ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒನ್‌ ಟೇಕ್’ ಅರ್ಚನಾ

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಸಿನಿಮಾ ಬದುಕಿಗೆ ಕಾಲಿಟ್ಟಿರುವುದೇ ಹೆಸರು ಮಾಡಲು. ಅವಕಾಶಗಳು ಬೇಕೆಂದು ಸಣ್ಣಪುಟ್ಟ ಚಿತ್ರಗಳಲ್ಲಿ ನಟಿಸುವುದಿಲ್ಲ. ಕೆಲವೇ ದೊಡ್ಡ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಿದರೂ ಸಾಕು’ –ಈಗ ತಾನೆ ಚಿತ್ರರಂಗಕ್ಕೆ ಅಡಿಯಿಟ್ಟಿರುವ ಹೊಸ ಪ್ರತಿಭೆ ಅರ್ಚನಾ ಅವರ ನಿಲುವು ಇದು.

ಬಣ್ಣದ ಬದುಕಿಗೆ ಕಾಲಿಡುವಾಗಲೇ ಹಲವು ನೀತಿ ನಿಯಮಗಳನ್ನು ಅರ್ಚನಾ ಹಾಕಿಕೊಂಡಿದ್ದಾರೆ. ಅವರ ಕನಸುಗಳ ಹರಿವೂ ಹಿರಿದು. ‘ಹತ್ತು ಪ್ರಮುಖವಲ್ಲದ ಚಿತ್ರಗಳಲ್ಲಿ ನಟಿಸುವ ಬದಲು, ನಾಲ್ಕೈದು ದೊಡ್ಡ ಬ್ಯಾನರ್‌ನ ಚಿತ್ರದಲ್ಲಿ ನಟಿಸುವುದೇ ಸರಿ. ಚಿತ್ರರಂಗಕ್ಕೆ ಕಾಲಿಟ್ಟದ್ದೇ ‘ಕ್ಲಿಕ್‌’ ಆಗಲು. ಸಣ್ಣಪುಟ್ಟ ನಿರ್ದೇಶಕರ ಚಿತ್ರದಲ್ಲಿ ನಟಿಸಿ ಹೆಸರು ಗಳಿಸದೆ ವೃತ್ತಿಬದುಕನ್ನು ಹಾಳುಮಾಡಿಕೊಳ್ಳುವುದು ಇಷ್ಟವಿಲ್ಲ’ ಎನ್ನುತ್ತಾರೆ ಅವರು.

ಅರ್ಚನಾ ನಟಿಸಿರುವ ಚಿತ್ರಗಳು ಇನ್ನೂ ತೆರೆಕಂಡಿಲ್ಲ. ಆದರೆ ಈಗಾಗಲೇ ಹಲವು ಚಿತ್ರಗಳನ್ನು ಅವರು ಕೈಯಲ್ಲಿರಿಸಿಕೊಂಡಿದ್ದಾರೆ. ನಾಯಕಿಯಾಗಿ ಬೆಳೆಯಬೇಕು ಎಂಬ ಮಹದಾಸೆ ಇದ್ದರೂ ತರಾತುರಿಯ ಓಟ ಬೇಡ ಎಂಬ ಸಂಯಮದ ನಡಿಗೆ ಅವರದು. ಎರಡನೇ ಪಿಯುಸಿ ಓದುತ್ತಿರುವ ಅರ್ಚನಾರನ್ನು ಬಣ್ಣದ ಬದುಕಿಗೆ ಕರೆತಂದಿರುವುದು ‘ಮಸ್ತ್‌ ಮೊಹಬ್ಬತ್‌’ ಚಿತ್ರ. ನಟ ಪ್ರೇಮ್‌ಗೆ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ತಮ್ಮ ಪಾತ್ರದ ಬಗ್ಗೆ ಖುಷಿಯಿದೆ. ಚಿತ್ರದಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯ ನೆಗೆಟಿವ್‌ ಛಾಯೆಯುಳ್ಳ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಮೊದಲ ಚಿತ್ರದಲ್ಲಿಯೇ ಪ್ರೇಮ್‌ರಂಥ ನಟರೊಂದಿಗೆ ತೆರೆಹಂಚಿಕೊಳ್ಳುವ ಅವಕಾಶ ಸಿಕ್ಕಿದೆ ಎಂಬ ಖುಷಿ ಅವರದು.

‘ಮರ್ಧಿನಿ’ ಮತ್ತು ‘ಪನ್ನೀರ ಧಾರೆ’ ಎಂಬ ಹೊಸ ಚಿತ್ರಗಳ ಜತೆ ವಿ. ಮನೋಹರ್‌ ಅವರ ನಿರ್ಮಾಣದ ಚಿತ್ರಕ್ಕೂ ಅರ್ಚನಾ ಆಯ್ಕೆಯಾಗಿದ್ದಾರೆ. ‘ಮರ್ಧಿನಿ’ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಆ್ಯಕ್ಷನ್‌ ಕೂಡ ಇದೆ. ಕುದುರೆ ಸವಾರಿ ಕಲಿಯಬೇಕಿದೆ ಎಂದು ಉತ್ಸಾಹದಿಂದ ಹೇಳುವ ಅವರಿಗೆ ಮನೋಹರ್‌ ಅವರ ನಿರ್ಮಾಣದ ಚಿತ್ರದ ಪಾತ್ರ ಹೆಚ್ಚು ಇಷ್ಟವಾಗಿದೆ. ಚಿತ್ರದ ಶೇ.70–80 ಭಾಗ ತಮ್ಮ ಮೇಲೆಯೇ ಕಥೆ ಸಾಗುತ್ತದೆ. ಇದು ಹಾಸ್ಯಮಯ ಚಿತ್ರ. ತಮ್ಮ ಪಾತ್ರವೂ ಹಾಸ್ಯದ ನೆಲೆಯಲ್ಲಿಯೇ ಸಾಗುತ್ತದೆ ಎಂದು ವಿವರಿಸುತ್ತಾರೆ.

ಚಿಕ್ಕಂದಿನಿಂದಲೂ ನಟನೆಯತ್ತ ಸೆಳೆತ. ಟೀವಿ, ಸಿನಿಮಾಗಳಲ್ಲಿ ನಟಿಯರನ್ನು ನೋಡಿ ನಾನೂ ಇವರಂತೆ ಆಗಬೇಕು ಎಂಬ ಬಯಕೆ. ನಟನೆಯ ಅಭ್ಯಾಸ ಶುರುವಾಗಿದ್ದೇ ಅನುಕರಣೆಯ ಮೂಲಕ. ಆಗಲೇ ಮಾನಸಿಕ ಮತ್ತು ದೈಹಿಕವಾಗಿ ಸಿದ್ಧತೆ ನಡೆಸಿದ್ದರು. ಎಕ್ಸ್‌ಪ್ರೆಷನ್‌ಗಳು ಒಲಿಯಲಿ ಎಂದು ಒಂದು ತಿಂಗಳು ನಟನೆಯ ಕಲಿಕೆ ಮಾಡಿದರು.

ಓದು ಮತ್ತು ನಟನೆ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದರಿಂದ ಶಿಕ್ಷಣದ ಬಗ್ಗೆ ಆತಂಕವಿಲ್ಲ. ಹೆಚ್ಚೆಂದರೆ 30–35 ದಿನ ಚಿತ್ರೀಕರಣ ಇರುತ್ತದೆ. ಉಳಿದ ಅವಧಿಯಲ್ಲಿ ಓದುವುದಕ್ಕಿಂತ ಬೇರೇನು ಕೆಲಸವಿರುತ್ತದೆ ಎನ್ನುವ ಅವರಿಗೆ, ಎಂ.ಸಿಎ ಪದವಿ ಪಡೆಯುವ ಗುರಿ ಇದೆ. ‘ಮಸ್ತ್‌ ಮೊಹಬ್ಬತ್‌’ ಚಿತ್ರದಲ್ಲಿ ನಟಿಸಿದ್ದು ಅವರಿಗಿನ್ನೂ ಕನಸಿನಂತೆ ತೋರುತ್ತಿದೆ. ಆಡಿಷನ್‌ನಲ್ಲಿ ಕೊಟ್ಟ ಸಂಭಾಷಣೆಯನ್ನು ಮೊದಲ ಪ್ರಯತ್ನಕ್ಕೇ ಆಯ್ಕೆಯಾಗುವಂತೆ ಒಪ್ಪಿಸಿದ್ದು, ಮರುದಿನವೇ ಫೋಟೊಶೂಟ್‌, ಅದರ ಮರುದಿನವೇ ಚಿತ್ರೀಕರಣ... ಅರ್ಚನಾರ ಖುಷಿ ಹಿಗ್ಗಲು ಇನ್ನೇನು ಬೇಕು?
ಮೊದಲ ಅನುಭವವಾದರೂ ಚಿತ್ರೀಕರಣದ ವೇಳೆ ಅರ್ಚನಾ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರಂತೆ. ‘ಒನ್‌ ಟೇಕ್ ನಟಿ’ ಎಂದು ಎಲ್ಲರೂ ಗುರ್ತಿಸುವ ಮಟ್ಟಿಗೆ ರೀಟೇಕ್‌ಗಳಿಲ್ಲದೆ ಶಾಟ್‌ಗಳನ್ನು ಮುಗಿಸಿದ ಹೆಮ್ಮೆ ಅವರದು.

ಅರ್ಚನಾ ತಮ್ಮ ಸುತ್ತ ಭಾಷೆಯ ಬೇಲಿ ಹಾಕಿಕೊಂಡಿಲ್ಲ. ಕನ್ನಡದಲ್ಲಿ ಹೆಸರು ಮಾಡಿದ ಬಳಿಕ ಬೇರೆ ಭಾಷೆಯತ್ತ ಜಿಗಿಯಬೇಕು ಎಂದು ಈಗಲೇ ಸಿದ್ಧತೆ ನಡೆಸಿದ್ದಾರೆ. ಅವರದು ಇಡೀ ದಕ್ಷಿಣ ಭಾರತ ಗುರ್ತಿಸುವಂಥ ನಟಿ ತಾನಾಗಬೇಕೆಂಬ ಆಸೆ. ಗ್ಲಾಮರ್‌ ವಿಷಯದಲ್ಲಿ ತೀರಾ ಮಡಿಮೈಲಿಗೆ ಅವರಿಗಿಲ್ಲ. ಆದರೆ ಕಥೆಗೆ ಬೇಕಾದಷ್ಟು ಮಾತ್ರ ಗ್ಲಾಮರ್‌. ಅನಗತ್ಯ ದೇಹಪ್ರದರ್ಶನಕ್ಕೆ ಒಲ್ಲೆ ಎನ್ನುತ್ತಾರೆ ಅವರು. ದರ್ಶನ್‌, ಯಶ್‌, ಪುನೀತ್‌ ಮುಂತಾದ ನಟರ ಜತೆ ಒಂದೊಂದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೂ ಸಾಕು ಎಂದು ಕಾಯುತ್ತಿದ್ದಾರೆ. ಯೋಗರಾಜ ಭಟ್‌ ನಿರ್ದೇಶನದ ಚಿತ್ರಕ್ಕೆ ಬಣ್ಣ ಹಚ್ಚುವುದು ಅವರ ಪರಮ ಗುರಿ.
      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT