ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಹುಡುಗಿ’ಯ ಮಾಸದ ಹೊಳಪು

Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

ಕಳೆದ ತಿಂಗಳು (ಜೂನ್) ಹೈದರಾಬಾದ್‌ನ ‘ಜಿ.ಎಂ.ಸಿ. ಬಾಲಯೋಗಿ ಕ್ರೀಡಾಂಗಣ’ದಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಕೊನೆಯ ದಿನವದು. ಅದಾಗಲೇ ‘ರಿಯೊ ಒಲಿಂಪಿಕ್ಸ್‌’ಗೆ ಅರ್ಹತೆ ಪಡೆದಿದ್ದ ಅಥ್ಲೀಟ್‌ಗಳು ಟ್ರ್ಯಾಕ್‌ನಲ್ಲಿ ಮಿಂಚುಹರಿಸಿ ಸಂಭ್ರಮಿಸುತ್ತಿದ್ದ ಹೊತ್ತಿನಲ್ಲೇ ಕ್ರೀಡಾಂಗಣದ ವಿದ್ಯುದ್ದೀಪಗಳು ಝಗಮಗಿಸಲು ಶುರುಮಾಡಿದವು.

ದೀಪಗಳ ಪ್ರಖರ ಬೆಳಕು ಮೈದಾನದುದ್ದಕ್ಕೂ ಹರಡಿಕೊಳ್ಳುತ್ತಿದ್ದಂತೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಗುಂಪಿನಿಂದ ಮಹಿಳೆಯೊಬ್ಬರು ಬೇರ್ಪಟ್ಟು ಟ್ರ್ಯಾಕ್‌ನ ಅಂತಿಮ ರೇಖೆಯತ್ತ ಬರುತ್ತಿದ್ದರು. ಅದೇ ಹೊತ್ತಿಗೆ ಸರಿಯಾಗಿ ಭಾರತದ ಪುರುಷರ 4X400 ಮೀಟರ್ಸ್‌ ರಿಲೇ ತಂಡ ಅಂತಿಮ ಗುರಿ ಮುಟ್ಟಿತ್ತು. ಆಗ ಸ್ಪರ್ಧಿಗಳಿಗಿಂತಲೂ ಅವರು ತುಸು ಹೆಚ್ಚೇ ಸಂಭ್ರಮಿಸುತ್ತಿದ್ದರು. ಅವರೇ ‘ಓಟದ ರಾಣಿ’ ಪಿ.ಟಿ. ಉಷಾ.

ಅಥ್ಲೆಟಿಕ್ಸ್‌ನಲ್ಲಿ ಹಲವಾರು ಸಾಧನೆಗಳನ್ನು ಮಾಡಿರುವ ಉಷಾ ಅವರ ಸರಳತೆ ಎಲ್ಲರನ್ನೂ ಆಕರ್ಷಿಸಿತ್ತು. ಹೀಗಾಗಿಯೇ ಸ್ಪರ್ಧೆ ಕೊನೆಗೊಳ್ಳುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ಸೇರಿದ್ದ ಪುಟಾಣಿ ಮಕ್ಕಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಉದಯೋನ್ಮುಖ ಅಥ್ಲೀಟ್‌ಗಳು ಅವರನ್ನು ಸುತ್ತುವರಿದರು.

ಹೀಗೆ ನೆರೆದಿದ್ದವರಲ್ಲಿ ಕೆಲವರು ಉಷಾ ಅವರ ಕೈ ಕುಲುಕಿ ಖುಷಿಪಟ್ಟರೆ, ಮತ್ತೆ ಹಲವರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ಅವರನ್ನೆಲ್ಲಾ ಸಂಭಾಳಿಸಿ ಬಂದ ಅವರು ‘ಹಿಂದೆಲ್ಲಾ ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಆದರೆ ಈಗ ಕಾಲ ಎಷ್ಟೊಂದು ಬದಲಾಗಿದೆ ನೋಡಿ. ಮಕ್ಕಳು, ಹಿರಿಯರು ಎನ್ನದೆ ಎಲ್ಲರೂ ಸೆಲ್ಫಿ ಮೋಹಕ್ಕೆ ಮಾರುಹೋಗಿದ್ದಾರೆ’ ಎಂದು ನಕ್ಕರು.

ಐವತ್ತೆರಡು ವರ್ಷದ ಉಷಾ ಅವರು ಟ್ರ್ಯಾಕ್‌ನಲ್ಲಿ ಓಡುವುದನ್ನು ನಿಲ್ಲಿಸಿ ಅದೆಷ್ಟೋ ವರ್ಷಗಳೇ ಉರುಳಿವೆ. ಹೀಗಿದ್ದರೂ ಅಭಿಮಾನಿಗಳಲ್ಲಿ ಅವರ ಮೇಲಿನ ಅಕ್ಕರೆ ಎಳ್ಳಷ್ಟು ಕಡಿಮೆಯಾಗಿಲ್ಲ ಎಂಬುದಕ್ಕೆ ಆ ಒಂದು ದೃಶ್ಯ ನಿದರ್ಶನದಂತಿತ್ತು. ಒಬ್ಬ ಕ್ರೀಡಾಪಟು ತನ್ನ ಕ್ರೀಡಾ ಬದುಕಿಗೆ ವಿದಾಯ ಹೇಳುತ್ತಿದ್ದಂತೆ ಮರೆತುಬಿಡುವ ಇಂದಿನ ದಿನಗಳಲ್ಲಿ ಉಷಾ ಅವರನ್ನು ಜನ ಇಂದಿಗೂ ಎಷ್ಟೊಂದು ಅಭಿಮಾನದಿಂದ ಕಾಣುತ್ತಾರೆ ಎಂದರೆ ಅದಕ್ಕೆ ಅವರ ಸಾಧನೆಯೇ ಕಾರಣ.

ಮೂವತ್ತರೆಡು ವರ್ಷಗಳ ಹಿಂದಿನ ಮಾತು. ಲಾಸ್‌ ಏಂಜಲೀಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನ 400 ಮೀಟರ್ಸ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಉಷಾ ಅವರು ಭಾರತದ ಸವಾಲನ್ನು ಎತ್ತಿಹಿಡಿದಿದ್ದರು. ಆ ಕೂಟದಲ್ಲಿ ಅವರು ಕೂದಲೆಳೆಯ ಅಂತರದಿಂದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರಾದರೂ, ಅವರಿಂದ ಮೂಡಿಬಂದ ಸಾಮರ್ಥ್ಯ ಇಂದಿಗೂ ಸಾಕಷ್ಟು ಅಥ್ಲೀಟ್‌ಗಳಿಗೆ ಪ್ರೇರಣೆ.

ಲಾಸ್‌ ಏಂಜಲೀಸ್‌ ಒಲಿಂಪಿಕ್ ಕೂಟಕ್ಕೂ ಮುನ್ನ ಉಷಾ ಹಲವು ಚಾಂಪಿಯನ್‌ಷಿಪ್‌ಗಳಲ್ಲಿ ಚಿನ್ನದ ಬೇಟೆಯಾಡಿ ಭಾರತದ ಅಥ್ಲೆಟಿಕ್‌ ಲೋಕದಲ್ಲಿ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದರು. ಹೀಟ್ಸ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ಒಲಿಂಪಿಕ್ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಹೀಗಾಗಿ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಲಾಗಿತ್ತು.

ಭಾರತದ ಸಾವಿರಾರು ಕ್ರೀಡಾಸಕ್ತರು ಉಷಾ ಅವರ ಓಟದ ಸೊಬಗನ್ನು ಕಣ್ತುಂಬಿಕೊಳ್ಳಲು ಬೆಳಕು ಹರಿಯುವ ಮುನ್ನವೇ ಟೀವಿ ಮುಂದೆ ಕುಳಿತಿದ್ದರು. ಸ್ಪರ್ಧೆ ಶುರುವಾಗಲು ಕೆಲವು ನಿಮಿಷಗಳು ಬಾಕಿ ಇದ್ದಾಗ ಉಷಾ ಟ್ರ್ಯಾಕ್‌ನ ಐದನೇ ಸಾಲಿನಲ್ಲಿ ಬಂದು ನಿಂತರು. ಆಗ ಅಭಿಮಾನಿಗಳ ಎದೆಬಡಿತವೂ ಜೋರಾಗಿತ್ತು.

ಆ ಸ್ಪರ್ಧೆಯಲ್ಲಿ ಅಮೆರಿಕ, ಸ್ವಿಟ್ಜರ್‌ಲೆಂಡ್‌, ಆಸ್ಟ್ರೇಲಿಯಾ, ಜಮೈಕಾ ಮತ್ತು ಮೊರೊಕ್ಕೊದ ಘಟಾನುಘಟಿ ಓಟಗಾರ್ತಿಯರು ಭಾಗವಹಿಸಿದ್ದರು. ಅವರ ನಡುವೆ ಕೋಟ್ಯಂತರ ಭಾರತೀಯರ ಭರವಸೆ ಹೊತ್ತಿದ್ದ 20ರ ಹರೆಯದ ಉಷಾ ಆರಂಭದಿಂದಲೇ ಕೆಚ್ಚೆದೆಯಿಂದ ಓಡಿದರು. ಆದರೆ ಟ್ರ್ಯಾಕ್‌ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ ಮೊರೊಕ್ಕೊದ ನವಾಲ್‌ ಅಲ್‌ ಮೌಟವಾಕೆಲ್‌ ಮೊದಲಿಗರಾಗಿ ಗುರಿ ಮುಟ್ಟಿದರೆ, ಅಮೆರಿಕದ ಜೂಡಿ ಬ್ರೌನ್‌ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು.

ನವಾಲ್‌ ಹಾಗೂ ಜೂಡಿ ಅವರ ಹಿಂದೆ ಉಷಾ ಮತ್ತು ರುಮೇನಿಯಾದ ಕ್ರಿಸ್ಟಿನಾ ಕೊಜೊಕಾರು ಓಡುತ್ತಿದ್ದರು. ಇಬ್ಬರೂ ನಿಖರ ವೇಗ ಕಾಯ್ದುಕೊಂಡು ಜಿಂಕೆಯಂತೆ ಜಿಗಿಯುತ್ತಾ ಹರ್ಡಲ್ಸ್‌ಗಳನ್ನು ದಾಟುತ್ತಿದ್ದರಲ್ಲದೆ, ಮಿಂಚಿನ ವೇಗದಲ್ಲಿ ಮುನ್ನುಗ್ಗುತ್ತಿದ್ದರು.

ಇನ್ನೇನು ಉಷಾ ಅಂತಿಮರೇಖೆ ಮುಟ್ಟಿಯೇ ಬಿಟ್ಟರು ಎನ್ನುವಷ್ಟರಲ್ಲಿ ಕ್ರಿಸ್ಟಿನಾ (55.41 ಸೆಕೆಂಡು) ಗುರಿ ತಲುಪಿದ್ದರು. ಕೇವಲ ಒಂದೇ ಸೆಕೆಂಡಿನ ಅಂತರದಿಂದ ಉಷಾ ಹಿಂದೆಬಿದ್ದರು. ಹೀಗಾಗಿ ಕಂಚು ಗೆದ್ದು ಇತಿಹಾಸ ಬರೆಯುವ ಅವರ ಕನಸು ನುಚ್ಚುನೂರಾಯಿತು. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ಕೇರಳದ ಈ ಅಥ್ಲೀಟ್‌ 55.96 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.

‘ಭಾರತದ ಪುರುಷ ಸ್ಪರ್ಧಿಗಳು ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಇದುವರೆಗೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೆ ಈ ಹುಡುಗಿ ಖಂಡಿತಾ ಇತಿಹಾಸ ಬರೆಯುತ್ತಾಳೆ’ ಎಂದು ಸೆಮಿಫೈನಲ್‌ ಸ್‍ಪರ್ಧೆಯ ಬಳಿಕ ಜೂಡಿ ಬ್ರೌನ್‌ ಅವರು ಉಷಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

100, 200 ಮತ್ತು 400 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಉಷಾ ಉತ್ತಮ ದಾಖಲೆ ಹೊಂದಿದ್ದರು. ಹೀಗಾಗಿಯೇ ಅವರ ಕೋಚ್‌ ಒ.ಎಂ. ನಂಬಿಯಾರ್‌ ಅವರು ಉಷಾ ಅವರನ್ನು 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಕಣಕ್ಕಿಳಿಸಿದ್ದರು. ಅದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಈ ವಿಭಾಗವನ್ನು ಪರಿಚಯಿಸಲಾಗುತಿತ್ತು. ಕೋಚ್‌ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಷಾ ಹುಸಿಮಾಡಲಿಲ್ಲ. ಆದರೆ ಅದೃಷ್ಟ ಅವರ ಪರ ಇರಲಿಲ್ಲ.

ಮೊದಲ ಬಾರಿಗೆ 400 ಮೀಟರ್ಸ್‌ ಹರ್ಡಲ್ಸ್‌ ಫೈನಲ್‌ಗೆ ಚಾಲನೆ ನೀಡಿದಾಗ ಉತ್ತಮ ಆರಂಭ ಪಡೆದಿದ್ದ ಉಷಾ, ಸಹ ಓಟಗಾರ್ತಿಯನ್ನು ಹಿಂದಿಕ್ಕಿ ಸಾಕಷ್ಟು ದೂರ ಓಡಿಯಾಗಿತ್ತು. ಆದರೆ ಉಳಿದ ಕೆಲವರು ಹಸಿರು ನಿಶಾನೆ ತೋರುವ ಮುನ್ನವೇ (ಫಾಲ್ಸ್‌ ಸ್ಟಾರ್ಟ್‌) ಓಡಿದ್ದರಿಂದ ಎಲ್ಲರನ್ನೂ ವಾಪಸ್ಸು ಕರೆದು ಮತ್ತೊಮ್ಮೆ ಓಡಿಸಲಾಯಿತು.

ಆಗ ಮೂರನೇ ಸಾಲಿನಲ್ಲಿದ್ದ ನವಾಲ್‌ ಆರಂಭದಿಂದಲೇ ಚುರುಕಾಗಿ ಓಡಲು ಶುರುಮಾಡಿದರು. ಅವರ ಹಿಂದೆಯೇ ಉಷಾ ಕೂಡಾ ಶರವೇಗದಲ್ಲಿ ಸಾಗುತ್ತಿದ್ದರು. ಗುರಿ ಸಮೀಪಿಸುತ್ತಿದ್ದಂತೆ ಭಾರತದ ಓಟಗಾರ್ತಿಯ ವೇಗ ಸ್ವಲ್ಪ ತಗ್ಗಿತು. ಅವರ ಹಿಂದೆ ಓಡುತ್ತಿದ್ದ ಓಟಗಾರ್ತಿಯರು ಇದರ ಲಾಭ ಪಡೆದು ಕ್ಷಣಾರ್ಧದಲ್ಲಿ ಹರ್ಡಲ್ಸ್‌ಗಳನ್ನು ದಾಟಿ ಗುರಿ ತಲುಪಿಯೇಬಿಟ್ಟರು. 55.42 ಸೆಕೆಂಡುಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದ ಉಷಾ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

‘ನಾನು ಆರಂಭದಿಂದಲೇ ಛಲದಿಂದ ಓಡಿದೆ. ಚಿನ್ನ ಗೆಲ್ಲಬೇಕೆಂಬುದು ನನ್ನ ಗುರಿಯಾಗಿತ್ತು. ಆದರೆ ಅಂತಿಮ ಗೆರೆಯ ಹತ್ತಿರ ಬಂದು ಎಡವಿದೆ. ಕೇವಲ 0.01 ಸೆಕೆಂಡಿನ ಅಂತರದಿಂದ ಕಂಚು ಗೆಲ್ಲುವ ಸುವರ್ಣಾವಕಾಶ ಕೈತಪ್ಪಿತು. ಅದರಿಂದ ತುಂಬಾ ನೋವಾಗಿದೆ’ ಎಂದು ಉಷಾ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ್ದರು.

1984ರ ಆಗಸ್ಟ್‌ 8ರಂದು ನಡೆದ ಆ ಸ್ಪರ್ಧೆಯಲ್ಲಿ ಉಷಾ ಕಂಚು ಗೆಲ್ಲುವ ಅವಕಾಶ ಕಳೆದುಕೊಂಡಿದ್ದು ನಿಜ. ಆದರೆ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಅವರು ಇತಿಹಾಸದ ಪುಟ ಸೇರಿದರು.

ಉಷಾ ಅವರು ಏಷ್ಯನ್‌ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ಹತ್ತು ಪದಕಗಳನ್ನು ಜಯಿಸಿದ್ದಾರೆ. 200, 400 ಮೀ. ಓಟ, 400 ಮೀ. ಹರ್ಡಲ್ಸ್‌ ಮತ್ತು 4X400 ಮೀ. ರಿಲೇಯಲ್ಲಿ ಚಿನ್ನ ಗೆದ್ದಿದ್ದಾರೆ; ಆರು ಬೆಳ್ಳಿ ಪದಕಗಳ ಒಡತಿಯೂ ಆಗಿದ್ದಾರೆ.

ಅಥ್ಲೆಟಿಕ್ಸ್‌ನಲ್ಲಿ ಎತ್ತರದ ಸಾಧನೆ ಮಾಡುವ ಆಸೆ ಹೊತ್ತು ಬರುವ ಯುವ ಅಥ್ಲೀಟ್‌ಗಳಿಗೆ ಉಷಾ ಅವರ ಸಾಧನೆಗಳು ಸ್ಫೂರ್ತಿದಾಯಕವಾಗಿವೆ. ಹೀಗಾಗಿಯೇ ಅವರನ್ನು ಜನ ‘ಚಿನ್ನದ ಹುಡುಗಿ’ ಎಂದು ಕರೆಯುತ್ತಾರೆ. 

***
ರಿಯೊ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಸ್ಪರ್ಧೆಯಿಂದ ಯಾವ ಪದಕವನ್ನೂ ನಿರೀಕ್ಷೆ ಮಾಡುವುದಿಲ್ಲ. ಏಕೆಂದರೆ ನಿರೀಕ್ಷೆಗೂ ಮೀರಿ ಅಥ್ಲೀಟ್‌ಗಳು ಈ ಬಾರಿ ಅರ್ಹತೆ ಪಡೆದಿರುವ ಕಾರಣ ಪದಕ ಗೆದ್ದಷ್ಟೇ ಖುಷಿಯಾಗಿದೆ. ವೈಯಕ್ತಿಕ ಮತ್ತು ತಂಡ ವಿಭಾಗದ ಸ್ಪರ್ಧೆಗಳಲ್ಲಿ ಫೈನಲ್‌ ತಲುಪಲು ಉತ್ತಮ ಅವಕಾಶವಿದೆ. ಹಿಂದಿನ ಕೂಟಕ್ಕಿಂತಲೂ ಈ ಬಾರಿ ಉತ್ತಮ ಸಾಮರ್ಥ್ಯ ತೋರಿದರೆ ಅಷ್ಟೇ ಸಾಕು
-ಪಿ.ಟಿ. ಉಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT