ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿದಾನಂದ ಪ್ರಶಸ್ತಿ’ ಪ್ರದಾನ

ಶಾಸನಶಾಸ್ತ್ರಜ್ಞೆ ವಸುಂಧರಾ ಫಿಲಿಯೋಜಾಗೆ ಅಭಿನಂದನೆ
Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯು ಎನ್‌.ಆರ್‌. ಕಾಲೊ­ನಿಯ ಬಿ.ಎಂ.ಶ್ರೀ ಕಲಾಭವನ ದಲ್ಲಿ ಭಾನುವಾರ ಆಯೋಜಿಸಿದ್ದ ಸಮಾ ರಂಭದಲ್ಲಿ ಶಾಸನಶಾಸ್ತ್ರಜ್ಞೆ ಡಾ.ವಸುಂ ಧರಾ ಫಿಲಿಯೋಜಾ ಅವರಿಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಸುಂಧರಾ ಅವರು, ‘ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಆರಂಭಿಕ ದಿನಗಳ ಚರಿತ್ರೆಯ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಆದರೆ, 4–5 ಸಾವಿರ ಶಾಸನಗಳಲ್ಲಿ ಎಲ್ಲೂ ವಿಜಯನಗರ ಸಾಮ್ರಾಜ್ಯ ಎಂಬ ಪದ ಬಳಕೆ ಇಲ್ಲ. ರಾಜ್ಯದ ಹೆಸರನ್ನು ಕರ್ನಾಟಕ ಸಾಮ್ರಾಜ್ಯ ಎಂದೇ ಕರೆಯುತ್ತಿದ್ದರು. ಅದರ ರಾಜ ಧಾನಿ ವಿಜಯನಗರ ಆಗಿತ್ತು’ ಹೇಳಿದರು.

‘ಕೃಷ್ಣದೇವರಾಯ ತೆಲುಗು ಭಾಷೆ ಯಲ್ಲಿ ಬರೆದ ಕೃತಿಯಲ್ಲಿ ತನ್ನನ್ನು ಕನ್ನಡಿಗ ಎಂದು ಹೇಳಿಕೊಳ್ಳುತ್ತಾನೆ. ಸಂಗಮರು, ಸಾಳ್ವರು ತಮ್ಮನ್ನು ಕನ್ನಡಿಗರೆಂದೇ ಹೆಮ್ಮೆಯಿಂದ ಕರೆದುಕೊಂಡಿದ್ದಾರೆ. ವಿಜಯನಗರದ ದಳಪತಿಗಳು ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ವಿಜಯನಗರ ಸಾಮ್ರಾಜ್ಯವನ್ನು ‘ಕರ್ನಾಟಕ ಸಾಮ್ರಾಜ್ಯ’ ಎಂಬ ಹೆಸರಿನಿಂದಲೇ ಕರೆಯುವುದು ಹೆಚ್ಚು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಕಾಳಾಮುಖರು, ಪಾಶುಪತರು ಶಿವನನ್ನು ಲಿಂಗ ರೂಪದಲ್ಲಿ ಪೂಜೆ ಮಾಡುತ್ತಿದ್ದರು. ಅವರು ಕರ್ನಾಟಕದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿ ಅಲ್ಲಿ ದೊಡ್ಡ ಶಾಸನಗಳನ್ನು ಬರೆಸುತ್ತಿದ್ದರು. ಆ ಶಾಸನಗಳನ್ನು ಹಾಡುವವರು ಸಹ ಇದ್ದರು’ ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ ವಿಭಾಗದ ಅಧ್ಯಕ್ಷ ರಾಜಾರಾಮ ಹೆಗಡೆ ಮಾತನಾಡಿ, ‘ವಸುಂಧರಾ ಅವರು ಫ್ರೆಂಚ್‌, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅನೇಕ ಕೃತಿಗಳನ್ನು ಬರೆದಿದ್ದಾರೆ. ಕರ್ನಾಟಕ ಸಂಸ್ಕೃತಿ, ವಿಜಯನಗರದ ಐತಿಹ್ಯ, ಸಂಸ್ಕೃತ ವ್ಯಾಕರಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಫ್ರೆಂಚ್‌ ಭಾಷೆಯಲ್ಲಿ ಕೃತಿಗಳನ್ನು ಬರೆದಿದ್ದಾರೆ’ ಎಂದರು.

‘ವಿಜಯನಗರಕ್ಕೆ ಪ್ರವಾಸ ಕೈಗೊಂಡ ಫ್ರೆಂಚರು, ಪೋರ್ಚುಗೀಸರನ್ನು ಭೇಟಿ ಮಾಡಿ ಅವರ ಅನುಭವಗಳನ್ನು ದಾಖಲಿಸುವ ಕೆಲಸವನ್ನು ವಸುಂಧರಾ ಅವರು ಮಾಡಿದ್ದಾರೆ. ಕಾಳಾಮುಖರು, ಲಾಕುಳಶೈವರು ಮತ್ತು ಪಾಶುಪತರ ಕಾರ್ಯಚಟುವಟಿಕೆಗಳು, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚೌಡ ದಾನಪುರ, ರಟ್ಟಿಹಳ್ಳಿ, ಗಳಗನಾಥ ದೇವಾಲಯಗಳ ಬಗ್ಗೆ ಸಮಗ್ರವಾಗಿ ಅಧ್ಯ ಯನ ನಡೆಸಿದ್ದಾರೆ’ ಎಂದು ಹೇಳಿದರು.

ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಮಾತನಾಡಿ, ‘ಸಂಶೋಧನೆ ಎಂಬುದು ತಪಸ್ಸು ಇದ್ದಂತೆ. ಯಾವುದೇ ಪದವಿ, ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆ ನಡೆ ಯಬೇಕು. ಒಂದು ಭಾಷೆಯಿಂದ ಮಾಡುವ ಸಂಶೋಧನೆ ಅಪೂರ್ಣ ವಾಗಿರುತ್ತದೆ. ಬಹುಭಾಷಿಕ ನೆಲೆಯಲ್ಲಿ ನಡೆಯುವ ಸಂಶೋಧನೆಯು ಹೆಚ್ಚು ವಿಸ್ತಾರವಾಗಿರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT