ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಜಾ ಸೊಪ್ಪು ಇದ್ದ ಮಾತ್ರಕ್ಕೆ ಅಪರಾಧವಲ್ಲ’

Last Updated 25 ಜನವರಿ 2015, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಒಬ್ಬ ವ್ಯಕ್ತಿ ತನ್ನ ಬಳಿ ಕೇವಲ ಗಾಂಜಾ ಸೊಪ್ಪು ಅಥವಾ ಅದರ ಎಲೆಗಳನ್ನು ಇಟ್ಟುಕೊಂಡಿದ್ದಾನೆ ಎಂಬ ಕಾರಣಕ್ಕಾಗಿ ಪೊಲೀ­ಸರು ಆತನನ್ನು ಬಂಧನದಲ್ಲಿ ಇರಿಸ­ಬೇಕಾಗಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು, ಈ ಸಂಬಂಧದ ಜಾಮೀನು ಮೇಲ್ಮನವಿಯನ್ನು ಪುರಸ್ಕರಿಸಿ ಆರೋಪಿಯ ಬಿಡುಗಡೆಗೆ ಆದೇಶಿಸಿದೆ.

ಪಿರಿಯಾಪಟ್ಟಣದ ವಿರಾಜಪೇಟೆ ಮತ್ತು ಹುಣಸೂರು ರಸ್ತೆಯಲ್ಲಿರುವ ಮುದ್ದೇನಹಳ್ಳಿ ಬಳಿ ಮೂವರು ಪುರುಷರು ಗಾಂಜಾ ಸೊಪ್ಪನ್ನು ಒಯ್ಯುತ್ತಿದ್ದಾರೆ ಎಂಬ ನಿಖರ ಮಾಹಿತಿ ಅನುಸರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ಬಂಧಿಸಿದ್ದರು.

ಬಂಧಿತರಿಂದ ಮೂರು ಕೆ.ಜಿ.ಯಷ್ಟು ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳ­ಲಾಗಿತ್ತು. ನಂತರ ಕೆಳ ನ್ಯಾಯಾಲಯ ಮೂವರಲ್ಲಿ ಒಬ್ಬರಿಗೆ ಜಾಮೀನು  ನಿರಾಕರಿಸಿತ್ತು. ಇದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದ ಆರೋಪಿಗೆ ಈಗ ಜಾಮೀನು ದೊರೆತಿದೆ.

ಆರೋಪಿ ಪರ ವಕೀಲರಾದ ಜಿ.ಬಿ.ಶರತ್‌ಗೌಡ ಅವರು ವಾದಿಸಿ, ‘ಮಾದಕದ್ರವ್ಯ ಮತ್ತು ನಶೆಯ ವಸ್ತುಗಳ ಕಾಯ್ದೆ–1985ರ  ಅನುಸಾರ ಕೇವಲ ಗಾಂಜಾ ಸೊಪ್ಪು ಹೊಂದಿದ್ದರೆ ಅದು ಅಪರಾಧವಲ್ಲ’ ಎಂಬುದನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಇದನ್ನು ಮಾನ್ಯ ಮಾಡಿದ ಪೀಠವು, ಮಾದಕದ್ರವ್ಯ ಮತ್ತು ನಶೆಯ ವಸ್ತುಗಳ ಕಾಯ್ದೆ–1985ರ ಕಲಂ ಎರಡರ ಮೂರನೇ ಉಪಬಂಧದಲ್ಲಿ ಈ ಕುರಿತ ವ್ಯಾಖ್ಯೆಯನ್ನು ವಿಶದಪಡಿಸಿತು.

‘ಗಾಂಜಾ ಎಂದರೆ  ಆ ಗಿಡದ ಹೂವು ಅಥವಾ ಹೂವು ಬಿಡುವ ತುದಿಗಳನ್ನು ಒಳಗೊಂಡಿದ್ದರೆ ಅಂತಹ ಪದಾರ್ಥಗಳು ಅಪರಾಧಿಕ ನಶೆಯ ಪದಾರ್ಥ ಎನಿಸಿಕೊಳ್ಳುತ್ತವೆ. ಹಾಗಾಗಿ ಭಂಗಿ ಬೀಜಗಳಿಲ್ಲದ ಬರಿದೇ ಗಾಂಜಾ ಸೊಪ್ಪನ್ನು ಅಮಲಿನ ಪದಾರ್ಥಗಳ ಪಟ್ಟಿಯಲ್ಲಿ   ಸೇರಿಸಲಾಗದು’ ಎಂದು ಅಭಿಪ್ರಾಯಪಟ್ಟು ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ವಾಣಿಜ್ಯ ಉದ್ದೇಶಕ್ಕಾಗಿ ಗಾಂಜಾ ಬಳಕೆ ಮಾಡುವ ಅಪರಾಧಿಗೆ ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಮುಖ್ಯಾಂಶಗಳು
*ಮಾದಕದ್ರವ್ಯ ಮತ್ತು ನಶೆಯ ವಸ್ತುಗಳ ಕಾಯ್ದೆಯಲ್ಲಿ ಗಾಂಜಾ ವ್ಯಾಖ್ಯಾನವೇನು?

*ಗಾಂಜಾ ಎಂದರೆ ಅದರ ಬೀಜಗಳು, ಹೂವು ಅಥವಾ ಹೂವಿನ ತುದಿಗಳನ್ನು ಹೊಂದಿರಬೇಕು

*ಕೇವಲ ಗಾಂಜಾ ಎಲೆ ಅಥವಾ ಸೊಪ್ಪು ಇಟ್ಟುಕೊಂಡರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT