ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಮನಬಿಲ್ಲು’ ಮೂಡಿದಾಗ...

Last Updated 28 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ನನ್ನದೇನೂ ಹೆಚ್ಚುಗಾರಿಕೆಯಿಲ್ಲ, ಅಣ್ಣಾವ್ರು ನನಗೆ ನಿರ್ದೇಶಕನ ಬೋರ್ಡು ನೇತುಹಾಕಿದರು’ ಸಂಕೋಚದಿಂದಲೇ ನುಡಿದರು ನಿರ್ದೇಶಕ ಚಿ. ದತ್ತರಾಜ್. 2012ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದ ನಿರ್ದೇಶಕರಿಗೆ ಕೊಡಮಾಡುವ ‘ಪುಟ್ಟಣ ಕಣಗಾಲ್’ ಪ್ರಶಸ್ತಿ ಅವರಿಗೆ ಸಂದಿದೆ.

ಅವರ ನಿರ್ದೇಶನದ ‘ಕಾಮನಬಿಲ್ಲು’ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲೊಂದು. ‘ಕೆರಳಿದ ಸಿಂಹ’, ‘ಅದೇ ಕಣ್ಣು’, ‘ಶ್ರುತಿ ಸೇರಿದಾಗ’, ‘ಮೃತ್ಯುಂಜಯ’, ‘ಅರಳಿದ ಹೂವುಗಳು’ ‘ಆನಂದ ಜ್ಯೋತಿ’ ದತ್ತರಾಜ್ ನಿರ್ದೇಶನದ ಇತರ ಸಿನಿಮಾಗಳು.

ಚೆನ್ನೈನಲ್ಲಿ ನೆಲೆನಿಂತಿರುವ ಅವರು ಕನ್ನಡ ಚಿತ್ರರಂಗದ ಜತೆ ಕಳ್ಳುಬಳ್ಳಿ ಸಂಬಂಧವುಳ್ಳವರು. ದತ್ತರಾಜ್, ಪ್ರಸಿದ್ಧ ಚಿತ್ರ ಸಾಹಿತಿ ಚಿ. ಉದಯಶಂಕರ್ ಅವರ ತಮ್ಮ. ದತ್ತರಾಜ್ ಅವರ ತಂದೆ ಚಿ. ಸದಾಶಿವಯ್ಯ ಸಹ ಚಿತ್ರಸಾಹಿತಿ.

ರಾಜ್‌ಕುಮಾರ್ ಜತೆ ಬಹುಶಃ ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಹೆಚ್ಚು ಸಮಯ ವ್ಯಯಿಸಿರುವುದು ದತ್ತರಾಜ್. ಆ ಒಡನಾಟಕ್ಕೆ ಸಾಕ್ಷಿ ಅವರು ಬರೆದ ‘ಕಥಾನಾಯಕನ ಕಥೆ’. ಅಂದಹಾಗೆ, ಈ ‘ಕಥಾನಾಯಕನ ಕಥೆ’ ವರನಟನ ಬದುಕಿನ ಮೊದಲ ಬಯಾಗ್ರಫಿ.

ರಾಜ್‌ಕುಮಾರ್ ಅವರ ಬದುಕಿಗೆ ‘ವಿಜಯ ಚಿತ್ರ’ ಮಾಸಪತ್ರಿಕೆಯಲ್ಲಿ ಏಳೂವರೆ ವರ್ಷ 93 ಸಂಚಿಕೆಗಳಲ್ಲಿ ಅಕ್ಷರರೂಪು ಕೊಟ್ಟವರು ದತ್ತರಾಜ್. ಅಣ್ಣಾವ್ರು ಇವರನ್ನು ಬಾಯಿತುಂಬಾ ದತ್ತು ಎಂದು ಕರೆಯುತ್ತಿದ್ದರು. ಪುಟ್ಟಣ್ಣ ಕಣಗಾಲ್ ಅವರ ಆತ್ಮೀಯ ವಲಯದಲ್ಲಿ ಗುರ್ತಿಸಿಕೊಂಡಿದ್ದ ದತ್ತರಾಜ್ ಅವರಿಗೆ ಆ ಮಹಾನ್ ನಿರ್ದೇಶಕನ ಹೆಸರಿನ ಪ್ರಶಸ್ತಿ ದೊರೆತಿರುವುದು ಖುಷಿ ಕೊಟ್ಟಿದೆ. ‘ಈ ಪ್ರಶಸ್ತಿಯನ್ನು ನನ್ನ ಬೆಳವಣಿಗೆಗೆ ಕಾರಣರಾದ ರಾಜ್‌ಕುಮಾರ್ ಮತ್ತು ಪುಟ್ಟಣ್ಣ ಅವರಿಗೆ ಅರ್ಪಿಸುವೆ’ ಎಂದು ಅವರು ವಿನಮ್ರವಾಗಿ ಹೇಳಿದರು.

‘ನಾನು ಸಿನಿಮಾ ಕ್ಷೇತ್ರಕ್ಕೆ ಬಂದದ್ದು ಅಣ್ಣ ಚಿ. ಉದಯಶಂಕರ್ ಅವರಿಂದಾಗಿ. ಅಣ್ಣನಿಗೆ ನಟನಾಗುವ ಆಸೆ ಇತ್ತು. ರಾಜ್‌ಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಪ್ರವರ್ಧಮಾನದಲ್ಲಿದ್ದರು. ‘ನೀನು ಎರಡು ಕಡೆ ಹೆಜ್ಜೆ ಇಡಬೇಡ’ ಎನ್ನುವ ಅಪ್ಪನ ಮಾತನ್ನು ಮನಸ್ಸಿಗೆ ಇಳಿಸಿಕೊಂಡು ಬರಹಗಾರನಾದೆ.

ನಾನು ಮೊದಲಿಗೆ ಸಹಾಯಕ ನಿರ್ದೇಶಕನಾಗಿದ್ದು ರವಿ ನಿರ್ದೇಶನದ 1970ರಲ್ಲಿ ನಿರ್ಮಾಣವಾದ ‘ಅರಿಶಿನ ಕುಂಕುಮ’ ಚಿತ್ರದಲ್ಲಿ. ಸ್ವತಂತ್ರ ನಿರ್ದೇಶಕನಾಗಿದ್ದು 1981ರಲ್ಲಿ ‘ಕೆರಳಿದ ಸಿಂಹ’ದ ಮೂಲಕ. ಚಿತ್ರರಂಗದಲ್ಲಿ ತೊಡಗಿದಾಗ ದುಡ್ಡು ಮಾಡಬೇಕು ಎಂದು ಅಂದುಕೊಂಡೇ ಇರಲಿಲ್ಲ. ಶಹಬ್ಬಾಸ್ ಎನಿಸಿಕೊಳ್ಳಬೇಕು ಎನ್ನುವುದಷ್ಟೇ ಉದ್ದೇಶವಾಗಿತ್ತು.

ರವಿ ಅವರ ಬಳಿ ಒಳ್ಳೆಯ ವಿಷಯ ಕಲಿತೆ. ಆನಂತರ ರಾಜ್‌ಕುಮಾರ್ ಕಂಪೆನಿ ಸೇರಿದೆ. ಬೆಂಗಳೂರಿನ ನ್ಯಾಷನಲ್ ಕಾಲೇಜು ನನಗೆ ತಳಪಾಯ. ‘ಅಮರಕೋಶ’, ರಾಜರತ್ನಂ ಅವರ ಪದಗಳು ಪಠ್ಯಗಳಾಗಿದ್ದವು. ‘ಅಮರಕೋಶ’ ಕಂಠಪಾಠದಿಂದಲೇ ನನಗೆ ಕನ್ನಡ ಭಾಷಾ ಶುದ್ಧಿ ಸಿಕ್ಕಿದ್ದು. ‘ದತ್ತು ನೀನು ಕನ್ನಡವನ್ನು ಇಷ್ಟು ಶುದ್ಧವಾಗಿ ಹೇಗೆ ಕಲಿತೆ’ ಎಂದು ಒಮ್ಮೆ ಅಣ್ಣಾವ್ರು ಕೇಳಿದ್ದರು. ನಾನು ‘ಅಮರಕೋಶ’ದತ್ತ ಕೈ ತೋರಿದ್ದೆ. ‘ನಮಗೆ ಅಮರಕೋಶವನ್ನು ನಾಟಕದ ಕಂಪೆನಿಗಳಲ್ಲಿ ರೆಗ್ಯುಲರ್ ಆಗಿ ಅಭ್ಯಾಸ ಮಾಡಿಸುತ್ತಿದ್ದರು’ ಎಂದು ಅಣ್ಣಾವ್ರು ಪ್ರತಿಕ್ರಿಯಿಸಿದ್ದರು.

ನಿರ್ದೇಶನದ ಕಾಮನಬಿಲ್ಲು
ಸುಮಾರು ಮೂರು ದಶಕಗಳ ಕಾಲ ರಾಜ್‌ಕುಮಾರ್ ಅವರ ಒಡನಾಟದಲ್ಲಿದ್ದೆ. ದಿನದ ಸರಾಸರಿ 15 ಗಂಟೆ ಕಾಲ ಅವರ ಜತೆ ಕಳೆದಿದ್ದೇನೆ. ‘ಹುಲಿಹಾಲಿನ ಮೇವು’ ಸಿನಿಮಾ ನಂತರ ನನಗೆ ಸಹಾಯಕ ನಿರ್ದೇಶಕನಾಗಿ ಮುಂದುವರೆಯಲು ಮುಜುಗರವಾಯಿತು.

ಆಗಲೇ 40 ವರ್ಷ ದಾಟಿದೆ, ತಲೆ ಬೆಳ್ಳಗಾಗಿದೆ. ಮತ್ತೂ ಫೈಲ್‌ಗಳನ್ನು ಹಿಡಿದುಕೊಂಡು ನಿಲ್ಲುವುದು ಸರಿಕಾಣಲಿಲ್ಲ. ‘ವಿಜಯಚಿತ್ರ’ ಪತ್ರಿಕೆಯಲ್ಲಿ ಕೆಲಸದಲ್ಲಿ ತೊಡಗಿದೆ. ನಾನು ಸಹಾಯಕ ನಿರ್ದೇಶನನಾಗಿ ಕೆಲಸ ಮಾಡುವುದಿಲ್ಲ, ಪತ್ರಿಕೋದ್ಯಮದಲ್ಲಿ ತೊಡಗುವೆ ಎಂದು ಅಣ್ಣಾವ್ರಿಗೆ ಹೇಳಿದೆ. ‘ನನ್ನ ಚಿತ್ರಗಳಿಗೆ ಸಂಭಾಷಣೆ ಬರೆ’ ಎಂದರು.

ಅಣ್ಣ ಬರಹಗಾರನಾಗಿದ್ದರಿಂದ ಸಿನಿಮಾ ಬರವಣಿಗೆಯಲ್ಲಿ ತೊಡಗುವುದು ಸರಿ ಕಾಣಲಿಲ್ಲ. ಕೊನೆಗೆ ನಿರ್ದೇಶಕನಾಗು ಎಂದರು. ‘ಕೆರಳಿದ ಸಿಂಹ’ವನ್ನು ನಿರ್ದೇಶಿಸಿದೆ. ನನ್ನ ಕುತ್ತಿಗೆಗೆ ರಾಜ್‌ಕುಮಾರ್ ಅವರೇ ನಿರ್ದೇಶಕನ ಬೋರ್ಡು ನೇತು ಹಾಕಿದರು. ಒಂದು ಚಿತ್ರ ಆರಂಭವಾದರೆ ನನ್ನ ಪೂರ್ಣ ಗಮನ ಆ ಕಡೆಗೆ. ಅಂತಿಮ ಪ್ರತಿ ಬರುವವರೆಗೂ ಧ್ಯಾನಿಸುತ್ತಿದ್ದೆ. ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಾಗ ಹಿಂದಿನ ಚಿತ್ರ ಮರೆತು ಹೋಗುತ್ತಿತ್ತು. ಆ ಕಾರಣದಿಂದಲೇ ಬೆರಳೆಣಿಕೆಯ ಚಿತ್ರಗಳನ್ನು ಮಾಡಿದ್ದೇನೆ’ ಎನ್ನಿಸುತ್ತದೆ.

ಪುಟ್ಟಣ್ಣ ನೆನಪಿನ ಚಿತ್ರಪಟ
‘ಪುಟ್ಟಣ್ಣ ಅವರಂಥ ಮಹಾನ್ ಸಾಧಕನ ಹೆಸರಿನ ದೊಡ್ಡ ಮೊತ್ತದ ಪ್ರಶಸ್ತಿ ನನಗೆ ಸಂದಿದ್ದು ನಿಜಕ್ಕೂ ಖುಷಿ. ನಮ್ಮ ಕುಟುಂಬಕ್ಕೆ ಪುಟ್ಟಣ್ಣ ಹತ್ತಿರದವರು. ‘ಶುಭಮಂಗಳ’ ಮತ್ತು ‘ನಾಗರಹಾವು’ ಚಿತ್ರಗಳಲ್ಲಿ ಅವರೊಟ್ಟಿಗೆ ಕೆಲಸ ಮಾಡಬೇಕಿತ್ತು. ‘ನಾಗರಹಾವು’ ಚಿತ್ರದ ಸಂದರ್ಭದಲ್ಲಿ ಪುಟ್ಟಣ್ಣ, ‘ನಿನ್ನ ಜತೆ ಇರುವ ದತ್ತುವನ್ನು ನನಗೆ ಕೊಡು. ದತ್ತುವಿನಂಥ ಅಸಿಸ್ಟೆಂಟ್ ಇದ್ದರೆ ಸಾಕು ನನಗೆ’ ಎಂದು ರವಿ ಅವರನ್ನು ಕೇಳಿದ್ದಂತೆ. ನಾನು ಅಣ್ಣಾವ್ರ ಕಂಪೆನಿ ಸೇರಿದ್ದರಿಂದ ಅವರ ಜತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ಕಥೆಯ ಬಗ್ಗೆ ಹಲವು ಸಲ ಚರ್ಚೆ ಮಾಡಿದ್ದೇವೆ.

ವಿಶ್ರಾಂತ ಜೀವನ
ಶಿವರಾಜ್ ಕುಮಾರ್ ಅಭಿಯನದ, 1993ರಲ್ಲಿ ತೆರೆಗೆ ಬಂದ ‘ಆನಂದಜ್ಯೋತಿ’ ದತ್ತರಾಜ್ ನಿರ್ದೇಶನದ ಕೊನೆಯ ಚಿತ್ರ. ಆ ನಂತರ ಅವರು ಚೆನ್ನೈ ಸೇರಿದರು. ಚಿ. ಗುರುದತ್ ನಿರ್ದೇಶನದ ‘ಸಮರ’ ಚಿತ್ರಕ್ಕೆ ಮತ್ತು ದ್ವಾರಕೀಶ್ ತಮ್ಮ ಮಕ್ಕಳಿಗೆ ನಿರ್ಮಿಸಿದ ‘ಹೃದಯ ಕಳ್ಳರು’ ಚಿತ್ರಕ್ಕೆ ಸಂಭಾಷಣೆ ಬರೆದರು.

ಕಥಾನಾಯಕನ ಕಥೆ
‘ಸಂಪೂರ್ಣ ರಾಮಾಯಣ ಸಿನಿಮಾ ಮಾಡುವ ಆಸೆ ರಾಜ್‌ಕುಮಾರ್ ಅವರಿಗೆ ಇತ್ತು. ಇದನ್ನು ನೆನಪಿಟ್ಟುಕೊಳ್ಳಿ ಎಂದು ರಾಮಾಯಣದ ಸನ್ನಿವೇಶಗಳನ್ನು ಅವರು ಹೇಳುತ್ತಿದ್ದರು. ನಾನು ಬರೆದುಕೊಳ್ಳುತ್ತಿದ್ದೆ. ನಾನು ಬರೆದಿದ್ದೆಲ್ಲವನ್ನೂ ನೋಡಿದ ನಂತರ ನನ್ನ ಬಾಲ್ಯದ ಘಟನೆಗಳನ್ನೂ ದಾಖಲಿಸು ಎಂದು ಬದುಕಿನ ಸನ್ನಿವೇಶಗಳನ್ನು ಹೇಳುತ್ತಿದ್ದರು. ಅವರ ತಾಯಿಯ ಬಳಿ ಎರಡು ದಿನವಿದ್ದು ಮಾಹಿತಿ ಪಡೆದೆ.

ಗೊರೂರು ರಾಮಸ್ವಾಮಿ ಅಯ್ಯಂಗಾರರ ಹಳ್ಳಿಯ ಚಿತ್ರಗಳ ರೀತಿ ನಿಮ್ಮ ಬದುಕಿನ ಚಿತ್ರಪಟವಿದೆ ಎಂದೆ. ಅಷ್ಟರಲ್ಲಾಗಲೇ ‘ವಿಜಯಚಿತ್ರ’ದ ಮುಖ್ಯಸ್ಥರಾದ ನಾಗಿರೆಡ್ಡಿ ಅವರು ರಾಜ್‌ಕುಮಾರ್ ಅವರ ಬದುಕಿನ ಕಥೆಯನ್ನು ಬರೆಸಲು ಸಿದ್ಧರಾಗಿದ್ದರು. ಈ ರೀತಿ ವಿಜಯಚಿತ್ರಕ್ಕೆ ‘ಕಥಾನಾಯಕನ ಕಥೆ’ ಪ್ರವೇಶವಾಯಿತು. ಮೊದಲು ‘ನಟಸಾರ್ವಭೌಮನ ಚರಿತ್ರೆ’ ಎಂದು ಹೆಸರು ಕೊಟ್ಟೆ. ನಮ್ಮ ತಂದೆ ‘ಕಥಾನಾಯಕ ಕಥೆ’ ಎಂದು ಬದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT