ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಪೊರೇಟ್‌ ಅನುದಾನ ಹೊಸ ಆಶಾಕಿರಣ’

ವಾರದ ಸಂದರ್ಶನ
Last Updated 11 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ಹೊಂದಿಕೊಂಡಿರುವ, ಹಸಿರುಭರಿತ ಕ್ಯಾಂಪಸ್‌ ನಲ್ಲಿ 25 ವರ್ಷಗಳ ಹಿಂದೆ ‘ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ’ (ನಿಯಾಸ್- ಎನ್‌ಐಎಎಸ್‌) ಸ್ಥಾಪಿಸಿದವರು ಉದ್ಯಮಿ ಜೆಆರ್‌ಡಿ ಟಾಟಾ ಮತ್ತು ಪರಮಾಣು ವಿಜ್ಞಾನಿ ರಾಜಾರಾಮಣ್ಣ. ಈ ಸಂಸ್ಥೆ ಈವರೆಗೆ ಹೊಂದಿರುವ ವರ್ಚಸ್ಸು ಮತ್ತು ಮುನ್ನೋಟಗಳ ಕುರಿತು ಅದರ ನಿರ್ದೇಶಕ ಬಲದೇವ ರಾಜ್ ಅವರ ಜೊತೆ ಶಿವಾನಂದ ಕಣವಿ ಅವರು ನಡೆಸಿದ ಮಾತುಕತೆಯ ಸಂಕ್ಷಿಪ್ತ ಟಿಪ್ಪಣಿಗಳು ಕೆಳಗಿವೆ:

ಬಲದೇವ ರಾಜ್ ಅವರು ಪ್ರಸಿದ್ಧ ಲೋಹ ಶಾಸ್ತ್ರಜ್ಞ. ಪರಮಾಣು ಶಕ್ತಿ ಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಕಾಲ ಮಹತ್ವದ ಕೆಲಸ ಮಾಡಿ ಆರು ತಿಂಗಳ ಹಿಂದೆ ನಿಯಾಸ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ರಾಜಾ ರಾಮಣ್ಣ, ರೊದ್ದಂ ನರಸಿಂಹ, ಕಸ್ತೂರಿ ರಂಗನ್ ಮತ್ತು ವಿ.ಎಸ್‌.ರಾಮಮೂರ್ತಿ ಅವರಂಥ ಘಟಾನುಘಟಿಗಳನ್ನು ನಿರ್ದೇಶಕರನ್ನಾಗಿ ಹೊಂದಿದ ಹಿರಿಮೆ ಈ ಸಂಸ್ಥೆಗಿದೆ.

*ನಿಯಾಸ್ ಗೆ  25 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪಾತ್ರ ಮತ್ತು ಭವಿಷ್ಯದ ಬಗ್ಗೆ ನಿಮ್ಮ ಮಾತು ಏನು?
ಸಮಷ್ಟಿಯ ದೃಷ್ಟಿಕೋನ ಹೊಂದಿರುವ ಬೌದ್ಧಿಕ ನಾಯಕರು ಇಲ್ಲಿ ರೂಪುಗೊಳ್ಳಬೇಕು ಎಂಬುದು ಜೆಆರ್‌ಡಿ ಟಾಟಾ ಮತ್ತು ರಾಜಾ ರಾಮಣ್ಣ ಅವರ ಉದ್ದೇಶವಾಗಿತ್ತು. ಎಲ್ಲ ಕ್ಷೇತ್ರಗಳಲ್ಲೂ ಇಂಥ ನಾಯಕರನ್ನು ರೂಪಿಸುವ ಆಸೆ ಅವರದಾಗಿತ್ತು. ದೇಶದ ಬೇರೆ ಬೇರೆ ರಂಗಗಳಲ್ಲಿ ಮುಂಚೂಣಿ ಸ್ಥಾನ ವಹಿಸಿಕೊಳ್ಳುವ ಗಣ್ಯರು ಇಲ್ಲಿಗೆ ಬಂದು, ಇಲ್ಲಿರುವ ಅನ್ಯ ಕ್ಷೇತ್ರಗಳ ಮೇಧಾವಿಗಳ ಜೊತೆ ಸಮಯ ಕಳೆಯಬೇಕು ಎಂಬ ಅಭಿಲಾಷೆ ಅವರದಾಗಿತ್ತು. ಆಗ ನಡೆಯುವ ಮಾತುಕತೆಯೇ ಅವರ ವೈಚಾರಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ಟಾಟಾ ಮತ್ತು ರಾಜಾ ರಾಮಣ್ಣ ನಂಬಿದ್ದರು.

ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆಯನ್ನು ನಾವು ಮಾಡಿದ್ದೇವೆ ಎಂಬುದು ನನ್ನ ಅನಿಸಿಕೆ. ಸರ್ಕಾರ ಮತ್ತು ಉದ್ಯಮ ರಂಗದ ನಾಯಕರಿಗಾಗಿ ಹದಿನೈದರಿಂದ ಇಪ್ಪತ್ತು ಇಂಥ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸುತ್ತೇವೆ. ನಂತರ ಅವರು ತಾವು ಬಹಳಷ್ಟು ಬದಲಾಗಿರುವುದಾಗಿ ಹೇಳಿಕೊಂಡಿದ್ದಾರೆ.

ನಮ್ಮ ಸಂಸ್ಥೆ ಬೀರಿದ ಪ್ರಭಾವ ದೊಡ್ಡದು. ಆದರೆ, ನಮಗೆ ಬರುವ ಹಣಕಾಸಿನ ಅನುದಾನ ಇಂದಿನ ದಿನಗಳಲ್ಲಿ ತೀರಾ ಅಲ್ಪ. ನಾನು ಇಲ್ಲಿಗೆ ಬಂದ ನಂತರ ನಮ್ಮ ಸಹವರ್ತಿಗಳು, ಉಪನ್ಯಾಸಕ ಸಿಬ್ಬಂದಿ, ಪ್ರೊಫೆಸರ್‌ಗಳು, ಪಿಎಚ್‌.ಡಿ. ವಿದ್ಯಾರ್ಥಿಗಳ ಜೊತೆ ವಿಸ್ತಾರವಾಗಿ ಮಾತನಾಡಿದ್ದೇನೆ. ಸಂಸ್ಥೆ ಪ್ರಭಾವಿ ಆಗಬೇಕಾದರೆ ಜನ ಸಂಪನ್ಮೂಲವಲ್ಲದೆ, ಹಣ ಕೂಡ ಅಗತ್ಯ. ಟಾಟಾ ಟ್ರಸ್ಟ್‌ ನಮಗೆ ಬೆಂಬಲ ನೀಡುತ್ತಿದೆ. ಟಾಟಾ ಟ್ರಸ್ಟ್‌ನವರು ಬಹಳ ಉದಾರಿಗಳು. ದೇಶದ ಬಗ್ಗೆ ಅಪಾರ ಬದ್ಧತೆ ಹೊಂದಿರುವವರು. ನಿಜ ಹೇಳಬೇಕೆಂದರೆ, ನಾವು ಅಸ್ತಿತ್ವದಲ್ಲಿರುವುದೇ ಟಾಟಾ ಟ್ರಸ್ಟ್‌ ಕಾರಣದಿಂದ. ಮುಂದಿನ ದಿನಗಳಲ್ಲಿ ನಾವು ವರ್ಷಕ್ಕೆ ₹10 ಕೋಟಿಯಿಂದ ₹15 ಕೋಟಿವರೆಗೆ ಬಡ್ಡಿ ಬರುವಂಥ ದತ್ತಿ ಹಣವನ್ನು ಒಗ್ಗೂಡಿಸಿಕೊಳ್ಳಬೇಕು. ಇಂಥ ಸಂಸ್ಥೆಗಳ ವಾರ್ಷಿಕ ಖರ್ಚಿಗೆ ಇದು ದೊಡ್ಡದೇನೂ ಅಲ್ಲ.

*ದತ್ತಿ ಹಣ ಒಗ್ಗೂಡಿಸಲು ನೀವು ಕಾರ್ಪೊರೇಟ್‌ ಸಂಸ್ಥೆಗಳು, ಸರ್ಕಾರ ಮತ್ತು ಅನಿವಾಸಿ ಭಾರತೀಯರ ಮೊರೆ ಹೋಗುವಿರಾ?
ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದ ವಿಷಯವನ್ನು ಕಂಪೆನಿ ಕಾಯ್ದೆಗೆ ಇತ್ತೀಚೆಗೆ ಸೇರಿಸಿರುವ ಕಾರಣ, ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮ ಬೀರುವ ನಮ್ಮಂಥ ಸಂಸ್ಥೆಗಳು ಕಾರ್ಪೊರೇಟ್‌ ಸಂಸ್ಥೆಗಳಿಂದ ದೊಡ್ಡ ಪ್ರಮಾಣದಲ್ಲಿ ಅನುದಾನ ನಿರೀಕ್ಷಿಸಬಹುದು. ನಾನು ಕೆಲವು ಕಾರ್ಪೊರೇಟ್‌ ಕಂಪೆನಿಗಳ ಜೊತೆ ಈಗಾಗಲೇ ಮಾತುಕತೆ ಆರಂಭಿಸಿದ್ದೇನೆ.

*ನಿಯಾಸ್‌ನ ಸಿಬ್ಬಂದಿ ಯಾವ ಕ್ಷೇತ್ರಗಳಲ್ಲಿ ಸಂಶೋಧನೆ ಕೈಗೊಂಡಿದ್ದಾರೆ?
ಸಂಸ್ಕೃತಿ, ಪರಂಪರೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿದ್ವಾಂಸರು, ತಜ್ಞರೂ ಆದವರು ನಮ್ಮಲ್ಲಿದ್ದಾರೆ. ಅಸಾಂಪ್ರದಾಯಿಕ ಪದ್ಧತಿಗಳ ಮೂಲಕ ಶಿಕ್ಷಣ ನೀಡುವ ಮಾರ್ಗಗಳ ಶೋಧದಲ್ಲಿರುವ ಮಕ್ಕಳ ಮನಶಾಸ್ತ್ರಜ್ಞರು ನಮ್ಮಲ್ಲಿದ್ದಾರೆ. ಬಾಹ್ಯಾಕಾಶ, ರಕ್ಷಣೆ, ಅಣುಶಕ್ತಿ, ಊರ್ಜಾ, ಪರಿಸರ ಕುರಿತು ಸಂಶೋಧನೆ ನಡೆಸುತ್ತಿರುವ ಗುಂಪುಗಳಿವೆ. ಕೃಷಿ ಕ್ಷೇತ್ರದ ಕಡೆಗೂ ನಮ್ಮ ಕೆಲಸವನ್ನು ವಿಸ್ತರಿಸಬೇಕು ಎನ್ನುವುದು ನನ್ನ ಇಚ್ಛೆ. ಅದರಲ್ಲೂ ವಿಶೇಷವಾಗಿ, ಸುಸ್ಥಿರ ಕೃಷಿ ಬಗ್ಗೆ ನಾವು ಹೆಚ್ಚು ಕೆಲಸ ಮಾಡಬೇಕು. ನಾವು ಈಗ ಭಾರತದಲ್ಲಿ ಕೈಗಾರಿಕಾ ವಲಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಆದರೆ ಕೃಷಿ ಕ್ಷೇತ್ರದ ಭವಿಷ್ಯ ಕುರಿತು ಸಾಕಷ್ಟು ಗಮನಹರಿಸುತ್ತಿಲ್ಲ.
ಈ ಎಲ್ಲ ಕ್ಷೇತ್ರಗಳಲ್ಲಿ ಕೆಲವು ಪ್ರೊಫೆಸರ್‌ಗಳು, ಯುವ ಸಹಾಯಕರು, ಪಿಎಚ್‌.ಡಿ ಪಡೆದವರು, ಪಿಎಚ್‌.ಡಿ ವಿದ್ಯಾರ್ಥಿಗಳು ಕ್ಷೇತ್ರ ಸಂಶೋಧನೆ ಕೈಗೊಳ್ಳುವಂತೆ ಮಾಡಬೇಕು ಎಂಬುದು ನನ್ನ ಯೋಜನೆ. ಸತ್ಯೇನ್ ಬೋಸ್‌, ಎಂ.ಎನ್.ಸಹಾ ಅಥವಾ ಸರ್ ಸಿ.ವಿ. ರಾಮನ್  ಕಾಲದ ಜಗತ್ತು ಇದಲ್ಲ. ನಾವು ಈ ಕಾಲದಲ್ಲಿ ವಾಸ್ತವವಾದಿ ಆಗಿರಬೇಕು. ನಮ್ಮ ಯುವಕರಿಗೆ ತುಸು ಮಟ್ಟಿಗಾದರೂ ಹಣ ಬೇಕು. ಆಗ ಮಾತ್ರ ನಾವು ಈಗಿನದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ, ಚೇತೋಹಾರಿಯಾದ ಕೆಲಸಗಳನ್ನು ಮಾಡಬಹುದು.

*ನೀತಿ ಆಯೋಗಕ್ಕೆ ಸಲಹೆ ನೀಡುವಂತಿದ್ದರೆ ನೀವು ಯಾವ ವಿಚಾರಗಳಿಗೆ ಆದ್ಯತೆ ನೀಡುತ್ತೀರಿ?
ಎರಡು ಹೊಸ ವಿಚಾರಗಳು ನನ್ನ ಅಜೆಂಡಾದಲ್ಲಿ ಇವೆ. ಮೊದಲನೆಯದು ಅಸಮಾನತೆಗಳ ಅಧ್ಯಯನ. ಅಸಮಾನತೆ ಕುರಿತು ಸತ್ಯವನ್ನು ಆಧರಿಸಿದ, ಸಮಗ್ರ ದೃಷ್ಟಿಕೋನದ ಸಲಹೆ ಸರ್ಕಾರಕ್ಕೆ ದೊರೆತಿಲ್ಲ. ಅಸಮಾನತೆಗಳ ಬಗ್ಗೆ ವಿಶ್ಲೇಷಣೆ ಮಾಡುವುದು ಸುಲಭವಲ್ಲ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಬೇಕಿದ್ದರೆ, ಸಮಗ್ರ ಸ್ವರೂಪದ ಬೆಳವಣಿಗೆ ಸಾಧಿಸಬೇಕಿದ್ದರೆ ಈ ಪ್ರಕ್ರಿಯೆಗಳಿಂದ ಹೊರಗುಳಿದಿರುವ ಸಮುದಾಯಗಳು ಯಾವುವು ಎಂಬುದು ತಿಳಿದಿರಬೇಕು ಮತ್ತು ಅವು ಎಷ್ಟರಮಟ್ಟಿಗೆ ಹೊರಗುಳಿದಿವೆ ಎಂಬುದೂ ಗೊತ್ತಾಗಬೇಕು.

ಅದೇ ರೀತಿ ನಮ್ಮ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದಂತೆ ಕೆಲವು ಗುರಿಗಳ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ನಮ್ಮ ಪರಂಪರೆಯ ಬಗ್ಗೆ ಸಮಗ್ರ ಚಿತ್ರಣ ಏನು ಎಂಬುದನ್ನು ಸರ್ಕಾರದಲ್ಲಿ ಹೇಳುವ ವ್ಯಕ್ತಿ ಇದ್ದಾರೆ ಎಂದು ನನಗನಿಸುವುದಿಲ್ಲ. ನಮ್ಮ ಸುಮಾರು 100 ಸಾಂಸ್ಕೃತಿಕ ಮೈಲುಗಲ್ಲುಗಳ ವೈಶಿಷ್ಟ್ಯಗಳನ್ನು ಹೇಳುವ ವಿಚಾರದಲ್ಲಿ ಯುರೋಪ್‌ನ ಮಟ್ಟವನ್ನು ನಾವು ಇನ್ನು ಹತ್ತು ವರ್ಷಗಳಲ್ಲಿ ತಲುಪಬಲ್ಲೆವಾ? ಇಂಥ ಕೆಲಸ ಮಾಡಲು ಬೇಕಿರುವ ವ್ಯಕ್ತಿಗಳು ನಿಯಾಸ್‌ನಲ್ಲಿ ಇದ್ದಾರೆ.

ಉದಾಹರಣೆಗೆ ಸದ್ಯ ಹಂಪಿಯನ್ನು ಡಿಜಿಟಲ್ ಮಾಧ್ಯಮದಲ್ಲಿ ಸೆರೆ ಹಿಡಿಯುವ ಕೆಲಸವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಇದಕ್ಕೆ ನಾವು ಐಐಟಿಗಳಿಂದ, ಸ್ವಯಂಸೇವಾ ಸಂಸ್ಥೆಗಳಿಂದ, ಸಾಂಸ್ಕೃತಿಕ ಸಂಘಟನೆಗಳಿಂದ ಅರ್ಹರನ್ನು ಕರೆಸಿಕೊಂಡಿದ್ದೇವೆ. ಈ ದೇಶದ ಸಾಂಸ್ಕೃತಿಕ ಆಯಾಮಗಳ ಅಧ್ಯಯನದಲ್ಲಿ ಇದೇ ಮೊದಲ ಬಾರಿಗೆ ಗಣ್ಯ ಮತ್ತು ಚುರುಕಿನ ವ್ಯಕ್ತಿಗಳನ್ನು ನಾವು ಒಗ್ಗೂಡಿಸಿದ್ದೇವೆ. ಈ ಕಾರ್ಯ ಒಂದು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಎಂಬ ಭರವಸೆ ಇದೆ. ಈ ಕೆಲಸವನ್ನು ನಾವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಂಸ್ಕೃತಿ ಇಲಾಖೆಯ ಜೊತೆಗೂಡಿ ಮಾಡುತ್ತಿದ್ದೇವೆ.

ಅದೇ ರೀತಿ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದ ಕುರಿತು ಒಂದು ಗುಂಪು ಅಧ್ಯಯನ ನಡೆಸುತ್ತಿದೆ. ನಮ್ಮ ಸಂಶೋಧನೆಗಳು ಸಮಾನಮನಸ್ಕರ ಗಮನ ಸೆಳೆದಿದೆ. ಈ ವಿಷಯದ ಬಗ್ಗೆಯೂ ನಾವು ನೀತಿ ಆಯೋಗಕ್ಕೆ ಧೋರಣಾತ್ಮಕ ಸಲಹೆ ಕೊಡಬಲ್ಲೆವು.

*ಹರಪ್ಪ ನಾಗರಿಕತೆಯ ಅವಶೇಷಗಳ ಮೂಲಕ ಸಾಧ್ಯವಾಗುವ ಪ್ರವಾಸೋದ್ಯಮ ಮತ್ತು ಶಿಕ್ಷಣವನ್ನು ನಾವು ನಿರ್ಲಕ್ಷಿಸಿದ್ದೇವೆ. ಪಾಕಿಸ್ತಾನದಲ್ಲಿರುವ ತಕ್ಷಶಿಲೆಗೆ ಭೇಟಿ ನೀಡಿದವರು, ಅದನ್ನು ಸಂರಕ್ಷಿಸಿದ ಮಾದರಿಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. 
ನಿಜ, ನಾವು ಗಾಂಧಿನಗರದ ಐಐಟಿಯವರ ಜೊತೆಗೂಡಿ ಕಛ್‌ನ ಢೋಲಾವೀರಾದಲ್ಲಿರುವ ಅವಶೇಷಗಳಲ್ಲಿ ಈ ದಿಶೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆಧುನಿಕ ಉಪಗ್ರಹ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಅಲ್ಲಿ ಬಳಸಿಕೊಂಡಿದ್ದೇವೆ.

*ಸರ್ಕಾರ, ಕಾರ್ಪೊರೇಟ್‌ ಕಂಪೆನಿಗಳು ಮತ್ತು ಜನಸಾಮಾನ್ಯರ ದೃಷ್ಟಿಯಲ್ಲಿ ನಿಯಾಸ್‌ನ ಸ್ಥಾನ ಇನ್ನಷ್ಟು ಎತ್ತರಕ್ಕೆ ಏರಬೇಕಿದೆ, ಅಲ್ಲವೇ?
ದೇಶದ ಇಂದಿನ ಸ್ಥಿತಿಯಲ್ಲಿ ಅವಕಾಶದ ಕಿಟಕಿಗಳು ಇನ್ನೂ ತೆರೆದಿವೆ. ನಮ್ಮ ಧೋರಣೆಗಳ ಆಯ್ಕೆಗಳು ಸರಿಯಾಗಿದ್ದರೆ, ದೇಶ ಬೆಳೆಯುತ್ತದೆ. ಅದನ್ನು ಮಾಡದಿದ್ದರೆ ನಮ್ಮದು ಈಗಿರುವುದಕ್ಕಿಂತ ಹೆಚ್ಚು ಗೊಂದಲಗಳ ದೇಶವಾಗುತ್ತದೆ.

(ಸಂದರ್ಶಕರು ಭೌತವಿಜ್ಞಾನಿ, ಹಿರಿಯ ಪತ್ರಕರ್ತ,
ಟಿಸಿಎಸ್‌ನ ಮಾಜಿ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT