ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಟ್ಟೆ’ ಕಟ್ಟಲು ಹಣ ಪೋಲು!

Last Updated 29 ಸೆಪ್ಟೆಂಬರ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲೇ ಆರ್ಥಿಕ ಸಂಕಷ್ಟದಿಂದ ಬಸವಳಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಸಂಪನ್ಮೂಲವನ್ನು ಹೇಗೆ ಪೋಲು ಮಾಡುತ್ತದೆ ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ.

ರಾಜರಾಜೇಶ್ವರಿನಗರದ ಗುರುದತ್ತ ಬಡಾವಣೆಯ ಖಾಲಿ ನಿವೇಶನಗಳ ಮುಂದೆ ಎರಡು ಅಡಿ ಎತ್ತರದ ಕಲ್ಲಿನ ಗೋಡೆ (ಕಟ್ಟೆ) ಕಟ್ಟಲಾಗಿದ್ದು, ಅದನ್ನು ಯಾವ ಉದ್ದೇಶಕ್ಕೆ ನಿರ್ಮಿಸಲಾಗಿದೆ ಎಂಬುದು ಸ್ವತಃ ಬಿಬಿಎಂಪಿ ಅಧಿಕಾರಿಗಳಿಗೇ ಗೊತ್ತಿಲ್ಲ. ಯಾವ ಯೋಜನೆ ಅಡಿಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಸಹ ಅವರ ಬಳಿಯಿಲ್ಲ.

ರಾಜಕಾಲುವೆ ಹಾಗೂ ಚರಂಡಿಗಳ ತಡೆಗೋಡೆ ಬಿದ್ದು ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ ಘಟನೆಗಳು ಕಣ್ಣಮುಂದೆಯೇ ಇವೆ. ಚರಂಡಿ ನೀರು ಬಡಾವಣೆಗೆ ನುಗ್ಗದಂತೆ ತಡೆಗೋಡೆ ನಿರ್ಮಿಸಲು ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದರೂ ಕಿವಿಗೆ ಹಾಕಿಕೊಳ್ಳದ ಬಿಬಿಎಂಪಿ, ಖಾಲಿ ನಿವೇಶನಗಳ ಮುಂದೆ ಗೋಡೆ ನಿರ್ಮಿಸಿದ್ದು ಏಕೆ ಎಂದು ಅಲ್ಲಿನ ನಿವಾಸಿಗಳು ಪ್ರಶ್ನಿಸಿದ್ದಾರೆ.

ರಾಜರಾಜೇಶ್ವರಿನಗರ ಮಾತ್ರವಲ್ಲದೆ ಇನ್ನೂ ಹಲವು ಬಡಾವಣೆಗಳಲ್ಲಿ ಇಂತಹ ಗೋಡೆಗಳನ್ನು ಕಾಣಬಹುದು. ಖಾಲಿ ನಿವೇಶನಗಳ ಬದಲು ಚರಂಡಿಗಳಿಗೆ ಅಗತ್ಯವಾದ ತಡೆಗೋಡೆ ನಿರ್ಮಿಸುವಲ್ಲಿ ಆ ಸಂಪನ್ಮೂಲವನ್ನು ಬಳಕೆ ಮಾಡಿದ್ದರೆ ಅದರಿಂದ ಪ್ರಯೋಜನವಾದರೂ ಆಗುತ್ತಿತ್ತು ಎಂದು ಅವರು ಹೇಳಿದ್ದಾರೆ.

‘ಜನ ಕುಳಿತು ವಿಶ್ರಾಂತಿ ಪಡೆಯಲು ಹಾಗೆ ಸಣ್ಣ ಕಟ್ಟೆಗಳನ್ನು ಕಟ್ಟಿರಬಹುದು. ಇದರಿಂದ ಮಳೆ ನೀರಿನ ಪ್ರವಾಹ ರಸ್ತೆಗೆ ಬಾರದಂತೆ ತಡೆಯುವ ಉದ್ದೇಶವೂ ಇರಬಹುದು’ ಎಂದು ಬಿಬಿಎಂಪಿ ಎಂಜಿನಿಯರ್‌ ಒಬ್ಬರು ತಿಳಿಸಿದ್ದಾರೆ.

ಅನಗತ್ಯ ಕಾಮಗಾರಿಗಳ ಹಾವಳಿ: ಬಿಬಿಎಂಪಿಯ ನಾಲ್ಕು ವಲಯಗಳಲ್ಲಿ ಅನಗತ್ಯವಾದ 448 ಕಾಮಗಾರಿ ನಡೆದಿದ್ದನ್ನು ಆಯುಕ್ತರ ತಾಂತ್ರಿಕ ತನಿಖಾ ಕೋಶ (ಟಿವಿಸಿಸಿ) ಈ ಹಿಂದೆ ಪತ್ತೆ ಮಾಡಿತ್ತು. ಈ ಕಾಮಗಾರಿ ಕೈಬಿಟ್ಟರೆ ಬಿಬಿಎಂಪಿಗೆ ರೂ 108 ಕೋಟಿ ಉಳಿತಾಯ ಆಗಲಿದೆ ಎಂದೂ ಅದು ತಿಳಿಸಿತ್ತು. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಒಟ್ಟು 1,063 ಚಾಲ್ತಿ ಕಾಮಗಾರಿಗಳಿದ್ದು, ಇದರಲ್ಲಿ ರೂ 57.08 ಕೋಟಿ ಮೊತ್ತದ 212 ಕಾಮಗಾರಿಗಳು ಅನಗತ್ಯ ಎಂದು ಟಿವಿಸಿಸಿ ಹೇಳಿತ್ತು.

ಯಲಹಂಕ ವಲಯದಲ್ಲಿ 717 ಚಾಲ್ತಿ ಕಾಮಗಾರಿಗಳ ಪೈಕಿ ರೂ 4.44 ಕೋಟಿ ಮೊತ್ತದ 50, ಬೊಮ್ಮನಹಳ್ಳಿ ವಲಯದಲ್ಲಿ 641 ಕಾಮಗಾರಿಗಳಲ್ಲಿ ರೂ 16.92 ಕೋಟಿ ಅಂದಾಜು ವೆಚ್ಚದ 63 ಕಾಮಗಾರಿಗಳು ಅನಗತ್ಯ ಎಂದು ತಿಳಿಸಿತ್ತು. ರಾಜರಾಜೇಶ್ವರಿನಗರ ವಲಯದಲ್ಲೂ ಒಟ್ಟು 1,396 ಚಾಲ್ತಿ ಕಾಮಗಾರಿಗಳಲ್ಲಿ ರೂ 30 ಕೋಟಿ  ಅಂದಾಜು ವೆಚ್ಚದ 123 ಕಾಮಗಾರಿಗಳು ಅನಗತ್ಯ ಎಂದು ಟಿವಿಸಿಸಿ ವರದಿ ನೀಡಿತ್ತು. ಇಂತಹ ಅನಗತ್ಯ ಕಾಮಗಾರಿಗಳಿಗೆ ತಡೆ ಬಿದ್ದರೆ ಜನಪರ ಕೆಲಸಗಳಿಗೆ ಬಿಬಿಎಂಪಿ ಹಣ ಹೊಂದಿಸಲು ಸಾಧ್ಯ ಎಂದು ಬಡಾವಣೆ ನಿವಾಸಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT