ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಸರಾ’ ಯಾರಿಗಾಗಿ: ಆಳ್ವ ಪ್ರಶ್ನೆ

Last Updated 17 ಏಪ್ರಿಲ್ 2015, 19:49 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ನಡೆಸುವ ದಸರಾ ಉತ್ಸವ, ಹಂಪಿ ಉತ್ಸವ, ಜಿಲ್ಲಾ ಉತ್ಸವಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಹಾಳು ಮಾಡುತ್ತಿವೆ. ಯಾರಿಗಾಗಿ ಈ ದಸರಾ ಉತ್ಸವ’ ಎಂದು ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ. ಮೋಹನ ಆಳ್ವ ಕಟುವಾಗಿ ಪ್ರಶ್ನಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ನಯನಾ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಅವರು ಮಾತನಾಡಿದರು. ದಸರಾ ಉತ್ಸವಕ್ಕಾಗಿ ರಾಜ್ಯ ಸರ್ಕಾರ ₨300 ಕೋಟಿ ಖರ್ಚು ಮಾಡುತ್ತಿದೆ. ಹಂಪಿ ಉತ್ಸವ, ಬಳ್ಳಾರಿ ಉತ್ಸವ, ದಾವಣಗೆರೆ ಉತ್ಸವಗಳಿಗೆ ₨15 ಕೋಟಿ ವೆಚ್ಚ ಮಾಡುತ್ತಿದೆ. ₨15 ಲಕ್ಷ ಕೊಟ್ಟು ಸೋನು ನಿಗಮ್‌ ಅವರಂತಹ ಕಲಾವಿದರನ್ನು ಕರೆಸಿಕೊಳ್ಳಲಾಗುತ್ತಿದೆ. ಅಲ್ಲಿ ಸಿ.ಡಿ. ಹಾಡು ಯಾವುದು, ಅವರ ಹಾಡು ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಪ್ರೇಕ್ಷಕರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಕೆಲವೇ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ. ಇಲ್ಲಿ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆಗಳು ಲಭ್ಯ ಇವೆ. ವ್ಯಾಪಾರಿಗಳು ವೈದ್ಯಕೀಯ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ವೈದ್ಯಕೀಯ ಕ್ಷೇತ್ರ ಈಗ ಕಮಿಷನ್‌ ಆಧಾರಿತವಾಗಿ ಅನಾಹುತ ಆಗುತ್ತಿದೆ ಎಂದು ಅವರು ಬೇಸರದಿಂದ ನುಡಿದರು.

ಈ ಹಿಂದೆ ಬೆರಳೆಣಿಕೆಯ ವಿದ್ಯಾರ್ಥಿಗಳು ಇದ್ದಾಗ ಶಾಸ್ತ್ರೀಯ ಸಂಗೀತದ ವಿದ್ವತ್‌ ಪರೀಕ್ಷೆ ನಡೆಯುತ್ತಿತ್ತು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 5 ಸಾವಿರ ವಿದ್ಯಾರ್ಥಿಗಳು ಜೂನಿಯರ್‌ ಪರೀಕ್ಷೆಗೆ, 2,500 ವಿದ್ಯಾರ್ಥಿಗಳು ಸೀನಿಯರ್‌ ವಿಭಾಗದ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಆದರೆ, ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂದರು.

‘ಎಲ್ಲ ದೇಶಗಳಲ್ಲೂ ಜಾಗತಿಕರಣದ ಸವಾಲು ಎದುರಾಗಿದೆ. ಚೀನಾದಲ್ಲಿ ಚೀನಾ ಭಾಷೆಯಲ್ಲೇ, ಜಪಾನ್‌ನಲ್ಲಿ ಜಪಾನ್‌ ಭಾಷೆಯಲ್ಲೇ ಶಿಕ್ಷಣ ನೀಡಲಾಗುತ್ತಿದೆ. ನಮ್ಮಲ್ಲಿ ಮಾತ್ರ ಇಂಗ್ಲಿಷ್‌ ಮೋಹ ವ್ಯಾಪಕವಾಗಿದೆ. ನಮ್ಮಲ್ಲಿ ಮಾತೃಭಾಷೆಗೆ ಉತ್ತೇಜನ ಸಿಗಬೇಕು. ಅದಕ್ಕಾಗಿ ಪಠ್ಯಕ್ರಮವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಸಲಹೆ ನೀಡಿದರು.

ಕಳೆದ ವರ್ಷ 8.5 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು. ಅವರಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು 5.5 ಲಕ್ಷ. ಉತ್ತೀರ್ಣ ಪ್ರಮಾಣ ಶೇ 77. ಇಂಗ್ಲಿಷ್‌ ಮಾಧ್ಯಮದ ಉತ್ತೀರ್ಣ ಪ್ರಮಾಣ ಶೇ 87. ಸಿಇಟಿಯಲ್ಲಿ ಅಗ್ರ 500 ರ್‍ಯಾಂಕ್‌ ಪಟ್ಟಿಯಲ್ಲಿ ಕನ್ನಡ ಮಾಧ್ಯಮದವರು 4 ಮಂದಿ ಮಾತ್ರ. ಪರಿಸ್ಥಿತಿ ಹೀಗಿರುವುದರಿಂದ ಪೋಷಕರು ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು ಅವರು ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT