ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ, ದಟ್ಟಣೆ ಕಾರಣ ಬಂಡವಾಳವಿಲ್ಲ’

Last Updated 30 ಡಿಸೆಂಬರ್ 2015, 19:42 IST
ಅಕ್ಷರ ಗಾತ್ರ

ಬೆಂಗಳೂರು: ‘ಕಸ ಹಾಗೂ ಸಂಚಾರ ದಟ್ಟಣೆ ಸಮಸ್ಯೆ ಕಾರಣಗಳಿಂದ ಸಿಲಿಕಾನ್‌ ಸಿಟಿಯು ವಿದೇಶದಲ್ಲೂ ಕುಖ್ಯಾತಿ ಪಡೆದಿದೆ. ಹೀಗಾಗಿ ಇಲ್ಲಿ ಬಂಡವಾಳ ಹೂಡಲು ವಿದೇಶಿ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕಳವಳ ವ್ಯಕ್ತಪಡಿಸಿದರು.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ನಡೆದ ‘ಅಪರಾಧ ತಡೆ ಮಾಸಾಚರಣೆ’ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಕಸ ಹಾಗೂ ಸಂಚಾರ ದಟ್ಟಣೆ ಕಾರಣಗಳಿಂದ ಬೆಂಗಳೂರು ನಗರವೂ ಚರ್ಚೆಗೆ ಬಂದಿತ್ತು.  ಇವೇ ಕಾರಣಗಳನ್ನು ಮುಂದಿಟ್ಟು ವಿದೇಶಿ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕಿದರು’ ಎಂದರು.

1 ಸಾವಿರ ಬೈಕ್ ಖರೀದಿ:  ‘ನಗರದಲ್ಲಿ ಪೊಲೀಸರ ಗಸ್ತು ತಿರುಗಾಟಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಒಂದು ಸಾವಿರ ಬೈಕ್‌ಗಳ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಸಂಚಾರ ವಿಭಾಗದಲ್ಲಿ ಹೊಸದಾಗಿ ಸೃಷ್ಟಿಯಾಗಿರುವ ಎರಡು ಡಿಸಿಪಿ ಹುದ್ದೆಗಳಿಗೆ, ತ್ವರಿತವಾಗಿ ಅಧಿಕಾರ ವ್ಯಾಪ್ತಿ ನಿಗದಿಪಡಿಸಲಾಗುವುದು’ ಎಂದು ಪರಮೇಶ್ವರ್‌ ಹೇಳಿದರು.

ಠಾಣೆ ಭೇಟಿ: ಒಂದುವರೆ ವರ್ಷದಲ್ಲಿ  ಡಿಸಿಪಿ ಎರಡು ಬಾರಿ ಮತ್ತು ಎಸಿಪಿ ಕೇವಲ ನಾಲ್ಕು ಬಾರಿ ಮಾತ್ರ   ವೈಟ್‌ಫಿಲ್ಡ್‌ ಠಾಣೆಗೆ ಭೇಟಿ ನೀಡಿದ್ದಾರೆ. ಠಾಣೆಗೆ ಹೋಗಿ ಬಂದಿದ್ದಾರೆ ಎಂದು ಅವರು ಹೇಳಿದರು. ಈ ಠಾಣೆಯಲ್ಲಿ ಕೇವಲ ಏಳು ಕಂಪ್ಯೂಟರ್‌ಗಳಿವೆ. ಅವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿ 30 ಸಿಬ್ಬಂದಿ ಕೊರತೆ ಇದೆ ಎಂದರು.

ಕಮಿಷನರ್ ಗರಂ: ‘ಈ ವರ್ಷ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್‌.ಎಸ್.ಮೇಘರಿಕ್ ಅಂಕಿ ಅಂಶಗಳ ಸಮೇತ ವಿವರಣೆ ನೀಡಿದರು. ಆಗ, ‘ಕೆಲವಡೆ ಗಂಭೀರ ಅಪರಾಧ ಕೃತ್ಯಗಳು ನಡೆದಾಗ ತಮ್ಮ ಸಿಬ್ಬಂದಿ ಸೂಕ್ತ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಲ್ಲ. ಬದಲಾಗಿ ಸಾಮಾನ್ಯ ಪ್ರಕರಣಗಳೆಂದು ಪರಿಗಣಿಸಿದ್ದಾರೆ’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು.

ಇದಕ್ಕೆ ಗರಂ ಆದ ಕಮಿಷನರ್, ‘ಅಂಥ ಒಂದೂ ಪ್ರಕರಣ ವರದಿಯಾಗಿಲ್ಲ.  ಬೇಕಾದರೆ ಬಹಿರಂಗ ಸವಾಲು ಹಾಕುತ್ತೇನೆ. ದಾಖಲೆ ಇದ್ದರೆ ತೋರಿಸಿ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಖುದ್ದು ಕ್ರಮ ಜರುಗಿಸುತ್ತೇನೆ’ ಎಂದು ಹೇಳಿದರು.

ಅಂಕಿ–ಅಂಶ ಬೇಕಿಲ್ಲ: ಆಗ ಸಚಿವ ಪರಮೇಶ್ವರ್, ‘ಅಪರಾಧ ಪ್ರಮಾಣ ಇಳಿಮುಖವಾಗಿವೆ ಎಂದು ಅಂಕಿಅಂಶಗಳ ಮೂಲಕ ಸಾಬೀತು ಪಡಿಸುವುದು ಬೇಕಾಗಿಲ್ಲ. ದೇಶ, ವಿದೇಶದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಒಂದೇ ಒಂದು ಗಂಭೀರ ಪ್ರಕರಣ ನಡೆದರೂ  ಜಗತ್ತಿಗೆ ಗೊತ್ತಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ’ ಎಂದು ಪೊಲೀಸರಿಗೆ ಕಿವಿಮಾತು ಹೇಳಿದರು.

ದೂಳು ಹಿಡಿದ ಮ್ಯಾನ್ಯುಯಲ್‌: ‘ಇತ್ತೀಚೆಗೆ ವೈಟ್‌ಫೀಲ್ಡ್‌ ಠಾಣೆಗೆ ಭೇಟಿ ನೀಡಿದ್ದಾಗ ಆ ಠಾಣೆ ಪರಿಸ್ಥಿತಿ ಕಂಡು ಬೇಸರವಾಯಿತು. ಪೊಲೀಸ್ ಮ್ಯಾನುಯಲ್ ಪುಸ್ತಕ ದೂಳು ಹಿಡಿದಿತ್ತು. ಈ ರೀತಿ ಕರ್ತವ್ಯ ನಿಭಾಯಿಸುವುದು ಉತ್ತಮವಲ್ಲ. ಹೀಗಾಗಿ ಠಾಣೆಗಳ ಸುಧಾರಣೆ ಕಡೆಗೆ ಅಧಿಕಾರಿಗಳು ಗಮನಹರಿಸಬೇಕಿದೆ’ ಎಂದು ಸೂಚಿಸಿದರು.

‘ಸಾಮಾಜಿಕ ತಾಣಗಳಲ್ಲಿ ನಗರ  ಪೊಲೀಸ್‌ ಇಲಾಖೆಗೆ ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಇದ್ದಾರೆ. ಇಲಾಖೆಯ ಪ್ರತಿಯೊಂದು ನಡೆ ಬಗ್ಗೆಯೂ ಫೇಸ್‌ಬುಕ್‌–ಟ್ವಿಟರ್‌ಗಳಲ್ಲಿ ಚರ್ಚೆಯಾಗುತ್ತವೆ. ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸಬೇಕು.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಡಿಜಿಪಿ ಓಂಪ್ರಕಾಶ್, ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್, ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಎಂ.ಎ.ಸಲೀಂ, ಪ್ರತಾಪ್ ರೆಡ್ಡಿ, ಪಿ.ಹರಿಶೇಖರನ್, ಬಿ.ಎನ್.ಎಸ್.ರೆಡ್ಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೆಹಲಿ ಮಾದರಿ ಪ್ರಯೋಗ ಸದ್ಯಕ್ಕಿಲ್ಲ
‘ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ತಡೆಗಟ್ಟಲು ದೆಹಲಿಯಲ್ಲಿ ಜಾರಿಗೆ ತಂದಿರುವ ಸಮ ಮತ್ತು ಬೆಸ ಸಂಖ್ಯೆ ವಾಹನ ಸಂಚಾರ ಯೋಜನೆಯನ್ನು  ಸದ್ಯಕ್ಕೆ ನಗರದಲ್ಲಿ ಜಾರಿಗೆ ತರುವುದಿಲ್ಲ. ಈ ಪ್ರಯೋಗ ಅಲ್ಲಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಅದರ ಅನುಷ್ಠಾನದ ಬಗ್ಗೆ ಚಿಂತಿಸಲಾಗುವುದು’ ಎಂದು ಪರಮೇಶ್ವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT