ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಳಪೆ ಆಹಾರ ಪೂರೈಸಿದರೆ ಗುತ್ತಿಗೆ ರದ್ದು’

Last Updated 23 ಆಗಸ್ಟ್ 2014, 8:42 IST
ಅಕ್ಷರ ಗಾತ್ರ

ಮೈಸೂರು: ರೈಲು ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳಲ್ಲಿ ಸ್ವಚ್ಛತೆ ಮತ್ತು ಆಹಾರ ಪದಾರ್ಥಗಳಲ್ಲಿ ಗುಣಮಟ್ಟ ಕಾಪಾಡದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು. ಆದಾಗ್ಯೂ, ಸುಧಾರಣೆ ಕಂಡು ಬರದಿದ್ದರೆ ಗುತ್ತಿಗೆ ಪರವಾನಗಿಯನ್ನೇ ರದ್ದುಪಡಿಸಲಾಗುವುದು ಎಂದು ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜಕುಮಾರಲಾಲ್‌ ಎಚ್ಚರಿಕೆ ನೀಡಿದರು.

ಇಲ್ಲಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ನಡೆದ ರೈಲು ನಿಲ್ದಾಣಗಳ ಆಹಾರ ಗುತ್ತಿಗೆದಾರರ ಸಭೆಯಲ್ಲಿ ಅವರು ಮಾತನಾಡಿದರು. ರೈಲು ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳು, ಉಪಹಾರ ಗೃಹಗಳಿಗೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸ್ವಚ್ಛತೆ ಕೊರತೆ, ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರು­ವುದು ಪತ್ತೆಯಾದರೆ ಅಂಥ ಗುತ್ತಿಗೆದಾರರಿಗೆ ₨ 25 ಸಾವಿರ ದಂಡ ವಿಧಿಸಲಾಗುವುದು ಎಂದರು.

ಆಹಾರ ಪೂರೈಕೆ ಗುತ್ತಿಗೆದಾರರು ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಪ್ರಮಾಣಪತ್ರವನ್ನು ಪಡೆದಿರಲೇಬೇಕು. ರೈಲುಗಾಡಿ ಮತ್ತು ನಿಲ್ದಾಣದಲ್ಲಿ ಆಹಾರ ಪದಾರ್ಥಗಳ ವಿತರಣೆಗೆ ಗುತ್ತಿಗೆದಾರರು ನೇಮಿಸುವ ನೌಕರರು ನಿಗದಿತ ಸಮವಸ್ತ್ರ ಮತ್ತು ಬ್ಯಾಡ್ಜ್‌ ಧರಿಸಿಯೇ ವ್ಯಾಪಾರ ನಡೆಸಬೇಕು ಎಂದು ತಿಳಿಸಿದರು.

ಆಹಾರ ವಿತರಣೆಯ ರೈಲು ಗಾಡಿ ಮತ್ತು ನಿಲ್ದಾಣಗಳಲ್ಲಿ ಉಂಟಾಗುವ ಕಸ ವಿಲೇವಾರಿ ಹೊಣೆಯನ್ನು ಗುತ್ತಿಗೆದಾರರೇ ನಿರ್ವಹಿಸಬೇಕು. ಆಹಾರ ಖಾದ್ಯಗಳ ತೂಕ ಮತ್ತು ದರವನ್ನು ಪದಾರ್ಥಗಳ ಪೊಟ್ಟಣಗಳ ಮೇಲೆ ಕಡ್ಡಾಯವಾಗಿ ನಮೂದಿಸಬೇಕು. ನಮೂದಿಸಿರುವ ಗರಿಷ್ಠ ಮಾರಾಟ ದರಕ್ಕಿಂತ (ಎಂಆರ್‌ಪಿ) ಹೆಚ್ಚು ಹಣ ವಸೂಲಿ ಮಾಡಿ ಪ್ರಯಾಣಿಕರನ್ನು ಸುಲಿಗೆ ಮಾಡಿದರೆ ದೊಡ್ಡ ಮೊತ್ತ ದಂಡ ತೆರಬೇಕಾಗುತ್ತದೆ, ಗುತ್ತಿಗೆಯನ್ನು ಕಾಯಂ ಆಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಕ್ಷಿಣ ಭಾರತದಲ್ಲಿ ವಿಭಿನ್ನ ಆಹಾರ ಅಭಿರುಚಿ ಇದೆ. ಜನಪ್ರಿಯ ಪರಿಕಲ್ಪನೆ ‘ಜನತಾ ಖಾನಾ’ದಡಿ  ಕೈಗೆಟುಕುವ ದರದಲ್ಲಿ ‘ಮೊಸರನ್ನ’ ಒದಗಿಸಬಹುದು ಎಂದು ಸಲಹೆ ನೀಡಿದರು.

ಮೈಸೂರು ರೈಲ್ವೆ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ರಾಕೇಶಕುಮಾರ್‌ ಗುಪ್ತಾ, ಮುಖ್ಯ ಆರೋಗ್ಯ ಅಧೀಕ್ಷಕ ಪ್ರದೀಪ್‌ಕುಮಾರ್‌, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT