ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತ್’ ಆಗದಿರಲಿ ನಾಡಕುಸ್ತಿ...

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ಭಾನುವಾರ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಸುಮಾರು 500ಕ್ಕೂ ಹೆಚ್ಚು ಯುವಕರು ಸೇರಿದ್ದರು. ಕಟ್ಟುಮಸ್ತಾಗಿದ್ದ ಆ ಉತ್ಸಾಹಿ ತರುಣರೆಲ್ಲರ ಕಣ್ಣಲ್ಲೂ ದಸರಾ ನಾಡಕುಸ್ತಿಯ ಕನಸು. ದಸರಾ ಕುಸ್ತಿ ಟೂರ್ನಿಯಲ್ಲಿ ತೊಡೆ, ತೋಳು ತಟ್ಟಬೇಕು. ಎದುರಾಳಿಯನ್ನು ಮಣ್ಣುಮುಕ್ಕಿಸಿ, ಸಾವಿರಾರು ಜನರ ಚಪ್ಪಾಳೆಗಳ ಅಭಿನಂದನೆ ಸ್ವೀಕರಿಸಬೇಕು.

ನಂತರ ಸಂಘಟಕರು ನೀಡುವ ಒಂದಿಷ್ಟು ನಗದು ಬಹುಮಾನ, ಶಾಲು, ಪೇಟ ಧರಿಸಿಕೊಂಡು ಮೈಮೇಲಿನ ಮಣ್ಣು ಕೊಡವಿಕೊಂಡು ನಿರ್ಗಮಿಸಬೇಕು. ಮತ್ತೆ ಮುಂದಿನ ದಸರಾ ಕುಸ್ತಿ ಟೂರ್ನಿಯನ್ನು ಕಾಯುವುದಷ್ಟೇ. ಮೈಸೂರಿನ ಪಾರಂಪರಿಕ ನಾಡಕುಸ್ತಿಯ (ಮಣ್ಣಿನ ಅಖಾಡ ಮೇಲೆ) ಪ್ರೀತಿಯ ಸೆಳೆತಕ್ಕೆ ಸಿಲುಕಿದ ಬಹುತೇಕ ಯುವಪೈಲ್ವಾನರ ಕಥೆ ಇದು. ಆರಕ್ಕೇರದೇ ಮೂರಕ್ಕೂ ಇಳಿಯದೇ ದಸರಾ ಕುಸ್ತಿಯೊಂದನ್ನೆ ಅವಲಂಬಿಸುವ ಅನಿವಾರ್ಯತೆ. ದಸರಾ ಕುಸ್ತಿಗಾಗಿಯೇ ಪ್ರತ್ಯೇಕ ಉಪಸಮಿತಿ ರಚಿಸಲಾಗುತ್ತದೆ. 

ರಾಜ್ಯ ಮತ್ತು ರಾಷ್ಟ್ರಮಟ್ಟದ ಮ್ಯಾಟ್‌ ಕುಸ್ತಿ ಮತ್ತು ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಾಡಕುಸ್ತಿಗಳು ಪ್ರತಿವರ್ಷವೂ ನಡೆಯುತ್ತವೆ. ಪ್ರತಿವರ್ಷವೂ ಉತ್ತರ ಕರ್ನಾಟಕ ಭಾಗದವರೇ ದಸರಾ ಕಂಠೀರವ, ಕೇಸರಿ, ಕಿಶೋರ ಪ್ರಶಸ್ತಿಗಳನ್ನು (ಈ ಎಲ್ಲವೂ ಮ್ಯಾಟ್‌ ಅಥವಾ ಪಾಯಿಂಟ್ ಕುಸ್ತಿ ಗಳಾಗಿವೆ, ಈ ಕುಸ್ತಿಗಳ ಫೈನಲ್ ಪಂದ್ಯ ಮಾತ್ರ ಮಣ್ಣಿನ ಅಖಾಡದಲ್ಲಿ ನಡೆಯುತ್ತವೆ) ತಮ್ಮದಾಗಿಸಿಕೊಳ್ಳುತ್ತಾರೆ.

ರಾಷ್ಟ್ರಮಟ್ಟದಲ್ಲಿ ಹರಿಯಾಣ, ಪಂಜಾಬ್, ದೆಹಲಿ ಪೈಲ್ವಾನರು ಮಿಂಚುತ್ತಾರೆ. ಆದರೆ, ಪರಂಪರೆಯೆಂಬ ಹಳೆಯ ಜಾಡಿನಲ್ಲಿ ಪಾಯಿಂಟ್ ಕುಸ್ತಿಯನ್ನೂ ಕಲಿಯದೇ, ನಾಡಕುಸ್ತಿಯಲ್ಲಿ ಭವಿಷ್ಯ ಕಾಣದ ತ್ರಿಶಂಕು ಸ್ಥಿತಿ ಮೈಸೂರಿನ ಪೈಲ್ವಾನರದ್ದಾಗಿದೆ.  ಮ್ಯಾಟ್ ಕುಸ್ತಿಯಲ್ಲಿ ಸಾಧಕರಿಗೆ ಮಾತ್ರ ನೌಕರಿ ಮತ್ತಿತರ ಸೌಲಭ್ಯಗಳು ಸಿಗುತ್ತಿವೆ. ಆದರೆ, ಮೈಸೂರು ವಿಶ್ವವಿದ್ಯಾಲಯ ಬಿಟ್ಟರೆ ಬೇರೆ ಕಡೆ ಪಾಯಿಂಟ್ ಕುಸ್ತಿ ಕಲಿಕೆಯ ಸೌಲಭ್ಯ ಇಲ್ಲ.

ಆಧುನಿಕತೆ ಯುಗದಲ್ಲಿ ಭಾರತದ ಕುಸ್ತಿಪಟುಗಳು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದು ಬರುತ್ತಿದ್ದಾರೆ. ಆದರೆ ಯದು ವಂಶದ ಅರಸರ ಕಾಲದಿಂದಲೂ ಬೆಳೆದು ಬಂದ ಮೈಸೂರು ಕುಸ್ತಿ ಮಾತ್ರ ಒಬ್ಬ ‘ಒಲಿಂಪಿಯನ್‌’ ಆಗುವ ಮಲ್ಲನನ್ನು ಬೆಳೆಸಲು ಸಾಧ್ಯವಾಗಿಲ್ಲ. ಇಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಇರುವ ಕಾರಣಗಳು ಬೇರೆಯೇ.

ಈಡೇರದ ಬೇಡಿಕೆ
ದಾವಣಗೆರೆ, ಧಾರವಾಡ, ಬೆಳಗಾವಿಯಲ್ಲಿ ಕ್ರೀಡಾ ವಸತಿ ನಿಲಯಗಳಲ್ಲಿ ಕುಸ್ತಿ ಕಲಿಸಲಾಗುತ್ತಿದೆ. ಆ ಭಾಗದ  ಪ್ರತಿಭಾವಂತರು ಈ ವಸತಿ ನಿಲಯ ಸೇರಿ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಅಲ್ಲದೆ ಸೇನಾಪಡೆ, ವಾಯುಪಡೆ, ರೈಲ್ವೆ, ಪೊಲೀಸ್‌ ಇಲಾಖೆಗಳಲ್ಲಿ ಕ್ರೀಡಾ ಕೋಟಾದಡಿಯಲ್ಲಿ ನೌಕರಿ ಪಡೆಯುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಮೈಸೂರಿನಲ್ಲಿ ಕುಸ್ತಿ ಕ್ರೀಡಾ ನಿಲಯ ಆರಂಭಿಸಲು ಯಾರೂ ಆಸಕ್ತಿ ತೋರಿಲ್ಲ.

ಈ ಹಿಂದೆ   ಕ್ರೀಡಾ ಇಲಾಖೆಯಲ್ಲಿ ಇದ್ದ  ಕುಸ್ತಿ ತರಬೇತುದಾರ ರನ್ನು ವರ್ಗಾವಣೆ ಮಾಡಿ ಎಂಟು ವರ್ಷಗಳಾಗಿವೆ. ಆ ಜಾಗಕ್ಕೆ ಇದುವರೆಗೆ ಯಾರನ್ನೂ ನೇಮಕ ಮಾಡಿಲ್ಲ. ಆದರೆ, ಸ್ಪರ್ಧಾತ್ಮಕ ಪಾಯಿಂಟ್ ಕುಸ್ತಿಗೆ ಬೇಕಾದ ಅಂತರರಾಷ್ಟ್ರೀಯ ಮಟ್ಟದ ಮ್ಯಾಟ್ ವ್ಯವಸ್ಥೆ ಇಲ್ಲಿದೆ. ಇದೀಗ ಚಾಮುಂಡಿ ವಿಹಾರದ ಆವರಣದಲ್ಲಿ ಒಂದು ಸುಸಜ್ಜಿತ ಗರಡಿಮನೆಯ ನಿರ್ಮಾಣ ನಡೆಯುತ್ತಿದ್ದು, ಇಲ್ಲಿ ಕುಸ್ತಿ ತರಬೇತುದಾರರೂ ನೇಮಕವಾಗುವ ನಿರೀಕ್ಷೆ ಮೂಡಿದೆ.

ದಸರೆಯ ನಿರೀಕ್ಷೆಯಲ್ಲಿ
ರಾಜರ ಆಡಳಿತವಿದ್ದಾಗ ಅವರ ಪೋಷಣೆಯಲ್ಲಿ ಬೆಳೆದ ಕುಸ್ತಿ, ಪ್ರಜಾಪ್ರಭುತ್ವದಲ್ಲಿ ಮೈಸೂರಿನ ಜನರು, ವ್ಯಾಪಾರಸ್ಥರು, ಕುಸ್ತಿ ಆಸಕ್ತರಿಂದಾಗಿ ಬೆಳೆಯಿತು. ದಶಕಗಳ ಹಿಂದೆ ಮೈಸೂರಿನ ದೊಡ್ಡಕೆರೆ ಮೈದಾನ, ಸಾಹುಕಾರ್ ಚೆನ್ನಯ್ಯನವರ ಅಖಾಡಗಳಲ್ಲಿ ವಾರಕ್ಕೊಮ್ಮೆ ಕುಸ್ತಿ ಪಂದ್ಯಗಳು ನಡೆಯುತ್ತಿದ್ದವು. ಜೊತೆಗೆ ಕುಸ್ತಿಪಟುಗಳನ್ನು ಬೆಳೆಸುವ ಪೋಷಕರೂ ಇರುತ್ತಿದ್ದರು. ಗರಡಿಮನೆಗಳನ್ನು ನಿರ್ವಹಿಸುವ ಮಹಾದಾನಿಗಳು ಇರುತ್ತಿದ್ದರು. ಆದರೆ, ಕಾಲ ಕಳೆದಂತೆ ಕೊಡುವ ಕೈಗಳು ಕಡಿಮೆ ಯಾದವು.

ಎಲ್ಲದ್ದಕ್ಕೂ ಸರ್ಕಾರದತ್ತಲೇ ನೋಡುವ ಸಮಯ ಬಂತು. ಆದರೆ, ಸರ್ಕಾರದ ಗಮನ ಕುಸ್ತಿಯತ್ತ ತಿರುಗುವುದು ದಸರಾ ಉತ್ಸವ ಬಂದಾಗ ಮಾತ್ರ. ಇದೀಗ ಮತ್ತೊಂದು ದಸರಾ ಕುಸ್ತಿ ಬಂದಿದೆ. ಅದಕ್ಕೊಂದು ಉಪಸಮಿತಿ ರಚನೆಯಾಗಿದೆ.  ಸಚಿವರು ರಂಗುರಂಗಿನ ಭಿತ್ತಿಚಿತ್ರ ಗಳನ್ನು ಬಿಡುಗಡೆ ಮಾಡಿದ್ದಾರೆ. ಯುವ ಮಲ್ಲರ ಕಣ್ಣುಗಳಲ್ಲಿ ಕುಸ್ತಿ ಕನಸಿನ ರಂಗು ಬಿತ್ತಿದ್ದಾರೆ. ಆದರೆ, ದಸರಾ ಕುಸ್ತಿಯ ನಂತರ ಏನು? ಎಂಬ ಪ್ರಶ್ನೆಗೆ ಉತ್ತರವನ್ನು ಮಾತ್ರ ಯಾರೂ ಕೊಡಲು ಸಿದ್ಧರಿಲ್ಲ.

ಮ್ಯಾಟ್‌ ಕುಸ್ತಿ ಬೆಳೆಯಬೇಕು
ದಸರಾಗೆ ಎರಡು ತಿಂಗಳಿಗಿಂತ ಮೊದಲೇ ತಾಲ್ಲೂಕು ಮಟ್ಟಗಳಲ್ಲಿ ಕುಸ್ತಿ ಪಂದ್ಯಾವಳಿ ಮಾಡಬೇಕು. ಪಾಯಿಂಟ್ ಕುಸ್ತಿಯಲ್ಲಿ ಮೈಸೂರಿನ ಪೈಲ್ವಾನರು ಆಸಕ್ತಿ ಬೆಳೆಸಿಕೊಳ್ಳಬೇಕು. ಶಾಲೆ, ಕಾಲೇಜು, ವಿವಿ, ಫೆಡರೇಷನ್‌ಗಳು ಹೆಚ್ಚು ಟೂರ್ನಿ ಗಳನ್ನು ನಡೆಸುತ್ತಾರೆ. ಅದರಲ್ಲಿ ಗೆಲ್ಲುವುದರಿಂದ ಉನ್ನತ ಶಿಕ್ಷಣ ಮತ್ತು ನೌಕರಿ ಪಡೆಯಲು ಕುಸ್ತಿ ಕೋಟಾದ ಅನುಕೂಲತೆ ಸಿಗುತ್ತದೆ. ನಾವೆಲ್ಲರೂ ಅದೇ ರೀತಿ ಕ್ರೀಡಾಕೋಟಾದಲ್ಲಿಯೇ ಪೊಲೀಸ್ ಇಲಾಖೆಯಲ್ಲಿ ನೌಕರಿ ಪಡೆದಿದ್ದೇವೆ. ಇದರಿಂದ ನಮ್ಮ ಜೀವನ ಮತ್ತು ಕುಟುಂಬಕ್ಕೆ ಒಳ್ಳೆಯದಾಗಿದೆ. ಇದರತ್ತ ಗ್ರಾಮೀಣ ಮಕ್ಕಳನ್ನು ಉತ್ತೇಜಿಸಬೇಕು. ಅವರಲ್ಲಿ ಆಸಕ್ತಿ ಮೂಡಿಸಬೇಕು. ಸೌಲಭ್ಯ ಒದಗಿಸಬೇಕು. 

–ಪೈಲ್ವಾನ್ ಶಂಕರ್ ಚಕ್ರವರ್ತಿ

ನಾಡಕುಸ್ತಿ ಉಳಿಯಲಿ
ನಾಡಕುಸ್ತಿ ಮತ್ತು ಪಾಯಿಂಟ್ ಕುಸ್ತಿ ಎರಡೂ ಬೆಳೆಯಬೇಕು. ಇವತ್ತು ಕುಸ್ತಿ ಕಲಿಯಲು ಹೆಚ್ಚು ದುಡ್ಡು ಬೇಕು. ಗೆದ್ದಾಗ ಸಿಗುವ ಬಹುಮಾನಗಳು ಕಡಿಮೆ ಮೊತ್ತದ್ದಾಗಿವೆ. ನೌಕರಿ ಮತ್ತಿತರ ಸೌಲಭ್ಯಗಳು ನಾಡಕುಸ್ತಿಗೆ ಸಿಗುತ್ತಿಲ್ಲ. ಪಾಯಿಂಟ್‌ ಕುಸ್ತಿ ಕಲಿಯಲು ಸೌಲಭ್ಯಗಳು ಕಡಿಮೆ ಇವೆ. ಈಗಿನ ಹುಡುಗರ ಆದ್ಯತೆಗಳೂ ಬದಲಾಗಿವೆ. ಗರಡಿಮನೆಗಳಿಂದ ಯುವಕರು ವಿಮುಖರಾಗುತ್ತಿ ದ್ದಾರೆ. ನಾಡಕುಸ್ತಿ ನಮ್ಮ ಪರಂಪರೆ ಅದು ಉಳಿಯಬೇಕು.
–ಪೈಲ್ವಾನ್ ಶರತ್, ಕುಂಬಾರಕೊಪ್ಪಲು ಬೋರೆಗೌಡರ ಹತ್ತು ಜನಗಳ ಗರಡಿ

ನಾಡಕುಸ್ತಿ ಮೈಸೂರು ಪರಂಪರೆಯಲ್ಲಿ ರೂಢಿಗತವಾಗಿದೆ. ನಾಡಹಬ್ಬದ ಸಂದರ್ಭದಲ್ಲಿ ಅದನ್ನು ಪ್ರತಿವರ್ಷವೂ  ನಡೆಸುತ್ತೇವೆ. ಅದೇ ರೀತಿ ಪಾಯಿಂಟ್‌ ಕುಸ್ತಿಯನ್ನು ಪುರುಷ ಮತ್ತು ಮಹಿಳೆಯರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಯೋಜಿಸುತ್ತೇವೆ.
–ಕೆ.ಆರ್. ರಂಗಯ್ಯ. ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ಕುಸ್ತಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT