ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಂಟಿ ಸಹಭಾಗಿತ್ವದಲ್ಲಿ ರೈಲ್ವೆ ಅಭಿವೃದ್ಧಿ’

ನಾಲ್ಕು ನೂತನ ರೈಲು ಸಂಚಾರಕ್ಕೆ ಸಚಿವ ಸುರೇಶ್‌ ಪ್ರಭು ಚಾಲನೆ
Last Updated 29 ಜನವರಿ 2015, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ದೀರ್ಘಕಾಲದಿಂದ ಬಾಕಿಯು­­ಳಿದಿರುವ ರೈಲ್ವೆ ಯೋಜನೆಗಳನ್ನು ವಿಶೇಷ ಉದ್ದೇಶಿತ ವ್ಯವಸ್ಥೆ (ಎಸ್‌ಪಿವಿ) ಹಾಗೂ ಜಂಟಿ ಸಹಭಾಗಿತ್ವದಲ್ಲಿ (ಎಸ್‌ವಿ) ಕೈಗೆತ್ತಿ­ಕೊಳ್ಳ­ಲಾಗುವುದು. ಇದರಲ್ಲಿ ರೈಲ್ವೆ ಇಲಾಖೆ ಹಾಗೂ ರಾಜ್ಯಗಳು ಸಮಾನ ಪಾಲು ಹೊಂದಿರುತ್ತವೆ. ಇದಕ್ಕೆ ಎಲ್ಲಾ ರಾಜ್ಯಗಳು ಒಪ್ಪಿಗೆ ನೀಡುವ ಭರವಸೆ ಇದೆ’ ಎಂದು ರೈಲ್ವೆ ಸಚಿವ ಸುರೇಶ್‌ ಪ್ರಭು ತಿಳಿಸಿದರು.

ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ನೂತನ ರೈಲು ಸಂಚಾರಕ್ಕೆ ನಗರ ರೈಲು ನಿಲ್ದಾಣದಲ್ಲಿ ಗುರುವಾರ ನಡೆದ ಕಾರ್ಯ­­ಕ್ರ­ಮದಲ್ಲಿ ರಿಮೋಟ್‌ ಮೂಲಕ ಚಾಲನೆ ನೀಡಿ ಮಾತನಾಡಿದರು.

‘ಖಾಸಗಿ–ಸಾರ್ವಜನಿಕ ಸಹಭಾಗಿತ್ವ­ದಲ್ಲಿ ರೈಲು ನಿಲ್ದಾಣಗಳ ಆಧುನೀಕ­ರಣಕ್ಕೆ ಮುಂದಾಗಲಿದ್ದೇವೆ. ಜೊತೆಗೆ ಕಾರ್ಪೊರೇಟ್‌ ಸಾಮಾಜಿಕ ಹೊಣೆ­ಗಾರಿಕೆ (ಸಿಎಸ್‌ಆರ್‌) ನಿಧಿ ಮೂಲಕ ನಿಲ್ದಾಣಕ್ಕೆ  ಸೌಲಭ್ಯ ಒದಗಿಸಲಾಗು­ವುದು. ಅದಕ್ಕಾಗಿ ಕಾರ್ಪೊರೇಟ್‌ ಸಂಸ್ಥೆಗಳು ಮುಂದೆ ಬರಬೇಕು’ ಎಂದು ಹೇಳಿದರು.

ಪ್ರಾಧಿಕಾರ ರಚನೆ: ‘ಉಪನಗರ ರೈಲು ಯೋಜನೆ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳು­ತ್ತೇನೆ. ಬೆಂಗಳೂರು ನಗರ ಬೆಳೆಯುತ್ತಿರುವ ವೇಗದ ಬಗ್ಗೆ ಅರಿವಿದೆ’ ಎಂದು ನುಡಿದರು.

‘ನಗರಗಳಲ್ಲಿನ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಗ್ರ ಸಾರಿಗೆ ಪರಿಹಾರ ಪ್ರಾಧಿಕಾರ (ಐಟಿಎ­ಸ್‌ಎ) ರಚಿಸಲು ನಿರ್ಧರಿಸಲಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.
ಈ ಬಾರಿ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರ ಇಳಿಸುವ ಸಾಧ್ಯತೆ ಇಲ್ಲ ಎಂಬ ಸುಳಿವು ನೀಡಿದರು.    

ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಚೆನ್ನೈ–ಬೆಂಗಳೂರು–ಮೈಸೂರು ಅತಿ ವೇಗದ ರೈಲು ಸೇವೆ, ಬೆಂಗಳೂರು–ಮಂಗಳೂರು ನಡುವೆ ಹಗಲು ರೈಲಿನ ಸೇವೆ, ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಹಾಗೂ ಬೈಯಪ್ಪನಹಳ್ಳಿಯಲ್ಲಿ ಕೋಚ್‌ ಟರ್ಮಿನಲ್‌ ಅಭಿವೃದ್ಧಿಯತ್ತ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು. 

ಪ್ರಯಾಣಿಕರ ಸೌಲಭ್ಯಕ್ಕಾಗಿ ನಗರ ರೈಲು ನಿಲ್ದಾಣದಲ್ಲಿ ರೂ 3.31 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿ­ರುವ ಪಾದಚಾರಿ ಮೇಲ್ಸೇತುವೆಗೆ ಸುರೇಶ್‌ ಪ್ರಭು ಶಂಕುಸ್ಥಾಪನೆ ನೆರವೇರಿ­ಸಿದರು. ವಿಭಾಗೀಯ ರೈಲ್ವೆ ವ್ಯವಸ್ಥಾ­ಪಕ ಅನಿಲ್ ಕುಮಾರ್ ಅಗರ್‌ವಾಲ್‌ ಮತ್ತಿತರರು ಇದ್ದರು.

ಸಂಸದ ಮೋಹನ್‌ಗೆ ಸಚಿವರ ಮೆಚ್ಚುಗೆ: ಸಂಸದರ ನಿಧಿಯಿಂದ ನಗರದ ರೈಲ್ವೆ ಯೋಜನೆಗಳಿಗೆ  ರೂ 1.1 ಕೋಟಿ ಅನುದಾನ ನೀಡಿದ ಸಂಸದ ಪಿ.ಸಿ.ಮೋಹನ್‌ ಅವರನ್ನು ಸುರೇಶ್‌ ಪ್ರಭು ಶ್ಲಾಘಿಸಿದರು. ‘ಈ ನಡೆ ದೇಶದ ಎಲ್ಲಾ ಸಂಸದರಿಗೆ ಮಾದರಿಯಾಗಿದೆ. ಮೋಹನ್‌ ನೀಡಿರುವ ಪತ್ರವನ್ನು ಲಗತ್ತಿಸಿ ಎಲ್ಲಾ ಸಂಸದರಿಗೆ ಪತ್ರ ಬರೆಯುತ್ತೇನೆ’ ಎಂದರು.

ಇದಕ್ಕೂ ಮೊದಲು  ಮಾತನಾಡಿದ ಮೋಹನ್‌, ವೈಟ್‌ಫೀಲ್ಡ್‌ನಲ್ಲಿ ರೈಲು ನಿಲ್ದಾಣ ಅಭಿವೃದ್ಧಿಗೆ  ರೂ 1 ಕೋಟಿ ಹಾಗೂ ನಗರ ರೈಲು ನಿಲ್ದಾಣಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ರೂ 10 ಲಕ್ಷ ನೀಡುವುದಾಗಿ ಪ್ರಕಟಿಸಿದರು.

ನೂತನ ತಂತ್ರಜ್ಞಾನ: ಕೇಂದ್ರ ಸಚಿವ ಸುರೇಶ್‌ ಪ್ರಭು ಅವರು ‘TelePresence As A Service’ ಎಂಬ ತಂತ್ರ­ಜ್ಞಾ­ನದ ಮೂಲಕ ಚಾಲನೆ ನೀಡಿ­ದರು. ಈ ತಂತ್ರಜ್ಞಾನದ ನೆರವಿನಿಂದ ವಿಡಿಯೊ ಕಾನ್ಪರೆನ್ಸ್‌ ಮೂಲಕ ನಾಲ್ಕು ರೈಲು ನಿಲ್ದಾಣಗಳಿಗೆ ಇಲ್ಲಿಂದ ಸಂಪರ್ಕ ಕಲ್ಪಿಸಲಾಗಿತ್ತು.

ಹಸಿರು ನಿಶಾನೆ ತೋರುತ್ತಿದ್ದಂತೆ ಟಾಟಾನಗರ, ಪಟ್ನಾ ಹಾಗೂ ಕಾಮಾಖ್ಯ ನಿಲ್ದಾಣದಿಂದ ರೈಲುಗಳು ಸಂಚಾರ ಆರಂಭಿಸಿದ ನೇರ ದೃಶ್ಯಗಳನ್ನು ತೋರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT