ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓಂ ನಮಃ ಶಿವಾಯ’

Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಭಾರತೀಯ ವಿವಿಧ ಧರ್ಮಗಳಲ್ಲಿ ಪರಾತ್ಪರ ಪರವಸ್ತುವಾದ ಪರಮಾತ್ಮನನ್ನು ಅರಿಯಲು ಮತ್ತು ಅರಿತು ಅವನಲ್ಲಿ ಒಂದಾಗಲು ಓಂಕಾರಯುಕ್ತ ನಾಮ ಜಪ ಅಥವಾ ಮಂತ್ರಪಠನಕ್ಕೆ ವಿಶಿಷ್ಟಸ್ಥಾನ ಕಲ್ಪಿಸಲಾಗಿದೆ. ಪರಮಾತ್ಮನ ಸ್ತುತಿಗೆ ಸಂಬಂಧಿಸಿದ ಮಂತ್ರಗಳಲ್ಲಿ ‘ಓಂ ನಮಃ ಶಿವಾಯ’ ಎಂಬುದೂ ಕೂಡ ಶ್ರೇಷ್ಠವಾದ ಮಂತ್ರವೆಂದು ತಿಳಿಯಲಾಗಿದೆ.

ಈ ಮಂತ್ರದಲ್ಲಿ ಆರು ಅಕ್ಷರಗಳಿದ್ದು, ಅವುಗಳಲ್ಲಿ ಮೊದಲ ಅಕ್ಷರ ‘ಓಂ’ ಕಾರವನ್ನು ನಾದ ಸ್ವರೂಪಿಯಾದ ಪರಮಾತ್ಮನ ಸಂಕೇತವೆಂದು ಪರಶಿವ ಸ್ವರೂಪವೆಂದು ಉಪನಿಷತ್ತುಗಳಾದಿಯಾಗಿ ಬಹುತೇಕ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ನಮ್ಮ ಅರಿವಿಗೆ ನಿಲುಕುವ ವೇದಾದಿಗಳೆಲ್ಲವೂ ಓಂಕಾರದಿಂದ ಹೊರಬಂದಿವೆ. ಅವು ಶಬ್ದರಾಶಿಯಾಗಿದ್ದರೂ ಓಂಕಾರದಲ್ಲಿ ನಿಶ್ಶಬ್ದವಾಗಿರುತ್ತವೆ.

ಓಂಕಾರವನ್ನು ಪ್ರಣವವೆಂದೂ ಕರೆಯಲಾಗಿದೆ. ಈ ಪ್ರಣವಾಕ್ಷರದಿಂದಲೇ ಪರಬ್ರಹ್ಮವು ಪ್ರಕಟಗೊಳ್ಳುತ್ತದೆ. ಆದ್ದರಿಂದ ಓಂಕಾರವನ್ನು ಅವಲಂಬಿಸಿಯೇ ಸರ್ವಶ್ರೇಷ್ಠನಾದ ಮತ್ತು ಅಮೃತಸ್ವರೂಪನಾದ ಪರಮಾತ್ಮನನ್ನು ಅರಿಯಲು ಮತ್ತು ಅವನಲ್ಲಿ ಒಂದಾಗಲು ಸಾಧ್ಯವಾಗುತ್ತದೆ. ಪರಬ್ರಹ್ಮಸ್ವರೂಪವಾದ ಓಂಕಾರದ ಮೂಲಕ ಪರಮಾತ್ಮನ ಉಪಾಸನೆ ಮಾಡುವವರು ಪೊರೆ ಕಳಚಿದ ಸರ್ಪದಂತೆ ಸಂಸಾರದ ಎಲ್ಲ ಕರ್ಮಗಳಿಂದ ಮುಕ್ತರಾಗಿ ಪರಾತ್ಪರ ಪರವಸ್ತುವನ್ನು ಕೂಡಿಕೊಳ್ಳುತ್ತಾರೆ ಎಂದು ಪ್ರಶ್ನೋಪನಿಷತ್ತಿನಲ್ಲಿ ವಿವರಿಸಲಾಗಿದೆ.

‘ಓಂ’ ಕಾರದಲ್ಲಿ ಅ+ಉ+ಮ್ ಎಂಬ ಮೂರು ಮಾತ್ರೆಗಳಿದ್ದು, ಅವು ಪೂರ್ಣ ಬ್ರಹ್ಮ ಪರಮಾತ್ಮನ ಮೂರು ಚರಣ ಅಥವಾ ಪಾದಗಳಾಗಿವೆ. ಮೊದಲ ಮಾತ್ರೆಯಾಗಿರುವ ‘ಅ’ ಕಾರವು ಅರ್ಥವುಳ್ಳ ಎಲ್ಲ ಶಬ್ದಗಳಲ್ಲಿಯೂ ವ್ಯಾಪ್ತವಾಗಿದ್ದು, ಯಾವ ವರ್ಣವೂ ಅಕಾರ ರಹಿತವಾಗಿರುವುದಿಲ್ಲ. (ಅ ಕಾರೋ ವೈ ಸರ್ವ ವಾಕ್). ಇದು ಮೊದಲ ಪಾದ. ‘ಉ’ ಕಾರವು ಅ ಮತ್ತು ಮ್ ಮಾತ್ರೆಗಳ ಮಧ್ಯದಲ್ಲಿದ್ದು, ಅವೆರಡರ ಜೊತೆಗೂ ಘನಿಷ್ಠವಾದ ಸಂಬಂಧವನ್ನು ಹೊಂದಿರುವುದರಿಂದ ‘ಅ’ ಕಾರಕ್ಕಿಂತ ಶ್ರೇಷ್ಠವೆಂದು ಭಾವಿಸಲಾಗಿದೆ.

ಇದು ಎರಡನೆಯ ಪಾದ. ‘ಮ್’ ಮಾತ್ರೆಯನ್ನು ‘ಅ’ ಮತ್ತು ‘ಉ’ಗಳ ನಂತರ ಉಚ್ಚರಿಸಲಾಗುತ್ತಿದ್ದು, ‘ಮ್’ ಎಂದುಚ್ಚರಿಸುತ್ತಿದ್ದಂತೆಯೇ ನಮ್ಮ ತುಟಿಗಳು ಮುಚ್ಚಿಕೊಳ್ಳುತ್ತವೆ. ಅಂದರೆ ಅ, ಉ ಗಳೆರಡೂ ಅದರಲ್ಲಿ ಲೀನವಾಗುತ್ತವೆ. ಇದು ಮೂರನೆಯ ಪಾದ. ಅ+ಉ+ಮ್ ಗಳು ಪರಮಾತ್ಮನ ಸಗುಣ, ಸಾಕಾರ ರೂಪದ ಮೂರು ಪಾದಗಳೆನಿಸಿದರೆ ಅವುಗಳಿಂದ ಕೂಡಿದ ಓಂಕಾರವು ಪರಮಾತ್ಮನ ನಿರ್ಗುಣ ನಿರಾಕಾರ ರೂಪದ ನಾಲ್ಕನೆಯ ಪಾದವಾಗಿದೆ.

‘ಓಂ ನಮಃ ಶಿವಾಯ’ ಮಂತ್ರದಲ್ಲಿ ಓಂಕಾರವು ನಿಷ್ಕಲ ಶಿವನನ್ನು ಬೋಧಿಸಿದರೆ ಉಳಿದ ಪಂಚಾಕ್ಷರಗಳು ಸಕಲ ಪಂಚಬ್ರಹ್ಮರೂಪ ಶಿವನನ್ನು ಬೋಧಿಸುತ್ತವೆ. ನಿಷ್ಕಲ ಶಿವನು ಶುದ್ಧಜ್ಞಾನ ಸ್ವರೂಪನಾಗಿದ್ದು, ಸಕಲ ಶಿವನು ಪ್ರಪಂಚಸ್ವರೂಪನಾಗಿದ್ದಾನೆ. ಹೀಗೆ ಉಭಯ ಸ್ವರೂಪನಾದ ಶಿವನು ಷಡಕ್ಷರ ಮಂತ್ರದಲ್ಲಿ ಅಡಕನಾಗಿರುವನು. ಸಕಲ ನಿಷ್ಕಲ ಸ್ವರೂಪನಾದ ಪರಶಿವನಿಗೆ ನಮಸ್ಕಾರವೆಂದು ಇದರರ್ಥವಾಗುತ್ತದೆ.

ಭಕ್ತಿಭಂಡಾರಿ ಬಸವಣ್ಣನವರು-’‘ನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ, ಓಂನಮಃಶಿವಾಯ, ಓಂನಮಃಶಿವಾಯ ಎನುತಿರ್ದೆನಯ್ಯ, ಓಂನಮಃಶಿವಾಯ ಎಂಬ ಮಂತ್ರ ಸರ್ವಜನವಶ್ಯ ಕೂಡಲಸಂಗಮದೇವಾ’ ಎನ್ನುತ್ತಾರೆ. ಪ್ರಚಲಿತ ಏಳು ಕೋಟಿ ಮಂತ್ರಗಳಲ್ಲಿಯೇ ಇದು ಸರ್ವಶ್ರೇಷ್ಠವಾಗಿದ್ದು, ಪರಶಿವನ ನಾಮದಿಂದ ಕೂಡಿದೆ.

‘ಇದು ಕಾರಣ ಪರತತ್ವಜ್ಞಾನಮಯನಾಗಿ ಓಂನಮಃಶಿವಾಯ ಎಂಬ ಶಿವಷಡಕ್ಷರ ಮಂತ್ರವನೆ ಜಪಿಸಿ ಭವಸಾಗರವನೇ ದಾಟಿ ಸುಖಿಯಾದೆವು’ ಎಂಬುದು ಶಿವಶರಣರ ವಾಣಿ. ಮುತ್ತು ನೀರಿನಲ್ಲಿಯೇ ಹುಟ್ಟಿ ಮತ್ತೆ ನೀರಾಗದಂತೆ ಓಂ ನಮಃ ಶಿವಾಯ ಮಂತ್ರ ಜಪಿಸಿ ಭವಸಾಗರ ದಾಟಿದವರು ಮತ್ತೆ ಭವ (ಹುಟ್ಟು-ಸಾವುಗಳೆಂಬ ಚಕ್ರ)ಕ್ಕೆ ಬಾರರು ಎಂಬುದು ಇದರ ಸಾರರೂಪವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT