ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜ್ಯೋತಿಷಶಾಸ್ತ್ರದಿಂದ ಧೈರ್ಯ ತುಂಬುವ ಕಾರ್ಯ’

‘ತ್ರ್ಯಯಂಬಕಂ ಯಜಾಮಹೇ’ ಕೃತಿ ಬಿಡುಗಡೆ ಸಮಾರಂಭ
Last Updated 30 ಜೂನ್ 2016, 11:21 IST
ಅಕ್ಷರ ಗಾತ್ರ

ಉಡುಪಿ: ಜ್ಯೋತಿಷಶಾಸ್ತ್ರದಿಂದ ಜನರ ಜೀವನಕ್ಕೆ ಧೈರ್ಯ, ಭರವಸೆ ತುಂಬುವ ಕಾರ್ಯವಾಗುತ್ತಿವೆ. ಹಾಗಾಗಿ ಜ್ಯೋತಿಷ ಶಾಸ್ತ್ರದಿಂದ ಜನರಿಗೆ ಶೋಷಣೆ ಯಾಗದಂತೆ ಎಚ್ಚರವಹಿಸಬೇಕೇ ಹೊರತು, ಅದಕ್ಕಾಗಿ ಒಂದು ಅಧ್ಯಯನ ಶಾಸ್ತ್ರವನ್ನೇ ನಿಷೇಧಿಸುವುದು ಸರಿಯಲ್ಲ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪೇಜಾವರ ಮಠ, ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ (ಎಸ್‌ಎಂಎಸ್‌ಪಿ) ಸಂಸ್ಕೃತ ಸಂಶೋಧಕ ಕೇಂದ್ರ ಹಾಗೂ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ  ಆಶ್ರಯದಲ್ಲಿ ಉಡುಪಿಯ ರಾಜಾಂಗಣ ದಲ್ಲಿ ಬುಧವಾರ ನಡೆದ ಕಾರ್ಯಕ್ರಮ ದಲ್ಲಿ ಸಗ್ರಿ ಆನಂದತೀರ್ಥಾಚಾರ್ಯ ಅವರ ‘ತ್ರ್ಯಯಂಬಕಂ ಯಜಾಮಹೇ’ ಮತ್ತು ಜ್ಯೋತಿಷ ಸೋಪಾನಂ’ ಹಾಗೂ ಡಾ. ಕಿದಿಯೂರು ಗುರುರಾಜ ಭಾಗವತ ಅವರ ‘ಆಯು ರ್ವೇದ ದ್ರವ್ಯಗುಣ ಸಾರ ಸಂಗ್ರಹ’ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಜ್ಯೋತಿಶಾಸ್ತ್ರದ ಬಗ್ಗೆ ಟೀಕೆ ಮಾಡುವವರೇ, ಗುಟ್ಟಾಗಿ ಜ್ಯೋತಿಷದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸ ಬೇಕೆಂದು ಹೇಳುವವರು, ತಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್‌ ಮಾಧ್ಯಮಕ್ಕೆ ಕಳುಹಿಸುತ್ತಾರೆ. ಇದೆಲ್ಲ ದ್ವಂದ್ವ ನೀತಿ. ಶೋಷಣೆ ಎಂಬುವುದು ಜ್ಯೋತಿಷದಲ್ಲಿ ಮಾತ್ರವಿಲ್ಲ. ವೈದ್ಯಕೀಯ, ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿಯೂ ಇದೆ ಎಂದರು.

ಜ್ಯೋತಿಷವನ್ನು ಮೂಢನಂಬಿಕೆ ನಿಷೇಧ ಕಾಯ್ದೆಯಡಿ ಸೇರಿಸಬೇಕೆಂದು  ಯತ್ನಿಸಲಾಗುತ್ತಿದೆ. ಆದರೆ, ಜ್ಯೋತಿಷ ಬಗ್ಗೆ ಸರಿಯಾದ ಪರಿಶೀಲನೆ ಮಾಡಿ, ಶೋಷಣೆಯಾಗದಂತೆ ಗಮನಹರಿ ಸಬೇಕು. ಅದನ್ನು ಬಿಟ್ಟು ಉತ್ತಮ ಅಧ್ಯಯನ ಶಾಸ್ತ್ರವನ್ನು ನಿಷೇಧಿಸುವುದು ಸರಿಯಲ್ಲ ಎಂದು ಹೇಳಿದರು.

ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸಿದ್ದೇಗೌಡ, ವಿ.ವಿ.ಯ ಡೀನ್‌ ಡಾ. ಶ್ರೀನಿವಾಸ ವರ್ಕೆಡಿ, ಡಾ. ಎ.ವಿ. ನಾಗಸಂಪಿಗೆ, ಪ್ರೊ. ಕಣ್ಣನ್‌, ಪ್ರೊ. ಶ್ರೀನಿವಾಸ ಅಡಿಗ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಎಸ್‌ಎಂಎಸ್‌ಪಿ ಸಂಸ್ಕೃತ ಸಂಶೋಧಕ ಕೇಂದ್ರ ನಿರ್ದೇಶಕ ಡಾ. ಕಡಂದಲೆ ಗಣಪತಿ ಭಟ್‌ ಉಪಸ್ಥಿತರಿ ದ್ದರು. ಸಗ್ರಿ ರಾಘವೇಂದ್ರ ಆಚಾರ್ಯ ಮತ್ತು ಶಿವಪ್ರಸಾದ್‌ ತಂತ್ರಿ ಅವರು ಪುಸ್ತಕ ಪರಿಚಯ ಮಾಡಿದರು. ಡಾ. ಸುರೇಶ್‌ ಆಚಾರ್ಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT