ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತ್ಯತೀತ’ ದುರ್ಬಳಕೆ

ರಾಜನಾಥ್‌ ಮಾತಿನಿಂದ ಸಂಸತ್ತಿನಲ್ಲಿ ಕಾವೇರಿದ ಚರ್ಚೆ
Last Updated 26 ನವೆಂಬರ್ 2015, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸಂವಿಧಾನದಲ್ಲಿರುವ ಪದಗಳ ದುರ್ಬಳಕೆಯಾಗಬಾರದು. ಆದರೆ ಜಾತ್ಯತೀತ ಎಂಬ ಪದ ಇಂದು ಅತಿ ಹೆಚ್ಚು ದುರುಪಯೋಗವಾಗುತ್ತಿದೆ’ ಎಂದ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸಂಸತ್ತಿನಲ್ಲಿ ಕಳವಳ ವ್ಯಕ್ತಪಡಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನವಾದ ಗುರುವಾರ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 125 ನೇ ಜನ್ಮದಿನಾಚರಣೆ ಅಂಗವಾಗಿ ಲೋಕಸಭೆಯಲ್ಲಿ ‘ಭಾರತದ ಸಂವಿಧಾನದೆಡೆಗಿನ ಬದ್ಧತೆ’  ಎಂಬ ವಿಷಯದ ಕುರಿತು ಚರ್ಚೆ ಆರಂಭಿಸಿದ ರಾಜನಾಥ್‌ ಸಿಂಗ್‌, ‘ಜಾತ್ಯತೀತ ಎಂಬ ಪದವನ್ನು ಸಂವಿಧಾನದಲ್ಲಿ ಸೇರಿಸಲು ಅಂಬೇಡ್ಕರ್‌ ಬಯಸಿರಲಿಲ್ಲ. ಆದರೆ 1976ರಲ್ಲಿ ತಿದ್ದುಪಡಿ ತಂದು ಅದನ್ನು ಸೇರಿಸಲಾಯಿತು’ ಎಂದರು.

‘ಜಾತ್ಯತೀತ’ (ಸೆಕ್ಯುಲರಿಸಂ) ಮತ್ತು ‘ಸಮಾಜವಾದ’ ಎಂಬ ಪದಗಳನ್ನು ಸಂವಿಧಾನದ 42ನೇ ತಿದ್ದುಪಡಿ ಬಳಿಕ ಪೀಠಿಕೆಯಲ್ಲಿ ಸೇರಿಸಲಾಗಿದೆ. ನಮಗೆ ಈ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಆದರೆ ಈ ಎರಡು ಪದಗಳನ್ನು ಸಂವಿಧಾನದಲ್ಲಿ ಸೇರಿಸಲು ಅಂಬೇಡ್ಕರ್‌ ಬಯಸಿರಲಿಲ್ಲ’ ಎಂದು ಹೇಳಿದರು.

‘ಸೆಕ್ಯುಲರಿಸಂ’ ಪದವನ್ನು ‘ಧರ್ಮ ನಿರಪೇಕ್ಷತೆ’ ಎಂಬ ಅರ್ಥದಲ್ಲಿ ಬಳಸುತ್ತಿರುವುದಕ್ಕೆ ಗೃಹ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ‘ಸೆಕ್ಯುಲರಿಸಂ’ ಪದದ ಅಧಿಕೃತ ಹಿಂದಿ ಭಾಷಾಂತರ ‘ಪಂಥ ನಿರಪೇಕ್ಷತೆ’ ಆಗಿದೆ. ಆದ್ದರಿಂದ ಈ ಪದವನ್ನೇ ಬಳಸಬೇಕು ಎಂದರು.

‘ಸೆಕ್ಯುಲರಿಸಂ ಪದದ ದುರ್ಬಳಕೆಯನ್ನು ಕೊನೆಗಾಣಿಸಬೇಕು. ಏಕೆಂದರೆ ಇದರ ಅತಿಯಾದ ದುರ್ಬಳಕೆ ಸಮಾಜದಲ್ಲಿ ಉದ್ವಿಗ್ನತೆಗೆ ಕಾರಣವಾದ ಹಲವು ಉದಾಹರಣೆಗಳು ಇವೆ’ ಎಂದರು.

ಮೀಸಲಾತಿ ಚರ್ಚೆ ಮುಗಿದ ಅಧ್ಯಾಯ: ಮೀಸಲಾತಿ ಕುರಿತ ಚರ್ಚೆ ಮುಗಿದ ಅಧ್ಯಾಯ ಎಂದು ರಾಜನಾಥ್‌ ತಿಳಿಸಿದರು. ‘ಮೀಸಲಾತಿ ಎಂಬುದು ಸಾಮಾಜಿಕ ಮತ್ತು ರಾಜಕೀಯ ಅಗತ್ಯವಾಗಿದೆ. ಆದ್ದರಿಂದ ಸಂವಿಧಾನದಲ್ಲೇ ಅದಕ್ಕೆ ಅವಕಾಶವಿದೆ. ಈ ಬಗ್ಗೆ ಚರ್ಚೆಯ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೀಸಲಾತಿ ವ್ಯವಸ್ಥೆಯ ಪುನರ್‌ ಪರಿಶೀಲನೆ ನಡೆಯಬೇಕು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌   ಇತ್ತೀಚೆಗೆ ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಕಾಂಗ್ರೆಸ್‌ ಆಕ್ಷೇಪ: ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಈ ಪದಗಳನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲು ಆಂಬೇಡ್ಕರ್‌ ಬಯಸಿದ್ದರು. ಆದರೆ ಅಂದು ಇದ್ದಂತಹ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ’ ಎಂದು ಖರ್ಗೆ ಉತ್ತರಿಸಿದರು.

‘ಸಂವಿಧಾನದ ಮೂಲ ಆಶಯ ಈಗ ಅಪಾಯದಲ್ಲಿದೆ. ಸಂವಿಧಾನದ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ’ ಎಂದು ಸೋನಿಯಾ ಗಾಂಧಿ ಅವರು ಆತಂಕ ವ್ಯಕ್ತಪಡಿಸಿದರು.
*
ಅಂಬೇಡ್ಕರ್‌ ಎಂದಿಗೂ ದೇಶ ತೊರೆಯಲು ಬಯಸಿರಲಿಲ್ಲ
‘ಡಾ. ಬಿ.ಆರ್‌. ಅಂಬೇಡ್ಕರ್‌ ಸಾಕಷ್ಟು ಅವಮಾನ, ತಾರತಮ್ಯ  ಎದುರಿಸಿದ್ದರು. ಆದರೆ ಎಲ್ಲವನ್ನೂ ಸಹಿಸಿಕೊಂಡಿದ್ದರು. ದೇಶ ತೊರೆಯುವ ಬಗ್ಗೆ ಒಮ್ಮೆಯೂ ಚಿಂತಿಸಿರಲಿಲ್ಲ’  ಎಂದು ರಾಜನಾಥ್‌ ಹೇಳಿದರು.

‘ಅಸಹಿಷ್ಣುತೆ’ ವಿಷಯದಲ್ಲಿ ಸರ್ಕಾರವನ್ನು ಟೀಕಿಸುತ್ತಿರುವವರಿಗೆ ಈ ಮೂಲಕ ಉತ್ತರ ನೀಡಿದ ಅವರು, ‘ದೇಶ ಬಿಟ್ಟು ಹೋಗುತ್ತೇನೆ’ ಎಂದಿದ್ದ ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರನ್ನು ಪರೋಕ್ಷವಾಗಿ ಟೀಕಿಸಿದರು.
*
ರಾಜನಾಥ್‌ ವಜಾಕ್ಕೆ ಆಗ್ರಹ
ಪಣಜಿ (ಐಎಎನ್‌ಎಸ್‌):
‘ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಸಂಸತ್ತಿನಿಂದ ವಜಾ ಮಾಡಬೇಕು’ ಎಂದು ಗೋವಾದ ಕಾಂಗ್ರೆಸ್‌ ಸಂಸದ ಶಾಂತಾರಾಮ್‌ ನಾಯ್ಕ್ ಆಗ್ರಹಿಸಿದ್ದಾರೆ.

‘ಸಂವಿಧಾನದಲ್ಲಿ ಜಾತ್ಯತೀತ ಎಂಬ ಪದ ಸೇರಿಸಿದ್ದನ್ನು ರಾಜನಾಥ್‌ ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮ ಪ್ರಮಾಣವಚನವನ್ನು ಉಲ್ಲಂಘಿಸಿದ್ದಾರೆ. ಅವರನ್ನು ವಜಾ ಮಾಡಬೇಕು’ ಎಂದಿದ್ದಾರೆ.
*
ತಮ್ಮ ಮನಸ್ಸಿನ ಭಾವನೆಯನ್ನು ಅಮೀರ್‌ ವ್ಯಕ್ತಪಡಿಸಿದ್ದಾರೆ. ದೇಶ ತೊರೆದು ಪಾಕಿಸ್ತಾನಕ್ಕೆ ಹೋಗು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ.
– ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ
*
ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಇದೀಗ ಅದರ ರಕ್ಷಕರಂತೆ ವರ್ತಿಸುತ್ತಿದ್ದಾರೆ. ಇದಕ್ಕಿಂತ ದೊಡ್ಡ ತಮಾಷೆ ಇನ್ನೊಂದಿಲ್ಲ.
– ಸೋನಿಯಾ ಗಾಂಧಿ
ಕಾಂಗ್ರೆಸ್‌ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT