ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುತ್ತಿಗೆ ವ್ಯವಸ್ಥೆ ಜೀತ ಪದ್ಧತಿಗೆ ಸಮ’

Last Updated 24 ಜುಲೈ 2016, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಗುತ್ತಿಗೆ ಪದ್ಧತಿ ಜೀತ ಪದ್ಧತಿಗೆ ಸಮ.  ಈ ಪದ್ಧತಿಯನ್ನೇ ರದ್ದು ಪಡಿಸಬೇಕು’ ಎಂದು ವಕೀಲ ಸುಬ್ಬರಾವ್ ಒತ್ತಾಯಿಸಿದರು.

ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಗುತ್ತಿಗೆ ಕಾರ್ಮಿಕರ ಸಮಸ್ಯೆ ಹಾಗೂ ಪರಿಹಾರಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಕಾಯಂಗೊಂಡ ನೌಕರರೂ ಧ್ವನಿ ಎತ್ತಬೇಕು. ಪ್ರಜಾತಂತ್ರ, ಸಾರ್ವಭೌಮತ್ವ, ಜಾತ್ಯತೀತ ಮತ್ತು ಸಮಾಜವಾದ ನಮ್ಮ ಸಂವಿಧಾನದ ಮೂಲ ಗುರಿಗಳು. ವಿಪರ್ಯಾಸವೆಂದರೆ ಸರ್ಕಾರಗಳು ಕಾರ್ಮಿಕರ ಹಿತರಕ್ಷಣೆಯನ್ನು ಕಡೆಗಣಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎಐಯುಟಿಯುಸಿ ರಾಜ್ಯ ಘಟಕದ ಅಧ್ಯಕ್ಷ ಕೆ.ರಾಧಾಕೃಷ್ಣ ಮಾತನಾಡಿ, ‘ಇಂದು ಕಾರ್ಮಿಕರ ಹಕ್ಕುಗಳ ಹರಣ ನಡೆಯುತ್ತಿದೆ. ಮಾಲೀಕರ ಪರವಾದ, ಕಾರ್ಮಿಕರಿಗೆ ಮಾರಕವಾದ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಕಾರ್ಮಿಕರ ತೀವ್ರ ವಿರೋಧವಿದೆ. ಆದರೂ, ಸರ್ಕಾರ ತಿದ್ದುಪಡಿಗೆ ಮುಂದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಕೀಲ ವಿ.ಎಸ್.ನಾಯಕ್‌ ಮಾತನಾಡಿ, ‘ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಕಾನೂನು ಸಮರದಲ್ಲಿ ಕಾರ್ಮಿಕ ವಿರೋಧಿ ತೀರ್ಪುಗಳನ್ನು ಬರುತ್ತಿರುವುದು ವಿಷಾದನೀಯ’ ಎಂದು ಅವರು ಹೇಳಿದರು.

ಕಾರ್ಮಿಕ ಇಲಾಖೆಯ ಉಪ ಆಯುಕ್ತ ಶ್ರೀಪಾದ್ ಅವರು, ‘ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲಿ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಕುರಿತ ಕಾನೂನುಗಳಿವೆ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಮಿಕರಿಗೆ ನೆರವಾಗಲು ನಾನು ಸಿದ್ಧನಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT