ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರವ’ ಉಳಿಸುವ ಗೆಲುವಿನತ್ತ ಚಿತ್ತ

ಇಂದು ಆಸ್ಟ್ರೇಲಿಯಾ–ಭಾರತ ನಾಲ್ಕನೇ ಏಕದಿನ ಪಂದ್ಯ; ದೌರ್ಬಲ್ಯದಿಂದ ಹೊರಬರುವುದೇ ಬೌಲಿಂಗ್ ಪಡೆ
Last Updated 19 ಜನವರಿ 2016, 20:01 IST
ಅಕ್ಷರ ಗಾತ್ರ

ಕ್ಯಾನ್‌ಬೆರ್ರಾ (ಪಿಟಿಐ): ದುರ್ಬಲ ಬೌಲಿಂಗ್ ಪ್ರದರ್ಶನಕ್ಕೆ ಭಾರತ ತಂಡವು ಈಗಾಗಲೇ ದಂಡ ತೆತ್ತಿದೆ. ಐದು ಪಂದ್ಯ ಗಳ ಸರಣಿಯ ಮೂರು ಪಂದ್ಯಗಳ ಲ್ಲಿಯೂ ಸೋಲನುಭವಿಸಿದೆ. ಸರಣಿ ಗೆಲುವಿನ ಅವಕಾಶವನ್ನು ಕೈಚೆಲ್ಲಿದೆ.

ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ಮಾತ್ರ ಈಗ ಮಹೇಂದ್ರಸಿಂಗ್ ದೋನಿ ಬಳಗದ ಮುಂದೆ ಇದೆ.

ಬುಧವಾರ ಕ್ಯಾನ್‌ಬೆರ್ರಾದ ಮನುಕಾ ಒವೆಲ್‌ ಕ್ರೀಡಾಂಗಣದಲ್ಲಿ ನಡೆಯುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವುದು ಭಾರತ ತಂಡಕ್ಕೆ ಅತ್ಯ ವಶ್ಯಕವಾಗಿದೆ. ಏಕದಿನ ಸರಣಿಯ ನಂತರ  ನಡೆಯುವ ಮೂರು ಟ್ವೆಂಟಿ–20 ಪಂದ್ಯಗಳ ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಗೆಲುವಿನ ‘ಟಾನಿಕ್’ ಅನಿವಾರ್ಯವಾಗಿದೆ.

ಕಳೆದ ಮೂರು ಪಂದ್ಯಗಳಲ್ಲಿಯೂ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ಪಡೆ ಯನ್ನು ಸಮರ್ಥವಾಗಿ ಎದುರಿಸಿದ ಶ್ರೇಯ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸಲ್ಲುತ್ತದೆ.  ಆದರೆ, ಅದಕ್ಕೆ ತಕ್ಕ ಆಟ ವನ್ನು ಬೌಲರ್‌ಗಳು ಆಡಲಿಲ್ಲ. ಮೊದಲ ಎರಡೂ ಪಂದ್ಯಗಳಲ್ಲಿ ಮೂನ್ನೂರು ರನ್‌ಗಳಿಗಿಂತಲೂ ಹೆಚ್ಚು ಮೊತ್ತವನ್ನು ಭಾರತ ಗಳಿಸಿತ್ತು.  ಕಳೆದ ಪಂದ್ಯದ ಲ್ಲಿಯೂ 295 ರನ್‌ಗಳ ಸವಾಲಿನ ಗುರಿ ಯನ್ನು ಆತಿಥೇಯರಿಗೆ ನೀಡಿತ್ತು. ಆಗಲೂ ಬೌಲರ್‌ಗಳು ಪ್ರಯೋಗಿಸಿದ ಎಲ್ಲ ಅಸ್ತ್ರಗಳನ್ನು ಆಸ್ಟ್ರೇಲಿಯಾ ಬ್ಯಾಟಿಂಗ್‌ ಪಡೆಯು ನುಚ್ಚುನೂರು ಮಾಡಿತ್ತು.

ಬೌಲರ್‌ಗಳ ಪರದಾಟ: ಎರಡೂ ತಂಡ ಗಳ ಬ್ಯಾಟ್ಸ್‌ಮನ್‌ಗಳು ತಮ್ಮ ಜವಾಬ್ದಾರಿ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರು ವುದು ಈ ಸರಣಿಯ ವಿಶೇಷ.

ಅದರಲ್ಲೂ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮೊದಲ ಎರಡೂ ಪಂದ್ಯಗಳಲ್ಲಿ ಶತಕ ದಾಖಲಿಸಿ ಮಿಂಚಿದ್ದರು. ಮೂರನೇ ಪಂದ್ಯದಲ್ಲಿ ಅವರು ಹೆಚ್ಚು ರನ್‌ ಗಳಿಸಲಿಲ್ಲ. ಆದರೆ, ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್  ಅರ್ಧ ಶತಕ ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದ್ದರು.

ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಮಿಂಚಿದ್ದರು. ಏಕದಿನ ಕ್ರಿಕೆಟ್‌ ನಲ್ಲಿ ಅತಿ ವೇಗದ ಏಳು ಸಾವಿರ ರನ್‌ಗಳನ್ನು ಗಳಿಸಿದ ಶ್ರೇಯಕ್ಕೂ ಅವರು ಪಾತ್ರರಾಗಿದ್ದರು.  ಅಜಿಂಕ್ಯ ರಹಾನೆ ಕೂಡ ಮಧ್ಯಮ ಕ್ರಮಾಂಕದಲ್ಲಿ ಆಕರ್ಷಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದಾರೆ.

ಕೇನ್ ರಿಚರ್ಡ್ಸ್‌ನ್, ಜಾನ್ ಹೇಸ್ಟಿಂಗ್ಸ್, ಜೇಮ್ಸ್‌ ಫಾಕ್ನರ್, ಸ್ಕಾಟ್ ಬೊಲಾಂಡ್ ಅವರ ಬಿರುಗಾಳಿ ವೇಗದ ಬೌಲಿಂಗ್‌ಗೆ ಭಾರತದ ಬ್ಯಾಟ್ಸ್‌ಮನ್‌ ಗಳು ದಿಟ್ಟ ಉತ್ತರ ನೀಡಿದ್ದರು.

ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವನ್ ಸ್ಮಿತ್, ಆ್ಯರನ್ ಫಿಂಚ್, ಶಾನ್ ಮಾರ್ಷ್, ಜಾರ್ಜ್ ಬೇಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬ್ಯಾಟಿಂಗ್ ವೈಖರಿಗೆ ಆತಿಥೇಯರು  3–0 ಯಿಂದ ಸರಣಿ ಸಾಧಿಸಿದ್ದಾರೆ.  ಭಾರತದ ಬೌಲರ್‌ಗಳ ದೌರ್ಬಲ್ಯವನ್ನು ಸರಿಯಾಗಿ ದಂಡಿಸಿದ್ದಾರೆ.

ಹೊಸ ಹುಡುಗ ಬರೀಂದರ್ ಸರನ್, ಅನುಭವಿ ಇಶಾಂತ್ ಶರ್ಮಾ, ಉಮೇಶ್ ಯಾದವ್ ಅವರ ದಾಳಿಗೆ ಕೆಲವು ವಿಕೆಟ್‌ಗಳು ಪತನವಾದರೂ ಜಯ ತಂದುಕೊಟ್ಟಿಲ್ಲ. ಮೊದಲೆರಡು ಪಂದ್ಯಗಳಲ್ಲಿ  ಸ್ಪಿನ್ ಮೋಡಿ ತೋರು ವಲ್ಲಿ ವಿಫಲರಾಗಿದ್ದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮೂರನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಆಡಿದ ಮಧ್ಯಮವೇಗಿ ರಿಷಿ ಧವನ್ ಒಂದೂ ವಿಕೆಟ್ ಪಡೆಯಲಿಲ್ಲ. ಗುರುಕೀರತ್ ಸಿಂಗ್ ಮಾನ್ ಅವರ ಸ್ಪಿನ್ ಕೂಡ ಮೋಡಿ ಮಾಡಲಿಲ್ಲ. ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ ಮಾತ್ರ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಅಕ್ಟೋಬರ್‌ನಲ್ಲಿ ಭಾರತದಲ್ಲಿಯೇ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಆತಿಥೇಯರು ಸೋಲನುಭವಿಸಿದ್ದರು. ಇದೀಗ ಆಸ್ಟ್ರೇಲಿ ಯಾದಲ್ಲಿಯೂ ಸರಣಿ ಸೋತಿದೆ. ಇದ ರಿಂದಾಗಿ ನಾಯಕ ದೋನಿ ಕ್ರಿಕೆಟ್‌ ವಲ ಯದಿಂದ ಸಾಕಷ್ಟು ಟೀಕೆಗಳನ್ನು ಎದುರಿ ಸುತ್ತಿದ್ದಾರೆ. ಉಳಿದ ಪಂದ್ಯಗಳಲ್ಲಿ ಗೆದ್ದು, ‘ಗೌರವ’ ಉಳಿಸಿಕೊಳ್ಳುವ  ಆಸೆಯಲ್ಲಿ ರುವ  ಅವರಿಗೆ ಬೌಲರ್‌ಗ ಳಿಂದ ಉತ್ತಮ ಬೆಂಬಲ ಸಿಗಬೇಕಾಗಿದೆ. ಇಲ್ಲ ದಿದ್ದರೆ ಸ್ಮಿತ್‌ ಬಳಗವು  ‘ಕ್ಲೀನ್‌ಸ್ವೀಪ್‌’   ಕನಸು ಸಾಕಾರಗೊಳ್ಳು ವತ್ತ ಮತ್ತೊಂದು ಹೆಜ್ಜೆ ಇಡುವುದು ಖಚಿತ.

ಸಪಾಟಾದ ಪಿಚ್‌ಗಳಿಂದ ಬೌಲರ್‌ಗಳಿಗೆ ಒತ್ತಡ: ಸಪಾಟಾದ ಪಿಚ್‌ಗಳಿಂದಾಗಿ ಬೌಲರ್‌ಗಳು ಹೆಚ್ಚಿನ ಒತ್ತಡ ಅನುಭವಿ ಸುತ್ತಿದ್ದಾರೆ. ಆದರೆ, ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.
ಕಳೆದ ಮೂರು ಪಂದ್ಯಗಳಲ್ಲಿಯೂ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಮಿಂಚಿದ್ದರು.  ಆದರೆ, ಬೌಲರ್‌ಗಳು ವಿಕೆಟ್ ಪಡೆಯಲು ಪರದಾಡಿದ್ದಾರು.

‘ಯಾವುದೇ ಪಂದ್ಯದಲ್ಲಿಯೂ ಆರಂಭದಲ್ಲಿಯೇ ವಿಕೆಟ್ ಪಡೆದು ಬ್ಯಾಟಿಂಗ್ ಮಾಡುವ ತಂಡದ ಮೇಲೆ ಒತ್ತಡ ಹೇರುವ ಗುರಿ ಇರುತ್ತದೆ. ಆದರೆ, ಇತ್ತೀಚಿನ ಏಕದಿನ ಪಂದ್ಯಗಳಲ್ಲಿ ಮೊದಲ ಹತ್ತು ಓವರ್‌ಗಳಲ್ಲಿ ಟೆಸ್ಟ್‌ ಮಾದರಿಯ ರಕ್ಷಣಾತ್ಮಕ ಬ್ಯಾಟಿಂಗ್‌ ಕಂಡು ಬರುತ್ತಿದೆ.  ನಂತರದ ಓವರ್‌ ಗಳಲ್ಲಿ ರನ್‌ ಗಳಿಕೆಯ ವೇಗ ಹೆಚ್ಚುತ್ತಿದೆ. ಪಿಚ್‌ಗಳು ಕೂಡ ಈ ಮಾದರಿಯ ಆಟಕ್ಕೆ ಸಹಕರಿಸುತ್ತಿವೆ’ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

ಬೌಲರ್‌ಗಳು ತಪ್ಪು ತಿದ್ದಿಕೊಳ್ಳಲಿ:  ಭಾರತ ತಂಡವು 0–5ರಿಂದ ಸರಣಿ ಸೋಲು ತಪ್ಪಿಸಿಕೊಳ್ಳಬೇಕಾದರೆ ಬೌಲರ್‌ ಗಳನ್ನು ತಪ್ಪುಗಳನ್ನು ತಿದ್ದಿಕೊಂಡು ಆಡಬೇಕು ಎಂದು ತಂಡದ ನಿರ್ದೇಶಕ ರವಿಶಾಸ್ತ್ರಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳಿಂದ ಬೌಲರ್‌ಗಳು ಪಾಠ ಕಲಿಯಬೇಕು. ಆ ಮೂಲಕ ಬುಧವಾರದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿ ತಂಡದ ಗೆಲುವಿಗೆ ಕಾರಣರಾಗಬೇಕು’ ಎಂದು ಹೇಳಿದ್ದಾರೆ.

‘ನಮ್ಮ ತಂಡದ ಬೌಲರ್‌ಗಳಲ್ಲಿ ಸಾಮರ್ಥ್ಯ ಇದೆ. ಆದರೆ, ತಮ್ಮ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ಬಳಸಬೇಕು’ ಎಂದು ಶಾಸ್ತ್ರಿ ಹೇಳಿದ್ದಾರೆ.

ಕ್ಯಾನ್‌ಬೆರ್ರಾದಲ್ಲಿ ಮೊದಲ ಪಂದ್ಯ: ಇಲ್ಲಿಯ ಮನುಕಾ ಒವೆಲ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿವೆ.

2008ರಲ್ಲಿ ಇಲ್ಲಿ  ಭಾರತ ತಂಡವು ಶ್ರೀಲಂಕಾ ವಿರುದ್ಧ ಆಡಿತ್ತು. ಅದರಲ್ಲಿ ಲಂಕಾ ತಂಡವು 8 ವಿಕೆಟ್‌ಗಳಿಂದ ಜಯ ಗಳಿಸಿತ್ತು.

1929ರಲ್ಲಿಯೇ ಈ ಮೈದಾನವನ್ನು ನಿರ್ಮಿಸಲಾಗಿತ್ತು. 2012ರಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ಒಟ್ಟು ಏಳು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ಇಲ್ಲಿ ನಡೆದಿವೆ. ಆತಿಥೇಯ ಆಸ್ಟ್ರೇಲಿಯಾ  ಎರಡು ಪಂದ್ಯಗಳನ್ನು ಆಡಿದೆ.

ಪಾಂಡೆಗೆ ಅವಕಾಶ ನಿರೀಕ್ಷೆ (ಮೆಲ್ಬರ್ನ್‌ನಿಂದ ಪಿಟಿಐ ವರದಿ): ಕರ್ನಾಟಕದ ಬ್ಯಾಟ್ಸ್‌ಮನ್  ಮನೀಷ್ ಪಾಂಡೆ ಅವರನ್ನು ಮೆಲ್ಬರ್ನ್ ಪಂದ್ಯದಿಂದ ಕೈಬಿಡಲಾಗಿತ್ತು. ಇದು ಕ್ರಿಕೆಟ್‌ ವಲ ಯದಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿತ್ತು.

ಅವರ ಬದಲಿಗೆ ಆಲ್‌ರೌಂಡರ್ ಗುರುಕೀರತ್ ಮಾನ್ ಅವರಿಗೆ  ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತ್ತು. ಆದರೆ, ಅವರು ಮಿಂಚಲಿಲ್ಲ. ಇದರಿಂದಾಗಿ ಮೊದಲ ಎರಡು ಪಂದ್ಯಗಳಲ್ಲಿ ಅವರು ತಂಡದಲ್ಲಿದ್ದರು. ಬ್ರಿಸ್ಟೇನ್‌ನಲ್ಲಿ ಮಾತ್ರ ಅವರು ಕ್ರೀಸ್‌ಗೆ ಬರುವ ಅವಕಾಶ ಸಿಕ್ಕಿತ್ತು. ಆರು ರನ್‌ ಗಳಿಸಿದ್ದರು.

ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್‌ಗೆ ಬರುವ ಅವಕಾಶ ಸಿಕ್ಕಿರಲಿಲ್ಲ.  ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಸೇರಿದಂತೆ ಮೇಲಿನ ಕ್ರಮಾಂಕದ ಆಟಗಾರರು  ತಂಡದ ಮೊತ್ತವನ್ನು 50 ಓವರ್‌ಗಳಲ್ಲಿ 300ರ ಗಡಿ ದಾಟಿಸಿದ್ದರು.

ಆರಂಭ: ಮಧ್ಯಾಹ್ನ 1.20

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT