ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಠಿಣ ಶಿಕ್ಷೆಗೆ ಕಾನೂನು ತಿದ್ದುಪಡಿ’

ಲೈಂಗಿಕ ದೌರ್ಜನ್ಯ ಪ್ರಕರಣ
Last Updated 26 ನವೆಂಬರ್ 2014, 7:12 IST
ಅಕ್ಷರ ಗಾತ್ರ

ಉಡುಪಿ: ‘ಲೈಂಗಿಕ ದೌರ್ಜನ್ಯ ಪ್ರಕರಣಗಳ ತಡೆ ಮತ್ತು ಆರೋಪಿಗಳಿಗೆ ಹೆಚ್ಚಿನ ಶಿಕ್ಷೆ ವಿಧಿಸುವ ಕುರಿತು ಎಂ.ಸಿ. ನಾಣಯ್ಯ ನೇತೃತ್ವದ ಸಮಿತಿ ವರದಿ ನೀಡಿದ ನಂತರ ಅದನ್ನು ಪರಾಮರ್ಶಿಸಿ ಕಾನೂನುಗಳಿಗೆ ಅಗತ್ಯ ತಿದ್ದುಪಡಿ ತರಲಾಗುವುದು’ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಮಲ್ಪೆಯಲ್ಲಿ ನಿರ್ಮಿಸಿರುವ ಕರಾವಳಿ ಕಾವಲು ಪೊಲೀಸ್‌ ಘಟಕದ ಆಡಳಿತ ಕಚೇರಿ ಮತ್ತು ಶಿವಳ್ಳಿಯ ಪೊಲೀಸ್‌ ವಸತಿ ಗೃಹವನ್ನು ಮಂಗಳವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

‘ಅತ್ಯಾಚಾರ ಪ್ರಕರಣಗಳ ವಿಚಾರಣೆ ಶೀಘ್ರಗತಿಯಲ್ಲಿ ನಡೆದು ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂಬ ಉದ್ದೇಶದಿಂದ ಈಗಾಗಲೇ 10 ವಿಶೇಷ ನ್ಯಾಯಾಲಯಗಳನ್ನು ಆರಂಭಿಸ­ಲಾಗಿದೆ. ಕಾನೂನು ಸಚಿವರು ಮತ್ತು ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿ ಮಾಡಿ ಹೆಚ್ಚಿನ ನ್ಯಾಯಾ­ಲಯಗಳ ಸ್ಥಾಪನೆ ಮತ್ತು ನ್ಯಾಯಾಧೀಶರ ನಿಯೋಜನೆಗೆ ಸಂಬಂಧಿಸಿದಂತೆ ಮಾತನಾಡ­ಲಿದ್ದೇವೆ’ ಎಂದರು.

ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಇದೆ. ಗೂಂಡಾ ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಲಾಗುತ್ತಿದೆ. ಇಂತಹ ಪ್ರಕರಣ­ದಲ್ಲಿ ಬಂಧನವಾದರೆ ಜೀವನ ಪರ್ಯಂತ ಜೈಲಿನಲ್ಲಿಯೇ ಕಳೆಯಬೇಕಾ­ಗುತ್ತದೆ ಎಂಬುದು ಬಹಳ ಮಂದಿಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೆಟ್ಟಿದೆ ಎಂಬ ವಿರೋಧ ಪಕ್ಷದವರ ಟೀಕೆಯಲ್ಲಿ ಸತ್ಯಾಂಶ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗಲೂ ಅತ್ಯಾಚಾರ ಸೇರಿದಂತೆ ಎಲ್ಲ ರೀತಿಯ ಅಪರಾಧ ಪ್ರಕರಣಗಳು ನಡೆಯುತ್ತಿದ್ದವು. ನಿರ್ಭಯಾ ಪ್ರಕರಣದ ನಂತರ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ. ಅಲ್ಲದೆ ಎಲ್ಲ ದೂರುಗಳನ್ನು ಸ್ವೀಕರಿಸಿ ಪ್ರಥಮ ಮಾಹಿತಿ ವರದಿ ದಾಖಲಿಸಿ ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಆದ್ದ­ರಿಂದ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶೇ 96ರಷ್ಟು ಪ್ರಕರಣ­ಗಳಲ್ಲಿ ಆರೋಪಿಗಳನ್ನು ಬಂಧಿಸ­ಲಾಗಿದೆ ಎಂದರು.

ರಾಜ್ಯದಲ್ಲಿ ಪೊಲೀಸ್‌ ಬಲವರ್ಧನೆಗೆ ಆದ್ಯತೆ ನೀಡಲಾಗಿದ್ದು 8,500 ಪೊಲೀಸ್‌ ಸಿಬ್ಬಂದಿ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. 11,100 ಪೊಲೀಸ್‌ ವಸತಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು.

ಶಾಸಕ ಪ್ರಮೋದ್‌ ಮಧ್ವರಾಜ್‌ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ನಗರಸಭೆ ಅಧ್ಯಕ್ಷ ಪಿ. ಯುವರಾಜ, ಆಂತರಿಕ ಭದ್ರತೆ ವಿಭಾಗದ (ಐಎಸ್‌ಡಿ) ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಿಶೋರ್ ಚಂದ್ರ, ಪಶ್ಚಿಮ ವಲಯ ಐಜಿಪಿ ಅಮ್ರಿತ್‌ ಪಾಲ್‌, ಐಎಸ್‌ಡಿ ಐಜಿಪಿ ಪ್ರತಾಪ್‌ ರೆಡ್ಡಿ, ಡಿಐಜಿ ಎಸ್‌. ಮುರುಗನ್‌, ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೀಮಾಂತ್‌ ಕುಮಾರ್‌ ಸಿಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌, ಕರಾವಳಿ ಕಾವಲು ಪೊಲೀಸ್‌ನ ಎಸ್ಪಿ ಎಸ್‌.ಎಲ್‌. ಚೆನ್ನಬಸವಣ್ಣ, ನೌಕಾದಳದ ಕಮಾಂಡರ್‌ ಎಸ್‌.ಎಸ್‌. ರಾಬಿನ್‌, ಆರ್‌. ವಿನಯ ಕುಮಾರ್‌ ಉಪಸ್ಥಿತರಿದ್ದರು.

ಬಿಜೆಪಿ ಪ್ರತಿಭಟನೆ
ಗೃಹ ಸಚಿವ ಕೆ.ಜೆ. ಜಾರ್ಜ್‌ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸಚಿವರು ಸಾಗುವ ದಾರಿ ಮಧ್ಯೆ ಪ್ರತಿಭಟನೆ ನಡೆಸಿದರು. ಪ್ರತಿ­ಭಟನಾಕಾರರನ್ನು ಬಂಧಿಸಿದ ಪೊಲೀಸರು ಆ ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT