ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಸ್ವರಾಜ್ಯದ ಪಥ’ ಗುರಿ ಮುಟ್ಟಬಹುದೇ?

Last Updated 30 ನವೆಂಬರ್ 2014, 19:30 IST
ಅಕ್ಷರ ಗಾತ್ರ

‘ಕರ್ನಾಟಕದಲ್ಲಿ ಗ್ರಾಮ ಸ್ವರಾಜ್ಯದ ಪಥ’ ಶೀರ್ಷಿಕೆಯಡಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿಯ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಶಕ್ತಿವರ್ಧನೆಗೆ ಅಗತ್ಯವಿರುವ ತಿದ್ದುಪಡಿಗಳನ್ನು ರಮೇಶ್‌ಕುಮಾರ್ ಅಧ್ಯಕ್ಷತೆಯ ಸಮಿತಿಯು ಸೂಚಿಸಿದೆ. ಆದರೆ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಸ್ವೀಕರಿಸುವ ಸ್ಥಿತಿಯಲ್ಲಿದೆಯೇ ಎನ್ನುವ ಪ್ರಶ್ನೆ ನಮ್ಮ ಮುಂದೆ ಇದೆ. ಈ ಪ್ರಶ್ನೆಗೆ ಪೂರಕವಾದ ಕೆಲವು ವಿಚಾರಗಳನ್ನು ಚರ್ಚಿಸುತ್ತಾ, ರಮೇಶ್ ಕುಮಾರ್ ನೇತೃತ್ವದ ಸಮಿತಿಯ ವರದಿಯಲ್ಲಿನ ಪ್ರಮುಖ ಅಂಶಗಳು ಮತ್ತು ಗೊಂದಲಗಳನ್ನು ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ.

ರಾಜ್ಯ ಸರ್ಕಾರಕ್ಕೆ ರಮೇಶ್ ಕುಮಾರ್ ನೇತೃತ್ವದ ಸಮಿತಿ ಕೆಪಿಆರ್ ಕಾಯ್ದೆಯ (ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ) ತಿದ್ದುಪಡಿಗೆ ನೀಡಿರುವ ಸಲಹೆಗಳನ್ನು ಯಥಾವತ್ತಾಗಿ ಸ್ವೀಕರಿಸುವ ಮತ್ತು ಸದನದಲ್ಲಿ ಅದಕ್ಕೆ ಅನುಮೋದನೆ ಪಡೆಯುವ ಬದ್ಧತೆ ಮತ್ತು ಇಚ್ಚಾಶಕ್ತಿ ಇದೆಯೇ ಎನ್ನುವ ವಿಚಾರ ಪ್ರಸ್ತುತ ನಮ್ಮ ಮುಂದಿದೆ. ಸರ್ಕಾರದ ಈಗಿನ ಕಾರ್ಯನಿರ್ವಹಣೆಯನ್ನು ನೋಡಿದರೆ ಇದು ಕಷ್ಟಸಾಧ್ಯ ಎನಿಸುತ್ತದೆ. ಮುಖ್ಯವಾಗಿ ಸರ್ಕಾರಕ್ಕೆ ರಮೇಶ್ ಕುಮಾರ್ ಅಧ್ಯಕ್ಷತೆಯ ಸಮಿತಿಯ ವರದಿಗಿಂತ ನಂಜಯ್ಯನ ಮಠ ನೇತೃತ್ವದ ಸಮಿತಿಯ ವರದಿಯನ್ನು  ಅನುಷ್ಠಾನಗೊಳಿಸಲು ಹೆಚ್ಚು ಆಸಕ್ತಿ ಇದ್ದ ಹಾಗೆ ಕಾಣುತ್ತದೆ. ಜೊತೆಗೆ ರಾಜ್ಯ ಸರ್ಕಾರ ನೇಮಿಸಿದ ಈ ಎರಡೂ ಸಮಿತಿಗಳ ವರದಿಯಲ್ಲಿ ಮೂಲಭೂತವಾದ ಎರಡು -ವಿರೋಧಾಭಿಪ್ರಾಯಗಳು ವ್ಯಕ್ತವಾಗಿವೆ.

ಮೊದಲನೆಯದು ಗ್ರಾಮ ಪಂಚಾಯಿತಿಗಳ  ಸಂಖ್ಯೆಯ ಕುರಿತಾದ ವಿಚಾರ. ರಮೇಶ್ ಕುಮಾರ್ ನೇತೃತ್ವದ ಸಮಿತಿಯು ರಾಜ್ಯದಲ್ಲಿರುವ ೫೬೨೯ ಗ್ರಾಮ ಪಂಚಾಯಿತಿಗಳನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸುವ ಅಗತ್ಯದ ಕುರಿತು ಸಲಹೆ ನೀಡಿದೆ. ಆದರೆ ನಂಜಯ್ಯನಮಠ ಅಧ್ಯಕ್ಷತೆಯ ಸಮಿತಿ ಈಗ ಇರುವ ೫೬೨೯ಗ್ರಾಮ ಪಂಚಾಯಿತಿಗಳಿಗೆ ಹೆಚ್ಚುವರಿಯಾಗಿ ೪೩೯ಗ್ರಾಮ ಪಂಚಾಯಿತಿಗಳನ್ನು ಸೃಷ್ಟಿಸಿದೆ. ಈ ಸೃಷ್ಟಿಯಲ್ಲಿ ಕೆಲವೊಂದು ಸಂದರ್ಭದಲ್ಲಿ ರಾಜಕೀಯ ಒತ್ತಡಗಳು ಕೂಡಾ ಕೆಲಸ ಮಾಡಿವೆ ಎಂಬಂತೆ ಕಾಣಿಸುತ್ತಿದೆ.

ಎರಡನೆಯದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇರ ಚುನಾವಣೆಯ ಪ್ರಶ್ನೆ. ಈ ವಿಚಾರದಲ್ಲಿ ನಂಜಯ್ಯನ ಮಠ ಸಮಿತಿಗೆ ಸರ್ಕಾರಕ್ಕೆ ಶಿಫಾರಸು ನೀಡುವ ಹೊಣೆಗಾರಿಕೆ ಇರಲಿಲ್ಲ. ಆದರೆ ನಂಜಯ್ಯನ ಮಠ ಸಮಿತಿ ತನ್ನ ವರದಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ನೇರ ಆಯ್ಕೆ ಆಗಬೇಕು ಎನ್ನುವ ಶಿಫಾರಸು ನೀಡಿತ್ತು. ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಸಚಿವರು, ಹಲವು ಸಚಿವರು, ಶಾಸಕರುಗಳ ಮನದಾಳದ ಇಂಗಿತ ಅಧಿಕೃತವಾಗಿ ಇಂತಹ ಶಿಫಾರಸಿನ ರೂಪದಲ್ಲಿ ಹೊರಹೊಮ್ಮಿದೆ ಎನ್ನುವ ಸಂಶಯಕ್ಕೆ ಹಲವಾರು ಸಾಂದರ್ಭಿಕ ಸಾಕ್ಷ್ಯಗಳು ಸಿಗುತ್ತವೆ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಮೇಶ್ ಕುಮಾರ್ ನೇತೃತ್ವದ ಸಮಿತಿಯು ಅಧ್ಯಕ್ಷರ ನೇರ ಆಯ್ಕೆ ವಿಧಾನವನ್ನು ಸಕಾರಣ ಕೊಟ್ಟು ನಿರಾಕರಿಸಿದೆ. ಸಮಿತಿಯ ನೇಮಕದ ಆರಂಭದ ದಿನಗಳಲ್ಲಿ ಈ ಸಮಿತಿ ಕೂಡಾ ಅಧ್ಯಕ್ಷರ ನೇರ ಆಯ್ಕೆಯ ವಿಧಾನಕ್ಕೆ ಒಲವು ತೋರಿಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಈ ಪ್ರಸ್ತಾವಕ್ಕೆ ತೀವ್ರ ವಿರೋಧ ಕಂಡು ಬಂದ ಹಿನ್ನೆಲೆಯಲ್ಲಿ ತನ್ನ ನಿಲುವನ್ನು ವಿಮರ್ಶೆಗೆ ಒಳಪಡಿಸಿದ ಸಮಿತಿ ತನ್ನ ವರದಿಯಲ್ಲಿ ಈ ಕುರಿತು ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದೆ ಎಂದರೆ ತಪ್ಪಾಗಲಾರದು. ‘ಅಧಿಕ ಅಧಿಕಾರ- ಅಧಿಕ ಭ್ರಷ್ಟತೆ’ ಎನ್ನುವ ಉಕ್ತಿಯನ್ನು ಪ್ರಸ್ತಾಪಿಸಿ, ಅಧ್ಯಕ್ಷರನ್ನು ನೇರವಾಗಿ ಚುನಾಯಿಸುವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯಿ ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮ ಸಭೆಗಳು ಅರ್ಥ ಕಳೆದುಕೊಳ್ಳುತ್ತವೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಹಣದ ಭ್ರಷ್ಟಾಚಾರ ಈಗಿನದ್ದಕ್ಕಿಂತ ಹೆಚ್ಚು ಆಳವಾಗಿ ನೆಲೆಗೊಳ್ಳಲು ಇದು ದಾರಿ ಮಾಡಿಕೊಡುತ್ತದೆ ಎಂದು ಹೇಳುವ ಮೂಲಕ ರಮೇಶ್ ಕುಮಾರ್ ಸಮಿತಿ ಸಮಸ್ಯೆಯನ್ನು ಸರಿಯಾಗಿಯೇ ಗ್ರಹಿಸಿದೆ.

ಸಮಿತಿಯ ಈ ನಿಲುವು ಬಹಳ ಜನರಿಗೆ ಅಪಥ್ಯವಾಗಿದೆ. ಈ ಕಾರಣದಿಂದಾಗಿ ನಂಜಯ್ಯನ ಮಠ ಸಮಿತಿಯ ಮೂಲಕ ತಮ್ಮ ಆಶಯವನ್ನು ಪ್ರತಿಪಾದಿಸುವ ಪ್ರಯತ್ನ ನಡೆದಿದೆ. ಹೀಗಿರುವಾಗ ರಾಜ್ಯ ಸರ್ಕಾರ, ಅದರಲ್ಲೂ ಪ್ರಮುಖವಾಗಿ ರಾಜ್ಯದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಹೆಚ್.ಕೆ ಪಾಟೀಲ್‌ ಯಾವ ಕಡೆ ವಾಲುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಈ ವಿಚಾರಗಳ ಜೊತೆಗೆ ಇನ್ನು ಕೆಲವು ಅಂಶಗಳು ರಮೇಶ್ ಕುಮಾರ್ ನೇತೃತ್ವದ ಸಮಿತಿಯ ಜಾರಿಗೆ ತಡೆಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ನಮ್ಮ ಆಡಳಿತ ಯಂತ್ರದ ಮೇಲೆ ಬಿಗಿಯಾದ ಹಿಡಿತವನ್ನು ಇಟ್ಟುಕೊಂಡಿರುವ ಅಧಿಕಾರಶಾಹಿಯನ್ನು ಕೆಣಕಲು ಪ್ರಯತ್ನಿಸಿರುವ ರಮೇಶ್ ಕುಮಾರ್ ಸಮಿತಿಯ ವರದಿ ಅದಕ್ಕೆ ತಕ್ಕ ಬೆಲೆಯನ್ನು ತೆರುವ ಸಂದರ್ಭ ಸೃಷ್ಟಿಯಾಗಬಹುದು.

ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರು(ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ) ಪಂಚಾಯತ್‌ನ ಪೂರ್ಣಾವಧಿ ಕಾರ್ಯನಿರ್ವಾಹಕರಾಗಿದ್ದು, ಅವರಿಗೆ ಕ್ರಮವಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿಗಳ(ಪಿಡಿಓ, ಇಓ ಮತ್ತು ಸಿಇಓ)ಗಳ ಸೇವಾ ವಹಿ ಬರೆಯುವ ಅಧಿಕಾರ ಕೊಡಬೇಕು ಎನ್ನುವ ಶಿಫಾರಸು ಈಗಾಗಲೇ ಅಧಿಕಾರಿ ವರ್ಗದ ಕಣ್ಣು ಕೆಂಪಗಾಗಿಸಿದೆ. ಸಮಿತಿಯೇ ಹೇಳುವಂತೆ ಜಿಲ್ಲಾಧಿಕಾರಿಗೆ ಕಡಿಮೆಯಲ್ಲದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯದರ್ಶಿ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸರಿಸಮಾನವಾದ ತಾಲ್ಲೂಕು ಪಂಚಾಯಿತಿಯ ಮುಖ್ಯ ಕಾರ್ಯದರ್ಶಿ, ತಹಶೀಲ್ದಾರ್ ಹುದ್ದೆಗೆ ಸರಿಸಮಾನವಾದ ಗ್ರಾಮ ಪಂಚಾಯಿತಿಯ ಮುಖ್ಯಕಾರ್ಯದರ್ಶಿಗಳು ತಮ್ಮ ತಮ್ಮ ಹಂತದ ಅಧ್ಯಕ್ಷರುಗಳಿಂದ ಸೇವಾವಹಿ ಬರೆಸಿಕೊಳ್ಳುವಷ್ಟು ವಿಶಾಲವಾದ ಮನಸ್ಥಿತಿ ಹೊಂದಿದ್ದಾರೆಯೆ..? ಯಾವ ಸರ್ಕಾರ ಬಂದರೂ ಅಧಿಕಾರದ ನಿಯಂತ್ರಣವನ್ನು ತಾವೇ ಇಟ್ಟುಕೊಂಡಿರುವ ಐಎಎಸ್ ಲಾಬಿ ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಲು ಬಿಡುತ್ತದೆಯೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆಯಾಗಿದೆ.

ರಮೇಶ್ ಕುಮಾರ್ ಅಧ್ಯಕ್ಷತೆಯ ಸಮಿತಿಯು ಕೆಪಿಆರ್ ಕಾಯಿದೆಗೆ ತಿದ್ದುಪಡಿಗಳನ್ನು, ಶಿಫಾರಸುಗಳನ್ನು ತನ್ನ ವರದಿಯಲ್ಲಿ ನೀಡುವ ಮೊದಲು ಸಾಕಷ್ಟು ಅಧ್ಯಯನ ಮತ್ತು ಪೂರ್ವತಯಾರಿ ಮಾಡಿದೆ. ವಿವಿಧ ಗುಂಪುಗಳ ಜೊತೆ ವ್ಯಾಪಕವಾದ ಚರ್ಚೆ, ವಿಚಾರ ವಿನಿಮಯ ಮಾಡಿ ಸ್ವಷ್ಟತೆಯನ್ನು ತಂದುಕೊಳ್ಳುವ ಕಾರ್ಯ ಆಗಿದೆ. ಈ ಕಾರಣದಿಂದಾಗಿಯೇ ಕೆಲವು ಪ್ರಮುಖ ತಿದ್ದುಪಡಿಗಳನ್ನು ಸೂಚಿಸಿದೆ. ಆದರೆ ಸಮಿತಿಯ ವರದಿಯಲ್ಲಿ ಸೂಚಿಸಲಾದ ಬಹುತೇಕ ತಿದ್ದುಪಡಿಗಳು ಗ್ರಾಮ ಪಂಚಾಯಿತಿಗೆ ಸೀಮಿತವಾಗಿವೆ. ಕರ್ನಾಟಕದಲ್ಲಿ ಪಂಚಾಯತ್ ರಾಜ್‌ನ ಮೂರು ಹಂತಗಗಳಲ್ಲಿ ಅತ್ಯಂತ ದುರ್ಬಲ ಹಂತ ಎಂದು ಪರಿಗಣಿತವಾಗಿರುವ ತಾಲ್ಲೂಕು ಪಂಚಾಯಿತಿಯ ಬಲವರ್ಧನೆಗೆ ಸಮಿತಿ ಗಮನವನ್ನೇ ನೀಡದಿರುವುದು ಎದ್ದು ಕಾಣುವ ಲೋಪ.

ಜಿಲ್ಲಾ ಪಂಚಾಯಿತಿಯ ಮಟ್ಟದಲ್ಲಿ ಸುಧಾರಣೆಗೆ ಅನೇಕ ಅವಕಾಶಗಳು ಇದ್ದರೂ ಸಮಿತಿ ಈ ಕಡೆಗೆ ಗಮನ ನೀಡಿಲ್ಲ. ಮುಖ್ಯವಾಗಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಸಂಸದರು, ಶಾಸಕರು ಸದಸ್ಯರೆಂದು ಪರಿಗಣಿಸಬೇಕಾಗಿರುವ ಈಗಿನ ಪದ್ದತಿಯನ್ನು ಆಹ್ವಾನಿತ ಸದಸ್ಯರು ಎಂದು ಬದಲಾಯಿಸುವ ಅನಿವಾರ್ಯತೆ ಇತ್ತು. ಆ ಮೂಲಕ ಜಿಲ್ಲಾ ಪಂಚಾಯಿತಿಯ ಮೇಲೆ ಸಂಸದರು, ಶಾಸಕರ ಅನಪೇಕ್ಷಿತ ನಿಯಂತ್ರಣವನ್ನು ತಪ್ಪಿಸಲು ಸಾಧ್ಯವಿತ್ತು. ವಿಕೇಂದ್ರೀಕರಣ ತತ್ವಗಳ ಮೇಲೆ ಅತೀವ ನಂಬಿಕೆ ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಸಮಿತಿಯ ಅಧ್ಯಕ್ಷರಾಗಲೀ, ಸದಸ್ಯರಾಗಲೀ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶಾಸಕರ, ಸಂಸದರ ಹಸ್ತಕ್ಷೇಪ ಕೊನೆಗೊಳಿಸಲು ಏಕೆ ಪ್ರಯತ್ನಿಸಿಲ್ಲ ಎನ್ನುವುದು ಪ್ರಶ್ನೆಯಾಗಿಯೇ ಉಳಿಸಿದೆ.

ವರದಿಯ ಮೌಲ್ಯವನ್ನು ಕಡಿಮೆಗೊಳಿಸುವ ಹಲವು ಅವಾಸ್ತವ ಶಿಫಾರಸುಗಳು ಸೇರಿಕೊಂಡಿರುವುದನ್ನು ನಾವು ಗಮನಿಸಬಹುದಾಗಿದೆ. ಸರ್ಕಾರಕ್ಕೆ ಕಾಯ್ದೆ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ನೀಡುವ ಸಮಿತಿಯ ವರದಿ ಸ್ವಯಂ ಸೇವಾ ಸಂಸ್ಥೆಯೊಂದರ ಹಕ್ಕೊತ್ತಾಯದ ಬೇಡಿಕೆಗಳ ಪಟ್ಟಿಯಂತೆ ಕಾಣುತ್ತಿರುವುದನ್ನು ಅಲ್ಲಲ್ಲಿ ಕಾಣಬಹುದು. ಈ ಕುರಿತು ಕೆಲವು ಉದಾಹರಣೆಗಳನ್ನು ಕೊಡಬಹುದು. ಗ್ರಾಮ ಪಂಚಾಯಿತಿ ಅಧಿಕಾರಗಳ ಕುರಿತು ವರದಿಯಲ್ಲಿ ಒಂದು ಕಡೆ ಈ ರೀತಿ ದಾಖಲಿಸಲಾಗಿದೆ.

“ಶಿಕ್ಷಣ: ಸರ್ಕಾರಿ ಅಂಗನವಾಡಿಗಳು, ಪೂರ್ವ ಪ್ರಾಥಮಿಕ ಶಾಲೆಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಸರ್ಕಾರಿ ತಾಂತ್ರಿಕ ಮತ್ತು ವೃತ್ತಿ ತರಬೇತಿ ಸಂಸ್ಥೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು, ಜೊತೆಗೆ ಇದಕ್ಕೆ ಸಂಬಂಧಿಸಿದ ಹೊಣೆಗಳಾದ ಪಠ್ಯಪುಸ್ತಕಗಳ ಸರಬರಾಜು, ಶೈಕ್ಷಣಿಕ ಮತ್ತು ತರಬೇತಿಗಳಿಗೆ ಸಂಬಂಧಪಟ್ಟ ಸಾಮಗ್ರಿಗಳು, ಪೂರ್ಣಾವಧಿಯ, ತಾತ್ಕಾಲಿಕ, ಮಧ್ಯಮ ಮತ್ತು ಗೌರವ ಶಿಕ್ಷಕರ ನೇಮಕ, ಸಾಕ್ಷರತೆ ಕಾರ್ಯಕ್ರಮಗಳು, ಗ್ರಂಥಾಲಯಗಳು ಮತ್ತು ತಂತ್ರಜ್ಞಾನದ ಮೂಲಕ ಮಾಹಿತಿ ನಿರ್ವಹಣೆ ಮುಂತಾದವುಗಳು ಕೂಡಾ ಗ್ರಾಮ ಪಂಚಾಯಿತಿ ಅಧಿಕಾರಗಳು...!”

ಕರ್ನಾಟಕದಲ್ಲಿ ಅಂಗನವಾಡಿಗಳನ್ನು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ತರಲು ಈವರೆಗೆ ಸಾಧ್ಯವಾಗಿಲ್ಲ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಆದ ಬೇಲೂರು ಘೋಷಣೆಯಿಂದಲೂ ಇದು ಸಾಧ್ಯವಾಗಿರಲಿಲ್ಲ. ಅಂತಹದರಲ್ಲಿ ಇಷ್ಟೆಲ್ಲಾ ಅಧಿಕಾರಗಳನ್ನು ಗ್ರಾಮ ಪಂಚಾಯಿತಿಗೆ ಕೊಡಿಸಹೊರಟಿರುವ ಸಮಿತಿಯ ಉದಾರತನಕ್ಕೆ ಮೆಚ್ಚಲೇಬೇಕು.
ಇದೇ ರೀತಿಯ ಅನೇಕ ಆಭಾಸಕರ ಹೇಳಿಕೆಗಳು ವರದಿಯಲ್ಲಿ ಸೇರಿಕೊಂಡಿವೆ. ಪಂಚಾಯತ್ ರಾಜ್ ವ್ಯವಸ್ಥೆಯ ಇಂದಿನ ವಾಸ್ತವ ಸ್ಥಿತಿಯ ಸಂಪೂರ್ಣ ತಿಳಿವಳಿಕೆಯಿರುವವರಿಗೆ ಇಂತಹ ಹೇಳಿಕೆಗಳು ಹಾಸ್ಯಾಸ್ಪದವಾಗಿ ಕಾಣುತ್ತದೆ. ರಮೇಶ್ ಕುಮಾರ್, ಸಿ.ನಾರಾಯಣಸ್ವಾಮಿ, ಡಿ.ಆರ್ ಪಾಟೀಲ್, ಟಿ.ಆರ್ ರಘುನಂದನ್, ವೆಂಕಟರಾವ್ ಘೋರ್ಪಡೆ, ಜಾರ್ಜ್ ಮ್ಯಾಥ್ಯೂ ಮೊದಲಾದ ಅನುಭವಿಗಳನ್ನು ಹೊಂದಿದ್ದ ಸಮಿತಿಯ ವರದಿ ಇನ್ನಷ್ಟು ಮೌಲಿಕವಾಗಿ ಇರಬೇಕಿತ್ತು ಎನ್ನುವುದು ನಮ್ಮ ನಿರೀಕ್ಷೆಯಾಗಿತ್ತು.

ಇವುಗಳೆಲ್ಲದರ ನಡುವೆ ಹಲವಾರು ಉಪಯುಕ್ತ ಸಲಹೆಗಳನ್ನು ತನ್ನ ವರದಿಯ ಮೂಲಕ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದೆ. ಅವುಗಳನ್ನು ಅನುಷ್ಠಾನಗೊಳಿಸಿದಲ್ಲಿ ಖಂಡಿತವಾಗಿಯೂ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಯಾಗುತ್ತದೆ. ಹೀಗಾಗಿ ಸಮಿತಿಯ ಶಿಪಾರಸ್ಸುಗಳು ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗಿಂತ ಮೊದಲು ಕಾಯ್ದೆಯಾಗಿ ರೂಪುಗೊಂಡು ಜಾರಿಯಾಗಲಿ ಎನ್ನುವ ನಿರೀಕ್ಷೆ ನಮ್ಮದು.

(ಲೇಖಕರು ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಸಲಹೆಗಾರರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT