ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಖಾನೆ ಪಾಲಾಗುತ್ತಿರುವ ಕುಡಿಯುವ ನೀರು’

Last Updated 17 ಡಿಸೆಂಬರ್ 2015, 7:23 IST
ಅಕ್ಷರ ಗಾತ್ರ

ಹುಣಸಗಿ : ನಾರಾಯಣಪುರದ ಬಸವ ಸಾಗರ ಜಲಾಶಯದಲ್ಲಿ ನೀರು ಲಭ್ಯವಿಲ್ಲ ಎಂದು ನಿಗಮದ ಹಿರಿಯ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಕೈಗಾರಿಕೆಗಳು ನೀರು ಪಡೆಯುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡರಂತೆ ಇದ್ದಾರೆ ಎಂದು ರೈತ ಹೋರಾಟಗಾರ ಸಂತೋಷ ತೋಟದ್ ಆರೋಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್-ಮದರಿಯ ಬಾಲಾಜಿ ಶುಗರ್ಸ್ ಮತ್ತು ಕೆಮಿಕಲ್ ಕಂಪನಿಯ ಒಡೆತನದ ಸಕ್ಕರೆ ಕಾರ್ಖಾನೆಯು ಕೃಷ್ಣಾ ನದಿಯ ಬಸವ ಸಾಗರ ಜಲಾಶಯದ ಹಿನ್ನಿರನ್ನು ಅಕ್ರಮ ವಾಗಿ ಪಡೆಯುತ್ತಿವೆ ಎಂದು ನಾರಾಯ ಣಪುರ ಮುಖ್ಯ ಎಂಜಿನಿಯರ್ ಕಚೇರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.

ಈ ಕಾರ್ಖಾನೆಗಳು ಅಂದಾಜು 20 ಎಚ್‌ಪಿ ಸಾಮರ್ಥ್ಯದ 3 ಮೋಟಾರ್‌ಗಳ ಮೂಲಕ ಪ್ರತಿ ದಿನ  ನೀರು ಪಡೆದು ಕಾರ್ಖಾನೆಗೆ ಬಳಸಿಕೊಳ್ಳುತ್ತಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.

ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಪಂಪ್‌ಸೆಟ್‌ಗಳ ಮೂಲಕ ಜಲಾಶಯದ ಹಿನ್ನಿರಿನಿಂದ ರೈತರಾಗಲಿ, ಕೈಗಾರಿಕೆಗಳಿಗಾಗಲಿ, ನೀರೆತ್ತುವಂತ್ತಿಲ್ಲ ಎಂದು ನಿಗಮದ ಆದೇಶವಿದೆ. ಅದನ್ನು ಗಾಳಿಗೆ ತೂರಿ ಅಕ್ರಮವಾಗಿ ನೀರನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೃಷ್ಣಾ ನದಿ ನೀರಿನ  ಎಫ್.ಆರ್.ಎಲ್. ಮಟ್ಟ ಬಿಟ್ಟು ನದಿಗೆ ಸೇರುವ ಯರಗಲ್-ಮದರಿ ಗ್ರಾಮದ ನಾಲಾದಿಂದ ಮಾತ್ರ ನೀರು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಆದರೆ ನದಿಯ ಪಕ್ಕದಲ್ಲೇ  ನಾಲಾ ಮಾಡಿಕೊಂಡು ನೀರನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದಾಗಿ ಎರಡನೇ ಅವಧಿಗೂ ಕೃಷಿ ಬಳಕೆಗೆ  ನೀರು ಇಲ್ಲದಂತಾಗಿದೆ. ಅಲ್ಲದೇ ಇರುವ ನೀರು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಆದ್ದರಿಂದ ನಿಗಮದ ಹಿರಿಯ ಅಧಿಕಾರಿಗಳು ಶಿಘ್ರದಲ್ಲಿಯೇ ಇದನ್ನು ಸ್ಥಗಿತಗೊಳಿಸಿ ಸಂಬಂಧಿಸಿದ ಕಾರ್ಖಾನೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ನೀರು ಪೋಲಾಗುವುದನ್ನು ತಡೆಗಟ್ಟಬೇಕೆಂದು ಹಿರಿಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.  ವಿಳಂಬ ಧೋರಣೆ ಅನುಸರಿಸಿದಲ್ಲಿ ರೈತ ಸಂಘಟನೆಗಳೊಂದಿಗೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT