ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವ್ಯ ರಚನೆಗೆ ವಿಷಯದ ಆಯ್ಕೆ ಮುಖ್ಯ’

ಯುವಕವಿ ಸಮ್ಮೇಳನದಲ್ಲಿ ಡಾ.ಜಯಪ್ರಕಾಶ ಮಾವಿನಕುಳಿ ಅಭಿಮತ
Last Updated 29 ಜುಲೈ 2014, 9:45 IST
ಅಕ್ಷರ ಗಾತ್ರ

ಕುಂದಾಪುರ: ಜಗತ್ತಿನಲ್ಲಿ ಇಂದು ಸಂತೋಷ, ದುಃಖ ಎರಡು ಇದೆ. ಬರೆಯಲು ಬೆಟ್ಟದಷ್ಟು ವಿಷಯಗಳೂ ಇವೆ. ಕಾವ್ಯ ರಚನೆ ಮಾಡುವ­ವರಿಗೆ ಬೇಕಾ­ದುದು ವಿಷಯದ ಆಯ್ಕೆ. ಭಾಷಾ ಜ್ಞಾನ, ಅಕ್ಷರ ಜ್ಞಾನ ಶಬ್ದ ಬಳಕೆಯ ಅರಿವು ಇರಬೇಕು ಎಂದು ಸಾಹಿತಿ ಹಾಗೂ ವಕ್ವಾಡಿಯ ಗುರು­ಕುಲ ಪದವಿಪೂರ್ವ ಕಾಲೇಜಿನ ಪ್ರಾಂಶು­ಪಾಲ ಡಾ.ಜಯಪ್ರಕಾಶ ಮಾವಿನಕುಳಿ ಅಭಿ­ಪ್ರಾಯ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಭಾನುವಾರ ಕುಂದಪ್ರಭ ಟ್ರಸ್ಟ್, ಪುಟ್ಟಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಹಾಗೂ ಆಕಾಶವಾಣಿ ಮಂಗಳೂರು ಇವರ ಸಹಯೋಗ­ದಲ್ಲಿ ನಡೆದ ’ಉಡುಪಿ ಜಿಲ್ಲಾ ಯುವಕವಿ ಸಮ್ಮೇಳನ ಹಾಗೂ ಪುಟ್ಟಣ್ಣ ಕುಲಾಲ್ ಶ್ರೇಷ್ಠ ಯುವಕವಿ ಪ್ರಶಸ್ತಿ ಪ್ರದಾನ ಸಮಾರಂಭ’ದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಆಂತರಿಕ ಒತ್ತಡಗಳ ನಡುವೆ ಕವಿತೆ ರಚನೆಯ ಆಸಕ್ತಿ ಮೂಡಬೇಕು. ನಿದ್ದೆ ಮಾಡಿ ಮಲಗಿದಾಗ ಎಚ್ಚರಗೊಳ್ಳುವಷ್ಟು ತುಡಿತಗಳ ಭಾವನೆಗಳ ಮಿಡಿತಗಳು ಇರಬೇಕು. ಈ ಅಂತರಿಕ ತುಡಿತಗಳೆ ಒಳ್ಳೆಯ ಕಾವ್ಯವನ್ನು ಹೊರಡಿಸುತ್ತದೆ ಎಂದರು.

ಇಂದಿನ ಆಧುನಿಕ ವಿಜ್ಞಾನ ಹಾಗೂ ತಂತ್ರ­ಜ್ಞಾನದ ಸಹಕಾರದಿಂದ ಪುಟ್ಟ ಉಪಕರಣವನ್ನು ಬಳಸಿಕೊಂಡು ಜಗತ್ತಿನ ಯಾವುದೇ ಮೂಲೆಗೂ ಸಂವಹನ ನಡೆಸಲು ಸಾಧ್ಯವಿರುವುದರಿಂದಾಗಿ ಯುವ ಸಮೂಹ ಸಮಾಜಕ್ಕೆ ಬೇಕಾಗುವ ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಮಾವಿನಕುಳಿ ಹೇಳಿದರು.

ಅಧ್ಯಕ್ಷತೆ ವಹಿಸಿ ಪುಟ್ಟಣ್ಣ ಕುಲಾಲ್ ಪ್ರತಿ­ಷ್ಠಾನದ ಮುಖ್ಯಸ್ಥ ಡಾ.ಅಣ್ಣಯ್ಯ ಕುಲಾಲ್ ಮಾತ­ನಾಡಿ, ಯುವ ಕವಿಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಾರಂಭಿಸ­ಲಾದ ಈ ಕಾರ್ಯಕ್ರಮ ಇಂದು ಜಿಲ್ಲಾ ಮಟ್ಟಕ್ಕೆ ವಿಸ್ತಾರವಾಗಿರುವ ಕುರಿತು ಸಂತಸ ಇದೆ ಎಂದು ನುಡಿದರು.

ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಯುವ ಕವಿಗಳನ್ನು ಹಿರಿಯ ಅಂಕಣಗಾರ ಕೋ.ಶಿವಾ­ನಂದ ಕಾರಂತ ಪರಿಚಯಿಸಿದರು. ಲೇಖಕ ಡಾ.ರಂಜಿತ್ ಕುಮಾರ್ ಶೆಟ್ಟಿ, ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ನಾರಾ­ಯಣ ಖಾರ್ವಿ, ಉದ್ಯಮಿ ಕೆ.ಆರ್.ನಾಯ್ಕ್, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಖಾರ್ವಿ ಇದ್ದರು. ಕುಂದಪ್ರಭ ಟ್ರಸ್ಟ್ ಅಧ್ಯಕ್ಷ ಯು.ಎಸ್.ಶೆಣೈ  ಸ್ವಾಗತಿಸಿದರು, ವಿಶ್ವನಾಥ ಕರಬ ನಿರೂಪಿಸಿದರು, ರಶ್ಮಿರಾಜ್ ಪಾರ್ಥನಾ ಗೀತೆ ಹಾಡಿದರು, ಹಂದಕುಂದ ಸೋಮಶೇಖರ ಶೆಟ್ಟಿ ವಂದಿಸಿದರು.

ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಭಾರತ ಸೇವಾದಳದ ಅಧ್ಯಕ್ಷ ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರು ಪ್ರತಿಭಾವಂತ ಯುವಕ ಯುವತಿ­ಯರು ಪ್ರೋತ್ಸಾಹದ ಕೊರತೆಯಿಂದ ಇಂದು ವಿಚಲಿತರಾಗಬೇಕಾಗಿಲ್ಲ. ನಿರಂತರ ಸಾಧನೆಯಿಂದ ಅವರ ಪ್ರತಿಭೆ ಬೆಳಕಿಗೆ ಬರುತ್ತದೆ. ಇಂತಹ ಪ್ರತಿಭೆಗಳ ಬೆಳವಣಿಗೆಗೆ  ಖಂಡಿತವಾಗಿಯೂ ಸೇವಾ ಸಂಸ್ಥೆಗಳ ಹಾಗೂ ದಾನಿಗಳು ನೆರವು ದೊರಕುತ್ತದೆ ಎಂದು ನುಡಿದರು.

ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಬಂದಿದ್ದ 12 ಯುವ ಕವಿಗಳಲ್ಲಿ  ಶ್ರೇಷ್ಠ ಯುವ­ಕವಿಯಾಗಿ ಆಯ್ಕೆಯಾದ ಕಮಲಶಿಲೆಯ ಪೂರ್ಣಿಮಾ ಎನ್ ಭಟ್ ಅವರು 2014 ನೇ ಸಾಲಿನ ಪುಟ್ಟಣ್ಣ ಕುಲಾಲ್ ಪ್ರಶಸ್ತಿಗೆ ಭಾಜನ­ರಾದರು. ಡಾ.ಅಣ್ಣಯ್ಯ ಕುಲಾಲ್, ಸಾಹಿತಿ ಸುರೇಂದ್ರ ಶೆಟ್ಟಿ, ಯು.ಎಸ್.ಶೆಣೈ, ಕೋ.ಶಿವಾ­ನಂದ ಕಾರಂತ, ಯು.ಪಾಂಡುರಂಗ ಶೆಣೈ, ಆರ್.ಎನ್. ರೇವಣ್ಕರ್‌, ಉಪನ್ಯಾಸಕ ರಾಜೀವ ನಾಯ್ಕ, ಕಲಾವಿದ ಕೆ.ಕೆ.ರಾಮನ್, ಕೆ.ರಮಾ­ನಂದ ಕಾಮತ್, ಪಿ.ಜಯವಂತ ಪೈ ಹಾಗೂ ಕೆ.ನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT