ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋರಿ’ಯ ಮೇಲೆ ರಾಜಪಥ?

ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಡುವ ಚಿಂತನೆಗೆ ಅಧ್ಯಯನದ ಆಧಾರವಿಲ್ಲ
Last Updated 27 ಡಿಸೆಂಬರ್ 2015, 19:41 IST
ಅಕ್ಷರ ಗಾತ್ರ

ಜನರ ಸಾವಿನ ಗೋರಿಯ ಮೇಲೆ ಅಭಿವೃದ್ಧಿಯ ರಾಜಪಥ ಕಟ್ಟುವಿರಾ?- ಈ ಪ್ರಶ್ನೆಯನ್ನು ನಾನು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷನಾಗಿದ್ದಾಗ ರಾಜ್ಯ ಸರ್ಕಾರದ ಮುಂದಿಟ್ಟಿದ್ದೆ. ಮಾತ್ರವಲ್ಲ, ನನ್ನ ಅವಧಿಯಲ್ಲಿ ಮುದ್ರಿತವಾದ ಮಂಡಳಿಯ ಬಹುತೇಕ ಎಲ್ಲ ಸಾಹಿತ್ಯಗಳಲ್ಲಿ ಮತ್ತು ಕರಪತ್ರಗಳಲ್ಲಿ ಈ ಪ್ರಶ್ನೆಯನ್ನು ಕೇಳಿದ್ದೇನೆ.

ವರ್ಷಂಪ್ರತಿ ಅಕ್ಟೋಬರ್ 2ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುವ ಗಾಂಧಿ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮೂವರು ಮುಖ್ಯಮಂತ್ರಿಗಳೆದುರು ಈ ಪ್ರಶ್ನೆಯನ್ನು ಪ್ರಾಸ್ತಾವಿಕ ಭಾಷಣದಲ್ಲಿ ನೇರವಾಗಿ ಇಟ್ಟಿದ್ದೇನೆ. ಈಗ ಇದನ್ನು ಸ್ಮರಿಸಿಕೊಳ್ಳುತ್ತಿರುವುದು ಯಾಕೆಂದರೆ, ಈ ಪ್ರಶ್ನೆಯನ್ನು ಕರ್ನಾಟಕದ ಪ್ರಬಲ ಜನಾಭಿಪ್ರಾಯವಾಗಿ ರೂಪಿಸಬೇಕಾದ ಜರೂರು ಈಗ ಎಂದಿಗಿಂತ ಹೆಚ್ಚಾಗಿದೆ.

ಇದಕ್ಕೆ ಕಾರಣವಿದೆ, ಆಧಾರಗಳಿವೆ. ಅನುಭವಗಳ ಅಡಿಪಾಯವಿದೆ. ಐದು ವರ್ಷಗಳ ಹಿಂದೆ ‘ಪ್ರಜಾವಾಣಿ’ ಒಂದು ವಿಶೇಷ ಲೇಖನ ಪ್ರಕಟಿಸಿತ್ತು. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕು ಕಟ್ಟೆಮಳಲವಾಡಿ ಎಂಬ ಗ್ರಾಮದಲ್ಲಿ ವಿಜೃಂಭಿಸುತ್ತಿದ್ದ ಮದ್ಯಪಾನವೆಂಬ ಮಹಾಮಾರಿಯ ಅಟಾಟೋಪಗಳ ವಿರುದ್ಧ ಅಲ್ಲಿನ ದಲಿತ ಯುವಕರು ಸೆಣಸುತ್ತಿದ್ದ ಹೋರಾಟದ ಗಾಥೆ ಅದು. ಅದನ್ನು ಓದಿದ ಬಳಿಕ ನಾನು ಮತ್ತು ಮಂಡಳಿಯ ಆಗಿನ ಕಾರ್ಯದರ್ಶಿ ಎಚ್.ಬಿ.ದಿನೇಶ ಅವರು ಆ ಗ್ರಾಮಕ್ಕೆ ಭೇಟಿ ಕೊಟ್ಟು, ಅವರ ಹೋರಾಟವನ್ನು ಬೆಂಬಲಿಸಲು ನಿರ್ಧರಿಸಿದೆವು.

ನಾವಲ್ಲಿಗೆ ಹೋದಾಗ ಅಲ್ಲಿನ ಚಿತ್ರಣ ಆಘಾತಕಾರಿಯಾಗಿತ್ತು. ಹತ್ತು ಸಾವಿರ ಜನಸಂಖ್ಯೆಯುಳ್ಳ ಆ ಗ್ರಾಮದಲ್ಲಿ, ಕುಡಿತದಿಂದಲೇ ಸತ್ತ ನಾನೂರು ತರುಣರ ವಿಧವೆಯರಿದ್ದಾರೆಂದು ಸಂಘಟನೆಯೊಂದರ ಕಾರ್ಯಕರ್ತರು ತಿಳಿಸಿದರು. ಅಲ್ಲಿನವರು ನೀಡಿದ ಉಳಿದ ಮಾಹಿತಿಗಳು ಒಂದಕ್ಕಿಂತ ಒಂದು ಆಘಾತಕಾರಿಯಾಗಿದ್ದವು. ಗ್ರಾಮದಲ್ಲಿ ಅಧಿಕೃತ ಪರವಾನಗಿ ಪಡೆದ ಮದ್ಯದಂಗಡಿ ಇತ್ತು.  ಅಲ್ಲಿನ ಕುಡುಕರೆಲ್ಲ ತಮ್ಮ ಪಡಿತರ ಚೀಟಿಗಳನ್ನು ಆ ಮದ್ಯದಂಗಡಿಗೆ ಒತ್ತೆಯಿಟ್ಟಿದ್ದಾರೆ.

ಸರ್ಕಾರ ಅವರಿಗೆ ನೀಡುವ ಎಲ್ಲ ಸೌಲಭ್ಯಗಳೂ ಅವರ ಕುಟುಂಬಗಳಿಗೆ ತಲುಪುವ ಬದಲು ಮದ್ಯದಂಗಡಿಯ ಪಾಲಾಗುತ್ತಿದ್ದವು. ಹೀಗಾಗಿ ಅವರವರ ಪಡಿತರ ಚೀಟಿಯ ಸಾಮರ್ಥ್ಯಕ್ಕನುಗುಣವಾಗಿ ಮತ್ತು ಆ ಕುಡುಕರ ಇತರ ಆದಾಯಕ್ಕನುಗುಣವಾಗಿ ಮದ್ಯದಂಗಡಿಯ ಮಾಲೀಕ ಅವರಿಗೆಲ್ಲ ಮದ್ಯ ಪೂರೈಸುತ್ತಾನೆ!

ಇದು ಕೇವಲ ಕಟ್ಟೆಮಳಲವಾಡಿ ಗ್ರಾಮದ  ಕಥೆ ಎಂದು ಭಾವಿಸಬೇಕಾಗಿಲ್ಲ. ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ತಾಳಗುಪ್ಪಾ ಗ್ರಾಮದ ಹರಿಜನ ವಸತಿಗಳಿಗೆ ಭೇಟಿ ನೀಡಿದ್ದೆ.  ಅಲ್ಲಿನ 64 ಹರಿಜನ ಕುಟುಂಬಗಳ ಪೈಕಿ 32 ಕುಟುಂಬಗಳಲ್ಲಿ ಕುಡಿದು ಸತ್ತವರ
ವಿಧವೆಯರಿದ್ದಾರೆ. ಅವರೆಲ್ಲರೂ ಎಳೆಯ ವಯಸ್ಸಿನ ಯುವತಿಯರು.

ಹಾಗಾದರೆ ರಾಜ್ಯದಲ್ಲಿ ಒಂದು ವರ್ಷಕ್ಕೆ ಕುಡಿತದಿಂದ ಎಷ್ಟು ಜನ ಸಾಯುತ್ತಾರೆ? ಎಷ್ಟು ಕುಟುಂಬಗಳು ಅನಾಥವಾಗುತ್ತಿವೆ? ಎಷ್ಟು ಕುಟುಂಬಗಳು ಪಡಿತರ ಚೀಟಿಗಳನ್ನು, ಸರ್ಕಾರದಿಂದ ತಮಗೆ ಸಿಗುವ ಸೌಲಭ್ಯ ಗಳನ್ನು ಮದ್ಯದಂಗಡಿಗಳಿಗೆ ಒತ್ತೆಯಿಡುತ್ತವೆ? ಎಷ್ಟು ಜನ ನಾನಾ ಕಾಯಿಲೆಗೆ ಸಿಲುಕಿ ನರಳಾಡುತ್ತಿದ್ದಾರೆ? ಎಷ್ಟು ಕುಟುಂಬಗಳಲ್ಲಿ ಕುಡಿತದಿಂದಾಗಿ ಹೊಡೆದಾಟ-ಬಡಿದಾಟಗಳಾಗುತ್ತಿವೆ? ಎಷ್ಟು ಸಂಸಾರಗಳು ಒಡೆದುಹೋಗಿವೆ? ಎಷ್ಟು ಮಕ್ಕಳು ತಮ್ಮ ಭವಿಷ್ಯವನ್ನು ಕಳೆದುಕೊಂಡಿದ್ದಾರೆ?  ಈ ಎಲ್ಲ ಪ್ರಶ್ನೆಗಳ ಬಗ್ಗೆ ರಾಜ್ಯ ಸರ್ಕಾರದ ಯಾವ ಇಲಾಖೆಯಲ್ಲೂ ಮಾಹಿತಿಗಳಿಲ್ಲ. ಯಾಕೆಂದರೆ ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳುವ ಸಮಗ್ರ ಅಧ್ಯಯನ ಈವರೆಗೆ ನಡೆದೇ ಇಲ್ಲ.

ಸರ್ಕಾರ ಇದೀಗ ಮತ್ತೆ 1750 ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಹೊರಟಿದೆ. ಸರ್ಕಾರ  ಯೋಜನೆ ರೂಪಿಸುವಾಗ ಜನಹಿತವೇ ಅದರ ಪರಮೋಚ್ಚ ಗುರಿಯಾಗಿರಬೇಕು. ಆದರೆ ಸಾವಿನ ವ್ಯಾಪಾರವಾದ ಮದ್ಯ ಮಾರಾಟದಿಂದ ಅದು ಆದಾಯ ಗಳಿಸಲು ಹೊರಟಿದೆ. ಯಾಕೆಂದು ಕೇಳಿದರೆ ಅಭಿವೃದ್ಧಿಗೆ ಹಣ ಬೇಕೆನ್ನುತ್ತದೆ ಅದು. ಆದ್ದರಿಂದಲೇ ಈ ಪ್ರಶ್ನೆ- ಜನರ ಸಾವಿನ ಗೋರಿಯ ಮೇಲೆ ಅಭಿವೃದ್ಧಿಯ ರಾಜಪಥ ಕಟ್ಟುವಿರಾ?

ಸ್ವಾತಂತ್ರ್ಯೋತ್ತರದಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರಗಳು ಗಾಂಧೀಜಿಯ ಪ್ರಭಾವದಿಂದಾಗಿ ಪಾನನಿಷೇಧವನ್ನು ಜಾರಿಗೊಳಿಸಿದ್ದವು. ಆದರೆ ಸರ್ಕಾರಗಳ ಅದಕ್ಷ ಆಡಳಿತ ಮತ್ತು ಭ್ರಷ್ಟಾಚಾರದ ಹೆಚ್ಚಳದಿಂದಾಗಿ ಕಳ್ಳಭಟ್ಟಿ ಸಮಸ್ಯೆ ಉಲ್ಬಣಗೊಂಡಿತು. ಇದನ್ನು ತಡೆಗಟ್ಟಲು ವೈಜ್ಞಾನಿಕವಾಗಿ ತಯಾರಾದ ಮದ್ಯವನ್ನು ಕುಡಿಯಲು ಜನರಿಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂಬ ವಿಚಿತ್ರ ಸಿದ್ಧಾಂತವೊಂದು ಹುಟ್ಟಿಕೊಂಡಿತು.

1960ರ ದಶಕದ ಕೊನೆಯ ಹೊತ್ತಿಗೆ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ  ಪಾನನಿಷೇಧವನ್ನು ತೆಗೆದುಹಾಕಿದವು. ಆ ನಿರ್ಧಾರ ಕೈಗೊಳ್ಳುವಾಗ ಪಾನನಿಷೇಧದಿಂದ ಏನೇನು ಅನಾಹುತಗಳು ಸಂಭವಿಸಬಹುದೆಂಬ ಬಗ್ಗೆ ಯಾವುದೇ ವೈಜ್ಞಾನಿಕ ಚಿಂತನೆಯಾಗಲೀ, ಅಧ್ಯಯನವಾಗಲೀ ನಡೆದಿರಲಿಲ್ಲ. ಅದು ಕೇವಲ ರಾಜಕೀಯ ನಿರ್ಧಾರವಾಗಿತ್ತು. ಈಗ ಕರ್ನಾಟಕ ಸರ್ಕಾರ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಡಲು ಚಿಂತನೆ ನಡೆಸಿರುವುದರ ಹಿಂದೆ ಕೂಡ ಯಾವುದೇ ಅಧ್ಯಯನ-ಸಂಶೋಧನೆಗಳ ಆಧಾರವಿಲ್ಲ. ಕೇವಲ ಸಮಯಸಾಧಕ ದೃಷ್ಟಿಕೋನ ಅದು. ಈ ರೀತಿಯ ದೃಷ್ಟಿಕೋನಕ್ಕೆ ಯಾವ ಪಕ್ಷದ ಸರ್ಕಾರವೂ ಹೊರತಲ್ಲ. ಸರ್ಕಾರಗಳು ಯಾಕಿಂಥ  ಜನವಿರೋಧಿ ಧೋರಣೆಗಳನ್ನು ತಾಳುತ್ತವೆ?

ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ನನಗೆ ತಿಳಿಸಿದ ಪ್ರಕಾರ, ರಾಜ್ಯದಲ್ಲಿರುವ ಒಟ್ಟು ಮದ್ಯದಂಗಡಿಗಳ ಪೈಕಿ ಶೇಕಡ 40ರಷ್ಟು ಅಬಕಾರಿ ಇಲಾಖೆ ಅಧಿಕಾರಿಗಳ ನೆಂಟರಿಷ್ಟರ ಹೆಸರಿನಲ್ಲಿವೆ. ಬರೀ ಬೆಂಗಳೂರಿನ ಪ್ರತಿದಿನದ ಮದ್ಯ ಮಾರಾಟದ ಪ್ರಮಾಣ ₹ 40 ಕೋಟಿಗಳಷ್ಟಿದೆ. ಡಿಸೆಂಬರ್ ಕೊನೆ ವಾರ ಮದ್ಯ ವ್ಯವಹಾರಕ್ಕೆ ಸುಗ್ಗಿ. ಅಬಕಾರಿ ಇಲಾಖೆಯೇ ಮೂರು ವರ್ಷಗಳ ಹಿಂದೆ ಒದಗಿಸಿದ ಮಾಹಿತಿಯಂತೆ, ಈ ತಿಂಗಳ ಕೊನೆಯ ದಿನಗಳಲ್ಲಿ ಮದ್ಯ ಮಾರಾಟ ದಿನವೊಂದಕ್ಕೆ ₹ 160 ಕೋಟಿಯಷ್ಟಾಗುತ್ತದೆ!  ಇದರ ಬೆನ್ನಿಗೇ ಏರುವ ಇನ್ನೊಂದು ಸಂಗತಿ ಎಂದರೆ ಅಪಘಾತಗಳ ಪ್ರಮಾಣ. ಡಿಸೆಂಬರ್ ಕೊನೆಯ ವಾರ, ಅದರಲ್ಲೂ ಜನವರಿ 1ರ ರಾತ್ರಿ ಕುಡಿದು ಅಪಘಾತಕ್ಕೀಡಾಗುವವರ ಸಂಖ್ಯೆ ಬಹಳ ದೊಡ್ಡದು. ಆದರೆ ಈ ಬಗ್ಗೆ ಅಬಕಾರಿ ಅಥವಾ ಪೊಲೀಸ್‌ ಇಲಾಖೆಗಳ ಬಳಿ ಅಂಕಿ-ಅಂಶಗಳಿಲ್ಲ.

ಅಬಕಾರಿ ಇಲಾಖೆ ಅಧಿಕಾರಿಗಳು ಮೂರು ವರ್ಷದ ಹಿಂದೆ ಮದ್ಯಪಾನ ಸಂಯಮ ಮಂಡಳಿಯ ಅಧಿಕೃತ ದ್ವೈಮಾಸಿಕ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, ಕನ್ನಡನಾಡಿನಲ್ಲಿ ನಿಯಮಿತವಾಗಿ ಕುಡಿಯುವವರ ಸಂಖ್ಯೆ ಎರಡು ಕೋಟಿ. ಕುಡಿತದ ಹವ್ಯಾಸವುಳ್ಳವರ ಪೈಕಿ ಚಟಕ್ಕೆ ಬೀಳುವವರ ಪ್ರಮಾಣ ಶೇ 20ರಷ್ಟು, ಅಂದರೆ 40 ಲಕ್ಷ ಮಂದಿ. ಇನ್ನು ಸಾವಿರಾರು ಹೊಸ ಮದ್ಯದಂಗಡಿಗಳು ಉದ್ಭವವಾದರೆ ಇವರ ಸಂಖ್ಯೆ ಎಷ್ಟು ಪಟ್ಟು ಹೆಚ್ಚಾಗಬಹುದು?

ಲೇಖಕ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ನಿಕಟಪೂರ್ವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT