ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತ್ರೆ’ಯಾಗಷ್ಟೇ ಉಳಿಯದಿರಲಿ ದಸರಾ ಕ್ರೀಡೆ

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಈ ಬಾರಿ ದಸರಾ ಕ್ರೀಡಾಕೂಟಕ್ಕೆ ಬರಲಿರುವ  ಕ್ರೀಡಾಪಟುಗಳನ್ನು ಸ್ವಾಗತಿಸಲು ಚಾಮುಂಡಿ ವಿಹಾರದ ಕೆಂಪು ಹಾಸಿನ ಸಿಂಥೆಟಿಕ್ ಟ್ರ್ಯಾಕ್ ಸಿದ್ಧವಾಗಿದೆ.
ಈ ಭಾಗದ ಕ್ರೀಡಾಪಟುಗಳ, ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದ್ದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಅಂತೂ ಇಂತೂ ಮುಗಿದಿದೆ. ಇದರೊಂದಿಗೆ ಮಹಿಳಾ ಕ್ರೀಡಾ ವಸತಿ ನಿಲಯದ ಕಟ್ಟಡ, ಗರಡಿಮನೆಗಳ ಕಾಮಗಾರಿಯೂ ಸಂಪೂರ್ಣ ವಾಗಿದ್ದು ಲೋಕಾರ್ಪಣೆಗೆ ಸಿದ್ಧವಾಗಿವೆ. ನಿಧಾನಗತಿ ಯಲ್ಲಾದರೂ ಮೂಲ ಸೌಕರ್ಯಗಳು ಅಭಿವೃದ್ಧಿ ಯಾಗುತ್ತಿರುವುದು ಒಂದೆಡೆ ಸಮಾಧಾನ ತಂದರೂ, ದಸರಾ ಕ್ರೀಡಾಕೂಟದ ಕುರಿತು ಇರುವ ಹಲವು ಪ್ರಶ್ನೆಗಳಿಗೆ ಉತ್ತರ ಇಂದಿಗೂ ಸಿಕ್ಕಿಲ್ಲ.

ಈ ಕೂಟವನ್ನು ಏಕೆ ಆಯೋಜಿಸಲಾಗುತ್ತಿದೆ? ಇದೊಂದು ಪರಂಪರೆ ಮಾತ್ರವೇ? ಹಬ್ಬಕ್ಕೆ ಮಾತ್ರ ಸೀಮಿತವಾಗಬೇಕೆ? ಇದರಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಭವಿಷ್ಯಕ್ಕೆ ಇದರಿಂದ ಏನಾದರೂ ಅನುಕೂಲವಾಗುತ್ತದೆಯೇ? ಪ್ರತಿವರ್ಷವೂ ಕೂಟ ಆಯೋಜನೆ ಆಗುವುದು ಖಚಿತವೇ ಆದರೂ ತಯಾರಿ, ಸಂಘಟನೆ ಚಟುವಟಿಕೆಗಳು ಶುರುವಾಗುವುದು ಒಂದು ತಿಂಗಳ ಮೊದಲಷ್ಟೇ ಏಕೆ? ಕೂಟಕ್ಕೆ ಖರ್ಚು ಮಾಡಿದ ದುಡ್ಡಿಗೆ ಪ್ರತಿಯಾಗಿ ಶಾಶ್ವತವಾಗಿ ಉಳಿದದ್ದು ಏನು? ಹೀಗೆ ಪ್ರಶ್ನೆಗಳ ಸರಮಾಲೆ ಬೆಳೆಯುತ್ತಲೇ ಹೋಗುತ್ತದೆ.

ವಿಜಯದಶಮಿಯ ಜಂಬೂಸವಾರಿಯನ್ನು ವೀಕ್ಷಿಸಲು ದೇಶವಿದೇಶಗಳ ಲಕ್ಷಾಂತರ ಜನರು ಇಡೀ ವರ್ಷ ಎದುರು ನೋಡುವ ಮಾದರಿಯಲ್ಲಿಯೇ ದಸರಾ ಕ್ರೀಡಾಕೂಟಕ್ಕಾಗಿ ರಾಜ್ಯದ ಮೂಲೆಮೂಲೆ ಯಲ್ಲಿನ ಸಾವಿರಾರು ಕ್ರೀಡಾಪಟುಗಳು ಕಾಯುತ್ತಿರು ತ್ತಾರೆ. ಆದರೆ, ಕೂಟವು ಜಾತ್ರೆಯ ರೂಪದಲ್ಲಿ ಮುಗಿದು ಹೋಗುತ್ತದೆ. ಈ ಕ್ರೀಡಾಕೂಟಕ್ಕೆ ವೃತ್ತಿಪರತೆಯ ಸ್ಪರ್ಶ ಇದುವರೆಗೂ ಸಿಕ್ಕಿಲ್ಲ. 

ಇಲ್ಲಿ ಕೆಲವು ಕ್ರೀಡೆಗಳಿಗೆ ತಾಲ್ಲೂಕುಮಟ್ಟದಿಂದ ತಂಡಗಳ ಆಯ್ಕೆ ಪ್ರಕ್ರಿಯೆ ಶುರುವಾಗುತ್ತದೆ. ಕೆಲವು ಆಟಗಳಿಗೆ ಜಿಲ್ಲಾಮಟ್ಟ, ಇನ್ನೂ ಕೆಲವು ಆಟಗಳಿಗೆ ವಿಭಾಗಮಟ್ಟದಿಂದ ಮತ್ತು ಇನ್ನೂ ಕೆಲವನ್ನು ರಾಜ್ಯಮಟ್ಟದಲ್ಲಿ ನೇರವಾಗಿ ನಡೆಸಲಾಗುತ್ತಿದೆ. ಇದು ಹಲವಾರು ಗೊಂದಲಗಳಿಗೆ ಕಾರಣವಾಗುತ್ತಿದೆ.
ಬರುವ ದಸರಾದ ಕ್ರೀಡಾಕೂಟದ ವೇಳಾಪಟ್ಟಿಯನ್ನು ಒಮ್ಮೆ ನೋಡಿದರೆ ಇದು ಅರ್ಥವಾಗುತ್ತದೆ. ದೇಹದಾರ್ಢ್ಯ, ವೇಟ್‌ಲಿಫ್ಟಿಂಗ್, ಸೈಕ್ಲಿಂಗ್ ಕ್ರೀಡೆಗಳನ್ನು ರಾಜ್ಯಮಟ್ಟದಲ್ಲಿ ನೇರವಾಗಿ ಆಯೋಜಿಸಲಾಗುತ್ತಿದೆ. ಉಳಿದ ಕ್ರೀಡೆಗಳಲ್ಲಿ ಮಾತ್ರ ತಾಲ್ಲೂಕು ಹಂತದಿಂದ ವಿಭಾಗಮಟ್ಟದವರೆಗೆ ಆಯ್ಕೆಯಾದ ತಂಡಗಳು ಬರುತ್ತವೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಕೂಟಗಳು ಆಯೋಜನೆಯಾಗುವ ಸಂದರ್ಭದಲ್ಲಿ ಕನಿಷ್ಠ ಆರು ವರ್ಷಗಳ ಮೊದಲೇ ತಯಾರಿ ಆರಂಭವಾಗುತ್ತದೆ. ಅದಕ್ಕೆ ಪೂರಕವಾಗಿ ಕೆಲವು ಕೂಟಗಳೂ ನಡೆಯುತ್ತವೆ. ಆಟಗಾರರ ಆಯ್ಕೆಯಾಗುತ್ತದೆ. ಆದರೆ, ದಸರಾ ಕ್ರೀಡೆಯ ಆಯೋಜನೆಯ ಹಿಂದಿನ ಉದ್ದೇಶವೇ ಇಂದಿಗೂ ಸ್ಪಷ್ಟವಾಗಿಲ್ಲ. ಬರೀ ಒಂದು ಕ್ರೀಡಾಮೇಳದಂತೆ ನಡೆಯುತ್ತಿದೆ. ಒಂದು ವರ್ಷದ ಕೂಟ ಮುಗಿದ ಕೂಡಲೇ ಮುಂದಿನ ವರ್ಷದ ಕೂಟಕ್ಕೆ ತಯಾರಿ ಆರಂಭವಾಗಬೇಕು. ಮೊದಲು ಜರುಗಿದ ಲೋಪಗಳನ್ನು ತಿದ್ದಿಕೊಂಡು, ಉತ್ತಮವಾದದ್ದನ್ನು ಮುಂದುವರೆಸುವ ಯೋಜನೆ ರೂಪುಗೊಳ್ಳಬೇಕು. ತಾಲ್ಲೂಕು, ಜಿಲ್ಲೆಗಳಿಂದ ಆಯ್ಕೆ ಪ್ರಕ್ರಿಯೆಯೂ ಆರಂಭವಾಗಬೇಕು. ಆಯಾ ತಾಲ್ಲೂಕು, ಜಿಲ್ಲಾ ಸಂಘಟನೆಗಳಿಗೆ ಇಲಾಖೆಯು ಸುತ್ತೋಲೆ ಕಳುಹಿಸಿ ಶಿಸ್ತಿನ ರೀತಿಯಲ್ಲಿ ಕೂಟ ಆಯೋಜನೆಗೆ ಅವಕಾಶ ಮಾಡಿಕೊಡಬೇಕು. ಪ್ರತಿ ಜಿಲ್ಲೆಯಲ್ಲಿಯೂ ಆಡಳಿತ ಯಂತ್ರ ಹೊಂದಿರುವ ಇಲಾಖೆಗೆ ಇದೇನೂ ದೊಡ್ಡ ಕೆಲಸವಲ್ಲ. ಇಚ್ಛಾಶಕ್ತಿ ಬೇಕು’ ಎಂದು ದೈಹಿಕ ಶಿಕ್ಷಣ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಶೇಷಣ್ಣ ಹೇಳುತ್ತಾರೆ.

ಈ ಬಾರಿ ಒಂದು ಕೋಟಿ: ವರ್ಷದಿಂದ ವರ್ಷಕ್ಕೆ ದಸರಾ ಕ್ರೀಡಾಕೂಟದ ಆಯೋಜನೆಯ ಖರ್ಚು ಹೆಚ್ಚಾಗುತ್ತಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದಾಖಲೆಪತ್ರಗಳ ಪ್ರಕಾರ ಕಳೆದ ವರ್ಷದ ಕೂಟಕ್ಕೆ ₨ 90 ಲಕ್ಷ  ವೆಚ್ಚವಾಗಿವೆ. ಅದರಲ್ಲಿ ವಿಜೇತರಿಗೆ ನಗದು ಪುರಸ್ಕಾರ, ಪ್ರಶಸ್ತಿ, ಸನ್ಮಾನಗಳಿಗೆ ₨ 58 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಈ ಬಾರಿ ಒಂದು ಕೋಟಿ ರೂಪಾಯಿ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ.

‘ದುಡ್ಡು ಖರ್ಚು ಮಾಡುವುದಷ್ಟೇ ಸಾಧನೆಯಲ್ಲ. ಒಂದು ಕೂಟಕ್ಕೆ ವಿನಿಯೋಗಿಸುವ ಅನುದಾನದ ಸ್ವಲ್ಪ ಭಾಗವನ್ನು ಯಾವುದಾದರೂ ಒಂದು ಕ್ರೀಡೆಯ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸುವಂತಾಗಬೇಕು. ಆಗ ಪ್ರತಿವರ್ಷವೂ ದಸರೆಯ ಹೆಸರಿನಲ್ಲಿ ಒಂದೊಂದೇ ಸೌಲಭ್ಯಗಳು ಅಭಿವೃದ್ಧಿಯಾಗುತ್ತವೆ. ಇದರಿಂದ ಸ್ಥಳೀಯ ಕ್ರೀಡಾಪಟುಗಳ ಬೆಳವಣಿಗೆಗೆ, ದೊಡ್ಡ ಟೂರ್ನಿಗಳನ್ನು ಆಯೋಜಿಸಲೂ ಅನುಕೂಲವಾಗುತ್ತದೆ. ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡುವುದರಿಂದ ಯಾರಿಗೆ ಲಾಭವಿದೆ’ ಎಂದು ಶೇಷಣ್ಣ ಪ್ರಶ್ನಿಸುತ್ತಾರೆ.

ಎರಡು ವರ್ಷಗಳ ಹಿಂದೆ ದಸರಾ ಕ್ರೀಡಾಕೂಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಬೆಸ್ಟ್‌ ಪೋಸರ್್’ ಆಗಿದ್ದ ಪಟುವೊಬ್ಬರಿಗೆ ವಸತಿ ಸೌಕರ್ಯವೇ ಸಿಗಲಿಲ್ಲ. ಕ್ರೀಡಾಂಗಣದ ಒಂದು ಮೂಲೆಯಲ್ಲಿ ಹಳೆಯ ಪತ್ರಿಕೆ ಹಾಸಿಕೊಂಡು ಮಲಗಿದರು. ಕ್ರೀಡಾಪಟುಗಳು ಮತ್ತು ಕ್ರೀಡೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶಿಸ್ತು ಇಲ್ಲದೇ ಹೋದರೆ, ಇಂತಹ ಗೊಂದಲಗಳು ಸಹಜ. ವಸತಿ, ಊಟ, ತಾಂತ್ರಿಕ ಸೌಲಭ್ಯಗಳನ್ನು ನೀಡುವ ಸಮಿತಿಗಳನ್ನು ಸಶಕ್ತವಾಗಿ ಮತ್ತು ಶಿಸ್ತುಬದ್ಧವಾಗಿ ನೇಮಕ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಂದು ಕೂಟ ಮುಗಿದಾಗಲೂ ಇಲಾಖೆಯು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ. 

ಈ ಬಾರಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌? ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 2ರವರೆಗೆ ನಡೆಯುವ ದಸರಾ ಕ್ರೀಡಾಕೂಟದಲ್ಲಿ ಈ ಬಾರಿ 35 ಕ್ರೀಡೆಗಳು ನಡೆಯಲಿವೆ. ಇದರಲ್ಲಿ ನಾಲ್ಕು ಕ್ರೀಡೆಗಳು ರಾಷ್ಟ್ರ ಮಟ್ಟದ ಆಹ್ವಾನಿತ ಕೂಟಗಳಾಗಿವೆ. ಮಹಿಳೆಯರ ಹಾಕಿ, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್‌ ಟೂರ್ನಿಗಳು ನಡೆಯಲಿವೆ. ಇದರೊಂದಿಗೆ ರಾಷ್ಟ್ರಮಟ್ಟದ ಮ್ಯಾರ ಥಾನ್ ಕೂಟ ಆಯೋಜನೆಯಾಗಲಿದೆ. ಹೊಸ ಸಿಂಥೆಟಿಕ್ ಟ್ರ್ಯಾಕ್‌ ಆಗಿರುವುದರಿಂದ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ ನಡೆಸಲೂ ಯೋಜಿಸಲಾಗಿದೆ. ಆದರೆ, ಅದೇ ಸಂದರ್ಭದಲ್ಲಿ ಬಹುತೇಕ ಪ್ರಮುಖ ಕ್ರೀಡಾ ಪಟುಗಳು ಏಷ್ಯನ್‌ ಕ್ರೀಡಾಕೂಟಕ್ಕೆ ತೆರಳುವುದರಿಂದ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆಯು ಕೂಟಕ್ಕೆ ಇನ್ನೂ ಸಮ್ಮತಿಸಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಆದರೆ, ಇದೆಲ್ಲದರ ಹೊರತಾಗಿಯೂ ದಸರಾ ಕ್ರೀಡಾಕೂಟವನ್ನು ಮೇಳದ ಬದಲಿಗೆ ಒಂದು ವೃತ್ತಿಪರ, ಸಾಂಸ್ಕೃತಿಕ, ಪಾರಂಪರಿಕ ಚಟುವಟಿಕೆ ಯಾಗಿ ಬೆಳೆಸಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಇವತ್ತು ಬೀಸುತ್ತಿರುವ ಬದಲಾವಣೆಯ ಗಾಳಿ ಇಲ್ಲಿಯೂ ಸುಧಾ ರಣೆಯ ಸುಗಂಧ ಹರಡಬೇಕು. ಆಡುವ ಮಕ್ಕಳಿಗೆ ಭವಿಷ್ಯ ರೂಪಿಸಲು ನೆರವಾಗಬೇಕು. ಅದಕ್ಕಾಗಿ ಕೂಟದ ನಂತರ ಮನದಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT