ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚುನಾವಣೆ ಫಲಿತಾಂಶ ಸರ್ಕಾರಕ್ಕೆ ಎಚ್ಚರಿಕೆ ಗಂಟೆ’

Last Updated 9 ಫೆಬ್ರುವರಿ 2016, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ತುಘಲಕ್ ದರ್ಬಾರ್ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಎಚ್ಚರಿಕೆ ಗಂಟೆಯಾಗಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ   ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪಕ್ಷದ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಅವರ ಪರ ಡಾಲರ್‌್್ಸ  ಕಾಲೋನಿಯಲ್ಲಿ ಮಂಗಳವಾರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದಂತ ಪ್ರಕರಣಗಳು ನಡೆಯುತ್ತಿವೆ. ಇನ್ನೊಂದೆಡೆ, ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಭ್ರಷ್ಟ ಸಚಿವರನ್ನು ಕೈಬಿಡಿ ಎಂದು ಅವರದ್ದೇ ಪಕ್ಷದ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ. ಇಷ್ಟೆಲ್ಲ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಮುಚ್ಚಿ ಕುಳಿತಿದ್ದಾರೆ’ ಎಂದರು.

‘ರಾಜ್ಯದ ಅಭಿವೃದ್ಧಿಗೆ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೇಂದ್ರ ಸಚಿವರೂ ಪಾಲ್ಗೊಂಡಿದ್ದರು. ಆದರೂ, ಕಾಂಗ್ರೆಸ್‌ ನಾಯಕರು ಕೇಂದ್ರವನ್ನು ಟೀಕಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣ ಸದ್ವಿನಿಯೋಗ ಆಗುತ್ತಿಲ್ಲ. ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರದಿಂದ ₹ 330 ಕೋಟಿಯ ಮಂಜೂರಾಗಿದ್ದು, ಈ ಪೈಕಿ  ₹ 173 ಕೋಟಿ  ಬಿಡುಗಡೆಯಾಗಿದೆ. ಅದನ್ನೂ ಸರ್ಕಾರ  ಬಳಸಿಲ್ಲ’ ಎಂದು ಆರೋಪಿಸಿದರು.

ಕೇಂದ್ರ ಕಾನೂನು ಸಚಿವ  ಡಿ.ವಿ.ಸದಾನಂದ ಗೌಡ  ಮಾತನಾಡಿ, ‘ರಾಜ್ಯದಲ್ಲಿ ಆಡಳಿತ ವಿಫಲವಾಗಿದೆ. ಸಾಮಾನ್ಯ ಜನರು ರಸ್ತೆಗಳಲ್ಲಿ ಗೌರವದಿಂದ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.  ಪೊಲೀಸ್‌ ಅಧಿಕಾರಿಗಳ ನೈತಿಕತೆ ಕುಗ್ಗಿಸುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ’ ಎಂದರು.
‘ಉಪಚುನಾವಣೆ ಫಲಿತಾಂಶ ಮುಂದಿನ ರಾಜ್ಯ ರಾಜಕಾರಣದ  ದಿಕ್ಸೂಚಿಯಾಗಲಿದೆ’ ಎಂದರು.

ಶಾಸಕ  ಆರ್.ಅಶೋಕ್  ಮಾತನಾಡಿ, ‘ಬಿಜೆಪಿ ಆಡಳಿತ ಅವಧಿಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಈಗಿನ ಸರ್ಕಾರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ರಸ್ತೆಗುಂಡಿ, ಕಸದ ಸಮಸ್ಯೆ ಹಾಗೆಯೇ ಉಳಿದಿದ್ದು, ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳು ಸುಳ್ಳಾಗಿವೆ’ ಎಂದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹಾಲಿನ ದರ ಏರಿಕೆಯಾಗಿದೆ. ಪಡಿತರ ಅಕ್ಕಿಯನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ.  ಆದರೂ  ಅನೇಕ ‘ಭಾಗ್ಯ’ ಯೋಜನೆಗಳನ್ನು ಘೋಷಿಸಿ ಜನರನ್ನು ವಂಚಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆ ಮಾಡುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಿಲ್ಲ’ ಎಂದು ಆರೋಪಿಸಿದರು. 

ಅಭ್ಯರ್ಥಿ  ನಾರಾಯಣಸ್ವಾಮಿ, ಶಾಸಕ  ಬಿ.ಎನ್‌.ವಿಜಯಕುಮಾರ್, ಬಿಜೆಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ  ಸುಬ್ಬನರಸಿಂಹ,  ಮುಖಂಡ ಅಬ್ದುಲ್ ಅಜೀಂ ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT