕಾದ ಎತ್ತರ ಬಹಳ ಇದೆ.

* ವಿದೇಶದ ಲೀಗ್‌ಗಳಲ್ಲಿ ಆಡಲು ಅವಕಾಶ ಸಿಕ್ಕಿದರೆ ಹೋಗುತ್ತೀರಾ ?
ಹೋಗುತ್ತೇನೆ. ರಾಷ್ಟ್ರೀಯ ಮತ್ತು ರಾಜ್ಯದ ಜವಾಬ್ದಾರಿ ನಿರ್ವಹಿಸಲು ಅನಾನುಕೂಲ ಆಗದ ರೀತಿಯಲ್ಲಿ ವೇಳಾ ಪಟ್ಟಿ ಹೊಂದಿಸಿಕೊಳ್ಳಲು ಯತ್ನಿಸುತ್ತೇನೆ. ಜಪಾನ್‌, ಆಸ್ಟ್ರೇಲಿಯ, ಫಿಲಿಪ್ಪೀನ್ಸ್‌, ಹಾಂಕಾಂಗ್‌ಗಳ ಲೀಗ್‌ಗಳಲ್ಲಿ ಭಾರತದ  ಉತ್ತಮ ಆಟಗಾರರಿಗೆ ಬೇಡಿಕೆ ಇದ್ದೇ ಇದೆ.

* ನಿಮ್ಮ ಮೇಲೆ ಪ್ರಭಾವ ಬೀರಿರುವ ಮತ್ತು ನಿಮ್ಮ ನೆಚ್ಚಿನ ಆಟಗಾರ ?
ಅಮೆರಿಕಾದ ಎನ್‌ಬಿಎಯಲ್ಲಿ ಮೆಂಫಿಸ್‌ ಗ್ರಿಜ್ಲಿಸ್‌ ಪರ ಆಡುವ ವಿನ್ಸೆಂಟ್‌ ಕಾರ್ಟರ್‌.

* ಭಾನುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದ ಬಗ್ಗೆ...
ದಕ್ಷಿಣ ಏಷ್ಯಾದ ಮಟ್ಟಿಗೆ ಶ್ರೀಲಂಕಾ ಉತ್ತಮ ತಂಡವೇನೋ ಹೌದು. ಆದರೆ ಅವರನ್ನು ನಾವು ನಿರಾಯಾಸವಾಗಿ ಸೋಲಿಸುತ್ತೇವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT