ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಲುಮೆ ಸಿರಿಯ’ ದುರ್ಗ

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಒಲುಮೆ ಸಿರಿಯಾ ಕಂಡು... ಬಯಕೆ ಸಿಹಿಯಾ ಉಂಡು... ಪ್ರೀತಿ ಮಾತಾಡಿದೆ... ಬಾಳು ರಂಗಾಗಿದೆ... 80ರ ದಶಕದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ ಜೋಡಿಯ ಚಿತ್ರ ‘ಬಂಗಾರದ ಜಿಂಕೆ’ಯ ಈ ಹಾಡು ಇಂದಿಗೂ ಜನಪ್ರಿಯ. ಈ ಹಾಡಿಗೆ ಇನ್ನಷ್ಟು ಮೆರುಗು ತಂದುಕೊಟ್ಟದ್ದು ಹಾಡಿನ ಚಿತ್ರೀಕರಣ ನಡೆದಿರುವ ಜಾಗ. ಹೌದು, ಈ ಜಾಗವೇ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ.

ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಈ ದುರ್ಗದ ಕೋಟೆ ಸಮುದ್ರಮಟ್ಟದಿಂದ ಮೂರು ಮುಕ್ಕಾಲು ಸಾವಿರ ಅಡಿ ಎತ್ತರದಲ್ಲಿದೆ. ಮಧುಗಿರಿ ಪಾಳೇಗಾರರ ಇತಿಹಾಸವು ಇಲ್ಲಿನ ಕಲ್ಲುಕಲ್ಲುಗಳಲ್ಲೂ ಗೋಚರಿಸುತ್ತದೆ. 17ನೆಯ ಶತಮಾನದಲ್ಲಿ ಈ ಕೋಟೆ ಕಟ್ಟಿದವರು ಮಧುಗಿರಿಯ ಪಾಳೆಗಾರ ವಂಶಕ್ಕೆ ಸೇರಿದ ಚನ್ನಪ್ಪಗೌಡ. ಈ ಕೋಟೆ ಬಹಳಷ್ಟು ಕಾಲ ಮಧುಗಿರಿ ಪಾಳ್ಯರ ವಶದಲ್ಲಿತ್ತು. ನಂತರ ಮರಾಠರು ವಶಮಾಡಿ ಕೊಂಡರು. ಬಹಳ ವರ್ಷ ಕಳೆದ ನಂತರ ಮೈಸೂರಿನ ಚಿಕ್ಕದೇವರಾಯ ಒಡೆಯರ್ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು.

ಮೂರು ಹಂತದ ಕೋಟೆ
ಈ ಕೋಟೆ ಮೂರು ಹಂತದಲ್ಲಿದೆ. ಮೊದಲನೆಯ ಹಂತದಲ್ಲಿ ಒಂದು ಪುಷ್ಕರಿಣಿಯಿದೆ. ಬಹುಶಃ ಕೋಟೆಯಲ್ಲಿ ವಾಸಿಸುತ್ತಿದ್ದ ಜನರಿಗೆ ನೀರಿಗೆ ಇದೇ ಆಧಾರವಿರಬಹುದು. ಬದಿಗೆ ಸಣ್ಣ ಗುಡಿಯಿದ್ದು ಆಕರ್ಷಣೀಯವಾಗಿದೆ. ಎರಡನೆಯ ಹಂತದಲ್ಲೂ ಇತಿಹಾಸ ಬಿಂಬಿಸುವ ಕುರುಹುಗಳಿವೆ. ಇಲ್ಲಿನ ವೈಶಿಷ್ಟ್ಯ ಎಂದರೆ ಯಾವುದೇ ಭಾಗ ನೋಡಿದರೆ ಅದು ಕೋಟೆಯ ಕೊನೆಯೆಂಬಂತೆ ಭಾಸವಾಗುತ್ತದೆ.  ಆದರೆ ಸನಿಹದಲ್ಲಿ ನೋಡಿದಾಗಲೇ ಅಲ್ಲಿರುವ ಗುಪ್ತ ದಾರಿ ಅರಿವಿಗೆ ಬರುತ್ತದೆ.

ಶತ್ರುಗಳನ್ನು ದಾರಿ ತಪ್ಪಿಸುವ ತಂತ್ರಕ್ಕಾಗಿ ಹಾಗೂ ಶತ್ರುಗಳಿಂದ ತಪ್ಪಿಸಿಕೊಳ್ಳಲು ಈ ಮಾರ್ಗ ರಚಿಸಿರುವುದು ಪಾಳೇಗಾರರ ಬುದ್ಧಿವಂತಿಕೆಗೆ ಸಾಕ್ಷಿಯಂತಿದೆ. ಆದರೆ ಇಲ್ಲಿನ ಅನೇಕ ಭಾಗಗಳಿಗೆ ನಿಧಿ ಅನ್ವೇಷಣೆಗಾರರ ಕಾಟವಿದೆ. ನಿಧಿಯ ಹುಡುಕಾಟದಲ್ಲಿ  ಕೋಟೆಯ ಭಾಗಗಳನ್ನು ಎಲ್ಲೆಂದರಲ್ಲಿ ಕೆಡವಿ ಹಾಳು ಮಾಡಲಾಗಿದೆ. ಮೂರನೆಯ ಹಂತ ದಲ್ಲಿ ದುರ್ಗದ ತುತ್ತತುದಿಯಲ್ಲಿ ಕೋಟೆಯ ಕಾವಲಿಗಾಗಿ ಮೀಸಲಾದ ಸ್ಥಳ. ಇಲ್ಲಿ ನಿಂತರೆ ದೂರದ ಮಧುಗಿರಿಯ ಮನಮೋಹಕ ದೃಶ್ಯ ಸವಿಯಬಹುದು.

ಮಾರ್ಗ ಹೀಗೆ
ಚಾರಣಪ್ರಿಯರಿಗೆ ಇದು ಹೇಳಿ ಮಾಡಿಸಿದ ಬೆಟ್ಟ. ಬೆಂಗಳೂರಿನಿಂದ ಬರುವುದಾದರೆ ದಾಬಸ್‌ಪೇಟೆ ಮಾರ್ಗವಾಗಿ ಕೊರಟಗೆರೆಗೆ ತಲುಪಿ ಅಲ್ಲಿಂದ ತುಂಬಾಡಿ ಊರಿನಿಂದ ಎಡಕ್ಕೆ ತಿರುಗಿ ಮೂರು ಕಿ.ಮೀ ಸಾಗಿ ಬಲಕ್ಕೆ ತಿರುಗಿದರೆ ಚನ್ನರಾಯನದುರ್ಗ ತಲುಪಬಹುದು. ಒಟ್ಟಾರೆ ಸುಮಾರು 100 ಕಿ.ಮೀ ದೂರವಾಗುತ್ತದೆ. ತುಮಕೂರಿನಿಂದ ಉತ್ತರಕ್ಕೆ ಮಧುಗಿರಿ ಮಾರ್ಗವಾಗಿ ಕೊರಟಗೆರೆಯಿಂದಲೂ ಹೋಗಬಹುದು. ಇಲ್ಲಿಂದ ಹೋದರೆ ಸುಮಾರು 40 ಕಿ.ಮೀ ದೂರವಾಗುತ್ತದೆ. ಚನ್ನರಾಯನದುರ್ಗಕ್ಕೆ ಬಂದವರು ಅಲ್ಲಿಂದ ಸಮೀಪದಲ್ಲೇ ಇರುವ ಮಧುಗಿರಿಯ ಐತಿಹಾಸಿಕ ಏಕಶಿಲಾ ಬೆಟ್ಟವನ್ನೂ ನೋಡಬಹುದು. ಚಾರಣಕ್ಕೆ ಅಗತ್ಯವಿರುವ ಎಲ್ಲವನ್ನೂ ಕೊಂಡೊಯ್ಯುವುದು ಉತ್ತಮ. ಸ್ಥಳೀಯರ ಸಹಕಾರ ಪಡೆದರೆ ಬೆಟ್ಟ ಏರುವುದು ಇನ್ನೂ  ಸುಲಭ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT