ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರದ ಹೊಣೆ ಪರಿಷತ್‌ಗೆ ನೀಡಿ’

ಬಳಕೆಯಾಗದ ಶಾಸ್ತ್ರೀಯ ಭಾಷೆ ಅಧ್ಯಯನ ಅನುದಾನ
Last Updated 17 ಡಿಸೆಂಬರ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಶಾಸ್ತ್ರೀಯ ಭಾಷೆ ಅಧ್ಯ­ಯನಕ್ಕೆ ಲಭಿಸಿರುವ ಅನುದಾನವನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಶಾಸ್ತ್ರೀಯ ಭಾಷೆ ಅಧ್ಯಯನ ಕೇಂದ್ರದ ನಿರ್ವಹಣಾ ಜವಾಬ್ದಾರಿ­ಯನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ (ಕಸಾಪ) ವಹಿಸಬೇಕು’ ಎಂದು ಹಿರಿಯ ಸಾಹಿತಿ ಡಾ.ದೇ. ಜವರೇಗೌಡ ಸಲಹೆ ನೀಡಿದರು.

ನಗರದಲ್ಲಿ ಕ.ಸಾ.ಪ ಬುಧವಾರ ಆಯೋಜಿ­ಸಿದ್ದ ‘ನೃಪತುಂಗ ಪ್ರಶಸ್ತಿ ಪುರಸ್ಕೃತರ ಬದುಕು–ಬರಹ’ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮರ್ಪಕ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಕನ್ನಡ ಮಾಧ್ಯಮ­ವಿಲ್ಲದೇ ಕನ್ನಡಕ್ಕೆ ಕ್ಷೇಮವಿಲ್ಲ. ಭಾಷಾವಾರು ಪ್ರಾಂತ್ಯಗಳನ್ನು ರಚಿಸಿದ್ದೇ ಭಾಷೆಗಳಿಗೆ ಮಹತ್ವ ನೀಡಲು’ ಎಂದು ನೆನಪಿಸಿದರು.
‘ನಾಡಗೀತೆ ಉದ್ದವಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿರುವುದು ದುರದೃಷ್ಟ. ಕೆಲ ನಿಮಿಷ ಎದ್ದು ನಿಂತು ನಾಡಗೀತೆ ಹೇಳಲು ಸಾಧ್ಯವಾಗದವರು ಒಳಗೆ ಬರುವುದೇ ಬೇಡ’ ಎಂದು ನುಡಿದರು.

ನೃಪತುಂಗ ಪ್ರಶಸ್ತಿಗೆ ಗೌರವ: ಹಿರಿಯ ಸಂಶೋ­ಧಕ ಪ್ರೊ. ಎಂ.ಎಂ.ಕಲಬುರ್ಗಿ ಮಾತನಾಡಿ, ‘ನೃಪತುಂಗ ಪ್ರಶಸ್ತಿಗೆ ತನ್ನದೇ ಆದ ವಿಶೇಷ ಗೌರವವಿದೆ. ಇದು ಧನಿಕ ವರ್ಗದವರು ನೀಡುವ ಪ್ರಶಸ್ತಿ ಅಲ್ಲ. ಬದಲಾಗಿ ಶ್ರಮಿಕರ ಬೆವರಿನ ಫಲ. ಈ ಪ್ರಶಸ್ತಿ ಬಂದಾಗ ಸಂತೋಷದಿಂದ ಸ್ವೀಕರಿಸಿದ್ದೆ. ಸಾಂಸ್ಕೃ­ತಿಕ ವಾತಾವರಣ ನಿರ್ಮಿಸಲು ಮುಂದಾದ ನೃಪತುಂಗನ ಹೆಸರಿನಲ್ಲಿ ಈ ಗೌರವ ಲಭಿಸಿದೆ. ಭೌತಿಕ ಸಾಮ್ರಾಜ್ಯವನ್ನು ಪುಲಿಕೇಶಿ ಕಟ್ಟಿದರೆ, ಸಾಂಸ್ಕೃತಿಕ ಸಾಮ್ರಾಜ್ಯವನ್ನು ನೃಪತುಂಗ ವಿಸ್ತರಿಸಿದ’ ಎಂದರು.

ಸಾಹಿತಿ ಪ್ರೊ.ಜಿ.ಎಸ್‌.ಸಿದ್ಧಲಿಂಗಯ್ಯ, ‘ಅತ್ಯುತ್ತ­ಮ­ರಿಗೆ ನೊಬೆಲ್‌, ಜ್ಞಾನಪೀಠ ಪುರಸ್ಕಾ­ರ­ಗಳು ಲಭಿಸಿವೆ. ಇನ್ನು ಕೆಲ ಅತ್ಯುತ್ತಮ ಸಾಹಿತಿ­ಗಳಿಗೆ ಪ್ರಶಸ್ತಿಗಳೇ  ಸಿಕ್ಕಿಲ್ಲ. ಕೆಲವರು ಬಹುಮಾನ ಮೊತ್ತ ಕಡಿಮೆಯಾಯಿತು ಎಂದು ಪ್ರಶಸ್ತಿ ಹಿಂದಿ­ರುಗಿಸಿದ್ದಾರೆ. ಆದರೆ, ತಾವೇ ಪ್ರಶಸ್ತಿಯಾಗು­ವುದು ಅದೆಲ್ಲಕ್ಕಿಂತ ಶ್ರೇಷ್ಠ’ ಎಂದರು.

ವಿದ್ವಾಂಸ ಪ್ರೊ.ಎಸ್‌.ಜಿ.­ಸಿದ್ಧರಾಮಯ್ಯ ಮಾತ­ನಾಡಿ, ‘ಪ್ರಶಸ್ತಿ ಪಡೆಯುವ ಹೊತ್ತಿನಲ್ಲಿ ಈ ಪ್ರಶ­ಸ್ತಿಗೆ ತಾನು ಅರ್ಹನೆ ಎಂಬ ಪ್ರಜ್ಞೆ ಮೂಡ­ಬೇಕು. ಪ್ರಶಸ್ತಿಯ ಬೆನ್ನತ್ತಿ ಹೋಗುವು­ದ­ಕ್ಕಿಂತ ಪ್ರಶಸ್ತಿ ತಮ್ಮನ್ನು ಹುಡುಕಿಕೊಂಡು ಬಂದಾಗ ವಿನಯ­ದಿಂದ ಸ್ವೀಕರಿಸಬೇಕು. ಆಗ ಪ್ರಶಸ್ತಿ ಹಾಗೂ ಪ್ರಶಸ್ತಿ ಪಡೆದವರ ಗೌರವ ಹೆಚ್ಚಾಗುತ್ತದೆ’ ಎಂದರು.

‘ಪಾಪ ಪ್ರಾಯಶ್ಚಿತಕ್ಕಾಗಿ ಕೆಲವರು ಪ್ರಶಸ್ತಿ ನೀಡುತ್ತಾರೆ. ಅದರಲ್ಲಿ ಜ್ಞಾನಪೀಠ ಪ್ರಶಸ್ತಿಯೂ ಸೇರಿದೆ’ ಎಂದಿದ್ದು ಡಾ.ಕುಂ.ವೀರಭದ್ರಪ್ಪ.
ಸಾಹಿತಿ ಸಾರಾ ಅಬೂಬಕ್ಕರ್‌, ‘ಯಾವುದೇ ಮಾಧ್ಯಮವಾಗಿರಲಿ ಕಲಿಸುವವರು ಹಾಗೂ ಕಲಿಯುವವರು ಸರಿಯಾಗಿದ್ದರೆ ಎಲ್ಲವೂ ಸರಿಹೋಗಲಿದೆ’ ಎಂದರು.

ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ಪರಿಷತ್‌ ನಿಷ್ಕ್ರಿಯ­ವಾಗಿದೆ ಎಂಬ ಟೀಕೆ ಕೇಳಿಬರುತ್ತಿದೆ. ಇಂಥವರು ಪರಿಷತ್‌ನೊಳಗೆ ಬಂದು ಸಲಹೆ, ಸೂಚನೆ ನೀಡಲಿ. ಸರ್ಕಾರದಿಂದ ನೆರವು ಪಡೆಯದೆ ಆರ್ಥಿಕ ಸ್ವಾವಲಂಬಿಯಾಗ­ಬೇಕು ಎನ್ನುತ್ತಾರೆ. ಆದರೆ, ಅಂಥವರು ಒಂದು ರೂಪಾಯಿ ಕೂಡ ನೀಡುವು­ದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಡಾ.ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿದರು.

‘ಸಾಹಿತಿಗಳು, ಶಾಸಕರಿಗೆ ಕರ್ನಾಟಕ ದರ್ಶನ ಅಗತ್ಯ’
‘ಸಾಹಿತಿಗಳು, ರಾಜಕಾರಣಿಗಳಿಗೆ ರಾಜ್ಯದ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲ. ಸಮಗ್ರ ಕರ್ನಾಟಕವನ್ನೇ ನೋಡಿಲ್ಲ. ಶಾಸಕರನ್ನು ಇಸ್ರೇಲ್‌, ಸಿಂಗಪುರ ಪ್ರವಾಸಕ್ಕೆ ಕಳುಹಿಸುವ ಬದಲು ಕರ್ನಾಟಕವನ್ನು ಪೂರ್ಣವಾಗಿ ನೋಡಿಕೊಂಡು ಬರಲು ಹೇಳಿ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು.

ನಾಡಗೀತೆಯಲ್ಲಿ ಸಮಸ್ಯೆ: ‘ನಾಡಗೀತೆ­ಯಲ್ಲಿ ಕೆಲ ಸಮಸ್ಯೆಗಳಿವೆ. ಇದು ಟೀಕೆ ಎಂದು ಭಾವಿಸಬಾರದು. ‘ತೈಲಪ ಹೊಯ್ಸ­ಳ­ರಾಳಿದ ನಾಡೇ’ ಎಂದಿದೆ. ನೃಪತುಂಗ, ಕದಂ­ಬರ ಪ್ರಸ್ತಾಪ ಏಕಿಲ್ಲ’ ಎಂದು ಪ್ರಶ್ನಿಸಿದರು.

ಪಾಪು ಹೇಳಿಕೆಗೆ ಆಕ್ರೋಶ
ಪಾಟೀಲ ಪುಟ್ಟಪ್ಪ ಅವರ  ಹೇಳಿಕೆಗೆ ಸಭಿಕರಿಂದ ಆಕ್ರೋಶ ವ್ಯಕ್ತವಾಯಿತು. ಕೆಲವರು ಎದ್ದು ನಿಂತು, ‘ಸಾಕು ನಿಲ್ಲಿಸಿ ನಿಮ್ಮ ಭಾಷಣ. ಕರ್ನಾ­ಟಕ ನೋಡಬೇಕು ಎಂಬ ನಿಯಮವೂ ಇಲ್ಲ, ಅದಕ್ಕೆ ಸಾಹಿತಿಗಳ ಬಳಿ ರೊಕ್ಕವೂ ಇಲ್ಲ’ ಎಂದರು. ಮತ್ತೊಬ್ಬರು, ‘ನಾಡಗೀತೆಯಾಗಲಿ, ಅದನ್ನು ಸರ್ಕಾರ ಅನುಷ್ಠಾನಗೊಳಿಸಲಿ ಎಂದಾಗಲಿ ಕುವೆಂಪು ಕವಿತೆ ಬರೆದಿಲ್ಲ’ ಎಂದು ಕೂಗಿದರು. ಆಗ ಸಿಟ್ಟಾದ ಪಾಪು, ‘ನನಗೇನು  ಮಾತ­ನಾಡಲು ರೋಗ ಬಂದಿಲ್ಲ. ಕಸಾಪದವರು ಕರೆದಿದ್ದಕ್ಕೆ ಇಲ್ಲಿಗೆ ಬಂದಿದ್ದೇನೆ’ ಎಂದು ಕೈಯಲ್ಲಿದ್ದ ಚೀಟಿ ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT