ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಣೇಶನ ಹಬ್ಬ’ಕ್ಕೆ ಜೂಮ್ ಕೊಡುಗೆ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ನಾಳೆ (ಜುಲೈ 2) ಗಣೇಶ್‌ ಹುಟ್ಟುಹಬ್ಬ. ಅದಕ್ಕೆ ಮುನ್ನಾ ದಿನವೇ ‘ಜೂಮ್‌’ ಚಿತ್ರ ತೆರೆಕಾಣುತ್ತಿರುವ ಸಂಭ್ರಮ ಅವರದು.

‘‘ನಾಳೆ ನನ್ನ ಬರ್ತ್ ಡೇ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಗೆ ‘ಜೂಮ್’ ಹುಟ್ಟುಹಬ್ಬದ ಕೊಡುಗೆ’’.
ಗಣೇಶ್‌ರ ಮಾತಿನಲ್ಲಿ ಹುಟ್ಟುಹಬ್ಬದ ಸಂಭ್ರಮ ಎದ್ದುಕಾಣುತ್ತಿತ್ತು.

ತಮ್ಮನ್ನು ಲವರ್ ಬಾಯ್ ಆಗಿ ನೋಡಬಯಸುವವರಿಗೆ ತಾವು ಕೊಡುವ ಕಾಣಿಕೆ ‘ಜೂಮ್’ ಚಿತ್ರ ಎನ್ನುತ್ತಾರೆ ಗಣೇಶ್. ಇಂದು (ಜುಲೈ 1) ತೆರೆಕಾಣಲಿರುವ ಈ ಸಿನಿಮಾ, ಕಲರ್‌ಫುಲ್ ಹಾಗೂ ಶೇಕಡ 100ರಷ್ಟು ಮನೋರಂಜನೆಯ ಪ್ಯಾಕೇಜ್ ಎಂಬುದು ಅವರ ಬಣ್ಣನೆ.

ಕಳೆದ ಎರಡು ಸಿನಿಮಾಗಳು ಹೆಚ್ಚೇನೂ ಗಮನ ಸೆಳೆದಿರಲಿಲ್ಲ. ಆದರೆ ‘ಜೂಮ್’ ಹಾಗಲ್ಲ ಎನ್ನುತ್ತಾರೆ ಗಣೇಶ್. ಅಂದುಕೊಂಡಿದ್ದಕ್ಕಿಂತ ಅದ್ಭುತವಾಗಿ ಚಿತ್ರ ಮೂಡಿಬಂದಿದೆ ಎನ್ನುವ ಅವರು– ‘ಇದೊಂದು ಕಲರ್‌ಫುಲ್ ಸಿನಿಮಾ.

ಮನರಂಜನೆ ಪ್ರಧಾನವಾಗಿ ಕಾಣಿಸುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬನ ಎರಡೂವರೆ ತಾಸು ಅಮೂಲ್ಯವಾದುದು. ಅದನ್ನು ಆತ ಉಲ್ಲಾಸದಿಂದ ಅನುಭವಿಸುವಂತೆ ನೋಡಿಕೊಳ್ಳಲಿದ್ದೇವೆ’ ಎನ್ನುತ್ತಾರೆ. ಈಗ ನಾಡಿನಾದ್ಯಂತ ಪಸರಿಸಿರುವ ಮುಂಗಾರು ಮಳೆಯ ಹಿತಾನುಭವವನ್ನು ‘ಜೂಮ್’ ಮತ್ತಷ್ಟು ಹೆಚ್ಚಿಸಲಿದೆ ಎಂಬ ಭರವಸೆ ಅವರದು.

ಚಿತ್ರದ ಶೇಕಡ 40ರಷ್ಟು ಭಾಗದ ಚಿತ್ರೀಕರಣ ಇಟಲಿಯಲ್ಲಿ ನಡೆಸಲಾಗಿದೆ. ಅಲ್ಲಿನ ಪ್ರತಿಯೊಂದು ತಾಣವೂ ಮನಮೋಹಕ ಸೌಂದರ್ಯದಿಂದ ಕಂಗೊಳಿಸುತ್ತದೆ. ಅದನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಸಮರ್ಥವಾಗಿ ಸೆರೆಹಿಡಿದಿದ್ದಾರೆ ಎಂದು ಗಣೇಶ್ ನೆನಪಿಸಿಕೊಳ್ಳುತ್ತಾರೆ.         

‘ಸಿನಿಮಾದಲ್ಲಿ ಒಂದೆರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರಿಸುವುದು ಈಗ ಸಾಮಾನ್ಯ.  ಅದು ಆರೆಂಟು ದಿನಗಳ ಕಾಲ ಮಾತ್ರ ನಡೆಯುತ್ತಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಯೂರೋಪ್‌ನ ಖ್ಯಾತ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವುದೆಂದರೆ ಕನ್ನಡ ಚಿತ್ರರಂಗಕ್ಕೊಂದು ಹೆಮ್ಮೆ’ ಎಂದು ವಿಶ್ಲೇಷಿಸುವ ಗಣೇಶ್, ಇದರ ಹಿಂದೆ ಪ್ರಚಾರದ ಆಸೆಯೇನೂ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

‘ಚಿತ್ರದ ಗುಣಮಟ್ಟ ಹಾಗೂ ಕಥೆಗೆ ಸಂಬಂಧಿಸಿದಂತೆ ಎಲ್ಲ ಭಾಷೆಯ ಸಿನಿಮಾಗಳ ಜತೆ ನಮ್ಮ ಕನ್ನಡ ಸಿನಿಮಾಗಳು ಸ್ಪರ್ಧೆ ಮಾಡಬೇಕು. ಅದನ್ನು ಗಮನದಲ್ಲಿ ಇಟ್ಟುಕೊಂಡು ಇಟಲಿಯ ಸುಂದರ ತಾಣಗಳನ್ನು ಆಯ್ಕೆ ಮಾಡಿಕೊಂಡೆವು. ಮಿಲಾನ್, ಸ್ಯಾಂಟಿಯಾಗೊ, ಪಿಜಾ ಹಟ್ ಬಳಿ ಚಿತ್ರೀಕರಣ ಮಾಡಲಾಗಿದೆ. ವಿದೇಶಿ ಚಿತ್ರೀಕರಣ ಫ್ಯಾಶನ್ ಆಗುತ್ತಿದೆ ಎಂಬುದೇನೋ ನಿಜ; ಆದರೆ ಜೂಮ್ ಉದ್ದೇಶ ಅದಲ್ಲ’ ಎನ್ನುತ್ತಾರೆ.

ಚಿತ್ರತಂಡದ ಉತ್ಸಾಹ–ಉಲ್ಲಾಸವನ್ನು ಗಣೇಶ್ ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ‘ಚಿತ್ರೀಕರಣ ಅದ್ಭುತವಾಗಿತ್ತು. ತಂತ್ರಜ್ಞರು ಹಾಗೂ ಕಲಾವಿದರ ತಂಡ ಚೆನ್ನಾಗಿದ್ದರೆ ಉಳಿದೆಲ್ಲವೂ ಚೆನ್ನಾಗಿರುತ್ತದೆ. ನಿರ್ದೇಶಕ ಪ್ರಶಾಂತ ರಾಜ್, ನಾಯಕಿ ರಾಧಿಕಾ ಪಂಡಿತ್, ಕ್ಯಾಮೆರಾಮನ್ ಸಂತೋಷ್ ಎಲ್ಲರೂ ಉತ್ಸಾಹಿಗಳೇ.

ಸಮಾನ ಮನಸ್ಕರು ಇದ್ದಾಗ ಅಲ್ಲಿ ಧನಾತ್ಮಕ ಅಂಶಗಳು ಹೆಚ್ಚಾಗಿ ಗೋಚರಿಸುತ್ತವೆ. ಅದರಲ್ಲೂ ಎಲ್ಲರೂ ಯುವಕರೇ ಇದ್ದುದರಿಂದ ಚಿತ್ರೀಕರಣ ನಾವು ಅಂದುಕೊಂಡಿದ್ದಕ್ಕಿಂತ ಸುಲಭವಾಯಿತು ಅಂದರೆ ಅದರಲ್ಲಿ ಉತ್ಪ್ರೇಕ್ಷೆ ಖಂಡಿತ ಇಲ್ಲ’ ಎನ್ನುತ್ತಾರೆ.

‘ಜೂಮ್’ ಅನ್ನು ಕಟ್ಟಿರುವ ನಿರ್ದೇಶಕ ಪ್ರಶಾಂತ ರಾಜ್ ಅವರನ್ನು ಗಣೇಶ್ ಮೆಚ್ಚುವುದು ಅವರಲ್ಲಿನ ಕ್ರಿಯಾಶೀಲತೆಗೆ. ‘ಅವರೊಬ್ಬ ಪ್ಯಾಶನೇಟ್ ನಿರ್ದೇಶಕ. ಹೇಳುವುದೊಂದು; ಮಾಡುವುದು ಎಂಬ ಸ್ವಭಾವ ಅವರಲ್ಲಿಲ್ಲ.

ಸಿನಿಮಾದ ಮೂಲಕ ಏನನ್ನು ಹೇಳಬಯಸಿದ್ದಾರೆಯೇ ಅದನ್ನು ಮಾಡುತ್ತಾರೆ. ಹೀಗಾಗಿ ಜೂಮ್ ಮೂಲಕ ನಮಗೆಲ್ಲ ಏನೇನು ಭರವಸೆ ನೀಡಿದ್ದರೋ ಅದನ್ನು ಈಡೇರಿಸಿದ್ದಾರೆ’ ಎನ್ನುವ ಗಣೇಶ್, ಹೇರ್‌ ಸ್ಟೈಲ್ ಬದಲಿಸಿದ ನಿರ್ದೇಶಕರ ಮೇಲೆ ಹುಸಿಮುನಿಸು ತೋರುತ್ತಾರೆ! ‘ನನ್ನ ತಲೆಕೂದಲನ್ನು ಯಾರಾದರೂ ಮುಟ್ಟಿದರೆ ನನಗೆ ಸಿಟ್ಟು ಬರುತ್ತದೆ. ಆದರೆ ಇಲ್ಲಿ ನೋಡಿ! ಇಡೀ ಸಿನಿಮಾದಲ್ಲಿ ಅದನ್ನು ಬೇರೆ ಥರ ತೋರಿಸಿದ್ದಾರೆ’ ಎಂದು ದೂರುತ್ತಾರೆ!

ಈ ಹಿಂದಿನ ಚಿತ್ರ ‘ಸ್ಟೈಲ್ ಕಿಂಗ್’ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾದ ಬಗ್ಗೆ ಅವರು ಹೆಚ್ಚೇನೂ ಪ್ರತಿಕ್ರಿಯಿಸುವುದಿಲ್ಲ. ‘ಅಂಥ ಪಾತ್ರ ನನಗೆ ಸಿಕ್ಕಿದ್ದು ಖಂಡಿತ ಒಳ್ಳೆಯದೇ. ಆದರೆ ಒಂದು ಉತ್ಪನ್ನವನ್ನು ಮಾರಾಟ ಮಾಡುವಾಗ ಅದರ ಬಗ್ಗೆ ಚೆನ್ನಾಗಿ ಪ್ರಚಾರ ಮಾಡಬೇಕು.

ಒಮ್ಮೆಲೇ ಹೋಗಿ ಆ ಉತ್ಪನ್ನ ಕೊಟ್ಟರೆ ಜನರಿಗೆ ಹಿಡಿಸುತ್ತದೆಯೇ? ಇಲ್ಲೂ ಹಾಗೇ ಆಯ್ತು! ನಾನು ಅಂಥ ವಿಭಿನ್ನ ಪಾತ್ರ ಮಾಡುವುದನ್ನು ಇನ್ನಷ್ಟು ಚೆನ್ನಾಗಿ ಹೇಳಬೇಕಿತ್ತು. ಪ್ರಚಾರದ ಉದ್ದೇಶ ಅದೇ ಆಗಿದೆ’ ಎಂದಷ್ಟೇ ಹೇಳುತ್ತಾರೆ.

ಲವರ್ ಬಾಯ್ ಥರದ ಪಾತ್ರಗಳ ಜತೆಗೇ ಬೇರೆ ಬಗೆಯಲ್ಲೂ ಕಾಣಿಸಿಕೊಳ್ಳುವ ಆಸೆ ಗಣೇಶ್ ಅವರಿಗೆ ಇದೆ. ‘ಕಲಾವಿದನಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಬೇಕು. ಎಲ್ಲವೂ ಒಂದೇ ಥರ ಇದ್ದರೆ ಬೋರ್ ಅನಿಸುತ್ತದೆ, ಅಲ್ಲವೇ’ ಎಂದು ಪ್ರಶ್ನಿಸುವ ಅವರೀಗ ‘ಮುಂಗಾರು ಮಳೆ–2’, ‘ಗಂಡು ಅಂದ್ರೆ ಗಂಡು’ ಹಾಗೂ ‘ಪಟಾಕಿ’ಯಲ್ಲಿ ಬಿಜಿ ಆಗಿದ್ದಾರೆ.

ಮಾಸ್ ಹಾಗೂ ಕ್ಲಾಸ್ – ಎರಡು ವರ್ಗಕ್ಕೂ ಇಷ್ಟವಾಗುವ ಪ್ರೇಮಕಥೆಯನ್ನು ಅದ್ದೂರಿಯಾಗಿ ಚಿತ್ರಿಸಿರುವ ‘ಜೂಮ್’, ಪ್ರೇಕ್ಷಕರಲ್ಲಿ ಲವಲವಿಕೆ ಮೂಡಿಸುವಂತಿದೆ. ಈವರೆಗೆ ಇಷ್ಟು ಅದ್ದೂರಿ ಹಾಗೂ ಮನರಂಜನೆಯ ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ ಎನ್ನುವ ಗಣೇಶ್, ತಮ್ಮ ಜನ್ಮ ದಿನಕ್ಕೂ ಮುನ್ನ ತೆರೆ ಕಾಣಲಿರುವ ಈ ಚಿತ್ರ ತಮ್ಮ ಕಡೆಯಿಂದ ಅಭಿಮಾನಿಗಳಿಗೆ ಕೊಡುವ ‘ಗಿಫ್ಟ್’ ಎನ್ನುವುದನ್ನು ಒತ್ತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT