ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಕಪುರ ರಿಪಬ್ಲಿಕ್‌’ ನಾಶವೇ ಮುಂದಿನ ಗುರಿ

ಎಸ್.ಆರ್.ಹಿರೇಮಠ ಹೇಳಿಕೆ
Last Updated 1 ನವೆಂಬರ್ 2014, 9:32 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿ ಭ್ರಷ್ಟಾಚಾರದ ಕೂಪವಾಗಿದ್ದ ಬಳ್ಳಾರಿ ರಿಪಬ್ಲಿಕ್‌ ನಾಶವಾಗಿದೆ. ಈಗ ಕನಕಪುರ ರಿಪಬ್ಲಿಕ್‌ ತಲೆ ಎತ್ತಿದೆ. ಅದನ್ನು ನಾಶ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್.ಹಿರೇಮಠ್‌ ಕರೆ ನೀಡಿದರು.

ನವ ಚೈತನ್ಯ ಕರ್ನಾಟಕ ಸೇನೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

80ರ ದಶಕದಲ್ಲಿ ಬೋಫೋರ್ಸ್‌ ಹಗರಣ ಬೆಳೆಕಿಗೆ ಬಂದಾಗ ಅದನ್ನು ಭಾರಿ ಹಗರಣ ಎಂದು ಬಿಂಬಿಸಲಾಗಿತ್ತು. ರಾಜೀವ್‌ ಗಾಂಧಿಯನ್ನು ಖಳನಾಯಕನಂತೆ ಜನ ನೋಡಿದರು. ಇಂದು ಲಕ್ಷ ಕೋಟಿ ದಾಟಿದ  2ಜಿ, ಕಲ್ಲಿದ್ದಲು ಮತ್ತಿತರ ಹಗರಣ ನೋಡಿದ್ದೇವೆ. ರಾಜ್ಯದಲ್ಲೂ ಬಳ್ಳಾರಿ ಗಣಿ ಲೂಟಿ ಲಕ್ಷ ಕೋಟಿಯ ಲೆಕ್ಕದಲ್ಲಿದೆ. ಕನಕಪುರ ರಿಪಬ್ಲಿಕ್‌ನಲ್ಲೂ ಅಂತಹ ಲೂಟಿ ನಡೆಯುತ್ತಿದೆ. ಅದು ಈ ಎಲ್ಲ ಹಗರಣ ಮೀರಿಸಿದ ₨ 3 ಲಕ್ಷ ಕೋಟಿಯ ಲೂಟಿ. ಅದರ ನೇತಾರ ಡಿ.ಕೆ.ಶಿವಕುಮಾರ್‌ ಅವರನ್ನು ಜೈಲಿಗೆ ಕಳುಹಿಸಲು ಎಲ್ಲ ಭ್ರಷ್ಟಾಚಾರ ವಿರೋಧಿ ಶಕ್ತಿಗಳ ಬೆಂಬಲ ಅಗತ್ಯ ಎಂದರು.

ನ್ಯಾಯಾಂಗದ ಭ್ರಷ್ಟಾಚಾರವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಅದಕ್ಕೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ನ್ಯಾಯಲಯದ ಪಾವಿತ್ರ್ಯತೆಗೆ, ಗೌರವಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು. ಚುನಾವಣೆಗಳನ್ನು ಸರ್ಕಾರದ ವೆಚ್ಚದಲ್ಲೇ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಹೊಸ ಆರ್ಥಿಕ ನೀತಿಯೇ ಭ್ರಷ್ಟಾಚಾರದ ಮೂಲ. ಆಸ್ತಿಗೆ ಕಡಿವಾಣ ಹಾಕಬೇಕು. ಉಳುವವನಿಗೆ ಭೂಮಿ ನೀಡುವ ಜತೆಗೆ, ಬೀಜ, ಗೊಬ್ಬರ ವಿತರಣೆ ಜವಾಬ್ದಾರಿಯನ್ನು ಕಂಪೆನಿಗಳ ಬದಲು ಸಹಕಾರ ಕ್ಷೇತ್ರಕ್ಕೆ ನೀಡಬೇಕು. ಅಧಿಕಾರಿ, ಸಿಬ್ಬಂದಿ ನಡುವಿನ ವೇತನದಲ್ಲಿ ಭಾರಿ ಅಂತರವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧರ್ಮ ಮತ್ತು ರಾಜಕಾರಣ ಬೆರೆಸುವುದು ಏಕೆ ಬೇಡವೋ ಹಾಗೆ, ರಾಜ್ಯಭಾರ ಮತ್ತು ಹಣ ನಿರ್ವಹಣೆ ಬೇರ್ಪಡಿಸಬೇಕು. ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ರೂಪಿಸಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಮಂಜುನಾಥ್‌, ವಾಮದೇವನ ಗೌಡ, ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ವಿ.ವಸಂತಕುಮಾರ್‌, ಅಣ್ಣಾ ಹಜಾರೆ ಹೋರಾಟ ಸಮಿತಿ ಅಧ್ಯಕ್ಷ ಅಶೋಕ್ ಯಾದವ್‌, ಸರ್ಜಾ ಶಂಕರ್‌ ಹರಳೀಮಠ, ಮಂಜುಳಾ ದೇವಿ, ಕೆ.ಎಂ.ನಾಗೇಶ್‌,  ಉಪಸ್ಥಿತರಿದ್ದರು. ನವಚೈತನ್ಯ ಕರ್ನಾಟಕ ಸೇನೆ ಕಾರ್ಯಾಧ್ಯಕ್ಷ ಕೆ.ಟಿ.ಪ್ರತಾಪಗೌಡ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT