ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಿ–ಕಲಿಸು’ವ ತರಬೇತಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಇಂಡಿಯಾ ಫೌಂಡೇಷನ್‌ ಫಾರ್‌  ಆರ್ಟ್ಸ್‌ (ಐಎಫ್‌ಎ) ಕಳೆದ ಎರಡು ದಶಕಗಳಿಂದ ಕಲೆ ಸಂಸ್ಕೃತಿಯ ಬೆಳವಣಿಗೆಗಳಲ್ಲಿ ಬಹುಮುಖಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡು ಬಂದಿರುವ ಸಂಸ್ಥೆ. ಇಂತಹ ಸೃಜನಾತ್ಮಕ ಚಟುವಟಿಕೆಗಳಿಗೆ ಧನಸಹಾಯ ನೀಡುವುದೂ ಈ ಸಂಸ್ಥೆಯ ಮುಖ್ಯ ಕಾರ್ಯಗಳಲ್ಲೊಂದು.

ಐಎಫ್‌ಎ 1993ರಿಂದಲೂ ಕರ್ನಾಟಕದ ಹಲವು ಕಲಾಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತಲೇ ಬಂದಿದೆ. ತನ್ನ ವ್ಯಾಪ್ತಿಯನ್ನು ಇನ್ನೂ ಹಿಗ್ಗಿಸಿಕೊಳ್ಳುವ ಮತ್ತು ಪರಿಣಾಮಕಾರಿಯಾಗಿಸಿಕೊಳ್ಳುವ ಉದ್ದೇಶದಿಂದ 2009ರಿಂದ ‘ಕಲಿ–ಕಲಿಸು’ ಎಂಬ ಯೋಜನೆಯನ್ನು ಆರಂಭಿಸಿದೆ.

‘ಕಲಿ–ಕಲಿಸು’ ಇದು ಸರ್ಕಾರಿ ಶಾಲಾ ಶಿಕ್ಷಕರಿಗೆ ಕಲಾಶಿಕ್ಷಣದ ತರಬೇತಿ ನೀಡುವ ಉದ್ದೇಶವನ್ನು ಹೊಂದಿರುವ ಕಾರ್ಯಯೋಜನೆ. ದೃಶ್ಯ ಮಾಧ್ಯಮ, ನೃತ್ಯ, ರಂಗಭೂಮಿ ಸಂಗೀತ, ಗೊಂಬೆಯಾಟ ಹೀಗೆ ಹಲವು ಕಲಾಪ್ರಕಾರಗಳನ್ನು ಕೇಂದ್ರೀಕರಿಸಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಸೃಜನ ಕಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಉದ್ದೇಶ ಈ ಯೋಜನೆಯದು.

ಐಎಫ್‌ಎ ಸಂಸ್ಥೆಯು ಗೋಥೆ ಇನ್‌ಸ್ಟಿಟ್ಯೂಟ್‌ ಅವರ ಸಹಭಾಗಿತ್ವದೊಂದಿಗೆ ಸೇರಿಕೊಂಡು ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದೆ. ಕಲೆ, ಸಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ತೊಡಗಿಕೊಂಡಿರುವ ಅನನ್ಯಾ ಕಲ್ಚರಲ್‌ ಅಕಾಡೆಮಿ, ಅಟಕ್ಕಳರಿ ಸೆಂಟರ್‌ ಫಾರ್‌ ಮೂವ್‌ಮೆಂಟ್‌ ಆರ್ಟ್ಸ್‌, ನೀನಾಸಮ್‌, ಗೊಂಬೆ ಮನೆ, ಭಾರತ್‌ ಜ್ಞಾನ ವಿಜ್ಞಾನ ಸಮಿತಿ ಸಂಸ್ಥೆಗಳಷ್ಟೇ ಅಲ್ಲದೇ ಇನ್ನೂ ಅನೇಕ ಸಂಸ್ಥೆ, ಕಲಾವಿದರು ಈ ಕಾರ್ಯಕ್ರಮದಲ್ಲಿ ಸಂಪನ್ಮೂಲಗಳಾಗಿ ಬಳಕೆಯಾಗುತ್ತಿರುವುದು ವಿಶೇಷವಾಗಿದೆ.

2009ರಲ್ಲಿ ಹೆಗ್ಗೋಡಿನ ನೀನಾಸಮ್‌ನಲ್ಲಿ ತನ್ನ ಮೊದಲ ಶಿಬಿರವನ್ನು ಆಯೋಜಿಸುವುದರ ಮೂಲಕ ಕಲಿ–ಕಲಿಸು ಆರಂಭವಾಯಿತು. ಮೊದಲ ವರ್ಷದಲ್ಲಿ ಕಲಿ–ಕಲಿಸು ಯೋಜನೆಯಡಿ ಕರ್ನಾಟಕದಾದ್ಯಂತ 20 ಶಿಬಿರಗಳನ್ನು ಆಯೋಜಿಸಿ 450 ಶಿಕ್ಷಕರಿಗೆ ತರಬೇತಿ ನೀಡಲಾಯಿತು.

2010ರಲ್ಲಿನ ಎರಡನೇ ಹಂತದಲ್ಲಿ ಮೊದಲನೇ ಹಂತದಲ್ಲಿ ತರಬೇತಿ ಪಡೆದ ಶಿಕ್ಷಕರಲ್ಲಿ ಕೆಲವರನ್ನು ಆಯ್ದು ಅವರಿಗೆ ಬೆಂಗಳೂರಿನ ನೃತ್ಯಗ್ರಾಮದಲ್ಲಿ ವಿಶೇಷ ತರಬೇತಿ ನೀಡಲಾಯಿತು. ಹೀಗೆ ತರಬೇತಿ ಪಡೆದ 35 ಶಿಕ್ಷಕರನ್ನು ಮಾಸ್ಟರ್‍ಸ್‌ ಸಂಪನ್ಮೂಲ ವ್ಯಕ್ತಿ ಎಂದು ಆಯ್ಕೆ ಮಾಡಿ ಅವರನ್ನು ರಾಜ್ಯದಾದ್ಯಂತ ಕಲಿ–ಕಲಿಸು ಯೋಜನೆಯ ರಾಯಭಾರಿಗಳನ್ನಾಗಿಸಿ ತರಬೇತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಯಿತು.

ಮೂರನೇ ವರ್ಷ ‘ಸ್ಫೂರ್ತಿ, ವಿಶ್ಲೇಷಣೆ, ಸತ್ವಯುತ ಕಲಿಕೆ’ ಈ ಮೂರು ಅಂಶಗಳನ್ನು ಕೇಂದ್ರೀಕರಿಸಿ  ಬೀದರ್‌, ಧಾರವಾಡ ಮತ್ತು ಮೈಸೂರುಗಳಲ್ಲಿ ಕಲಿ–ಕಲಿಸು ಶಿಬಿರಗಳನನ್ನು ಆಯೋಜಿಸಲಾಯ್ತು. ಸ್ಥಳೀಯ ಸಂಪನ್ಮೂಲಗಳನ್ನು ಶಿಕ್ಷಣದಲ್ಲಿ ಹೇಗೆ ಬಳಸಿಕೊಳ್ಳಬಹುದು ಮತ್ತು ಶಿಕ್ಷಣದಲ್ಲಿ ಮೌಖಿಕ ಪರಂಪರೆ ಎಷ್ಟು ಪ್ರಯೋಜನಕಾರಿ ಎಂಬುದರ ಬಗ್ಗೆ ಮತ್ತು ಮೌಲ್ಯಯುತ ಶಿಕ್ಷಣದಲ್ಲಿ ಕಲೆಯ ಪಾತ್ರ ಏನು ಎಂಬುದರ ಕುರಿತು ಈ ಶಿಬಿರಗಳಲ್ಲಿ ಶಿಕ್ಷಕರಿಗೆ ಅರಿವು ಮೂಡಿಸಲಾಯಿತು.

ನಾಲ್ಕನೇ ವರ್ಷ ಅಂದರೆ 2012–13ನೇ ಸಾಲಿನಲ್ಲಿ ಕಲಿ–ಕಲಿಸು ಯೋಜನೆಯು ಕರ್ನಾಟಕದಲ್ಲಿ ಶಿಕ್ಷಕ ತರಬೇತಿ ನೀಡುತ್ತಿರುವ ಸಂಸ್ಥೆಗಳ ಜತೆ ಕೈಜೋಡಿಸುವತ್ತ ಕಾರ್ಯೋನ್ಮುಖವಾಯಿತು. ಈ ಹಂತದಲ್ಲಿ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ ಎಜುಕೇಷನ್‌ ಅಂಡ್‌ ರೀಸರ್ಚ್‌ ಟ್ರೇನಿಂಗ್‌ (ಡಿಎಸ್‌ಇಆರ್‌ಟಿ)ಯೊಂದಿಗೆ ಸೇರಿಕೊಂಡು ಡಿ.ಇಡಿ ವಿದ್ಯಾರ್ಥಿಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿತು.

ಸರ್ಕಾರಿ ಶಾಲೆಗಳಿಗೇ ಕೆಂದ್ರಿತ


ಐಎಫ್‌ಎ ಸಂಸ್ಥೆಯ ಈ ಕಲಿ–ಕಲಿಸು ಯೋಜನೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನೇ ಆಯ್ದುಕೊಳ್ಳುವುದು ವಿಶೇಷವಾಗಿದೆ.
‘ಸರ್ಕಾರಿ ಶಾಲೆಗಳ ವ್ಯವಸ್ಥೆಯಲ್ಲಿ ಕಲೆಯ ಹಸಿವು ಜಾಸ್ತಿ ಇದೆ. ಒಬ್ಬ ಶಿಕ್ಷಕನ ಅಡಿಯಲ್ಲಿ ಕನಿಷ್ಠ 10 ಪೀಳಿಗೆಯಾದರೂ ಶಿಕ್ಷಣ ಪಡೆದುಕೊಂಡು ಹೋಗುತ್ತದೆ. ಅಲ್ಲದೇ ಅವರಿಗೆ ಸ್ಥಳೀಯ ಸಂಪನ್ಮೂಲಗಳನ್ನು ಶಿಕ್ಷಣದಲ್ಲಿ ಬಳಸಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರೆ ಮೌಲ್ಯಯುತ ಶಿಕ್ಷಣ ರೂಪುಗೊಳ್ಳುತ್ತದೆ ಎಂಬ ಆಶಯ ನಮ್ಮದು’ ಎಂದು ವಿವರಿಸುತ್ತಾರೆ ಕಲಿ–ಕಲಿಸು ಯೋಜನೆಯ ಕಾರ್ಯನಿರ್ವಾಹಕಿ ಅನುಪಮಾ ಪ್ರಕಾಶ್‌.

ಶಿಕ್ಷಕರಿಗೆ ಅನುದಾನ
ಕಳೆದ ಎರಡು ವರ್ಷಗಳಿಂದ ಟಿಎಫ್‌ಎ ಸಂಸ್ಥೆ ಸರ್ಕಾರಿ ಶಿಕ್ಷಕರಿಗೆ ಅನುದಾನವನ್ನು ನೀಡುತ್ತಾ ಬಂದಿದೆ.
ಶಿಕ್ಷಕರು ಸ್ಥಳೀಯ ಕಲಾವಿದರು, ಪೋಷಕರು ಮತ್ತು ಸಮುದಾಯದವರನ್ನು ಸೇರಿಸಿಕೊಂಡು ಕಲಾ ಶಿಕ್ಷಣ ಯೋಜನೆಯನ್ನು ಕೈಗೊಳ್ಳಬಹುದಾಗಿದೆ. ಸ್ಥಳೀಯ ಜಾನಪದ ಕಲೆಯನ್ನು ಹಾಗೂ ಕಲಾವಿದರನ್ನು ಶಿಕ್ಷಣ ಪ್ರಕ್ರಿಯೆಯೊಳಗೆ ತರುವುದು, ಮಕ್ಕಳಲ್ಲಿ ಕಲಾಸಕ್ತಿ ಮೂಡಿಸುವುದು ಉದ್ದೇಶ.  ಕಳೆದ ಎರಡು ವರ್ಷಗಳಲ್ಲಿ ಇಂತಹ 10 ಯೋಜನೆಗಳಿಗೆ ಐಎಫ್‌ಎ ಅನುದಾನ ನೀಡಿದೆ.

‘ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಶಿಕ್ಷಕರಲ್ಲಿ ಗುಣಮಟ್ಟದ ಶಿಕ್ಷಣವನ್ನು ರೂಪಿಸುವ ಅನೇಕ ಪರಿಕಲ್ಪನೆಗಳಿವೆ. ಆದರೆ ಅದನ್ನು ಜಾರಿಗೊಳಿಸಲು ಅಗತ್ಯವಾದ ಆರ್ಥಿಕ ಶಕ್ತಿ ಅವರಲ್ಲಿರುವುದಿಲ್ಲ. ಆದ್ದರಿಂದ ಕಳೆದ ಎರಡು ವರ್ಷಗಳಲ್ಲಿ ಐಎಫ್‌ಎ ಸಂಸ್ಥೆ ಶಿಕ್ಷಕರ ಇಂತಹ ಪರಿಕಲ್ಪನೆಗಳ ಕಾರ್ಯರೂಪಗೊಳಿಸಲು ಅನುದಾನವನ್ನೂ ನೀಡುತ್ತ ಬಂದಿದೆ.’ ಎಂದು ವಿವರಿಸುತ್ತಾರೆ ಅನುಪಮಾ ಪ್ರಕಾಶ್‌.

‘ಇಂದು ಶಿಕ್ಷಕರು ತಾವು ವಿದ್ಯಾರ್ಥಿಗಳೂ ಹೌದು ಎಂಬ ವಿಷಯವನ್ನು ಮರೆತೇ ಬಿಟ್ಟಿದ್ದಾರೆ. ಕಲಿಕೆಯ ನಿರಂತರ ಪ್ರಕ್ರಿಯೆಯಲ್ಲಿ ಅವರನ್ನು ಸೃಜನಶೀಲ ಶೋಧನೆಗೆ ತೊಡಗಿಕೊಳ್ಳುವಂತೆ ಮಾಡುವುದು ಮತ್ತು ಆ ಮೂಲಕ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಮೌಲ್ಯಯುತ ಶಿಕ್ಷಣ ನೀಡುವುದು ನಮ್ಮೆಲ್ಲ ಯೋಜನೆಗಳ ಮೂಲ ಉದ್ದೇಶ’ ಎನ್ನುತ್ತಾರೆ ಅನುಪಮಾ.

‌ಐಎಫ್‌ಎ ಅನುದಾನಕ್ಕಾಗಿ ಪ್ರಸ್ತಾವನೆಗೆ ಆಹ್ವಾನ
ಪ್ರಸಕ್ತ ವರ್ಷದ ಐಎಫ್‌ಎ ಅನುದಾನಕ್ಕಾಗಿ ಸರ್ಕಾರಿ ಶಾಲಾ ಶಿಕ್ಷಕರಿಂದ ಕಲಾ ಶಿಕ್ಷಣ ಯೋಜನೆಯ ಪ್ರಸ್ತಾವನೆಯನ್ನು ಆಹ್ವಾನಿಸಿದೆ.
ಶಿಕ್ಷಕರು ತಮ್ಮ ಪಠ್ಯ ಬೋಧನೆಯಿಂದಾಚೆ ತೆರೆದುಕೊಳ್ಳುವುದು ಹಾಗೂ ಶಾಲೆಗಳಲ್ಲಿ ಕಲಾ ಶಿಕ್ಷಣದ ಸಾಧ್ಯತೆಗಳನ್ನು ಶೋಧಿಸಲು ಪ್ರೋತ್ಸಾಹಿಸುವುದು. ಶಾಲಾ ಸಮುದಾಯದಲ್ಲಿ ಶಿಕ್ಷಕರು ಹಾಗೂ ಕಲಾವಿದರನ್ನು ಜಂಟಿ ಪಾಲುದಾರರನ್ನಾಗಿ ಮಾಡಲು ಅವಕಾಶ ಸೃಷ್ಟಿಸುವುದು ಹಾಗೂ ಪಠ್ಯ, ಬೋಧನಾ ಕ್ರಮಗಳಲ್ಲಿ ಕಲಾ ಪ್ರಕಾರಗಳನ್ನು ಒಳಪಡಿಸುವುದರ ಮೂಲಕ ಶ್ರೀಮಂತಗೊಳಿಸುವುದು ಈ ಅನುದಾನದ ಮುಖ್ಯ ಉದ್ದೇಶವಾಗಿದೆ.

ಆಸಕ್ತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಲಾ ಶಿಕ್ಷಕರು ಹಾಗೂ ಸಹ ಶಿಕ್ಷಕರೂ ಪ್ರಸ್ತಾವನೆಯನ್ನು ಸಲ್ಲಿಸಬಹುದು. ಪ್ರಸ್ತಾವನೆಯನ್ನು ಸಲ್ಲಿಸಲು ಡಿಸೆಂಬರ್ 30 ಕಡೆಯ ದಿನಾಂಕ. ಪ್ರಸ್ತಾವನೆ ಆಯ್ಕೆ ಪಟ್ಟಿಯಲ್ಲಿ ಬಂದರೆ ಡಿಸೆಂಬರ್‌ 12ರಂದು ಚರ್ಚೆಗೆ ಹಾಜರಾಗಬೇಕು.

ಪ್ರಸ್ತಾವನೆ ಒಳಗೊಳ್ಳಬೇಕಾದ ವಿಷಯಗಳು
* ಕಲಾಮಾಧ್ಯಮದಲ್ಲಿ ಹಾಗೂ ಕಲಾಮಾಧ್ಯಮದ ಮುಖೇನ ನೀವು ಮಾಡಿದ/ಮಾಡುತ್ತಿರುವ ಕೆಲಸಗಳ ಮಾಹಿತಿ.
* ಆಯ್ಕೆ ಮಾಡಿಕೊಂಡ ಶಾಲೆಯ ಹಿನ್ನೆಲೆ
* ಯೋಜನೆಯ ಪ್ರಕ್ರಿಯೆ ಹಾಗೂ ಜಾರಿಗೊಳಿಸುವ ವಿಧಾನದ ಬಗ್ಗೆ ವಿವರ
* ಯೋಜನಾವಧಿಯ ನಂತರ ನೀರೀಕ್ಷಿಸಬಹುದಾದ ಫಲಿತಾಂಶ ಮತ್ತು ಅದರಿಂದ ಕಲಾ ಶಿಕ್ಷಣಕ್ಕೆ ಯಾವ ರೀತಿ ಅನುಕೂಲವಾಗಬಹುದು ಎಂಬ ಬಗ್ಗೆ ವಿವರಣೆ.
* ಅಂದಾಜು ವೆಚ್ಚ
* ಯೋಜನಾ ಪ್ರಸ್ತಾವನೆಯನ್ನು ಕನ್ನಡ, ಇಂಗ್ಲಿಷ್‌, ಹಿಂದಿ ಅಥವಾ ಉರ್ದು ಭಾಷೆಗಳಲ್ಲಿ ಬರೆಯಬಹುದು.
* ಯೋಜನಾ ಅವಧಿ (ಕನಿಷ್ಠ 9 ಹಾಗೂ ಗರಿಷ್ಠ 18 ತಿಂಗಳುಗಳು)

‌ಐಎಫ್‌ಎ ಅನುದಾನ ನಿಬಂಧನೆಗಳು
* ಯೋಜನಾ ಅನುದಾನ ಗರಿಷ್ಠ ರೂ 1 ಲಕ್ಷ
* ಅನುದಾನವು ಯೋಜನಾ ಚಟುವಟಿಕೆ, ಪ್ರಯಾಣ ವೆಚ್ಚ, ಅಗತ್ಯವಿದ್ದಲ್ಲಿ ಸಣ್ಣ ಪುಟ್ಟ ಪರಿಕರಗಳನ್ನು ಕೊಳ್ಳುವ ವೆಚ್ಚ, ಪ್ರತಿಯೊಂದು ಖರ್ಚು ವೆಚ್ಚಗಳು ಯೋಜನೆಗೆ ಸಂಬಂಧಪಟ್ಟವೇ ಆಗಿರಬೇಕು.
* ಇಡೀ ಯೋಜನಾವಧಿಗೆ ನಿಮ್ಮ ಗೌರವಧನ ರೂ 10, 000 ಮೀರಬಾರದು. ಹೊರಗಿನ ಸಂಪನ್ಮೂಲ ವ್ಯಕ್ತಿಗಳ ಗೌರವಧನ ರೂ 20, 000 ಮೀರಬಾರದು.

* ಸಾಂಸ್ಥಿಕ ಖರ್ಚು ವೆಚ್ಚಗಳು ಕಟ್ಟಡದ ಖರ್ಚು ವೆಚ್ಚಗಳು ಮತ್ತು ಹೊಸ ಕಾಮಗಾರಿಗಳಿಗಾಗಿ ಅನುದಾನ ಕೊಡಲಾಗುವುದಿಲ್ಲ.
ಅರ್ಜಿಯನ್ನು ಕಳಿಸಬೇಕಾದ ವಿಳಾಸ
anupamaprakash@indiaifa.org

ಅಥವಾ

ಅನುಪಮಾ ಪ್ರಕಾಶ್/ ಈ.ಬಸವರಾಜು (9448957666)
ಕಲಾ ಶಿಕ್ಷಣ. ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್‌. ಅಪೂರ್ವ, ನೆಲ ಮಹಡಿ, ನಂ 259, 4 ನೆಯ ಅಡ್ಡ ರಸ್ತೆ, ರಾಜಮಹಲ್ ವಿಲಾಸ್, ಎರಡನೆಯ ಹಂತ, ಎರಡನೆಯ ಬ್ಲಾಕ್. ಬೆಂಗಳೂರು- 560 094
ದೂರವಾಣಿ: 080-2341 4681/ 82

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT