ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗತೀಕರಣದಿಂದ ಹೆಚ್ಚಿದ ಸ್ವಜಾತಿ ಮದುವೆ’

ಬೆಂಗಳೂರಿನಲ್ಲಿವೆ 163 ಜಾತಿಗಳು
Last Updated 16 ಡಿಸೆಂಬರ್ 2015, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತಿನ ಎಲ್ಲ ಕಡೆಗಿರುವ ಒಂದೇ ಜಾತಿಗೆ ಸೇರಿದ ಜನ ಜಾಗತಿಕರಣದ ಪ್ರಭಾವದಿಂದ ಒಟ್ಟಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವಜಾತಿ ಮದುವೆಗಳು ಹೆಚ್ಚಾಗುತ್ತಿವೆ’ ಎಂದು ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ (ನಿಯಾಸ್‌) ಸಾಮಾಜಿಕ ವಿಜ್ಞಾನ ಶಾಲೆ ಪ್ರಾಧ್ಯಾಪಕ ಪ್ರೊ.ನರೇಂದ್ರ ಪಾಣಿ ಅಭಿಪ್ರಾಯಪಟ್ಟರು.

ನಿಯಾಸ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಜಾಗತಿಕರಣದ ಸನ್ನಿವೇಶದಲ್ಲಿ ಜಾತಿಗಳ ರೂಪಾಂತರ: ಬೆಂಗಳೂರಿನ ಮಾದರಿ’ ವಿಷಯವಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.

‘ನಗರೀಕರಣದಿಂದ ಜಾತಿಗಳು ಅಳಿಸಿ ಹೋಗುತ್ತವೆ ಎಂದು ಭಾವಿಸಲಾಗಿತ್ತು. ಆದರೆ, ಜಾತಿಗಳ ಬೇರುಗಳು ಮತ್ತಷ್ಟು ಭದ್ರಗೊಂಡಿವೆ. ಒಂದೇ ಸಮು
ದಾಯಕ್ಕೆ ಸೇರಿದವರು ಒಂದೆಡೆ ನೆಲೆಸುವ ಪ್ರವೃತ್ತಿ ಬೆಳೆಯುತ್ತಿದೆ. ಜಾತಿ ಧ್ರುವೀಕರಣ ಹೊಸ ಆಯಾಮ ಪಡೆದುಕೊಂಡಿದೆ’ ಎಂದರು.

‘ಜಾಗತಿಕರಣದ ಸನ್ನಿವೇಶದಲ್ಲಿ ಜಾತಿ ವ್ಯವಸ್ಥೆ ಎಂತಹ ಸನ್ನಿವೇಶ ಸೃಷ್ಟಿಸಿದೆ ಎಂದರೆ ಪಶ್ಚಿಮದಿಂದ ಪ್ರಭಾವಿತವಾದ ಮೇಲ್ಜಾತಿಗಳಿಗೆ ಸೇರಿದ ಜನರೇ ನೀತಿ ನಿರೂಪಣೆಯಂತಹ ವಿಷಯಗಳಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಉದಾಹರಣೆಗೆ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ–ಪ್ಯಾಕ್‌). ಆ ಸಂಘಟನೆಯಲ್ಲಿ ಇರುವ ಬಹುತೇಕರು ಮೇಲ್ಜಾತಿಗೆ ಸೇರಿದವರು’ ಎಂದರು.

‘ಜಾಗತಿಕರಣವು ಜಾತಿಗೆ ತಲೆಬಾಗಿದ ಕುರುಹಾಗಿ ನಗರದ ಬಹುತೇಕ ಐಟಿ ಕಂಪೆನಿಗಳ ಊಟದ ಕೋಣೆಗಳಲ್ಲಿ ಸಸ್ಯಾಹಾರ ಮಾತ್ರ ಸಿಗುತ್ತದೆ. ಮೇಲ್ಜಾತಿಗಳ ಜನರೇ ಅಲ್ಲಿನ ಉದ್ಯೋಗಿಗಳು ಎಂಬುದನ್ನು ಊಟದ ತಟ್ಟೆಯೇ ಹೇಳುತ್ತದೆ. ಹೀಗಾಗಿ ಜಾತಿ ವ್ಯವಸ್ಥೆ ಇಲ್ಲಿ ಗುಪ್ತಗಾಮಿನಿಯಾಗಿ ಸುಳಿದಾಡುತ್ತದೆ’ ಎಂದು ಪ್ರತಿಪಾದಿಸಿದರು.

‘ಐಟಿ ಕಂಪೆನಿಗಳ ಒಳಗಿನ ಸನ್ನಿವೇಶ ಇದಾದರೆ ಹೊರಗಿನ ವಾತಾವರಣ ಭಿನ್ನವಾಗಿದೆ. ಟೆಕ್ಕಿಗಳನ್ನು ಕಚೇರಿಗೆ ತಂದು ಬಿಡುವ ಕಾರುಗಳ ಮೇಲೆ ‘ಮಿಲ್ಟ್ರಿ ಗೌಡ’, ‘ಕುರುಬಾಸ್‌’ ಎಂಬ ಹೆಸರುಗಳು ಕಂಡು ಬರುತ್ತವೆ. ಜಾತಿಗಳೊಂದಿಗೆ ಗುರುತಿಸಿಕೊಳ್ಳಲು ಇವರಿಗೆ ಅಭಿಮಾನ. ಜಾತಿ ವ್ಯವಸ್ಥೆಯ ಎರಡು ವೈರುಧ್ಯಗಳಿವು’ ಎಂದು ವಿಶ್ಲೇಷಿಸಿದರು.

‘1973ರ ನಂತರದ ಅವಧಿಯಲ್ಲಿ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಮೊದಲು ವಲಸೆ ಬಂದ ಕನ್ನಡಿಗರಲ್ಲಿ ಹೆಚ್ಚಿನವರು ಒಕ್ಕಲಿಗರು. 1992ರಲ್ಲಿ ಐಟಿ ಕ್ರಾಂತಿ ಬಳಿಕ ಉತ್ತರ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಬಂದರು. ಸದ್ಯದ ಲೆಕ್ಕಾಚಾರದ ಪ್ರಕಾರ 163 ಜಾತಿಗಳು ಇಲ್ಲಿ ನೆಲೆ ಕಂಡುಕೊಂಡಿವೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ನಾವು ನಡೆಸಿದ ಸಮೀಕ್ಷೆಯಲ್ಲಿ ಜಾತಿಯೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡದ ಜನಸಂಖ್ಯೆ ಕೇವಲ ಶೇ 9.6ರಷ್ಟು ಇತ್ತು. ಅದರಲ್ಲೂ
ಶೇ ಒಂದಕ್ಕಿಂತ ಕಡಿಮೆ ಜನತಮ್ಮ ಜಾತಿಯ ಹೆಸರನ್ನು ಹೇಳಲು ಸ್ಪಷ್ಟವಾಗಿ ನಿರಾಕರಿಸಿದರು’ ಎಂದು ವಿವರಿಸಿದರು.

‘ಜಾಗತಿಕರಣದಿಂದ ಪ್ರತಿ ಜಾತಿಗೂ ವಧು–ವರರ ವೆಬ್‌ಸೈಟ್‌ಗಳು ಶುರುವಾಗಿವೆ. ಬೆಂಗಳೂರಿನ ಸಂಬಂಧ ಅಮೆರಿಕದಲ್ಲಿ ಬೆಳೆದರೂ ಅದು ಅಲ್ಲಿ ನೆಲೆಸಿದ ಸ್ವಜಾತಿ ಕುಟುಂಬದೊಂದಿಗೇ ಬೆಸೆದಿರುತ್ತದೆ. ಆದರೆ, ಅಂತರ್‌ಜಾತಿ ವಿವಾಹಗಳು ಮಾತ್ರ ಹೆಚ್ಚಾಗುತ್ತಿಲ್ಲ’ ಎಂದು ಜಾತಿ ವ್ಯವಸ್ಥೆಯ ಬೇರುಗಳ ಮೇಲೆ ಬೆಳಕು ಚೆಲ್ಲಿದರು.

‘ರಾಜಕಾರಣದಲ್ಲೂ ಜಾತಿ ಪ್ರಭಾವ ಬೀರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 2013ರ ವಿಧಾನಸಭೆ ಚುನಾವಣೆ ಕಾಲಕ್ಕೆ ಬೆಂಗಳೂರಿನ
ಬಹುತೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಒಕ್ಕಲಿಗರಾಗಿದ್ದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಂತೂ ನೂರಕ್ಕೆ ನೂರರಷ್ಟು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರು’ ಎಂದು ವಿವರಿಸಿದರು.

‘ಬಡತನ ಬೆಳೆಯಲು, ಶಿಕ್ಷಣದ ಸೌಲಭ್ಯ ದೊರೆಯದಿರಲು ಜಾತಿ ತಾರತಮ್ಯ ಕಾರಣವಾಗಿದೆ ಎಂಬುದು ಸಮೀಕ್ಷೆಯಿಂದ ವೇದ್ಯವಾಗಿದೆ’ ಹೇಳಿದರು. ‘ಸಾಮಾಜಿಕ ಜಾಲತಾಣಗಳಲ್ಲೂ ಜಾತಿ ವ್ಯವಸ್ಥೆ ಪೋಷಿಸುವ ಕೆಲಸ ಆಗುತ್ತಿದೆ’ ಎಂದು ಅವರು ಒಪ್ಪಿಕೊಂಡರು.

‘ಸ್ವಾತಂತ್ರ್ಯ ಪೂರ್ವದಲ್ಲೇ ಕರ್ನಾಟಕದಲ್ಲಿ ಮೀಸಲಾತಿ ಸೌಲಭ್ಯ ಇದ್ದರೂ ತಮಿಳುನಾಡಿನ ಕೆಳವರ್ಗದ ಜನ ಕಂಡಂತಹ ಅಭಿವೃದ್ಧಿಯನ್ನು ಇಲ್ಲಿನ ಜನ ಏಕೆ ಕಾಣಲಿಲ್ಲ’ ಎಂಬ ಪ್ರಶ್ನೆ ಎದುರಾಯಿತು.

‘ತಮಿಳುನಾಡಿನತಳ ಸಮುದಾಯಕ್ಕೆ ಸೇರಿದವರು ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ಥಾಪಿಸಿದರು. ಹೀಗಾಗಿ ಅಲ್ಲಿನವರು ಬೆಳೆಯುವ ಅವಕಾಶ ಗಿಟ್ಟಿಸಿದರು. ಆದರೆ, ರಾಜ್ಯದಲ್ಲಿ ಅಂತಹ ವಾತಾವರಣ ಸೃಷ್ಟಿಯಾಗಲಿಲ್ಲ’ ಎಂದು ಪಾಣಿ ಅಭಿಪ್ರಾಯಪಟ್ಟರು.
*
ಎಲ್ಲಿ, ಯಾರ ಸಮೀಕ್ಷೆ?
ನಿಯಾಸ್‌ ಪ್ರಾಧ್ಯಾಪಕ ನರೇಂದ್ರ ಪಾಣಿ ಅವರ ತಂಡವು ಜಾತಿ ವ್ಯವಸ್ಥೆ ಕುರಿತು ಬೆಂಗಳೂರಿನಲ್ಲಿ ಸಮೀಕ್ಷೆ ನಡೆಸಿತ್ತು. ಅದರ ವಿವರ ಇಲ್ಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT