ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಯನಗರಕ್ಕೊಂದು ಸ್ಮಾರ್ಟ್‌ ರಸ್ತೆ’

ಜಯನಗರ 11ನೇ ಮುಖ್ಯರಸ್ತೆಯಲ್ಲಿ ಟೆಂಡರ್‌ ಶ್ಯೂರ್‌ ಕಾಮಗಾರಿಗೆ ಚಾಲನೆ
Last Updated 2 ಸೆಪ್ಟೆಂಬರ್ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಮಹತ್ವಾಕಾಂಕ್ಷೆಯ ‘ಟೆಂಡರ್‌ ಶ್ಯೂರ್‌’ ಯೋಜನೆಯ ಮೂರನೇ ಪ್ಯಾಕೇಜ್‌ ಅಡಿ ಜಯನಗರ 11ನೇ ಮುಖ್ಯರಸ್ತೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಗೆ ಮಂಗಳವಾರ ಶಂಕು­ಸ್ಥಾಪನೆ ನೆರವೇರಿಸಲಾಯಿತು.

ಜಯನಗರ ನಾಲ್ಕನೇ ಹಂತದ­ಲ್ಲಿ­ರುವ ಕೂಲ್‌ ಜಾಯಿಂಟ್‌ ಜಂಕ್ಷನ್‌­ನಿಂದ ಹೊರ­ವರ್ತುಲ ರಸ್ತೆಯವರೆಗೆ 2.7 ಕಿ.ಮೀ. ಉದ್ದದ ರಸ್ತೆಯನ್ನು  ಮೇಲ್ದರ್ಜೆಗೇರಿಸ­ಲಾಗುತ್ತಿದೆ. ಬಡಾವಣೆಯ ರಾಘವೇಂದ್ರ ಸ್ವಾಮಿ ದೇವಸ್ಥಾನ ಬಳಿ ಮಂಗಳವಾರ ಕಾಮ­ಗಾರಿಗೆ ಚಾಲನೆ ನೀಡಿ ಮಾತ­ನಾ­ಡಿದ ಕೇಂದ್ರ ರಸಗೊಬ್ಬರ ಹಾಗೂ ರಾಸಾ­­ಯನಿಕ ಸಚಿವ ಅನಂತ­ಕುಮಾರ್‌, ‘ಪ್ರಧಾನಿ ನರೇಂದ್ರ ಮೋದಿ ಕಲ್ಪನೆಯ ಸುಸ­ಜ್ಜಿತ ನಗ­ರದ (ಸ್ಮಾರ್ಟ್‌ಸಿಟಿ) ಯೋಜ­ನೆ­­ಯನ್ನು ಸಾಕಾರಗೊಳಿಸ­ಬೇಕು. ಜಯ­ನಗರ ದೇಶದಲ್ಲೇ ಸ್ಮಾರ್ಟ್‌ ಬಡಾವಣೆ. ಸ್ಮಾರ್ಟ್‌ ಬಡಾ­ವಣೆಗೆ ಈಗ ಸ್ಮಾರ್ಟ್‌ ರಸ್ತೆ ಲಭಿಸಿದೆ’ ಎಂದರು.

ಶಾಸಕ ಬಿ.ಎನ್‌.ವಿಜಯ ಕುಮಾರ್‌, ‘ಸಾಕಷ್ಟು ಟ್ರಾಫಿಕ್‌ ಸಮಸ್ಯೆ ಹೊಂದಿ­ರುವ ಈ ರಸ್ತೆಗೆ ಇಂಥ­ದೊಂದು ಯೋಜನೆ ಅಗತ್ಯವಾಗಿತ್ತು. ನಾಲ್ಕು ವರ್ಷ­ಗಳಿಂದ ಇದಕ್ಕಾಗಿ ಪ್ರಯತ್ನ ನಡೆಸಿದ್ದೆ. ಈಗ ಟೆಂಡರ್‌ ಶ್ಯೂರ್‌ ಯೋಜ­ನೆಯಡಿ ರಸ್ತೆಯನ್ನು ಮೇಲ್ದ­ರ್ಜೆ­­ಗೇರಿಸಲು ಕಾಮಗಾರಿ ಕೈಗೆ­ತ್ತಿ­­­ಕೊಳ್ಳ­ಲಾಗಿದೆ. ಜಯನಗರದಲ್ಲಿ ಇದೊಂದು ಮಾದರಿ ರಸ್ತೆಯಾಗಲಿದೆ’ ಎಂದು ತಿಳಿಸಿದರು.

ಮೇಯರ್‌ ಬಿ.ಎಸ್‌.­ಸತ್ಯನಾರಾ­ಯಣ ಮಾತ­ನಾಡಿ, ‘ನಗರದಲ್ಲಿ ಕೈಗೆತ್ತಿ­ಕೊಂಡಿರುವ ₨ 200 ಕೋಟಿ ಮೊತ್ತದ ಯೋಜನೆಯ ಭಾಗವಿದು. ಜನ­ದಟ್ಟಣೆ ಇರುವ ಪ್ರದೇಶದ ಪ್ರಮುಖ ರಸ್ತೆ­ಗಳಲ್ಲಿ ಟೆಂಡರ್‌ ಶ್ಯೂರ್‌ ವ್ಯವಸ್ಥೆ­ಯಡಿ ಕಾಮಗಾರಿ ಕೈಗೆತ್ತಿಕೊಳ್ಳ­ಲಾಗಿದೆ. ನಗ­ರದ ಒಟ್ಟು 12 ರಸ್ತೆ­ಗಳಲ್ಲಿ ಈ ಯೋಜನೆ ರೂಪಿಸಲಾಗಿದೆ.  ಏಳು ರಸ್ತೆ­ಗಳಲ್ಲಿ ಕಾಮಗಾರಿ ಪ್ರಾರಂ­ಭ­­ವಾಗಿದೆ. ಇದು ಎಂಟನೆ­ಯದ್ದು. ಮತ್ತೆ ಅಗೆ­ಯಲು ಅವಕಾಶ ಇಲ್ಲದಂತೆ ರಸ್ತೆ­ಗ­ಳನ್ನು ವಿನ್ಯಾಸ­ಗೊಳಿಸುವ ವ್ಯವಸ್ಥೆ ರೂಪಿಸಲಾಗಿದೆ’ ಎಂದರು.

ಏನಿದು ಟೆಂಡರ್‌ ಶ್ಯೂರ್‌?
ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ವಿನ್ಯಾಸ­ಗೊಳಿ­ಸುವ ಯೋಜನೆ ಟೆಂಡರ್‌ ಶ್ಯೂರ್‌. ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಆಪ್ಟಿ­ಕಲ್‌ ಫೈಬರ್‌ ಕೇಬಲ್‌, ಬೀದಿ­ದೀಪ, ಸಿಗ್ನಲ್‌ ದೀಪ, ಸಿ.ಸಿ ಟಿ.ವಿ ಕೇಬಲ್‌... ಎಲ್ಲದಕ್ಕೂ ರಸ್ತೆ ಬದಿ­ಯಲ್ಲಿ ಯುಟಿಲಿಟಿ ಡಕ್ಟ್‌ (ಸೇವಾ ಸಂಪರ್ಕ ಜಾಲದ ನೆಲ­ದಡಿ ಮಾರ್ಗ) ವ್ಯವಸ್ಥೆ ಇರು­ತ್ತದೆ. ಪಾದಚಾರಿಗಳಿಗೆ ಸಮ­ರ್ಪಕವಾದ ಫುಟ್‌ಪಾತ್‌ ಸೌಲಭ್ಯ, ಸೈಕಲ್‌ ಸವಾರರಿಗೆ ಪ್ರತ್ಯೇಕ ಮಾರ್ಗ, ದೊಡ್ಡ ವಾಹನಗಳು ಮತ್ತು ದ್ವಿ­ಚಕ್ರ ವಾಹನಗಳಿಗೆ ಪ್ರತ್ಯೇಕ ಲೇನ್‌ ಸೇರಿ­ ವಿಶೇಷ ಸೌಲಭ್ಯ­ಗಳೂ ಇರು­ತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT