ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೆರಿಗೆ ಹೊರೆ ಹೆಚ್ಚಿಸಲ್ಲ’

ಮಧ್ಯಮ ವರ್ಗ, ವೇತನದಾರರ ಮೇಲೆ ಜೇಟ್ಲಿಗೆ ಅನುಕಂಪ
Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೇತನದಾರರು ಮತ್ತು ಮಧ್ಯಮ ವರ್ಗದ ಜನರ ಮೇಲೆ ಮತ್ತಷ್ಟು ತೆರಿಗೆ ಹೊರೆ ಹೇರುವುದಕ್ಕೆ ತಮ್ಮ ಸಹಮತವಿಲ್ಲ. ಆದರೆ, ತೆರಿಗೆ ವಂಚಕರ ಬೆನ್ನುಹತ್ತಿ ಅವರನ್ನು ತೆರಿಗೆ ವ್ಯಾಪ್ತಿಗೆ ತರಲು ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಘೋಷಿಸಿದರು.

ಪಿಟಿಐ  ಪ್ರಧಾನ ಕಚೇರಿಯಲ್ಲಿ ಶನಿವಾರ ಪಿಟಿಐ ಪತ್ರಕರ್ತ­ರೊಂದಿಗೆ  ನಡೆದ ಸಂವಾದದಲ್ಲಿ  ಭಾಗವ­ಹಿಸಿದ್ದ ಅವರು ತೆರಿಗೆ, ಆರ್ಥಿಕ ಸ್ಥಿತಿ, ಕಪ್ಪುಹಣ ಮತ್ತಿ­ತರ ವಿಷಯಗಳ ಬಗ್ಗೆ ಅಭಿಪ್ರಾಯ ಹಂಚಿ­ಕೊಂಡರು. ವೇತನದಾರರು ಹಾಗೂ ಮಧ್ಯಮ ವರ್ಗದವರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ನೋಡಿ­ಕೊಂಡರೆ ಅದನ್ನು ಅವರು ಖರ್ಚು ಮಾಡು­ತ್ತಾರೆ.

ಇದರಿಂದ ಪರೋಕ್ಷ ತೆರಿಗೆ ಸಂಗ್ರಹ ಹೆಚ್ಚುತ್ತದೆ. ಅಲ್ಲದೆ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಿದಂತೆಯೂ ಆಗುತ್ತದೆ ಎಂದು ವಿಶ್ಲೇಷಿಸಿದರು. ‘ಸದ್ಯ ನಮ್ಮ ದೇಶದಲ್ಲಿ ಸಂಗ್ರಹವಾಗುವ ಶೇ 50ರಷ್ಟು ತೆರಿಗೆಗಳು ಪರೋಕ್ಷ ತೆರಿಗೆಗಳೇ ಆಗಿವೆ. ಕಸ್ಟಮ್‌್ಸ, ಸೇವಾ ತೆರಿಗೆ, ಎಕ್ಸೈಸ್‌ ಹೀಗೆ ನಾನಾ ಬಗೆಯ ಸುಂಕಗಳನ್ನು ಜನ ಪಾವತಿಸು­ತ್ತಿದ್ದಾರೆ’ ಎಂದರು.

ವಿನಾಯಿತಿ ಹೆಚ್ಚಳ ಕಷ್ಟ: ‘ತೆರಿಗೆದಾರರ ಸಂಖ್ಯೆಯನ್ನು ಹಾಗೂ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದಕ್ಕಾಗಿ ತೆರಿಗೆ ವಿನಾ­ಯಿತಿ ಮಿತಿಯನ್ನು ಇಳಿಸ­ಬೇಕು ಎಂಬ ತರ್ಕವನ್ನು  ಒಪ್ಪು­ವು­ದಿಲ್ಲ’ ಎಂದು ಸ್ಪಷ್ಟಪಡಿಸಿದರು. ದೇಶದ ಹಣಕಾಸು ಪರಿಸ್ಥಿತಿ ಸುಧಾರಿಸಿದ್ದೇ ಆದರೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸುವುದಾಗಿ ಅವರು ಭರವಸೆ ನೀಡಿದರು.

ಈಗ ವಾರ್ಷಿಕ ₨ 2.5 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಎಲ್ಲಾ ಕಡಿತಗಳನ್ನು ಸೇರಿಸಿದ ಮೇಲೆ ವಾರ್ಷಿಕ 3.5ರಿಂದ 4 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಸಿಗುತ್ತಿದೆ. ಅಂದರೆ ತಿಂಗಳಿಗೆ ಸರಾಸರಿ ₨ 35 ಸಾವಿರದಿಂದ 40 ಸಾವಿರ  ವರೆಗೆ ಆದಾಯ ಇರುವವರು ತೆರಿಗೆಯಿಂದ ಮುಕ್ತ­ರಾಗಿದ್ದಾರೆ. ಆದರೆ ಇಷ್ಟು ಆದಾಯ ಇರುವವರಿಗೆ ಕೂಡ ಇವತ್ತಿನ ಜೀವನ ವೆಚ್ಚದಲ್ಲಿ ಏನನ್ನೂ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಇದೆ. ಮಕ್ಕಳ ಶಿಕ್ಷಣ ವೆಚ್ಚ, ಸಂಚಾರ ವೆಚ್ಚ ಇವುಗಳೆಲ್ಲಾ ದುಬಾರಿಯಾಗಿರುವುದೇ ಇದಕ್ಕೆ ಕಾರಣ ಎಂದು ಶ್ರೀಸಾಮಾನ್ಯರ ಕಷ್ಟಕ್ಕೆ ದನಿಗೂಡಿಸಿದರು.

ದೇಶದೊಳಗಿರುವ ಕಪ್ಪುಹಣದ ಬಗ್ಗೆ ಕೇಳಿದಾಗ, ‘ಕಪ್ಪುಹಣ ಅಗಾದವಾಗಿದೆ. ಅದನ್ನು  ಪತ್ತೆ ಹಚ್ಚುವುದು ಕೂಡ ಬಹಳ ಸುಲಭ. ನೀವು ರಿಯಲ್‌ ಎಸ್ಟೇಟ್‌, ಭೂ ಖರೀದಿ, ಗಣಿಗಾರಿಕೆ, ಆಭರಣ ಖರೀದಿ, ಐಷಾರಾಮಿ ವಸ್ತುಗಳ ಖರೀದಿ ಹೀಗೆ ಯಾವುದನ್ನು ನೋಡಿದರೂ ಸಾಕು. ಅಷ್ಟೇ ಏಕೆ. ಶಿಕ್ಷಣ ಸಂಸ್ಥೆಗಳತ್ತ ನೋಡಿದರೂ ಸಾಕು. ಕಪ್ಪುಹಣ ಎಲ್ಲಿದೆ ಎಂದು ಸುಲಭವಾಗಿ ಗೋಚರವಾಗುತ್ತದೆ’ ಎಂದು ಜೇಟ್ಲಿ ಹೇಳಿದರು.

ಕಳೆದ ಬಜೆಟ್‌ನಲ್ಲಿ ನಾನು ಶಕ್ತಿಮೀರಿ ಕೆಲ ವಿನಾಯಿತಿಗಳನ್ನು ನೀಡಿದ್ದೆ. ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₨ 2 ಲಕ್ಷದಿಂದ ₨ 2.5 ಲಕ್ಷಕ್ಕೆ ಹೆಚ್ಚಿಸಿದ್ದೆ. ದೇಶದ ಹಣಕಾಸು ಸ್ಥಿತಿ ಉತ್ತಮವಾಗಿದ್ದರೆ ಇದನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಆದರೆ ಸದ್ಯ ದೇಶದ ಆರ್ಥಿಕ ಪರಿಸ್ಥಿತಿ ಕಠಿಣವಾಗಿಯೇ ಇದೆ.
- ಅರುಣ್ ಜೇಟ್ಲಿ , ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT