ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೆಕಿ’ ಕೃಷಿಕನ ಮಾರುಕಟ್ಟೆ ಜಾಣತನ

Last Updated 13 ಜೂನ್ 2016, 19:30 IST
ಅಕ್ಷರ ಗಾತ್ರ

ಓದಿದ್ದು ಎಂಜಿನಿಯರಿಂಗ್‌. ಐಐಎಂನಲ್ಲಿ ಎಂಬಿಎ ಪದವಿ. ಹತ್ತಾರು ಕಂಪೆನಿಗಳಲ್ಲಿ ಕೆಲಸ, ಕೈತುಂಬ ಸಂಬಳ. ಕಾರ್ಯನಿಮಿತ್ತ ಹಲವು ದೇಶಗಳಲ್ಲಿ ಸುತ್ತಾಟ. ಆದರೂ ಮನದ ಮೂಲೆಯಲ್ಲಿ ಕೃಷಿಯತ್ತ ಸೆಳೆತವಿತ್ತು.ಕೃಷಿ ಕ್ಷೇತ್ರಕ್ಕೆ ಹೆಜ್ಜೆ ಇಟ್ಟರೆ ರೈತರ ಆತ್ಮವಿಶ್ವಾಸ ಹೆಚ್ಚಿಸುವ ವಿಭಿನ್ನ ಕಾರ್ಯತಂತ್ರ ರೂಪಿಸಿ ತೋರಿಸಬೇಕು ಎನ್ನುವ ದೃಢ ನಿರ್ಧಾರದಿಂದ ಹೆಜ್ಜೆ ಇಟ್ಟರು. ಇದಕ್ಕಾಗಿಯೇ ವಾಟ್ಸ್‌ಆ್ಯಪ್‌, ಆನ್‌ಲೈನ್‌ ಸೇರಿದಂತೆ ಆಧುನಿಕ ಸಂಪರ್ಕ ಜಾಲವನ್ನು ಬಳಸಿಕೊಂಡರು. ಇದರಲ್ಲಿ ಯಶಸ್ವಿಯಾಗಿ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು.

ಮುಧೋಳ ತಾಲ್ಲೂಕಿನ ಜಂಬಗಿ ಕೆ.ಡಿ. ಗ್ರಾಮದ ಶಿವನಗೌಡ ಪಾಟೀಲ ಅವರು ಕೃಷಿಯತ್ತ ಹೊರಳಿದ ಕಥೆ ಇದು. ಐದು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮದ ಬಳಿ 15 ಎಕರೆ ಜಮೀನು ಖರೀದಿಸಿದ ಪಾಟೀಲರು, ಮಾವಿನ ಹಣ್ಣು ಮತ್ತು ಕರಬೂಜ ಬೆಳೆದರು. ಮಾವು ಬೆಳೆಗೆ ಸಾವಯವ ಕೃಷಿ ಪದ್ಧತಿ ಅನುಸರಿಸಿದರು. ‘ಮಲ್ಲಿಕಾ’ ತಳಿ ಮಾವುಇವರ ತೋಟದ ವಿಶೇಷ ಆಕರ್ಷಣೆ. ಮಾವು ಬೆಳೆಯನ್ನು ರಾಸಾಯನಿಕಇಗಳಿಂದ  ದೂರವೇ ಉಳಿಸಿದ್ದಾರೆ. ಸಹಜವಾಗಿಯೇ ಮಾವು ಹಣ್ಣಾಗುವಂತೆ ಹುಲ್ಲಿನಲ್ಲಿಟ್ಟು ಮಾಗಿಸುತ್ತಾರೆ.

ಮಾವಿನ ಜತೆ ಕರಬೂಜ ಬೆಳೆಯಲು ಆರಂಭಿಸಿದ ಪಾಟೀಲರು, ನೆದರ್‌ಲ್ಯಾಂಡ್‌ನ ರಿಜ್ಕ್‌ ಝ್ವಾನ್‌ ಇಂಡಿಯಾ ಸೀಡ್ಸ್‌ ಕಂಪೆನಿಯಿಂದ ಕ್ಯಾರಿಬ್ಬೀಯನ್‌ ತಳಿಯ ಬೀಜಗಳನ್ನು ನೇರವಾಗಿ ಆಮದು ಮಾಡಿಕೊಂಡರು.

‘ಕ್ಯಾರಿಬ್ಬೀಯನ್‌ ತಳಿಯ ಹಣ್ಣು ತಿನ್ನಲು ಸ್ವಾದಿಷ್ಟವಾಗಿದ್ದು, ಹೆಚ್ಚು ರುಚಿಕರ ಮತ್ತು  ದಪ್ಪವಿರುತ್ತದೆ. ಹಲವು ದಿನಗಳ ಕಾಲ ಇದನ್ನು ಸಂರಕ್ಷಿಸಿಡಬಹುದಾಗಿರುವುದರಿಂದ ರಫ್ತು ಮಾಡಲು ಮತ್ತು ದೂರದ ಸ್ಥಳಗಳಿಗೆ ಸಾಗಿಸಲು ಹೆಚ್ಚು ಅನುಕೂಲ. ಉತ್ತಮ ಇಳುವರಿ ಮತ್ತು ಹೆಚ್ಚಿನ ದರ ದೊರೆಯುತ್ತದೆ. ಪ್ರತಿ ಎಕರೆಗೆ 10 ರಿಂದ 15 ಟನ್‌ ಇಳುವರಿ ದೊರೆಯುತ್ತದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹20ರಿಂದ 30 ದೊರೆಯುತ್ತದೆ’ ಎಂದು ಪಾಟೀಲರು ಹೇಳುತ್ತಾರೆ.

ಆರಂಭದಲ್ಲಿ ಎದುರಾದ ತೊಡಕುಗಳನ್ನು ನಿವಾರಿಸಿಕೊಂಡು ಗುಣಮಟ್ಟದ ಫಸಲಿಗೆ ಉತ್ತಮ ಬೆಲೆ ಪಡೆಯಲು ಮಾರುಕಟ್ಟೆ ಅಧ್ಯಯನವನ್ನು ಪಾಟೀಲರು ಕೈಗೊಂಡರು. ರೈತ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು ಎನ್ನುವ ಆಶಯವನ್ನು ಸಾದರ ಪಡಿಸಲು ತಾವೇ ಪ್ರಯೋಗಕ್ಕೆ ಮುಂದಾದರು. ಅದರ ಫಲವಾಗಿ ವ್ಯವಸ್ಥಿತ ಮಾರುಕಟ್ಟೆಯನ್ನು ತಾವೇ ರೂಪಿಸಿಕೊಂಡರು. ಬೆಂಗಳೂರಿನ ಕೆಲವು ಮಾಲ್‌ಗಳಿಗೆ ಮಾವು, ಕರಬೂಜಗಳನ್ನು ನಿಯಮಿತವಾಗಿ ಪೂರೈಸಲು ಆರಂಭಿಸಿದರು. ಈ ವಹಿವಾಟಿಗೆ ಅವರು ಬಳಸುವುದು ವಾಟ್ಸ್‌ಆ್ಯಪ್‌ ಸಂದೇಶಗಳು ಮತ್ತು ಚಿತ್ರಗಳನ್ನು ಮಾತ್ರ.

ಇನ್ನೊಂದೆಡೆ ನೇರ ಗ್ರಾಹಕರನ್ನು ತಲುಪುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಇದಕ್ಕಾಗಿ ವಿವಿಧ ಕಂಪೆನಿಗಳಿಗೆ ತೆರಳಿ ಮಾವು, ಕರಬೂಜಗಳನ್ನು ಮಾರಾಟ ಮಾಡಿದರು.ಇತ್ತೀಚೆಗೆ ಮಾರತ್ತಹಳ್ಳಿಯ ಖಾಸಗಿ ಕಂಪೆನಿಯ ಕಚೇರಿಗೆ ಖುದ್ದಾಗಿ ತೆರಳಿ 4 ಕೆ.ಜಿ. ಮಾವಿನ ಹಣ್ಣುಗಳ ಬಾಕ್ಸ್‌ವೊಂದಕ್ಕೆ ₹350 ರೂಪಾಯಿಯಂತೆ ಮಾರಾಟ ಮಾಡಿದ್ದು ಉದಾಹರಣೆಯಾಗಿದೆ. ಇದರಿಂದ ಗ್ರಾಹಕರ ಸರಪಳಿಯೇ ಸೃಷ್ಟಿಯಾಗಿದೆ.

ಕಳೆದ ವರ್ಷ ಮಲೇಷಿಯಾಗೆ ಮಾವು ರಫ್ತು ಮಾಡಿದ್ದ ಪಾಟೀಲರು, ಮುಂದಿನ ವರ್ಷದಿಂದ ದುಬೈ, ಹಾಂಕಾಂಗ್‌, ಮಲೇಷ್ಯಾಗೆ ರವಾನಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಆಕರ್ಷಕ ಪ್ಯಾಕಿಂಗ್‌ ಪಾಟೀಲರ ಮತ್ತೊಂದು ಯಶಸ್ಸಿನ ಗುಟ್ಟು. ಹಣ್ಣುಗಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮತ್ತು ಕೆಡದಂತೆ ಸುರಕ್ಷಿತವಾಗಿ ಪ್ಯಾಕಿಂಗ್‌ ಮಾಡುತ್ತಾರೆ. ಈ ರೀತಿ ವ್ಯವಸ್ಥಿತ ಜಾಲ ತಾಣದಿಂದ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲ.  ಗ್ರಾಹಕರೇ ನೇರವಾಗಿ ಪಾಟೀಲರನ್ನು ಸಂಪರ್ಕಿಸುತ್ತಿದ್ದಾರೆ.

‘ನಮ್ಮ ತೋಟದ ಸಮೀಪದಲ್ಲಿಯೇ ರೈತರೊಬ್ಬರು  ಈ ಸೀಸನ್‌ನಲ್ಲಿ ಮಾವಿನ ತೋಟದಲ್ಲಿನ ಕಾಯಿಗಳನ್ನು ಎಕರೆಗೆ ₹30 ಸಾವಿರಕ್ಕೆ ದಲ್ಲಾಳಿಗೆ ಮಾರಾಟ ಮಾಡಿದರು.ದಲ್ಲಾಳಿ ಇದರ ಮೂರು ಪಟ್ಟು ಲಾಭ ಮಾಡಿಕೊಳ್ಳುತ್ತಾನೆ. ಹೀಗಾದರೆ ರೈತನ ಶ್ರಮಕ್ಕೆ ಬೆಲೆ ದೊರೆಯುವುದಿಲ್ಲ. ರೈತರೇ ಗ್ರಾಹಕರನ್ನು ಸೃಷ್ಟಿಸಿಕೊಳ್ಳಬೇಕು’ ಎನ್ನುತ್ತಾರೆ ಪಾಟೀಲರು.

‘ಈಗ ಸಂಪೂರ್ಣ ಕೃಷಿಯಲ್ಲಿ ತೊಡಗಿದ್ದೇನೆ. ಗುಣಮಟ್ಟದ ಉತ್ಪನ್ನವಿದ್ದರೆ ಸೂಪರ್‌ಮಾರ್ಕೆಟ್‌ನಂತಹ ಗ್ರಾಹಕರು ಹೆಚ್ಚು ಬೆಲೆ ನೀಡಲು ಹಿಂಜರಿಯುವುದಿಲ್ಲ’ ಎನ್ನುತ್ತಾರೆ.
ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಮೂಲಕ

ಬ್ರ್ಯಾಂಡ್‌ ಸೃಷ್ಟಿಸಲು ಕೃಷಿ ಉತ್ಪನ್ನಗಳ ಸಂಸ್ಥೆಯನ್ನು (ಎಫ್‌ಪಿಒ) ಹುಟ್ಟು ಹಾಕುವ ಬಗ್ಗೆ ಪಾಟೀಲರು ಯೋಜನೆ ರೂಪಿಸುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ಇದು ಕಾರ್ಯಗತವಾಗಲಿದೆ. ಮಧ್ಯವರ್ತಿ ನಿರ್ಮೂಲನೆ ಯೊಂದಿಗೆ ಗ್ರಾಹಕರ ಜತೆ ನೇರ ಸಂಪರ್ಕ ಕಲ್ಪಿಸುವುದೇ ಸಂಸ್ಥೆಯ ಉದ್ದೇಶ ಎಂದು ಅವರು ಹೇಳುತ್ತಾರೆ. ಇದನ್ನು ಖಾಸಗಿ ಕಂಪೆನಿ ರೀತಿ ನಡೆಸಬಹುದು. ಇಲ್ಲಿ ಸಂಪೂರ್ಣ  ರೈತರೇ ಷೇರುದಾರರು. ರೈತರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಗುವುದು.

ಉದಾಹರಣೆಗೆ ಕೃಷಿ ಉತ್ಪನ್ನಗಳಿಗೆ ಒಂದು ರೂಪಾಯಿ ಬದಲು ನಾಲ್ಕು ರೂಪಾಯಿ ದೊರೆಯಬೇಕು ಎನ್ನುವ ಸರಳ ಮಾರುಕಟ್ಟೆ ಸೂತ್ರವನ್ನು ರೂಪಿಸಲಾಗುವುದು. ಜತೆಗೆ ಗುಣಮಟ್ಟದ ಗೊಬ್ಬರ, ಬೀಜಗಳನ್ನು ಕಂಪೆನಿಯಿಂದಲೇ ಮಾರಾಟ ಮಾಡಲಾಗುವುದು ಎಂದು ಪಾಟೀಲರು ವಿವರಿಸುತ್ತಾರೆ. ಸಂಪರ್ಕಕ್ಕೆ: 9845161241. 

ಬೆಲ್ಲ ಮಾರಿ ಲಾಭ ತೋರಿಸಿದರು!
ಮುಧೋಳದ ರೈತರೊಬ್ಬರ ನೈಜ ಸಾವಯವ ಬೆಲ್ಲವನ್ನು ತಾವೇ ಮಾರಾಟ ಮಾಡಿ ಲಾಭ ಗಿಟ್ಟಿಸಿದ ಪ್ರಸಂಗವನ್ನು ಶಿವನಗೌಡ ಪಾಟೀಲರು ಉದಾಹರಣೆ ಸಮೇತ ನೀಡುತ್ತಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ಕಬ್ಬು ಬೆಳೆದು, ನಂತರ ಬೆಲ್ಲ ತಯಾರಿಸಿ ಬೆಂಗಳೂರಿಗೆ ಮಾರಾಟ ಮಾಡಲು ಬಂದಾಗ ಮಾರುಕಟ್ಟೆಯಲ್ಲಿ ಸಮರ್ಪಕ ದರ ದೊರೆಯಲಿಲ್ಲ.

ಪ್ರತಿ ಕೆ.ಜಿ.ಗೆ ಕೇವಲ ₹20ರಿಂದ 30 ರೂಪಾಯಿ ದರ ನಿಗದಿಪಡಿಸಿದ್ದರು. ಇದರಿಂದ ರೈತ ಕಂಗಾಲಾಗಿದ್ದ. ಆಗ ಬೆಲ್ಲವನ್ನು ನಮ್ಮ ಮನೆಯಲ್ಲಿಟ್ಟುಕೊಂಡು ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಮಾರಾಟ ಮಾಡಿದಾಗ ಪ್ರತಿ ಕೆ.ಜಿಗೆ ₹100 ದೊರೆಯಿತು. ಇದೊಂದು ಚಿಕ್ಕ ಉದಾಹರಣೆ ಎಂದು ಪಾಟೀಲರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT