ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಪಾತ್ರ ಕೈತಪ್ಪಿದ್ದಕ್ಕೆ ಬೇಸರವಿಲ್ಲ’

Last Updated 28 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಮಹಾತ್ಮ ಗಾಂಧಿ ಅವರ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಾಗದಿರುವುದಕ್ಕೆ ಯಾವುದೇ ರೀತಿಯ ಬೇಸರ ಇಲ್ಲ’ ಎಂದು ಹಿಂದಿ ಚಿತ್ರರಂಗದ ಹಿರಿಯ ನಟ ನಾಸಿರುದ್ದೀನ್ ಷಾ ಹೇಳಿಕೊಂಡಿದ್ದಾರೆ.

‘ನನ್ನ ಉದ್ದೇಶ ಕೇವಲ ಗಾಂಧಿ ಪಾತ್ರ ಅಭಿನಯಿಸುವುದು ಮಾತ್ರ ಆಗಿರಲಿಲ್ಲ. ಅಂತರರಾಷ್ಟ್ರೀಯ ಯೋಜನೆಯೊಂದರ ಭಾಗವಾಗಬೇಕು ಅಂದುಕೊಂಡಿದ್ದೆ. ಆದರೆ, ಆ ಪಾತ್ರ ಅಂತಿಮವಾಗಿ ಬೆನ್‌ ಕಿಂಗ್ಸ್‌ಲೇ ಅವರಿಗೆ ಸಿಕ್ಕಿತ್ತು. ಇದಕ್ಕಾಗಿ ನನಗೆ ಯಾವುದೇ ದುಃಖವಿಲ್ಲ’ ಎಂದು ಪಿಟಿಐಗೆ ಇತ್ತೀಚಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಆ ಸಂದರ್ಭದಲ್ಲಿ ಇನ್ನೂ ನಾನು ನಟನೆಯಲ್ಲಿ ಪಳಗಿರಲಿಲ್ಲ. ಈ  ಕಾರಣಕ್ಕೆ ನನ್ನ ಬದಲಾಗಿ ಬೆನ್‌ಗೆ ಅವಕಾಶ ಸಿಕ್ಕಿತ್ತು’ ಎಂದೂ ಷಾ ಹೇಳಿದ್ದಾರೆ. ನಾಸಿರುದ್ದೀನ್‌ ಷಾ ಅವರು ಲಂಡನ್‌ಗೆ ಆಡಿಷನ್‌ಗೆ ತೆರಳಿದ್ದಾಗ ‘ಗಾಂಧಿ’ ಚಿತ್ರಕ್ಕೆ ಭಾರತೀಯ ವ್ಯಕ್ತಿ ಆಯ್ಕೆಯಾಗಿದ್ದಾನೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

‘ಈ ಒಂದು ಪಾತ್ರದಲ್ಲಿ ಅಭಿನಯಿಸಿದ್ದರೆ ನನ್ನ ವೃತ್ತಿ ಜೀವನ ಪೂರ್ಣತೆ ಪಡೆಯುತ್ತಿತ್ತು. ಆದರೆ, ಅದಕ್ಕಾಗಿ ವಿಷಾದಿಸುವುದಿಲ್ಲ’ ಎಂದಿದ್ದಾರೆ. ನಾಸಿರುದ್ದೀನ್‌ ಷಾ ಅವರು ತಮ್ಮ ನಾಲ್ಕು ದಶಕಗಳ ವೃತ್ತಿ ಜೀವನದ ಏಳು ಬೀಳುಗಳನ್ನು ‘ಅಂಡ್‌ ದೆನ್‌ ಒನ್‌ ಡೇ’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚಿಗೆ ಲೋಕಾರ್ಪಣೆಗೊಂಡಿರುವ ಪುಸ್ತಕದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಗಾಂಧಿ ಚಿತ್ರದಲ್ಲಿ ನಟಿಸುವ ಅವಕಾಶ ಕೈತಪ್ಪಿರುವುದರ ಬಗ್ಗೆಯೂ ಪುಸ್ತಕದಲ್ಲಿ ಷಾ ಪ್ರಸ್ತಾಪಿಸಿದ್ದಾರೆ.

‘ನಾನು ಬರೆದಿರುವ ಪುಸ್ತಕಕ್ಕೆ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದು ಯೋಚಿಸಿರಲಿಲ್ಲ’ ಎಂದು ಹೇಳಿದ್ದಾರೆ.
ರಿಚರ್ಡ್ ಅಟೆನ್‌ಬ್ರೊ ಅವರ ನಿರ್ದೇಶನದಲ್ಲಿ ೧೯೮೨ರಲ್ಲಿ ತೆರೆ ಕಂಡಿದ್ದ ‘ಗಾಂಧಿ’ ಚಿತ್ರಕ್ಕೆ ಪ್ರಾರಂಭದಲ್ಲಿ ನಾಸಿರುದ್ದೀನ್‌ ಷಾ ಅವರ ಹೆಸರು  ಕೇಳಿ ಬಂದಿತ್ತು. ಆದರೆ, ಅಂತಿಮವಾಗಿ ಈ ಪಾತ್ರವನ್ನು ಬೆನ್‌ ಕಿಂಗ್ಸ್‌ಲೇ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT