ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಎಸ್ಸೆಸ್ ಅಪ್ಪಟ ಪ್ರಜಾಪ್ರಭುತ್ವವಾದಿ’

ಚಂದ್ರಶೇಖರ ನಂಗಲಿ ಅವರಿಗೆ ಜಿಎಸ್ಸೆಸ್‌ ಪ್ರಶಸ್ತಿ ಪ್ರದಾನ
Last Updated 7 ಫೆಬ್ರುವರಿ 2016, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ (ಜಿಎಸ್ಸೆಸ್‌) ಅವರು ಅಪ್ಪಟ ಪ್ರಜಾಪ್ರಭುತ್ವವಾದಿ ಆಗಿದ್ದರು’ ಎಂದು ವಿಮರ್ಶಕ ಚಂದ್ರಶೇಖರ ನಂಗಲಿ ಹೇಳಿದರು.

ಡಾ. ಜಿಎಸ್ಸೆಸ್‌ ವಿಶ್ವಸ್ತ ಮಂಡಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಜಿಎಸ್ಸೆಸ್‌ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಒಮ್ಮೆ ಉಪನ್ಯಾಸಕ ಹುದ್ದೆಗೆ ಕೆಪಿಎಸ್‌ಸಿ ಸಂದರ್ಶನ ಕರೆದಿತ್ತು. ವಿಷಯ ತಜ್ಞರಾಗಿ ಜಿಎಸ್ಸೆಸ್‌ ಬಂದಿದ್ದರು.  ಜಿಎಸ್ಸೆಸ್‌ ಅವರು ಪಂಪನ ಪದ್ಯ ಹೇಳುವಂತೆ ಅಭ್ಯರ್ಥಿಗಳನ್ನು ಕೇಳುತ್ತಿದ್ದರು. ನಾನು ಹೊರಗಿದ್ದ ಅಭ್ಯರ್ಥಿಗಳಿಗೆಲ್ಲ ಪಂಪನ ಪದ್ಯಗಳನ್ನು ಬರೆದುಕೊಟ್ಟೆ. ಸಂದರ್ಶನ ಮುಗಿಯಿತು. ನಾನು ಪಂಪನ ಪದ್ಯ ಬರೆದುಕೊಟ್ಟ ಅಭ್ಯರ್ಥಿಗಳಿಗೆ 50ಕ್ಕೆ 45 ಅಂಕ, ನನಗೆ 29 ಅಂಕ ಬಂದಿತ್ತು. ನಿಜವಾಗಿಯೂ ನನ್ನ ಸ್ಥಿತಿ ನೆಲಕ್ಕುರಳಿದ ಸಿಂಹದಂತಾಗಿತ್ತು’ ಎಂದರು.

‘ಜಿಎಸ್ಸೆಸ್‌ ಬಳಿಗೆ ತಂದೆ ಜತೆಯಲ್ಲಿ ಹೋದೆ. ಈ ವಿಷಯ ತಿಳಿದು ಜಿಎಸ್ಸೆಸ್‌ಗೆ ಆಶ್ಚರ್ಯವಾಯಿತು. ನಾನು ಯಾರಿಗೂ ಅಂಕಗಳನ್ನೇ ನೀಡಿಲ್ಲ. ಉತ್ತಮ ಅಭ್ಯರ್ಥಿಗೆ ಬಿ+, ಸರಿಯಾದ ಉತ್ತರ ನೀಡದ ಅಭ್ಯರ್ಥಿಗಳಿಗೆ ಬಿ– ನೀಡಿದ್ದೇನೆ. ನಿಮಗೆ ಬಿ+ ನೀಡಿದ್ದೇನೆ ಎಂದು ಜಿಎಸ್ಸೆಸ್‌ ಹೇಳಿದರು’ ಎಂದು ನೆನಪು ಮಾಡಿಕೊಂಡರು.

‘ಕೆಪಿಎಸ್‌ಸಿಯ ನಡೆ ಬಗ್ಗೆ ಜಿಎಸ್ಸೆಸ್‌ ಅವರು ಲಂಕೇಶ್‌ ಪತ್ರಿಕೆಯ ಮುಖಪುಟದಲ್ಲಿ  ಕೆಪಿಎಸ್‌ಸಿ ಅಂತರ್‌ವ್ಯೂಹ ಎಂಬ ಕಪಟ ನಾಟಕ ಎಂಬ ಶೀರ್ಷಿಕೆಯ ಪತ್ರ ಬರೆದಿದ್ದರು. ಬಳಿಕ ಹಾ.ಮಾ. ನಾಯಕ, ಷ. ಶೆಟ್ಟರ್‌ ಅವರು ಈ ವಿಷಯದ ಬಗ್ಗೆ ಪತ್ರ ಬರೆದರು. ವಕೀಲ ಸಿ.ಎಸ್‌. ಮುರಳಿಧರ್‌ ಅವರ ಸಹಾಯದಿಂದ ನೇಮಕಾತಿಗೆ ತಡೆ ತಂದೆವು’ ಎಂದು ವಿವರಿಸಿದರು.

‘ಜಿಎಸ್ಸೆಸ್‌ ಅವರು ಒಬ್ಬ ವಿದ್ಯಾರ್ಥಿಗಾಗಿ ಆಡಳಿತಾರೂಢ ಭ್ರಷ್ಟ ವ್ಯವಸ್ಥೆಯನ್ನು ಎದುರು ಹಾಕಿಕೊಂಡರು. ವ್ಯವಸ್ಥೆ ವಿರುದ್ಧವಾಗಿ ಇದ್ದಿದ್ದರಿಂದಲೇ ಎಲ್ಲ ಅರ್ಹತೆ ಇದ್ದರೂ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಆಗಲಿಲ್ಲ’ ಎಂದರು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ‘ಜಿಎಸ್ಸೆಸ್‌ ಕನ್ನಡ ಸಾಹಿತ್ಯದ ಈ ಕಾಲಘಟ್ಟದ ಸಂಕೇತ, ಪ್ರತೀಕವಾಗಿ ಕಂಡುಬರುತ್ತಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಹೊಸ ಆಯಾಮ ನೀಡಿದ್ದಾರೆ’ ಎಂದು ಹೇಳಿದರು.

ವಿಮರ್ಶಕ ಎಸ್.ನಟರಾಜ ಬೂದಾಳು, ‘ನಂಗಲಿ ಅವರು ಕನ್ನಡ ಚಾರಣ ಸಾಹಿತ್ಯವನ್ನು ವಿಸ್ತರಿಸಿದ್ದಾರೆ. ಅಲೆಮಾರಿ ಮನಸ್ಥಿತಿ ಹೊಂದಿರುವ ನಂಗಲಿ ನೆಲದ ಜತೆಗಿನ ನಂಟನ್ನು ಬಿಡದೆ ಸಾಗುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿ ಎಚ್‌.ಎಸ್‌. ವೆಂಕಟೇಶ ಮೂರ್ತಿ ಮಾತನಾಡಿ, ‘ಪರಿಸರದ ಬಗೆಗೆ ನಮಗಿದ್ದ ಚಿಂತನೆಗಳನ್ನು ಬದಲಾಯಿಸಿದ ಲೇಖಕ ಚಂದ್ರಶೇಖರ ನಂಗಲಿ. ಸ್ಥಳೀಯ ಸಂಸ್ಕೃತಿಯ ರಕ್ಷಣೆಗೆ ಅವರು ಆದ್ಯತೆ ನೀಡುತ್ತಾರೆ. ಚಾರಣ ಎಂದರೆ ಯೋಗವಿದ್ದಂತೆ. ಇಂತಹ ಚಾರಣದಲ್ಲಿ ನಂಗಲಿ ಅವರಿಗೆ ವಿಶೇಷ ಆಸಕ್ತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT