ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಬಾಲಿ’ ಗಲಾಟೆ: ಲಘು ಲಾಠಿ ಪ್ರಹಾರ

ಕೈ ಕೈ ಮಿಲಾಯಿಸಿದ ಕನ್ನಡ ಒಕ್ಕೂಟ ಸದಸ್ಯರು ಹಾಗೂ ರಜನಿಕಾಂತ್‌ ಅಭಿಮಾನಿಗಳು
Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಬಾಲಿ’ ಚಿತ್ರ ಪ್ರದರ್ಶಿಸುತ್ತಿದ್ದ ಶೇಷಾದ್ರಿಪುರದ ನಟರಾಜ್‌ ಚಿತ್ರಮಂದಿರದ ಎದುರು ಶುಕ್ರವಾರ, ನಟ ರಜನಿಕಾಂತ್‌ ಅಭಿಮಾನಿಗಳು ಹಾಗೂ ಕನ್ನಡ ಒಕ್ಕೂಟದ ಕಾರ್ಯಕರ್ತರ ಮಧ್ಯೆ   ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಸೇರಿದ್ದ ಒಕ್ಕೂಟದ ಸದಸ್ಯರು, ಪರಭಾಷೆ ಚಿತ್ರಗಳ ಪ್ರದರ್ಶನ ವಿರೋಧಿಸಿ ಕೆಲ ಚಿತ್ರಗಳ ಪೋಸ್ಟರ್‌ ಸುಟ್ಟು ಘೋಷಣೆ ಕೂಗಿದರು.

ಒಕ್ಕೂಟದ ಸದಸ್ಯರ ವರ್ತನೆ ಗಮನಿಸಿದ ನಟರಾಜ್‌ ಚಿತ್ರಮಂದಿರದ ಆವರಣದಲ್ಲಿದ್ದ ನಟ ರಜನಿಕಾಂತ್‌  ಅವರ ನೂರಾರು ಅಭಿಮಾನಿಗಳು ಸಹ ಪ್ರತ್ಯೇಕವಾಗಿ ಪ್ರತಿಭಟನೆ ಆರಂಭಿಸಿದರು. 

‘ರಜನಿಕಾಂತ್‌ ಕನ್ನಡಿಗರು. ಬೆಂಗಳೂರಿನಲ್ಲಿ ಕೆಲಸ ಮಾಡಿ ಇಂದು ಇಡೀ ವಿಶ್ವದಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಕನ್ನಡ, ತಮಿಳು, ತೆಲುಗು ಸೇರಿ ಎಲ್ಲ ಭಾಷೆಯಲ್ಲೂ ಅಭಿಮಾನಿಗಳಿದ್ದಾರೆ. ಕನ್ನಡಿಗರು ಸಹ ‘ಕಬಾಲಿ’ ಚಿತ್ರ ನೋಡಲು ಬಂದಿದ್ದಾರೆ. ಆದರೆ, ಕನ್ನಡ ಒಕ್ಕೂಟದ ಸದಸ್ಯರು, ಶಾಂತಿ ಕದಡುವುದಕ್ಕಾಗಿ ಚಿತ್ರಮಂದಿರ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಅಭಿಮಾನಿಗಳು ಆಗ್ರಹಿಸಿದರು. 

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಒಕ್ಕೂಟದ ಸದಸ್ಯರ ಮೇಲೆ ಮುಗಿಬಿದ್ದ ಅಭಿಮಾನಿಗಳು, ಅವರನ್ನು  ಅಟ್ಟಿಸಿಕೊಂಡು ಹೋಗಿ ಥಳಿಸಲು ಯತ್ನಿಸಿದರು.

ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಒಕ್ಕೂಟದ ಸದಸ್ಯರನ್ನು ವಾಹನದಲ್ಲಿ ಸುರಕ್ಷಿತವಾಗಿ ಬೇರೆಡೆ ಕರೆದೊಯ್ದರು. ಬಸ್‌ ಹತ್ತುತ್ತಿದ್ದ ವೇಳೆಯಲ್ಲೂ ಅಭಿಮಾನಿಗಳ ಗುಂಪು, ಒಕ್ಕೂಟದ ಸದಸ್ಯರನ್ನು ಥಳಿಸಲು ಮುಂದಾಯಿತು. ಗುಂಪಿನ ಕೆಲವರನ್ನು ಪೊಲೀಸರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಗ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು. 

‘ನಟರಾಜ್‌ ಚಿತ್ರಮಂದಿರ ಬಳಿ ಪ್ರತಿಭಟನೆ ವೇಳೆ ಗಲಾಟೆ ನಡೆದಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ದಟ್ಟಣೆ: ಚಿತ್ರಮಂದಿರದ ಎದುರು ನಡೆದ ಪ್ರತಿಭಟನೆ ಹಾಗೂ ಗಲಾಟೆಯಿಂದಾಗಿ ಶೇಷಾದ್ರಿಪುರ ಸುತ್ತಮುತ್ತ ನಾಲ್ಕು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಯಿತು.

ಮಲ್ಲೇಶ್ವರ, ಶಿವಾನಂದ ವೃತ್ತ ರಸ್ತೆ, ಶ್ರೀರಾಮಪುರ ರಸ್ತೆ ಹಾಗೂ ಸುತ್ತಮುತ್ತ ವಾಹನಗಳು ನಿಂತಲೇ ನಿಂತುಕೊಂಡಿದ್ದವು. ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆ ನಿಯಂತ್ರಿಸಿದ ಬಳಿಕ ಸಂಚಾರ ಯಥಾಸ್ಥಿತಿ ಮುಂದುವರಿಯಿತು.

‘ಪರಭಾಷಾ ಚಿತ್ರಕ್ಕೆ ನಿಷೇಧ ಹೇರಿ’
‘ಪರಭಾಷೆ ಚಿತ್ರಗಳಿಂದ ಹಾವಳಿ ಹೆಚ್ಚಾಗಿದ್ದು, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಪ್ರಾಶಸ್ತ್ಯ ಸಿಗುತ್ತಿಲ್ಲ’ ಎಂದು  ವಾಟಾಳ್ ನಾಗರಾಜ್ ಆರೋಪಿಸಿದರು.

ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಪರಭಾಷೆ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆಯಾಗುತ್ತಿವೆ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಆದ್ಯತೆ ಸಿಗುತ್ತಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಿ ಪರಭಾಷಾ ಚಿತ್ರಗಳನ್ನು ರಾಜ್ಯದಲ್ಲಿ ಪ್ರದರ್ಶಿಸದಂತೆ ನಿರ್ಬಂಧ ಹೇರಬೇಕು’ ಎಂದು ಒತ್ತಾಯಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT